ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಪ್ರಕರಣಕ್ಕೆ ಮಂಗಳ ಹಾಡಿದ್ದೇವೆ: ನಟ ದರ್ಶನ್

Last Updated 13 ಜುಲೈ 2021, 11:52 IST
ಅಕ್ಷರ ಗಾತ್ರ

ಬೆಂಗಳೂರು: ನಟ ದರ್ಶನ್‌ ಅವರ ಹೆಸರಿನಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣವು ಮಾತುಕತೆಯ ಮೂಲಕವೇ ಬಗೆಹರಿಯುವ ಲಕ್ಷಣಗಳು ಕಾಣುತ್ತಿದೆ. ‘ಈ ಪ್ರಕರಣಕ್ಕೆ ನಾವಿಬ್ಬರೂ ಮಂಗಳ ಹಾಡಿದ್ದೇವೆ. ಇದನ್ನು ಬಿಟ್ಟುಬಿಡಿ. ನಾನೂ, ಉಮಾಪತಿಯವರೂ ಮಾತನಾಡಿಕೊಳ್ಳುತ್ತೇವೆ’ ಎಂದು ದರ್ಶನ್‌ ಮಂಗಳವಾರ ಸುದ್ದಿಗಾರರಿಗೆ ತಿಳಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್‌, ‘ಇದರಲ್ಲಿ ನಮ್ಮ ನಿರ್ಮಾಪಕ ಕೈವಾಡ ಏನೂ ಇಲ್ಲ. ಬೇರೇನೋ ಇರುತ್ತದೆ. ಅದು ತಿಳಿಯಬೇಕಷ್ಟೇ. ಈಗಲೂ ನಾನು ಉಮಾಪತಿಯವರನ್ನು ಏನೂ ಹೇಳಲ್ಲ. ಅವರು ನಮ್ಮ ನಿರ್ಮಾಪಕರು. ನಾನು ಕಿವಿಯಲ್ಲಿ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮದಲ್ಲೆಲ್ಲೋ ಬಂತು. ‘ಏನೂ ತಿಂದಿಲ್ಲ, ಊಟ ಮಾಡಲು ಹೋಗೋಣ’ ಎಂದು ನಾನು ಅವರಿಗೆ ಹೇಳಿದ್ದೆ. ರಾತ್ರಿಯೆಲ್ಲ ಜೊತೆಗೇ ಇದ್ದೆವು. ಇಷ್ಟೆಲ್ಲಾ ನಡೆದಿದೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ. ಉಮಾಪತಿಯವರು ಬಳಸಿಕೊಂಡರು ಎಂದು ಎಂದು ಆ ಮಹಿಳೆ ಹೇಳುತ್ತಿದ್ದಾರಲ್ಲ, ಇದನ್ನು ಒಂದು ಕ್ಷಣ ಒಪ್ಪಿಕೊಳ್ಳೋಣ. ಆದರೆ ಇಷ್ಟೊಂದು ಮುಂದುವರಿಯಲು ಒಂದು ಹೆಣ್ಣಿಗೆ ಧೈರ್ಯ ಹೇಗೆ ಬರುತ್ತದೆ ಎನ್ನುವುದೇ ನನ್ನ ಪ್ರಶ್ನೆ. ಯಾರೋ ಹೇಳಿದರು ಎಂದು ಈ ರೀತಿ ಮಾಡುತ್ತೀರಾ? ಈ ರೀತಿ ಕೆಲಸ ಮಾಡಲು ಯಾವ ಹೆಣ್ಣುಮಕ್ಕಳೂ ಮುಂದೆ ಬರುವುದಿಲ್ಲ. ಇದರ ಹಿಂದೆ ಯಾರಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ನಾವು ಯಾರೂ ಕೈಕಟ್ಟಿಕೊಂಡು ಕೂತಿಲ್ಲ. ನಮಗೆ ಗೊತ್ತಿರುವ ಮೂಲದಿಂದ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ’ ಎಂದಿದ್ದಾರೆ.

‘ಸಾಯುವವರೆಗೂ ಹರ್ಷ, ಉಮಾಪತಿಯವರು ನನ್ನ ಸ್ನೇಹಿತರು. ನಮ್ಮ ನಡುವೆ ಯಾವುದೇ ಗೊಂದಲವಿಲ್ಲ. ಉಮಾಪತಿಯವರು ಭೇಟಿಯಾಗುತ್ತೇನೆ ಎಂದರು. ನಾನು ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ತೆಗೆದುಕೊಂಡಿರುವುದರಿಂದ ಬುಧವಾರ ಸಿಗುತ್ತೇನೆ ಎಂದಿದ್ದೇನೆ. ಇದೊಂದು ಚಿಕ್ಕ ವಿಷಯ. ಎಲ್ಲರಿಗೂ ಆಪ್ತರಿರುತ್ತಾರೆ. ಮಾತುಕತೆಗೆ ನಾನು ನನ್ನ ಆಪ್ತರನ್ನು ಕರೆದು, ನಂತರದಲ್ಲಿ ಇಬ್ಬರೂ ಪರಸ್ಪರ ಮುಖ ನೋಡದೇ ಇದ್ದರೆ ಹೇಗೆ. ಇದು ಆಗಬಾರದು’ ಎಂದರು.

‘ಹರ್ಷ ಮೆಲಂತಾ ನಕಲಿ ಸಂಖ್ಯೆ ಕೊಟ್ಟಿದ್ದನ್ನು ಪತ್ತೆಹಚ್ಚಲಾಗಲಿಲ್ಲವೇ?’: ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ, ‘ದರ್ಶನ್‌ ಅವರು ನನ್ನ ಮೇಲೆ ಆರೋಪ ಮಾಡಿಲ್ಲ. ಅವರ ಸ್ನೇಹಿತರು ಆರೋಪ ಮಾಡಿದ್ದಾರೆ. ನಾನು ಉತ್ತರ ಕೊಡುತ್ತೇನೆ. ಅವರ ರೀತಿಯೇ ನಾನೂ ಆರೋಪ ಮಾಡಲು ನನಗೆ ಹೆಚ್ಚು ಸಮಯ ಬೇಕಿಲ್ಲ. ಹರ್ಷ ಅವರು ಜುಲೈ 3ರಂದು ಮೈಸೂರಿನಲ್ಲಿ ದೂರು ನೀಡುತ್ತಾರೆ. ನನ್ನನ್ನು, ದರ್ಶನ್‌ ಅವರನ್ನು ತನಿಖೆಗೆ ಪೊಲೀಸರು ಕರೆಸುತ್ತಾರೆ. ಇಷ್ಟೆಲ್ಲ ಮಾಡಿದರೂ ಹರ್ಷ ಅವರು ನೀಡಿದ ಸಂಖ್ಯೆ ಸರಿ ಇದೆಯೋ ನಕಲಿಯೋ ಎನ್ನುವುದನ್ನು ತಿಳಿದುಕೊಳ್ಳುವ ಸಾಮಾನ್ಯ ಜ್ಞಾನ ಪೊಲೀಸರಿಗೆ ಇಲ್ಲವೇ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರ ‘ಕಾಲ್‌ ಡಿಟೈಲ್‌ ರೆಕಾರ್ಡ್‌’(ಸಿಡಿಆರ್‌) ತೆಗಿಸಬೇಕಿತ್ತು.ಮಹಿಳೆಯ ಜೊತೆ ಮುಖಾಮುಖಿಯಾಗಿ ಮಾತನಾಡುತ್ತೇನೆ ಎಂದರೆ ಪೊಲೀಸರು ನಿರಾಕರಿಸಿದರು. ದರ್ಶನ್‌ ಅವರ ಎದುರುಗಡೆ ‘ತಪ್ಪು ಒಪ್ಪಿಕೊಳ್ಳಿ, ಮುಗಿಸಿಬಿಡೋಣ’ ಎಂದು ನನ್ನ ಮೇಲೆ ಏಕೆ ಒತ್ತಡ ಹೇರುತ್ತಿದ್ದಿರಿ.₹25 ಕೋಟಿ ವಂಚನೆ ಎಂದಾದ ಮೇಲೆ ಆರೋಪಿ ಅರುಣ ಕುಮಾರಿ ಅವರನ್ನು ಏಕೆ ಬಿಟ್ಟಿರಿ’ ಎಂದು ಪ್ರಶ್ನಿಸಿದ್ದಾರೆ.

