ಭಾನುವಾರ, ಮಾರ್ಚ್ 29, 2020
19 °C

ಹೇಟ್ ಯೂ ರೋಮಿಯೊ ರಂಜಿಸುವುದು ಯಾವಾಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಶಿವ ರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ ಅವರು ‘ಸಕ್ಕತ್ ಸ್ಟುಡಿಯೊ’ ಜೊತೆಗೂಡಿ ನಿರ್ಮಾಣ ಮಾಡಿರುವ ವೆಬ್ ಸರಣಿ ‘ಹೇಟ್ ಯೂ ರೋಮಿಯೊ’. ಈ ವೆಬ್ ಸರಣಿ ಕುರಿತು ಎರಡು ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು. ಆದರೆ, ‘... ರೋಮಿಯೊ’ ಎಲ್ಲಿದ್ದಾನೆ, ಎಲ್ಲಿ ಪ್ರಸಾರ ಆಗಲಿದ್ದಾನೆ ಎಂಬ ಮಾಹಿತಿ ಇರಲಿಲ್ಲ.

‘ಇದು ಸಕ್ಕತ್ ಸ್ಟುಡಿಯೊ ಸಂಸ್ಥೆಯ ಒಟಿಟಿ ವೇದಿಕೆಯ ಮೂಲಕವೇ ಪ್ರಸಾರ ಆಗಲಿದೆ. ಈ ವರ್ಷದ ಮೇ ತಿಂಗಳಲ್ಲಿ ಅಥವಾ ಅದಕ್ಕಿಂತಲೂ ಮೊದಲೇ ಇದು ಪ್ರಸಾರ ಕಾಣಲಿದೆ’ ಎಂಬ ಸುದ್ದಿ ‘ಪ್ರಜಾಪ್ಲಸ್‌’ಗೆ ಸಿಕ್ಕಿದೆ.

ಇಷ್ಟೇ ಅಲ್ಲ. ಕನ್ನಡದಲ್ಲೇ ಚೆಂದದ ವೆಬ್‌ ಸರಣಿಗಳು ಸಿಗುವಂತೆ ಆಗಬೇಕು ಎನ್ನುವವರಿಗೂ ಸಿಹಿ ಸುದ್ದಿಯೊಂದು ಇದೆ. ಸಕ್ಕತ್ ಸ್ಟುಡಿಯೊ ಸಂಸ್ಥೆ ಚಾಲನೆ ಕೊಡಲಿರುವ ಒಟಿಟಿ ವೇದಿಕೆಯಲ್ಲಿ ಕನ್ನಡದ ಕನಿಷ್ಠ 10 ಸರಣಿಗಳು ಲಭ್ಯ ಇರಲಿವೆಯಂತೆ. ‘ನಾವು ನಮ್ಮದೇ ಆದ ಒಟಿಟಿ ವೇದಿಕೆ ಆರಂಭಿಸುವುದರ ಜೊತೆಯಲ್ಲೇ, ಕೆಲವು ವೆಬ್ ಸರಣಿಗಳ ಗುಚ್ಛವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇವೆ. ಆರಂಭದಲ್ಲಿ ಐದು ವೆಬ್ ಸರಣಿಗಳು ವೀಕ್ಷಕರಿಗೆ ಸಿಗಲಿವೆ. 2020ರ ಅಂತ್ಯದ ವೇಳೆಗೆ 10 ಕನ್ನಡ ವೆಬ್ ಸರಣಿಗಳು ವೀಕ್ಷಕರಿಗೆ ಲಭ್ಯವಾಗಲಿವೆ’ ಎಂದು ‘ಸಕ್ಕತ್’ ಮೂಲಗಳು ಹೇಳಿವೆ.

‘ಹೇಟ್‌ ಯೂ ರೋಮಿಯೊ’ ವೆಬ್ ಸರಣಿಯನ್ನು ಹಸೀನ್ ಖಾನ್ ಹಾಗೂ ಇಶಾಮ್ ಖಾನ್ ನಿರ್ದೇಶಿಸಿದ್ದಾರೆ. ಈ ವೆಬ್ ಸರಣಿಯ ವಿಚಾರವಾಗಿ ‘ಸಕ್ಕತ್ ಸ್ಟುಡಿಯೊ’ ಸಂಸ್ಥೆಗೆ ಬಹಳ ನಿರೀಕ್ಷೆಗಳು ಇವೆ. ‘ಇದರಲ್ಲಿ ಏಳು ಕಂತುಗಳು ಇವೆ. ಪ್ರತಿ ಕಂತು ಕೂಡ ಸರಿಸುಮಾರು 40 ನಿಮಿಷಗಳಷ್ಟು ಇರಲಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲದಂತೆ, ಜನಪ್ರಿಯ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗಿರುವ ವೆಬ್ ಸರಣಿಗಳಿಗೆ ಸರಿಸಾಟಿಯಾಗುವಂತೆ ಇದನ್ನು ನಿರ್ಮಾಣ ಮಾಡಲಾಗಿದೆ’ ಎಂದು ‘ಸಕ್ಕತ್ ಸ್ಟುಡಿಯೊ’ ಸಂಸ್ಥೆಯ ಪ್ರತಿನಿಧಿಯೊಬ್ಬರು.

ಇದು ರೊಮ್ಯಾನ್ಸ್‌ ಮತ್ತು ಹಾಸ್ಯದ ಹಳಿಯ ಮೇಲೆ ಸಾಗುವ ಕಥೆಯನ್ನು ಹೊಂದಿದೆ. ಅರವಿಂದ ಅಯ್ಯರ್ ಮತ್ತು ದಿಶಾ ಇದರಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.

ಹಿಂದೆ ‘ಲೂಸ್ ಕನೆಕ್ಷನ್’ ಎನ್ನುವ ವೆಬ್ ಸರಣಿ ಮಾಡಿ, ಸಕ್ಕತ್ ಸ್ಟುಡಿಯೊ ಯೂಟ್ಯೂಬ್‌ ಮೂಲಕ ಉಚಿತವಾಗಿ ಪ್ರಸಾರ ಮಾಡಿತ್ತು. ‘ಕನ್ನಡದ ವೀಕ್ಷಕರು ಯಾವ ಬಗೆಯ ಕಾರ್ಯಕ್ರಮವನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ನಾವು ನಮ್ಮ ಯೂಟ್ಯೂಬ್‌ ಚಾನೆಲ್ ಮೂಲಕ, ಫೇಸ್‌ಬುಕ್‌ ಮೂಲಕ ಅರ್ಥಮಾಡಿಕೊಳ್ಳಲು ಯತ್ನಿಸಿದ್ದೇವೆ. ಅದಕ್ಕೆ ತಕ್ಕಂತೆ ನಾವು ಹೊಸ ಸರಣಿಗಳನ್ನು ಸಿದ್ಧಪಡಿಸುತ್ತಿದ್ದೇವೆ. ಇವು ಯಾವುದೇ ಸಿನಿಮಾದ ಜೊತೆ ಪೈಪೋಟಿಗೆ ಇಳಿಯಬಲ್ಲವು’ ಎನ್ನುವುದು ಸಕ್ಕತ್ ಸ್ಟುಡಿಯೊದ ಪ್ರದೀಪ್ ಅವರ ಮಾತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು