ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದೊಳಗೆ ಸಿನಿಮಾ ಮಾಡ್ತೀನಿ ಅಂತಿದ್ದಾರೆ ಕಾಸರವಳ್ಳಿ

ಕನ್ನಡದ ಪ್ರಸಿದ್ಧ ಕಥೆಗಾರರೊಬ್ಬರ ಕಾದಂಬರಿ ತೆರೆಗೆ ತರಲು ಸಿದ್ಧತೆ
ಅಕ್ಷರ ಗಾತ್ರ

ಸಿನಿಮಾ ನಿರ್ದೇಶನದಿಂದ ದೀರ್ಘ ಸಮಯ ಬಿಡುವು ಪಡೆದಿದ್ದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಈಗ ಮತ್ತೆ ಆ್ಯಕ್ಷನ್ ಕಟ್ ಹೇಳುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಈ ಬಾರಿಯೂ ಅವರು ಕನ್ನಡದ ಹೆಸರಾಂತ ಕಥೆಗಾರ ಮತ್ತು ಕಾದಂಬರಿಕಾರರೊಬ್ಬರ ಕಥೆಯನ್ನುಸಿನಿಮಾ ಮಾಡಲು ಆಯ್ಕೆ ಮಾಡಿಕೊಂಡಿದ್ದಾರಂತೆ. ಕಲಾತ್ಮಕ ಸಿನಿಮಾಗಳಿಗೆ ಖ್ಯಾತರಾಗಿರುವ ಕಾಸರವಳ್ಳಿ ಅವರು, ‘ಕೂರ್ಮಾವತಾರ’ದ ನಂತರ ಯಾವುದೇ ಸಿನಿಮಾ ಮಾಡಿರಲಿಲ್ಲ.

ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಪಿ. ಶೇಷಾದ್ರಿ ಈಗ ಸಿನಿಮಾ ಮಾಡಿದ್ದು, ‘ಮೂಕಜ್ಜಿಯ ಕನಸುಗಳು’ಸಿನಿಮಾ ಬಿಡುಗಡೆ ಪೂರ್ವ ವೀಕ್ಷಣೆಗೆ ಗಿರೀಶ್‌ ಕಾಸರವಳ್ಳಿ ಬಂದಿದ್ದರು.‘ಸಿನಿಮಾ ಪುರವಣಿ’ಗೆ ಮಾತಿಗೆ ಸಿಕ್ಕಿದ್ದರು. ಮುಂದಿನ ಸಿನಿಮಾ ಬಗ್ಗೆ ಕೇಳಿದಾಗ ‘ಹೌದು ಸಿನಿಮಾ ಮಾಡಬೇಕೆಂದು ತೀರ್ಮಾನಿಸಿದ್ದೇನೆ. ಎರಡು ಕಥೆಗಳು ಬಂದಿವೆ. ಅಂತಿಮಗೊಳಿಸಿಲ್ಲ. ಕನ್ನಡದ ಪ್ರಮುಖ ಕಥೆಗಾರೊಬ್ಬರ ಪ್ರಸಿದ್ಧ ಕಥೆಯನ್ನು ಸಿನಿಮಾ ಮಾಡಬೇಕು ಅಂದುಕೊಂಡಿದ್ದೇನೆ. ಕಥೆಯ ಹಕ್ಕುಸ್ವಾಮ್ಯದಾರರ ಅನುಮತಿ ಪಡೆಯಲು ಮತ್ತು ಚಿತ್ರ ನಿರ್ಮಾಣಕ್ಕೆ ಆಸಕ್ತಿ ಹೊಂದಿರುವ ನಿರ್ಮಾಪಕರೊಬ್ಬರ ಜತೆ ಮಾತುಕತೆ ನಡೆಯುತ್ತಿದೆ’ ಎಂದರು.

ಕಥೆ, ಕಥೆಗಾರ, ನಿರ್ಮಾಪಕರು ಹಾಗೂ ನಟ–ನಟಿಯರ ಬಗ್ಗೆ ಗುಟ್ಟು ಬಿಟ್ಟುಕೊಡದ ಅವರು, ತಮ್ಮ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಕಾಯ್ದುಕೊಂಡರು. ‘ಬಹಳ ಹಿಂದೆಯೇ ಆ ಕಥೆಯನ್ನು ಸಿನಿಮಾ‌ ಮಾಡಲು ಆಸಕ್ತಿ ತೋರಿದ್ದೆ. ಕಾರಣಾಂತರಗಳಿಂದ ಅದು ಚರ್ಚೆಯ ಹಂತದಲ್ಲೇ ನಿಂತು ಹೋಗಿತ್ತು. ಈಗ ಸಿನಿಮಾ ಮಾಡುವ ಹಂತಕ್ಕೆ ಬಂದಿದೆ. ಒಂದು ವರ್ಷದೊಳಗಂತೂ ಸಿನಿಮಾ ನಿರ್ಮಾಣ ಖಚಿತ’ ಎಂದರು.

ಘಟಶ್ರಾದ್ಧ, ಮೂರು ದಾರಿಗಳು, ತಬರನ ಕಥೆ, ಬಣ್ಣದ ವೇಷ, ಮನೆ, ಕ್ರೌರ್ಯ, ತಾಯಿ ಸಾಹೇಬ, ದ್ವೀಪ, ಹಸೀನಾ, ನಾಯಿ ನೆರಳು, ಗುಲಾಬಿ ಟಾಕೀಸ್, ಕನಸೆಂಬೋ ಕುದುರೆಯನೇರಿ, ಕೂರ್ಮಾವತಾರದಂತಹ ಕಲಾತ್ಮಕ ಚಿತ್ರಗಳನ್ನು ಚಿತ್ರರಂಗಕ್ಕೆ ನೀಡಿದ ಹೆಗ್ಗಳಿಕೆ ಅವರದು. ನಾಲ್ಕು ಬಾರಿ ಸ್ವರ್ಣ ಕಮಲ‌ ಹಾಗೂ ಒಮ್ಮೆ ಓಶಿಯನ್ ಸಿನಿಫ್ಯಾನ್ ಏಶಿಯಾ ಚಿತ್ರೋತ್ಸವದ ವಿಶೇಷ ಜ್ಯೂರಿ ಪ್ರಶಸ್ತಿಗೆ ಕಾಸರವಳ್ಳಿ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT