ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.21ಕ್ಕೆ ‘ಪುನೀತಪರ್ವ’; ಗಂಧದಗುಡಿ ಪ್ರಿರಿಲೀಸ್‌ ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭ

Last Updated 11 ಅಕ್ಟೋಬರ್ 2022, 10:01 IST
ಅಕ್ಷರ ಗಾತ್ರ

ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಅವರ ಜೊತೆಗೂಡಿ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ತಯಾರಿಸಿದ್ದ ಡಾಕ್ಯೂಫಿಲಂ ‘ಗಂಧದಗುಡಿ’ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

ಚಿತ್ರದ ಟ್ರೇಲರ್‌ ಈಗಾಗಲೇ ಒಂದು ಕೋಟಿ ವೀಕ್ಷಣೆಯನ್ನು ದಾಟಿದ್ದು, ಚಿತ್ರದ ಪ್ರಿರಿಲೀಸ್‌ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲು ದೊಡ್ಮನೆ ಸಜ್ಜಾಗಿದ್ದು, ಸಿದ್ಧತೆ ಆರಂಭಿಸಿದೆ.

‘ಪುನೀತಪರ್ವ’ ಹೆಸರಿನಲ್ಲಿ ಅ.21ರಂದು ಸಂಜೆ 6.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಿರಿಲೀಸ್‌ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ನೂರಾರು ಗಣ್ಯರು ಭಾಗವಹಿಸಲಿದ್ದಾರೆ. ಮಂಗಳವಾರ ಪಿಆರ್‌ಕೆ ಪ್ರೊಡಕ್ಷನ್ಸ್‌ ಮುಖ್ಯಸ್ಥೆ, ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ನಟರಾದ ರಾಘವೇಂದ್ರ ರಾಜ್‌ಕುಮಾರ್‌, ಯುವ ರಾಜ್‌ಕುಮಾರ್‌ ಜೊತೆಗೂಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ವಿಶೇಷ ಆಹ್ವಾನಪತ್ರಿಕೆಯನ್ನೂ ತಯಾರಿಸಲಾಗಿದೆ.

‘ನಾನು ನಾನಾಗಿಯೇ ಇರಬೇಕು, ಅಂತಹ ಭಿನ್ನವಾದ ಸಿನಿಮಾ ಮಾಡೋಣ’ ಎಂಬ ತಮ್ಮ ಅಭಿಲಾಷೆಯನ್ನು ಮುಂದಿಟ್ಟಾಗ ‘ಗಂಧದಗುಡಿ’ ಜನ್ಮತಾಳಿತ್ತು ಎಂದು ಅಮೋಘವರ್ಷ ಅವರು ಈ ಹಿಂದೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಉಲ್ಲೇಖಿಸಿದ್ದರು. ರಾಜ್ಯದ ವನ್ಯಲೋಕ, ಕಾಡು, ಪ್ರಕೃತಿ ಈ ಸಿನಿಮಾದ ಜೀವಾಳ. ‘ಈ ಸಿನಿಮಾ ಒಂದು ರೀತಿ ಅನುಭವಾತ್ಮಕ ಸಿನಿಮಾ. ಇದನ್ನು ಸಾಕ್ಷ್ಯಚಿತ್ರ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಇದರ ಚಿತ್ರೀಕರಣ ಬಹಳ ಭಿನ್ನವಾಗಿದೆ. ಇಲ್ಲಿ ಪ್ರೇಕ್ಷಕರು ನೋಡುವುದೆಲ್ಲವೂ ನಿಜವೇ. ಇಲ್ಲಿ ಹಾಡಿದೆ, ಕಥೆ ಇದೆ. ಯಾವುದೂ ಕಾಲ್ಪನಿಕವಲ್ಲ. ಭಾರತದಲ್ಲೇ ಈ ರೀತಿ ಪ್ರಯೋಗ ಮೊದಲು ನಡೆದಂತಿಲ್ಲ’ ಎಂದಿದ್ದಾರೆ ಅಮೋಘವರ್ಷ.

‘ಗಂಧದಗುಡಿ’ ಪುನೀತ್‌ ಅವರ ಕನಸಾಗಿತ್ತು. ಪುನೀತ್‌ ಅವರು ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ಕೊನೆಯ ಚಿತ್ರ ಇದಾಗಿದೆ. ಈ ಡಾಕ್ಯೂಫಿಲಂ ಅ.28ರಂದು ಬಿಡುಗಡೆಯಾಗುತ್ತಿದ್ದು, ತೆರೆಯ ಮೇಲೆ ‘ಮ್ಯಾನ್‌ ವಿದ್‌ ವೈಲ್ಡ್‌’ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT