ಸೋಮವಾರ, ಮೇ 17, 2021
23 °C

ಮತ್ತೆ ಗಾಳಿಪಟ ಹಾರಿಸಲು ಸಜ್ಜಾದ ಗಣೇಶ್‌, ದಿಗಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಹಳೆಯ ಗಾಳಿಪಟದ ಯಾವ ಎಲಿಮೆಂಟ್‌ಗಳೂ ಇದರಲ್ಲಿಲ್ಲ’ ಎಂದು ಸ್ಪಷ್ಟನೆ ನೀಡುತ್ತಾ ‘ಗಾಳಿಪಟ 2’ ಹಾರಿಸಲು ಸಜ್ಜಾಗಿದ್ದರು ನಿರ್ದೇಶಕ ಯೋಗರಾಜ್‌ ಭಟ್‌. ಶರಣ್‌, ರಿಷಿ ಮತ್ತು ಪವನ್ ಕುಮಾರ್‌ ಕೈಗೆ ಗಾಳಿಪಟ ಹಾರಿಸುವ ಜವಾಬ್ದಾರಿಯನ್ನೂ ನೀಡಿದ್ದರು. ಆದರೆ, ಭಟ್ಟರ ಗಾಳಿಪಟ ಹಾರಿಸಲು ಮತ್ತೆ ನಟ ಗಣೇಶ್‌ ಮತ್ತು ದಿಗಂತ್‌ ಬರಲಿದ್ದಾರೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ.

‘ಮುಂಗಾರು ಮಳೆ’ ಸಿನಿಮಾದ ಭರ್ಜರಿ ಯಶಸ್ಸು ಯೋಗರಾಜ್‌ ಭಟ್‌ ಮತ್ತು ಗಣೇಶ್‌ಗೆ ಚಂದನವನದಲ್ಲಿ ಗಟ್ಟಿಯಾದ ನೆಲೆ ಕಲ್ಪಿಸಿತ್ತು. ಇದರ ಯಶಸ್ಸಿನ ಬಳಿಕವೇ ಭಟ್ಟರು ‘ಗಾಳಿಪಟ’ ಹಾರಿಸಿ ನಗೆ ಚೆಲ್ಲಿದ್ದರು. ಗಣೇಶ್‌, ದಿಗಂತ್‌ ಮತ್ತು ರಾಜೇಶ್‌ ಕೃಷ್ಣ ನಟಿಸಿದ್ದ ಈ ಚಿತ್ರ ಪ್ರೇಕ್ಷಕರಿಗೂ ಮೋಡಿ ಮಾಡಿತ್ತು.

ಹಳೆಯ ಕನವರಿಕೆಯನ್ನೇ 11 ವರ್ಷಗಳ ಬಳಿಕ ಮತ್ತೆ ‘ಗಾಳಿಪಟ 2’ ಚಿತ್ರ ನಿರ್ದೇಶಿಸಲು ಭಟ್ಟರು ಮುಂದಾಗಿದ್ದರು. ಚಿತ್ರದ ಆರಂಭದಲ್ಲಿ ‘ಹಳೆಯ ಗಾಳಿಪಟದಲ್ಲಿದ್ದ ತಾರಾಗಣ ಇದರಲ್ಲಿ ಇರುವುದಿಲ್ಲ’ ಎಂದು ಸ್ಪಷ್ಟನೆಯನ್ನೂ ನೀಡಿದ್ದರು. ಈಗ ಹಳೆಯ ಸದಸ್ಯರೇ ಮತ್ತೆ ಭಟ್ಟರ ತಂಡಕ್ಕೆ ಮರುಸೇರ್ಪಡೆಗೊಂಡಿದೆ.

ಶರಣ್‌ ಮತ್ತು ರಿಷಿ ಆಯ್ಕೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತಂತೆ. ಹಾಗಾಗಿ, ಈ ಇಬ್ಬರನ್ನೂ ಕೈಬಿಡಲಾಗಿದೆ ಎನ್ನಲಾಗಿದೆ. ಅವರ ಸ್ಥಾನದಲ್ಲಿ ಗಣೇಶ್‌ ಮತ್ತು ದಿಗಂತ್‌ ಅಭಿನಯಿಸಲಿದ್ದಾರೆ. ಅವರಿಗೆ ಪವನ್‌ ಕುಮಾರ್‌ ಜೊತೆಯಾಗಲಿದ್ದಾರೆ.

ಚಿತ್ರದಲ್ಲಿ ನಾಲ್ವರು ನಾಯಕಿಯರು ಇರಲಿದ್ದಾರೆ. ಈ ಪೈಕಿ ಶರ್ಮಿಳಾ ಮಾಂಡ್ರೆ ಮತ್ತು ಸೋನಲ್‌ ಮಾಂತೆರೊ ನಟಿಸುವುದು ಪಕ್ಕಾ ಆಗಿದೆ. ಚಿತ್ರಕ್ಕಾಗಿ ಚೀನಾದ ಬೆಡಗಿಯೊಬ್ಬಳನ್ನು ಕರೆತರುವ ಪ್ರಯತ್ನವೂ ಚಿತ್ರತಂಡದಿಂದ ನಡೆಯುತ್ತಿದೆ. ಕಥೆಯ ಪ್ರಕಾರ ಒಬ್ಬಾಕೆ ಚೀನಾ ದೇಶದವಳಾಗಿರುವುದೇ ಇದಕ್ಕೆ ಕಾರಣವಂತೆ. 

ಯುವಜನರ ಕನಸುಗಳು ಮತ್ತು ಹತಾಶೆಯ ಸುತ್ತ ಈ ಚಿತ್ರದ ಕಥೆ ಹೊಸೆಯಲಾಗಿದೆ. ಒಂಬತ್ತು ಹಾಡುಗಳು ಚಿತ್ರದಲ್ಲಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ. ಛಾಯಾಗ್ರಹಣ ಅದ್ವೈತ್‌ ಗುರುಮೂರ್ತಿ ಅವರದು. ಬೆಳಗಾವಿ ಮೂಲದ ಮಹೇಶ್‌ ದಾನಣ್ಣನವರ ಆರ್ಥಿಕ ಇಂಧನ ಒದಗಿಸುತ್ತಿದ್ದಾರೆ.

ಭಟ್ಟರು ಬರೆದ ಪತ್ರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು