ಗುರುವಾರ , ಸೆಪ್ಟೆಂಬರ್ 23, 2021
21 °C

‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸಿನಿಮಾ;‌ ಗಾರ್ಟ್‌ ಚಿತ್ರೋತ್ಸವದಲ್ಲಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರವು ಜರ್ಮನಿಯ ಸ್ಟುಟ್ ಗಾರ್ಟ್ ಚಿತ್ರೋತ್ಸವದಲ್ಲಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ (ಡೈರೆಕ್ಟರ್ಸ್ ವಿಷನ್ ಅವಾರ್ಡ್) ಭಾಜನವಾಗಿದೆ.

ನಿರ್ಮಾಪಕ ಎಸ್.ವಿ.ಶಿವಕುಮಾರ್ ಅವರು ತಮ್ಮ ಸಂಗಮ ಫಿಲಂಸ್‌ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರವು ಸಾಹಿತಿ ಜಯಂತ ಕಾಯ್ಕಿಣಿಯವರ ‘ಹಾಲಿನ ಮೀಸೆ’ ಕಥೆಯನ್ನು ಆಧರಿಸಿದೆ. ಆ ಕಥೆಯಲ್ಲಿ ಬರುವ ಪಾತ್ರವೊಂದನ್ನು ಬೆಳೆಸಿ ಸಮಕಾಲೀನ ಸಾಮಾಜಿಕ ಜ್ವಲಂತ ದ್ವಂದ್ವವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಸುಖವನ್ನು ಅರಸುತ್ತಾ ಹೋಗುವ ಈ ಕಾಲದ ನಮ್ಮ ಪಯಣ ಮನಃಶಾಂತಿಗೆ ಎರವಾಗುತ್ತಿದೆಯೇ ಎನ್ನುವ ದಾಸರ ಪದದಲ್ಲಿ ವ್ಯಕ್ತವಾಗುವ ಆತಂಕವೂ ಚಿತ್ರದ ಸತ್ವವಾಗಿದೆ.

ಬಾಲ್ಯದ ಹಳ್ಳಿಯ ವಾತಾವರಣ ತನ್ನ ಬೆಳವಣಿಗೆಗೆ ತೊಡಕಾಗಿದೆ ಎಂದು ಭಾವಿಸುವ ನಾಗರಾಜ ಸ್ಥಳಾಂತರವಾಗುವ ಕನಸು ಕಾಣುತ್ತಿರುತ್ತಾನೆ. ನಂತರ ದೊಡ್ಡವನಾಗಿ ನಗರ ಸೇರಿ ಗೃಹಸ್ಥನಾದ ನಾಗರಾಜ ಜೀವನದಲ್ಲಿ ಯಶಸ್ವಿಯಾಗುತ್ತಾ ಹೋದಂತೆ ಭವ ಜೀವನದ ಆಕರ್ಷಣೆ ಅವನನ್ನು ಬೇರೆಯೇ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಬಾಲ್ಯದಲ್ಲಿ ಅವನು ಅನುಭವಿಸಿದ ಅವಮಾನ, ನೋವು ಅವನ ಮನಸ್ಸನ್ನು ಹದಗೊಳಿಸಿತೇ? ಅಥವಾ ಅದು ಅವನನ್ನು ಅಸೂಕ್ಷ್ಮ ಮಾಡಿತೇ? ಸುಖ ಅರಸುತ್ತಾ ಹೋಗುವ ಈ ಕಾಲದ ನಮ್ಮ ಪಯಣ ಮನಶಾಂತಿಗೆ ಎರವಾಗುತ್ತಿದೆಯೇ ಎನ್ನುವುದನ್ನು ಈ ಚಿತ್ರತೆರೆದಿಡಲಿದೆ.

ಕರಾವಳಿಯ ಬದುಕನ್ನು ಕಟ್ಟಿಕೊಡುವ ಚಿತ್ರದ ಭಾಗವನ್ನು ಉಡುಪಿಯ ಸುತ್ತಮುತ್ತಲಿನ ಪರಿಸರದಲ್ಲೂ, ನಗರ ಜೀವನದ ಘಟನಾವಳಿಗಳನ್ನು ಬೆಂಗಳೂರಿನಲ್ಲೂ ಚಿತ್ರೀಕರಿಸಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ತಾರಾಗಣದಲ್ಲಿ ದೃಶಾ ಕೊಡಗು, ಆರಾಧ್ಯಾ, ಪ್ರವರ್ಥ ರಾಜು ಮತ್ತಿತರರು ಇದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು