ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು, ದೆವ್ವ ಮತ್ತು ಆ ಎರಡು ಸಿನಿಮಾ!

Last Updated 22 ಮೇ 2021, 19:31 IST
ಅಕ್ಷರ ಗಾತ್ರ

ಅಂಧಶ್ರದ್ಧೆಯ ಹಿಂದೆ ಜನ ಓಡುವುದರ ದುರಂತವನ್ನು ತೆರೆದಿಡುವ ಈ ಎರಡು ಸಿನಿಮಾಗಳು, ದಶಕಗಳ ಹಿಂದೆಯೇ ಬಂದಿದ್ದರೂ ಅವುಗಳ ನೆನಪು ಇನ್ನೂ ಹಸಿರಾಗಿದೆ. ದೇವರಾಗಲೀ ಧರ್ಮವಾಗಲೀ ಜನರ ಸಾಮಾಜಿಕ–ಮಾನಸಿಕ ಹಿತಕ್ಕಾಗಿ ಇರುವಂಥವು ಎನ್ನುವುದೇ ಈ ಸಿನಿಮಾಗಳ ಸಂದೇಶ

***

‘ದೇವರು ಮೈ ಮೇಲೆ ಬರುವುದು’ ಎಂಬ ಪ್ರಕ್ರಿಯೆ ಗೊತ್ತಲ್ಲ? ಇದನ್ನು ಮನೋವೈದ್ಯಕೀಯ ವಿಜ್ಞಾನ ‘Possession Syndrome’ ಎಂದು ಕರೆಯುತ್ತದೆ. ಸಿನಿಮಾಗಳಿಗೂ ಈ ದೇವರು-ದೆವ್ವ ಬರುವುದಕ್ಕೂ ಬಹಳ ವಿಶಿಷ್ಟ ನಂಟು ಇದೆ. ಅದರ ಬಗ್ಗೆ ಯೋಚಿಸುವಾಗ ನಾನು ಬಾಲ್ಯದಲ್ಲಿ ನೋಡಿದ್ದ ಎರಡು ಸಿನಿಮಾಗಳು ನನಗೆ ನೆನಪಾಗುತ್ತವೆ. ಹಲವು ಸಿನಿಮಾಗಳು ‘ದೇವರು-ದೆವ್ವ-ಆತ್ಮಗಳು’ ಮನುಷ್ಯರ ಮೇಲೆ ಬರುವುದನ್ನು ಚಿತ್ರಿಸುತ್ತವೆ. ಆದರೆ, ಅವುಗಳ ಹಿಂದೆ ವೈಜ್ಞಾನಿಕತೆಯ ಕಿಂಚಿತ್ ಅಂಶವೂ ಇರುವುದಿಲ್ಲ. ಮನುಷ್ಯ ಕಲ್ಪನೆಗಳು ಚಿತ್ರದ ಮೂಲಕ ಬಂದಾಗ ಅದು ಎಷ್ಟು ಪ್ರಬಲವಾಗಿ ಪ್ರಭಾವ ಬೀರುತ್ತದೆ ಎಂದರೆ ಕೇವಲ ‘ರಂಜನೆ’ಯುಂಟು ಮಾಡುವ ಬದಲು ‘ಅನುಸರಣೆ’ಗೆ ಅದು ದಾರಿಯಾಗಿಬಿಡುತ್ತದೆ. ನಾನು ಹೇಳುತ್ತಿರುವ ಎರಡು ಚಿತ್ರಗಳು ಇದಕ್ಕೆ ಹೊರತಾದವು ಎನ್ನುವುದು ವಿಶೇಷ.

ಬಾಲ್ಯದಲ್ಲಿ ನಮಗೆ ಎರಡು ಮುಖ್ಯ ಸಿನಿಮಾ ಮೂಲಗಳು. ಒಂದು ನಾವು ಥಿಯೇಟರ್‌ಗೆ ಹೋಗಿ ನೋಡುತ್ತಿದ್ದದ್ದು, ಇನ್ನೊಂದು ಮನೆಯಲ್ಲಿ ಬರುತ್ತಿದ್ದ ದೂರದರ್ಶನ. ಥಿಯೇಟರ್‌ಗೆ ನಾವು ಹೋಗಿ ನೋಡುತ್ತಿದ್ದದ್ದು ಬಹು ಬಾರಿ ಕನ್ನಡ ಸಿನಿಮಾಗಳಾದರೆ, ಕೆಲಬಾರಿ ಹಿಂದಿ ಸಿನಿಮಾಗಳು. ದೂರದರ್ಶನದಲ್ಲಿ ಹಾಗಲ್ಲ. ಹಿಂದಿಯ ಜೊತೆಗೆ ಬೇರೆ ಭಾಷೆಯ ಸಿನಿಮಾಗಳೂ ಸಿಕ್ಕುತ್ತಿದ್ದವು. ಅದರಲ್ಲಿಯೂ ಒಮ್ಮೆ ನಮ್ಮ ಭಾರತೀಯ ಚಿತ್ರರಂಗಕ್ಕೆ 75 ವರ್ಷಗಳಾದ ಸವಿನೆನಪಿಗೆ ಒಂದು ವಾರ ಪೂರ್ತಿ ಮೂರು ಮೂರು ಸಿನಿಮಾಗಳು ಪ್ರತಿದಿನ ತಡರಾತ್ರಿಯವರೆಗೆ ಪ್ರಸಾರವಾಗಿದ್ದವು. ಆಗಲೇ ಬಹುಶಃ ಸತ್ಯಜಿತ್ ರೇ (ರಾಯ್‌) ನಿರ್ದೇಶನದ, ನಾವು ಹಿಂದಿ ಸಿನಿಮಾಗಳಲ್ಲಿ ನೋಡಿದ್ದ ಶರ್ಮಿಳಾ ಟ್ಯಾಗೋರ್‌ರ ಅಭಿನಯದ ‘ದೇವಿ’ ಚಿತ್ರವನ್ನು ನಾನು ನೋಡಿದ್ದು.

ಬಂಗಾಲಿ ಭಾಷೆಯ, ಕಪ್ಪು-ಬಿಳುಪಿನ ಚಿತ್ರದಲ್ಲಿ ನನಗೆ ಆಗ ಆಕರ್ಷಕ ಅನ್ನಿಸಿದ್ದು ಬಂಗಾಲಿ ದೊಡ್ಡ ಕೆಂಪು ಕುಂಕುಮ ಹೊತ್ತ, ದೊಡ್ಡ ಕಣ್ಣುಗಳ ಶರ್ಮಿಳಾರ ಮುಖ ಅಷ್ಟೆ. ಆದರೂ ಚಿತ್ರ ನೋಡಬೇಕೆನ್ನಿಸುವ ಹಟದಿಂದ ನೋಡಿ ಮುಗಿಸಿದ್ದೆ. ಆಗ ಅರ್ಥವಾಗಿದ್ದು ಇಷ್ಟೆ. ‘ಒಬ್ಬಳು ಮಹಿಳೆಯ ಮೇಲೆ ದೇವಿ ಬರುತ್ತಿರುತ್ತಾಳೆ. ಕೊನೆಗೆ ಜನರ ನಂಬಿಕೆಯಿಂದ ಆಕೆಗೆ ಅದರಿಂದ ಹೊರಬರುವುದೇ ಸಾಧ್ಯವಾಗುವುದಿಲ್ಲ. ಅಂಧಶ್ರದ್ಧೆಗೆ ಒಬ್ಬ ಬಾಲಕ ಬಲಿಯಾಗುವ ಘಟನೆಯೊಂದಿಗೆ ಚಿತ್ರ ಟ್ರ್ಯಾಜಿಡಿ’ ಎಂಬುದು. ನಾನಾಗ ಓದುತ್ತಿದ್ದ ಮೂರು -ನಾಲ್ಕನೇ ತರಗತಿಗೆ ಇನ್ನೂ ಹೆಚ್ಚು ಹೊಳೆದಿರಲಿಲ್ಲ.

1959ರಲ್ಲಿ ಚಿತ್ರಿಸಲ್ಪಟ್ಟ ಚಿತ್ರ ‘ದೇವಿ’. ನಾಯಕಿಯಾಗಿ ನಟಿಸಿದ್ದ ಶರ್ಮಿಳಾ ಅವರ ವಯಸ್ಸು ಆಗ 14 ವರ್ಷಗಳು. 1860ರ ಹೊತ್ತಿನ ಬಂಗಾಲದ ಚಿತ್ರಣ. ಅಂಧಶ್ರದ್ಧೆ-ಮೂಢನಂಬಿಕೆ-ಅದಕ್ಕೆ ಎದುರಾಗುವ ಕ್ರಾಂತಿಕಾರಕ ಬೌದ್ಧಿಕತೆಗಳ ತಾಕಲಾಟವೇ ಇಲ್ಲಿನ ಮುಖ್ಯವಸ್ತು. ರವೀಂದ್ರನಾಥ ಟ್ಯಾಗೋರ್‌ ಅವರ ನಿಕಟವರ್ತಿ ಪ್ರಭಾತ್‍ಕುಮಾರ್ ಮುಖ್ಯೋಪಾಧ್ಯಾಯ ಅವರು ಬರೆದ ಕಥೆ ‘ದೇವಿ’ಯನ್ನು ಇದು ಆಧರಿಸಿದೆ. ಕಥೆಯ ಹಂದರ ಬಂಗಾಲದ ಜಮೀನ್ದಾರ ಕಾಳಿಂಕರ್ ಚೌಧರಿಯ ಕುಟುಂಬದ ಸುತ್ತ. ಕಾಳಿಂಕರ್‌ನ ಇಬ್ಬರು ಗಂಡು ಮಕ್ಕಳು ತಾರಾಪ್ರಸಾದ್ ಮತ್ತು ಉಮಾಪ್ರಸಾದ್. ಕಿರಿಯವನಾದ ಉಮಾಪ್ರಸಾದನ ಪತ್ನಿ ‘ದಯಾಮಯಿ’ಯೇ ಇಲ್ಲಿ ಕೇಂದ್ರ ಪಾತ್ರ.

ದಯಾಮಯಿ ಒಂದು ಮಾತನ್ನೂ ಎದುರಾಡದ, ಎಲ್ಲವನ್ನೂ ನೋಡಿಕೊಳ್ಳುವ, ತಾರಾಪ್ರಸಾದ್‍ನ ಮಗ ‘ಖೋಕಾ’ನನ್ನು ಪ್ರೀತಿಯಿಂದ ನೋಡಿಕೊಳ್ಳುವ ‘ಆದರ್ಶ ಗೃಹಿಣಿ’. ಆಕೆಯ ಪತಿಯಿರುವುದು ಕಲ್ಕತ್ತೆಯಲ್ಲಿ. ಒಂದು ರಾತ್ರಿ ಕಾಳಿಂಕರ್ ಚೌಧರಿಗೆ ‘ಕಾಳಿ’ಯ ಕನಸು. ಕಾಳಿಯ ಮುಖ ಬಂದು ದಯಾಮಯಿಯ ಮುಖದಲ್ಲಿ ನೆಲೆಸಿದಂತೆ ಭಾಸವಾಗುತ್ತದೆ. ಬೆಳಿಗ್ಗೆ ಎದ್ದವನೇ ಸೊಸೆಯ ಕಾಲಿಗೆ ಬಂದು ಬೀಳುತ್ತಾನೆ. ಅಲ್ಲಿಂದ ದಯಾಮಯಿ ದೇವಿಯಾಗುತ್ತಾಳೆ!

ಬಡವನೊಬ್ಬನ ಮೊಮ್ಮಗನನ್ನು ಕಾಯಿಲೆಯಾಗಿದೆ ಎಂದು ಕರೆತಂದಾಗ, ದಯಾಮಯಿಯ ಚರಣಾಮೃತದಿಂದ ಆತ ಬದುಕುಳಿಯುತ್ತಾನೆ! ಇದು ದೇವಿಯಲ್ಲಿನ ನಂಬಿಕೆಯನ್ನು ಮತ್ತಷ್ಟು ದೃಢವಾಗಿಸುತ್ತದೆ. ದಯಾಮಯಿಯ ಪತಿ ಉಮಾಪ್ರಸಾದ ಕಲ್ಕತ್ತೆಯಿಂದ ಬಂದು, ತನ್ನ ಪತ್ನಿಯನ್ನು ದೇವಿಯಾಗಿಸುವುದರ ವಿರುದ್ಧ ದನಿಯೆತ್ತಿದರೂ ಅದು ಸಫಲವಾಗುವುದಿಲ್ಲ. ಖೋಕಾ ಕಾಯಿಲೆ ಬಿದ್ದಾಗಲೂ ಕಾಳಿಂಕರ್ ಚೌಧರಿ ದೇವಿಯನ್ನೇ ನಂಬಿ, ಯಾವ ಚಿಕಿತ್ಸೆಯನ್ನೂ ಮಾಡುವುದಿಲ್ಲ. ಪೂರ್ತಿ ರಾತ್ರಿ ನರಳುವ ಖೋಕಾ ದಯಾಮಯಿಯ ಮಡಿಲಲ್ಲಿ ಸಾಯುತ್ತಾನೆ. ದಯಾಮಯಿ ಅಸ್ವಸ್ಥಳಾಗಿ ನದಿಯ ಕಡೆಗೆ ಧಾವಿಸುವುದರೊಂದಿಗೆ ಕಥೆ ಮುಗಿಯುತ್ತದೆ.

ಈ ಚಿತ್ರಕ್ಕೆ ಸಾಕಷ್ಟು ಕಟು ವಿಮರ್ಶೆ ಎದುರಾಗಿತ್ತು. ‘ಹಿಂದೂ ಧರ್ಮದ ಅವಹೇಳನ’, ‘ಸಂಪ್ರದಾಯಸ್ಥ ಸಮಾಜದ ವಿರುದ್ಧದ ನಡವಳಿಕೆ’ಯನ್ನು ಪ್ರಚೋದಿಸುವಂತಹದ್ದು ಎಂಬ ಆರೋಪಕ್ಕೆ ಈ ಸಿನಿಮಾ ಗುರಿಯಾಗಿತ್ತು. ಆದರೆ, ದೇವರಾಗಲೀ ಧರ್ಮವಾಗಲೀ ಮಾನಸಿಕ-ಸಾಮಾಜಿಕ ಹಿತಕ್ಕೆ ಇರುವಂತಹವು ಎಂಬುದನ್ನು ಪರೋಕ್ಷವಾಗಿ ಈ ಚಿತ್ರ ಬಿಂಬಿಸುತ್ತದೆ ಎಂದು ನನಗನ್ನಿಸುತ್ತದೆ. ಮಾನವರು ದೇವರೆಂಬ ನಂಬಿಕೆಯನ್ನು ಹೇಗೆ ಶೋಷಿಸಲು, ಸಾಧ್ಯವಿದೆ, ಅಂಧಶ್ರದ್ಧೆಯ ಹಿಂದೆ ಇಡೀ ಸಮಾಜವು ಓಡುವುದರ ದುರಂತವನ್ನು ಈ ಚಿತ್ರ ತೆರೆದಿಡುತ್ತದೆ. ಬಂಗಾಲದ ಸಮಾಜದಲ್ಲಿ ಒಂದೆಡೆ ಅವ್ಯಾಹತವಾಗಿ ನಡೆಯುತ್ತಿದ್ದ ಬಾಲ್ಯವಿವಾಹ, ದಾಸ್ಯ, ಮಹಿಳೆಯರ ಮೇಲಿನ ಹಲವು ಕಟ್ಟುಪಾಡುಗಳು, ಇನ್ನೊಂದೆಡೆ ನಿಧಾನವಾಗಿ ಏಳುತ್ತಿದ್ದ ವೈಜ್ಞಾನಿಕವಾಗಿ ಏನು -ಏಕೆ-ಹೇಗೆ ಎಂದು ಪ್ರಶ್ನೆ ಕೇಳುವ ಮನೋಭಾವ ಇವುಗಳ ನಡುವೆ ಗೊಂದಲದಲ್ಲಿ ಸಿಲುಕಿದ್ದ ಮನಸ್ಸುಗಳು ಇಲ್ಲಿ ಚಿತ್ರಿತವಾಗಿವೆ. ಸತ್ಯಜಿತ್‌ ಅವರ ಜನ್ಮಶತಾಬ್ದಿಯ ಈ ಸಂದರ್ಭದಲ್ಲಿ ಚಿತ್ರ ಪ್ರಸ್ತುತವಾಗಿದೆ.

ಪದ್ಧತಿ-ಸಂಸ್ಕೃತಿ-ಗೌರವ-ಭಕ್ತಿ ಇವು ಸರಳ ಪದಗಳಲ್ಲ. ಅವುಗಳ ವಿಶ್ಲೇಷಣೆ ಬಹು ಸಂಕೀರ್ಣ. ಆದರೆ ಅವು ಶೋಷಣೆ-ನರಳುವಿಕೆ-ಅಪಾಯಗಳಿಗೆ ಕಾರಣಗಳಾಗುವುದನ್ನು ಮಾನವೀಯತೆಯಿಂದ ನಾವು ತಡೆಯಬೇಕು.

ಬಾಲ್ಯದಲ್ಲಿ ನಾನು ನೋಡಿದ ಇನ್ನೊಂದು ಸಿನಿಮಾ ದೂರದರ್ಶನದಲ್ಲಿ ಪ್ರಸಾರವಾದ, 1988ರಲ್ಲಿ ನಿರ್ಮಾಣವಾದ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ‘ಬಣ್ಣದ ವೇಷ’. ನಾನಾಗ ಸುಮಾರು ಐದನೇ ತರಗತಿಯಲ್ಲಿದ್ದೆ ಅನಿಸುತ್ತದೆ. ಆಗಷ್ಟೇ ನೃತ್ಯ ಕಲಿಯಲಾರಂಭಿಸಿದ್ದೆ. ಈ ಚಿತ್ರ ನೋಡಲು ಪ್ರಮುಖ ಕಾರಣ, ಅದರ ನಾಯಕನಟ ಶ್ರೀಧರ್ ಅವರಿಗೆ ನೃತ್ಯ ಬರುತ್ತಿತ್ತು ಎಂಬುದು. ಮೂಲತಃ ಸಾಗರ-ಶಿರಸಿ ಪ್ರದೇಶದ ಹವ್ಯಕ ಸಮುದಾಯಕ್ಕೆ ಸೇರಿದ ನಮ್ಮ ಕುಟುಂಬದವರಿಗೆ ಯಕ್ಷಗಾನ ಬಲು ಪ್ರೀತಿಯ ಕಲೆಯಾಗಿತ್ತು ಎಂಬುದು ಮತ್ತೊಂದು ಕಾರಣ. ಆಗ ಶಂಭುವಿನ ಕಥೆ ನೋಡಿ, ಮತ್ತೊಂದು ಸಿನಿಮಾ ಎಂಬಂತೆ ನೋಡಿ ಮುಗಿಸಿದ್ದೆವು ಅಷ್ಟೆ. ಆದರೆ ಬಾಲ್ಯದಲ್ಲಿ ನೋಡಿದ್ದ ಆ ಸಿನಿಮಾವನ್ನು ಈಗ ವಿಶ್ಲೇಷಿಸಲು ಕಾರಣ, ಕಲಾಕ್ಷೇತ್ರವನ್ನು ತುಂಬಾ ಹತ್ತಿರದಿಂದ ನೋಡಿರುವ ನನ್ನ ಅನುಭವ, ಕಲಾವಿದರ ಮೇಲಿರುವ ಮಾನಸಿಕ ಒತ್ತಡ ಮತ್ತು ಕಲೆ-ಧರ್ಮ-ಮನಸ್ಸುಗಳ ನಡುವೆ ಇರುವ ನಂಟು ಇವೆಲ್ಲದರ ಬಗೆಗಿನ ನನ್ನ ಗ್ರಹಿಕೆ-ಅಧ್ಯಯನ.

ದೇವಿ ಚಿತ್ರದಲ್ಲಿ ಶರ್ಮಿಳಾ ಟ್ಯಾಗೋರ್‌
ದೇವಿ ಚಿತ್ರದಲ್ಲಿ ಶರ್ಮಿಳಾ ಟ್ಯಾಗೋರ್‌

ಯಕ್ಷಗಾನದ ಮೇಳವೊಂದರಲ್ಲಿ ವೇಷ ಹಾಕುವ ಶಂಭು ಈ ಚಿತ್ರದ ನಾಯಕ. ಕೆಳವರ್ಗದ ಆತನಿಗೆ ತನಗೆ ನಾಯಕ ಪಾತ್ರಗಳು ದೊರೆಯದಿರುವ ಬಗ್ಗೆ ಅಸಮಾಧಾನ. ಹಿರಿಯ ವೇಷಧಾರಿ, ಮೇಲ್ವರ್ಗದ ಶೇಷಪ್ಪನಿಗೇ ಮೊದಲ ಆದ್ಯತೆ. ನಟನೆಯ ಪರಿಣತಿಯೂ ಶೇಷಪ್ಪನಿಗೆ ಹೆಚ್ಚು. ತನ್ನ ತರಲೆಗಳಿಗಾಗಿ ಶೇಷಪ್ಪನನ್ನು ಕ್ಷಮೆ ಕೇಳಬೇಕಾಗಿ ಬಂದಾಗ ಬೇಸರ-ಹತಾಶೆಗಳಿಂದ ಶಂಭು ಮೇಳವನ್ನೇ ತೊರೆಯುತ್ತಾನೆ. ಹೊಸತೊಂದು ಮೇಳ ಸಿದ್ಧತೆಯಲ್ಲಿರುತ್ತದೆ. ಜುಂಜುಟ್ಟಿ ಎಂಬ ಭೂತದ ವೇಷಕ್ಕಾಗಿ ಶಂಭು ಸೇರುತ್ತಾನೆ. ಕುಣಿತದ ದಣಿವಿನಿಂದ ರಂಗದಲ್ಲಿ ಕುಸಿದು ಬೀಳುವ ಶಂಭುವಿನ ಮೇಲೆ ಜುಂಜುಟ್ಟಿಯ ಆವಾಹನೆನೆಯೇ ಆಗಿದೆ ಎಂದು ಜನ ನಂಬುತ್ತಾರೆ. ಈ ಆವಾಹನೆಯೇ ತರುವ ಆರ್ಥಿಕ ಲಾಭದ ಜೊತೆಗೇ ಅದು ತರುವ ಇತರ ಕಷ್ಟಗಳೂ ಒಂದೊಂದಾಗಿ ತೆರೆದುಕೊಳ್ಳುತ್ತವೆ.

ಶಂಭುವಿನ ಜೊತೆ ಜನ ಮಾತನಾಡಲು ಹೆದರುತ್ತಾರೆ, ಕಾಯಿಲೆ ಬಿದ್ದ ಅಣ್ಣನ ಮಗನನ್ನು ನೋಡಲು ತಾಯಿ ಬಿಡುವುದಿಲ್ಲ, ಆಸಕ್ತಿಯಿಂದ ಮಾತನಾಡಿಸುತ್ತಿದ್ದ ಹುಡುಗಿ ಮಾತನಾಡಿಸಲು ಅಂಜುತ್ತಾಳೆ. ಭೂತದ ಪಾತ್ರ ಬಿಡುತ್ತೇನೆಂದರೂ ಲಾಭದ ರುಚಿ ಹತ್ತಿದ ಮ್ಯಾನೇಜರ್ ಬಿಡುವುದಿಲ್ಲ. ಆತ ಹೇಳುವ ‘ಜನ ಬರುವುದು ನಿನ್ನ ವೇಷ, ಅದರ ಹಿಂದಿರುವ ಭೂತದ ಮಹಿಮೆಯನ್ನು ನೋಡಿ, ನಿನ್ನ ನಟನೆ-ಕುಣಿತವನ್ನಲ್ಲ’ ಎಂಬ ಮಾತುಗಳು ಶಂಭುವನ್ನು ಗೊಂದಲಕ್ಕೀಡು ಮಾಡುತ್ತವೆ. ಆಗ ಶಂಭು, ‘ನಾನು ಜುಂಜುಟ್ಟಿಯಲ್ಲ, ನಾನು ನಟನೂ ಅಲ್ಲ! ಹಾಗಾದರೆ ನಾನು ಯಾರು?’ ಎಂಬ ಹತಾಶೆಗೆ ಒಳಗಾಗುತ್ತಾನೆ.

ಕಲಾವಿದನ ಪ್ರತಿಭೆ, ಸಾಧನೆ, ಮಹತ್ವಾಕಾಂಕ್ಷೆಗಳು, ಪ್ರಕ್ಷುಬ್ಧ ಮನಃಸ್ಥಿತಿಯಲ್ಲಿ ಆತನ ಮನಸ್ಸು ದೇವ-ದೆವ್ವಗಳನ್ನು ಒಪ್ಪಿಕೊಳ್ಳುವ ರೀತಿ, ಆರ್ಥಿಕ ಲಾಭಕ್ಕಾಗಿ ಅದನ್ನು ಶೋಷಿಸುವ ಇತರರು, ಬುದ್ಧಿಯಿಂದ ವಿಶ್ಲೇಷಿಸದೆ ‘ದೇವರು-ದೆವ್ವ’ಗಳ ಭಯದಿಂದ ಯಾವುದನ್ನೂ ನಂಬುವ ಸಮಾಜದ ಅಜ್ಞಾನ ಇವುಗಳನ್ನು ಚಿತ್ರದ ಕಥೆ ನಮ್ಮೆದುರು ತೆರೆದಿಡುತ್ತದೆ. ಶಂಭುವಿನ ಬಗ್ಗೆ ಮರುಕ ಹುಟ್ಟುತ್ತದೆ. ಆತನನ್ನು ಗೇಲಿ ಮಾಡುವ, ನಂತರ ಹೆದರುವ-ಏರಿಸುವ ಸಮಾಜ, ಆತನಿಗೆ ಸಾಧನೆಯ-ಕಲಿಕೆಯ ಹಾದಿ ತೋರಿಸುವ ಪ್ರಯತ್ನ ಮಾಡಿದ್ದರೆ ಅಂತ್ಯ ಬೇರೆಯೇ ಆಗಬಹುದಿತ್ತು ಎನಿಸುತ್ತದೆ.

ಈ ಎರಡೂ ಚಿತ್ರಗಳನ್ನು ನಾನು ನೋಡಿದ್ದು ಸುಮಾರು 30 ವರ್ಷಗಳ ಹಿಂದೆ. ಆಗೇನೂ ನಾನು ಮನೋವೈದ್ಯೆಯಾಗಿರಲಿಲ್ಲ. ನಾನು ನೋಡಿದ ಹಲವು ಸಿನಿಮಾಗಳಲ್ಲಿ ಅವೂ ಸೇರಿದ್ದವು ಅಷ್ಟೆ. ಆದರೂ ಅವು ಎಷ್ಟು ಪ್ರಬಲವಾಗಿ ಮನಸ್ಸನ್ನು ತಲುಪಿದ್ದವು ಎಂದರೆ, ಈಗಲೂ ದೇವರು-ದೆವ್ವ ಮೈ ಮೇಲೆ ಬರುವ ವ್ಯಕ್ತಿಗಳಿಗೆ ನಾನು ಚಿಕಿತ್ಸೆ ನೀಡುವ ಸಮಯದಲ್ಲಿ ಈ ಚಿತ್ರಗಳು ಮನಸ್ಸಿಗೆ ಥಟ್ಟನೆ ಹೊಳೆಯುವಷ್ಟು. ವೈದ್ಯಳಾಗಿ ಪ್ರತೀ ರೋಗಿಯ ಧಾರ್ಮಿಕ ನಂಬಿಕೆಗಳು, ಅಗತ್ಯಗಳನ್ನು ಗೌರವಿಸಬೇಕಾದದ್ದು ನನ್ನ ಕರ್ತವ್ಯ. ಆದರೆ ಅಂಧ ಶ್ರದ್ಧೆಗಳೇ ಮೇಲುಗೈ ಪಡೆದು ಅನಾರೋಗ್ಯದತ್ತ ವ್ಯಕ್ತಿ ಧಾವಿಸುವಾಗ ಮಾನವೀಯತೆಯ ಧರ್ಮದಿಂದ, ಜಾಣ್ಮೆಯಿಂದ ನಂಬಿಕೆಗಳನ್ನು ಹೀಗಳೆಯದೇ, ಆರೋಗ್ಯದ ದಾರಿ ತೋರಿಸುವುದರತ್ತ ಪ್ರಯತ್ನಿಸಬೇಕು. ಅಂಥ ಕೌಶಲ ಕಲಿಯಲು 30 ವರ್ಷಗಳ ಹಿಂದೆ ನೋಡಿದ ಎರಡು ಸಿನಿಮಾಗಳು ನನ್ನಲ್ಲಿ ಅರಿವು ಮೂಡಿಸಿವೆ ಎನ್ನುವುದೇ ವಿಶೇಷ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT