ಶುಕ್ರವಾರ, ಫೆಬ್ರವರಿ 21, 2020
18 °C

‘ಮಾಲ್ಗುಡಿ ಡೇಸ್‌’ನಲ್ಲಿ ಗ್ರೀಷ್ಮಾ ರುಜು!

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಗ್ರೀಷ್ಮಾ ಆಚಾರ್

ಚಂದನವನದಲ್ಲಿ ಬಹು ನಿರೀಕ್ಷೆ ಮೂಡಿಸಿರುವ ‘ಮಾಲ್ಗುಡಿ ಡೇಸ್‌’ ಸಿನಿಮಾ ಒಂದಿಲ್ಲೊಂದು ವಿಶೇಷತೆಗಳಿಂದ ಸದಾ ಸುದ್ದಿಯಲ್ಲಿದೆ. ವಿಜಯ್‌ ರಾಘವೇಂದ್ರ ಅವರು ಶಾಲಾ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿರುವ ಚಿತ್ರದ ಪೋಸ್ಟರ್‌ ಈಗ ಬಿಡುಗಡೆ ಆಗಿದ್ದು, ಅಭಿಮಾನಿಗಳ ಮನಸ್ಸಿನಲ್ಲಿ ಪುಳಕ ಮೂಡಿಸುತ್ತಿದೆ.

ಅಂದಹಾಗೆ, ಈ ಚಿತ್ರದ ಮೂಲಕ ಗ್ರೀಷ್ಮಾ ಶ್ರೀಧರ್‌ ಎಂಬ ಅಪ್ಪಟ ಕಲಾ ಪ್ರತಿಭೆ ಸ್ಯಾಂಡಲ್‌ವುಡ್‌ಗೆ ಪರಿಚಯ ಆಗುತ್ತಿದ್ದು, ಭರವಸೆಯ ನಟಿಯಾಗುವ ಎಲ್ಲ ಲಕ್ಷಣಗಳೂ ಅವರಲ್ಲಿವೆ.

ಮೊದಲ ನೋಟಕ್ಕೆ ಸೀದಾ ಸಾದಾ ಹುಡುಗಿಯಂತೆ ಕಾಣಿಸುವ ಗ್ರೀಷ್ಮಾ ಶ್ರೀಧರ್‌, ‘ಮಾಲ್ಗುಡಿ ಡೇಸ್‌’ ಸಿನಿಮಾದಲ್ಲಿ ಪ್ರಕೃತಿ ಎಂಬ ಪಾತ್ರ ನಿರ್ವಹಿಸಿದ್ದಾರೆ. ಶೃಂಗೇರಿಯಿಂದ ಬೆಂಗಳೂರಿಗೆ ಹೋಗಿ ಅಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ಪ್ರಕೃತಿಯದ್ದು ಬೋಲ್ಡ್‌ ವ್ಯಕ್ತಿತ್ವ. ತಪ್ಪನ್ನು ಸಹಿಸದ; ಅನ್ಯಾಯ ಕಂಡರೆ ಸಿಡಿಯುವ ನಾಯಕಿಯ ಪಾತ್ರವನ್ನು ಗ್ರೀಷ್ಮಾ ನಿರ್ವಹಿಸಿದ್ದಾರೆ.

‘ಚಿನ್ನಾರಿ ಮುತ್ತ’ ವಿಜಯ್‌ ರಾಘವೇಂದ್ರ ಅವರ ಜತೆಗೆ ಮೊದಲಬಾರಿಗೆ ತೆರೆ ಹಂಚಿಕೊಂಡ ಖುಷಿಯನ್ನು ಅವರು ವ್ಯಕ್ತಪಡಿಸಿದ್ದು ಹೀಗೆ:

‘ಎಲ್ಲರಿಗೂ ಗೊತ್ತಿರುವಂತೆ ವಿಜಯ್‌ ರಾಘವೇಂದ್ರ ಸಹೃದಯಿ ವ್ಯಕ್ತಿತ್ವದವರು. ಅವರ ಮಾತಿನಂತೆ ವ್ಯಕ್ತಿತ್ವವೂ ಸಿಹಿಸಿಹಿ... ಸ್ಕ್ರೀನ್‌ ಮೇಲೆ ಅಷ್ಟೇ ಅಲ್ಲದೇ, ಆಫ್‌ ಸ್ಕ್ರೀನ್‌ನಲ್ಲೂ ಅವರು ತುಂಬಾನೇ ಸ್ವೀಟ್‌. ನಾನು ಏನೇ ತರ್ಲೆ ಮಾಡಿದರೂ ನಗು ನಗುತ್ತಲೇ ಸಹಿಸಿಕೊಳ್ಳುತ್ತಿದ್ದರು. ನಟನೆಯ ವಿಚಾರಕ್ಕೆ ಬಂದಾಗ ಆ ರೀತಿ ಅಲ್ಲ, ಹೀಗೆ ಮಾಡು ಅಂತ ಸಲಹೆ, ಸೂಚನೆಗಳನ್ನು ಕೊಡುತ್ತಿದ್ದರು. ಅವರೊಂದಿಗೆ ತೆರೆ ಹಂಚಿಕೊಂಡಿದ್ದು ತುಂಬ ಖುಷಿಕೊಟ್ಟಿತು’.

ಸಿನಿಮಾ ಮತ್ತು ರಂಗಭೂಮಿಗೆ ಸಂಬಂಧಿಸಿದಂತೆ ಸಾಕಷ್ಟು ಕೋರ್ಸ್‌ಗಳನ್ನು ಮಾಡುವುದರ ಜತೆಗೆ, ಪ್ರಾಯೋಗಿಕ ಅನುಭವ ಪಡೆದಿರುವ ಗ್ರೀಷ್ಮಾ ಶ್ರೀಧರ್‌, ‘ಮಾಲ್ಗುಡಿ ಡೇಸ್‌’ ಸಿನಿಮಾದ ಆಡಿಷನ್‌ನಲ್ಲಿ ಭಾಗವಹಿಸುವಾಗ ಚಿತ್ರಕ್ಕೆ ಆಯ್ಕೆಯಾಗುತ್ತೇನೆ ಎಂಬ ಭರವಸೆ ಹೊಂದಿದ್ದರಂತೆ.

‘ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೋಡಿ, ಸಿನಿಮಾದ ಆಡಿಷನ್‌ನಲ್ಲಿ ಪಾಲ್ಗೊಂಡೆ. ನಾಲ್ಕೈದು ಸುತ್ತುಗಳ ಆಡಿಷನ್‌ ನಂತರ ಶಾರ್ಟ್‌ ಲಿಸ್ಟ್‌ನಲ್ಲಿ ನನ್ನ ಹೆಸರಿತ್ತು. ಮುಂದಿನ ಸುತ್ತಿನಲ್ಲೂ ಚೆನ್ನಾಗಿ ಅಭಿನಯಿಸಿದೆ. ಆಯ್ಕೆ ಆದೆ. ಆಡಿಷನ್‌ನಲ್ಲಿ ಭಾಗವಹಿಸುವ ಮುಂಚೆಯೇ ನಾಯಕಿಯಾಗಿ ಆಯ್ಕೆಯಾಗುತ್ತೇನೆ ಎಂಬ ನಂಬಿಕೆ ಇತ್ತು. ನಿರ್ದೇಶಕರು ಇಂತಹ ಪಾತ್ರ ಮಾಡಿ ತೋರಿಸು ಅಂತ ಹೇಳಿದಾಗ ಅದು ನನ್ನ ವ್ಯಕ್ತಿತ್ವಕ್ಕೆ ಹೊಂದುವಂತಿತ್ತು. ಹಾಗಾಗಿ, ದಿ ಬೆಸ್ಟ್‌ ಅನಿಸುವಂತಹ ಪ್ರದರ್ಶನ ಕೊಟ್ಟೆ’ ಎಂದರು ಆಕರ್ಷಕ ಕಂಗಳ ಒಡತಿ ಗ್ರೀಷ್ಮಾ ಶ್ರೀಧರ್‌.

ಗ್ರೀಷ್ಮಾ ಶ್ರೀಧರ್‌ ಅವರ ಸಿನಿಮಾ ಅಧ್ಯಾಯ ಶುರುವಾಗುತ್ತಿರುವುದೇ ‘ಮಾಲ್ಗುಡಿ ಡೇಸ್‌’ ಚಿತ್ರದಿಂದ. ಹಾಗಾಗಿ, ಈ ಸಿನಿಮಾದ ಬಗ್ಗೆ ಅವರಿಗೆ ಅಪಾರ ನಿರೀಕ್ಷೆಗಳಿವೆಯಂತೆ.

‘ಎಲ್ಲ ಕಡೆಗಳಿಂದಲೂ ಚಿತ್ರದ ಬಗ್ಗೆ ಪಾಸಿಟಿವ್‌ ಪ್ರತಿಕ್ರಿಯೆಗಳು ಬರುತ್ತಿವೆ. ಅವು ಚಿತ್ರತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿವೆ. ಟೀಸಲ್‌, ಪೋಸ್ಟರ್‌, ಹಾಡುಗಳು ಎಲ್ಲವನ್ನೂ ಪ್ರೇಕ್ಷಕರು ತುಂಬು ಮನಸ್ಸಿನಿಂದ ಸ್ವೀಕರಿಸಿ, ಹರಸುತ್ತಿದ್ದಾರೆ. ನನ್ನ ಪಾತ್ರದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ಖುಷಿಯಿಂದ ನಕ್ಕರು ಗ್ರೀಷ್ಮಾ.

‘ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ತುಂಬ ಮಹತ್ವ ಇದೆ. ಹಾಗೆ ಬಂದು ಹೀಗೆ ಹೋಗುವ ಪಾತ್ರ ಅಲ್ಲ. ಇಡೀ ಚಿತ್ರದಲ್ಲಿ ತುಂಬ ವೇರಿಯೇಷನ್ಸ್‌ಗಳಿವೆ. ವಿಜಯ್‌ ರಾಘವೇಂದ್ರ ಅವರ ಸಮಕ್ಕೆ ಅಲ್ಲದಿದ್ದರೂ ಅರಿಗೆ ಮ್ಯಾಚ್‌ ಆಗುವಂತೆ ನಟಿಸಿದ್ದೇನೆ ಎಂಬ ನಂಬಿಕೆ ಇದೆ. ಪಾತ್ರಕ್ಕೆ ನ್ಯಾಯಕ್ಕೆ ಸಲ್ಲಿಸಿದ ತೃಪ್ತಿ ಇದೆ’ ಎನ್ನುತ್ತಾರೆ ಗ್ರೀಷ್ಮಾ.

‘ನಮ್ಮ ನಿರ್ದೇಶಕರು ತುಂಬ ಎನರ್ಜಿಟಿಕ್‌ ವ್ಯಕ್ತಿ. ಕಲಾವಿದರಿಂದ ಹೇಗೆ ಕೆಲಸ ತೆಗೆಯಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಒಂದು ಪಾತ್ರ ಹೇಗಿರಬೇಕು, ಆ ಪಾತ್ರದ ಅಭಿನಯ ಹೇಗೆ ಬರಬೇಕು ಎಂಬುದರ ಸ್ಪಷ್ಟ ಅರಿವು ಅವರಿಗೆ ಇದೆ. ಅವರೊಟ್ಟಿಗೆ ಕೆಲಸ ಮಾಡಿದ್ದು ಸಾಕಷ್ಟು ಅನುಭವ ದೊರಕಿಸಿಕೊಟ್ಟಿತು’ ಎಂದು ಚಿತ್ರದ ನಿರ್ದೇಶಕ ಕಿಶೋರ್‌ ಕಸುಬುದಾರಿಕೆಯ ಬಗ್ಗೆ ಕಣ್ಣುಗಳನ್ನು ಅಗಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಗ್ರೀಷ್ಮಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)