‘ರಾಜಿ ಸಂಧಾನಕ್ಕೆ ಒಪ್ಪಲ್ಲ’: ‘ಈ ಪ್ರಕರಣವನ್ನು ನಾನು ಇಲ್ಲಿಗೇ ಬಿಡಲು ಸಿದ್ಧವಿಲ್ಲ. ಇದನ್ನು ಎದುರಿಸುತ್ತೇನೆ. ಸಿನಿಮಾ ಮಾಡಿಯೇ ಜೀವನ ನಡೆಸಬೇಕಾಗಿಲ್ಲ. ತನಿಖೆ ಎಲ್ಲಿಯಾದರೂ ನಡೆಯಲಿ ಇವರೇಕೆ ತಲೆಕೆಡಿಸಿಕೊಳ್ಳಬೇಕು. ನಾನು ರಾಜಿಸಂಧಾನಕ್ಕೆ ಒಪ್ಪಲ್ಲ. ವಾಟ್ಸ್‌ಆ್ಯಪ್‌ ಚಾಟ್‌, ವಾಯ್ಸ್‌ ರೆಕಾರ್ಡ್‌ನಲ್ಲಿ ನಾನು ಅಶ್ಲೀಲವಾಗಿ ಮಾತನಾಡಿಲ್ಲ. ನನ್ನನ್ನು ಒಬ್ಬರು ಕಳೆದುಕೊಳ್ಳಲು ಸಿದ್ಧರಿದ್ದಾರೆ ಎಂದ ಮೇಲೆ ಅವರನ್ನು ಉಳಿಸಿಕೊಳ್ಳಲು ನಾನು ಸಿದ್ಧವಿಲ್ಲ. ನನ್ನನ್ನೂ ದರ್ಶನ್‌ ಅವರನ್ನೂ ದೂರ ಇಡಲು ಖಚಿತವಾಗಿ ಇದು ನಡೆದಿದೆ. ನನ್ನ ತೇಜೋವಧೆ ಮಾಡಲು ಪ್ರಯತ್ನ ನಡೆದಿದೆ. ತನಿಖೆಯ ಮುಖಾಂತರವೇ ಎಲ್ಲವೂ ಬಹಿರಂಗವಾಗಲಿ. ನಾವು ಯಾರ ಮುಂದೆಯೂ ತಲೆತಗ್ಗಿಸಲ್ಲ. ಅನ್ನ ಹಾಕಿದವರ ಮುಂದೆ ತಲೆ ತಗ್ಗಿಸುತ್ತೇವೆ. ದರ್ಶನ್‌ ಸರ್‌ ಹಾಗೂ ನನ್ನ ಒಡನಾಟ ಬೇರೆ ರೀತಿ ಇದೆ, ಅವರಿಗೆ ತಲೆಬಾಗಿಸುತ್ತೇನೆ’ ಎಂದಿದ್ದಾರೆ.

‘ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ’

‘ಉಮಾಪತಿಯವರು ನನ್ನನ್ನು ಕೇವಲ ಎರಡು ತಿಂಗಳಿನಿಂದ ಪರಿಚಯ ಎನ್ನುತ್ತಿದ್ದಾರೆ. ಆದರೆ ಕಳೆದ ಮಾರ್ಚ್‌ನಿಂದ ನಾನು ಅವರ ಸಂಪರ್ಕದಲ್ಲಿದ್ದೇನೆ. ದರ್ಶನ್‌ ಅವರನ್ನು ಭೇಟಿಯಾಗಲು ಜನ ಕಾಯುತ್ತಾ ನಿಂತಿರುತ್ತಾರೆ. ಇಂತಹ ವ್ಯಕ್ತಿಯನ್ನು ಭೇಟಿಯಾಗುತ್ತೇನೆ ಎಂದು ನನ್ನ ಹಿಂದೆ ಯಾರಾದರೂ ಒಬ್ಬರು ಇರಲೇ ಬೇಕಲ್ಲವೇ. ನನ್ನನ್ನು ಏಕೆ ಉಪಯೋಗಿಸಿಕೊಂಡರು ತಿಳಿದಿಲ್ಲ. ನನಗೆ ಅವಮಾನ ಆಗುತ್ತಿದೆ. ನನ್ನ ತೇಜೋವಧೆ ಏಕೆ ಮಾಡುತ್ತಿದ್ದಾರೆ. ಇದರಿಂದ ದಯವಿಟ್ಟು ನನ್ನನ್ನು ಆಚೆ ತನ್ನಿ. ಪರಿಸ್ಥಿತಿ ಹೇಗಾಗಿದೆ ಎಂದರೆ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ನಾನು ಖಿನ್ನತೆಗೆ ಒಳಗಾಗಿದ್ದೇನೆ. ಉಮಾಪತಿಯವರು ಮಾಡಿದ್ದು ತಪ್ಪು ಎಂದು ನೇರವಾಗಿ ಹೇಳುತ್ತೇನೆ. ಅವರವರೇ ಹೋಗಿ ಅವರವರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಿತ್ತು. ನನ್ನನ್ನು ಉಪಯೋಗಿಸಿಕೊಂಡಿದ್ದು ತಪ್ಪು. ದಯವಿಟ್ಟು ನಮ್ಮನ್ನು ಬದುಕಲು ಬಿಡಿ’ ಎಂದು ವಿಡಿಯೊದಲ್ಲಿ ಅರುಣ ಕುಮಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT