ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು ಸಂಗ್ರಹಕ್ಕೆ ಮುಂದಾದ ಅನ್ನದಾತರು

ಗದಗ ಜಿಲ್ಲೆಯ ನರೇಗಲ್‌ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೇಸಿಗೆ ಎದುರಿಸಲು ಸಜ್ಜಾದ ರೈತರು
Last Updated 30 ಮಾರ್ಚ್ 2018, 10:36 IST
ಅಕ್ಷರ ಗಾತ್ರ

ನರೇಗಲ್: ಹೋಬಳಿ ಸೇರಿದಂತೆ ಸುತ್ತಲಿನ ನಾನಾ ಗ್ರಾಮಗಳ ರೈತರು ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಕಾಡದಿರಲಿ ಎಂದು ಈಗಿನಿಂದಲೇ ಸಂಗ್ರಹಣೆ ಮಾಡಲು ಮುಂದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮೇವಿನ ಬಣವೆಯನ್ನು ಒಟ್ಟುತ್ತಿರುವ ದೃಶ್ಯಗಳು ಜಮೀನುಗಳಲ್ಲಿ, ತೋಟಗಳಲ್ಲಿ ಮತ್ತು ಗ್ರಾಮದ ಹೊರವಲಯಗಳಲ್ಲಿ ಕಂಡುಬರುತ್ತಿವೆ.

ರೈತರು ಒಂದು ಎಕರೆ ಜೋಳದ ಮೇವಿಗೆ, ಶೇಂಗಾ ಹೊಟ್ಟಿಗೆ ಮತ್ತು ಗೋಧಿ ಹುಲ್ಲಿಗೆ ₹2500ರಿಂದ ₹5500 ಗಳವರೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಕೆಲವರು ಮಾರಾಟಕ್ಕೆ ಮುಂದಾಗುತ್ತಿಲ್ಲ. ಮಾರನಬಸರಿ, ಜಕ್ಕಲಿ, ಕೋಚಲಾಪುರ, ಹೊಸಳ್ಳಿ, ಹಾಲಕೆರೆ, ನಿಡಗುಂದಿ, ಅಬ್ಬಿಗೇರಿ, ಡ.ಸ.ಹಡಗಲಿ, ತೋಟಗಂಟಿ, ಬೂದಿಹಾಳ, ನಿ.ಕೊಪ್ಪ, ದ್ಯಾಂಪುರ, ಕೋಡಿಕೊಪ್ಪ, ಕೋಟುಮಚಗಿ, ಯರೆಬೇಲೆರಿ ಗ್ರಾಮಗಳಲ್ಲಿ ರೈತರು ಬಣವೆ ಹಾಕುವ ಮೂಲಕ ದನಕರುಗಳ ಆಹಾರವನ್ನು ಒಂದೆಡೆ ಸಂಗ್ರಹಿಸುತ್ತಿದ್ದಾರೆ.

ಈ ಹಿಂದೆ ಹೊಲಗಳಲ್ಲೇ ಹೆಚ್ಚು ಬಣವೆಗಳನ್ನು ಹಾಕಿ ಮೇವು ಸಂಗ್ರಹಿಸಲಾಗುತ್ತಿತ್ತು. ಆದರೆ ಈ ಬಾರಿ ಮೇವಿನ ಕೊರತೆ ಆಗಿದ್ದರಿಂದ ಬಣವೆ ಹಾಕಿದರೆ ಕಳ್ಳತನವಾಗಬಹುದೆಂದು ಅಂದಾಜಿಸಿರುವ ರೈತರು ಟ್ರ್ಯಾಕ್ಟರ್‌ ಮೂಲಕ ಜೋಳದ ಮೇವನ್ನು ಸಾಗಿಸಿ, ತಮ್ಮ ಮನೆ ಸಮೀಪದಲ್ಲೇ ಬಣವೆ ಹಾಕಲು ಮುಂದಾಗಿದ್ದಾರೆ. ಹೀಗಾಗಿ ಟ್ರ್ಯಾಕ್ಟರ್‌ ಬಾಡಿಗೆಗೆ ಬೇಡಿಕೆ ಹೆಚ್ಚಿದೆ.ಸುಗ್ಗಿ ಬಂತೆಂದರೆ ರೈತರು, ಕೂಲಿಕಾರರು ಹಾಗೂ ಕೊಯ್ಲು ಯಂತ್ರಗಳ ಹುಡುಕಾಟದಲ್ಲಿ ಹೈರಾಣಾಗುತ್ತಿದ್ದರು. ಪರಿಸ್ಥಿತಿ ಬದಲಾಗಿದ್ದು, ಕೊಯ್ಲು ಯಂತ್ರವಿರುವವರು ಬೇರೆ ತಾಲ್ಲೂಕುಗಳಿಂದ ಬಂದು, ಕೆಲವು ಕಡೆ ಒಪ್ಪಂದ ಮಾಡಿಕೊಂಡು ಉಚಿತವಾಗಿ ಕೊಯ್ಲು ಮಾಡಿ. ಮೇವು ತೆಗೆದುಕೊಂಡು ಹೋಗುತ್ತಿದ್ದಾರೆ.ಹೊರ ರಾಜ್ಯದವರು ಹಾಗೂ ಸ್ಥಳೀಯ ಕೆಲವರು ಪುಕ್ಕಟೆ ಕೊಯ್ಲುನಲ್ಲಿ ತೊಡಗಿದ್ದಾರೆ. ಇನ್ನೂ ಜಾನುವಾರು ಸಾಕಣೆ ಮಾಡಿರುವ ಕಾರ್ಮಿಕರು ನಾಲ್ಕೈದು ಕೂಲಿಯಾಳುಗಳೊಂದಿಗೆ ತೆರಳಿ ಉಚಿತವಾಗಿ ಕೆಲಸ ಮಾಡಿ. ಮೇವನ್ನಷ್ಟೇ ಪಡೆದು, ಫಸಲನ್ನು ಹೊಲದ ಮಾಲೀಕರಿಗೆ ನೀಡುತ್ತಿದ್ದಾರೆ.

ಮುಂದಿನ ಮುಂಗಾರಿನವರೆಗೂ ಜಾನುವಾರುಗಳಿಗಾಗಿ ಮೇವು ಕಾಯ್ದಿರಿಸುವುದು ಅನಿವಾರ್ಯ ಎನಿಸಿದೆ. ಹೀಗಾಗಿ ರೈತರೆಲ್ಲರೂ ಮೇವಿಗಾಗಿ ಅಲೆಯುತ್ತಿದ್ದಾರೆ. ನಿರ್ಲಕ್ಷಿಸಿದರೆ ಜಾನುವಾರು ಮಾರಾಟ ಮಾಡುವ ಅನಿವಾರ್ಯ ಸ್ಥಿತಿಯೂ ಎದುರಾಗಬಹುದು ಎನ್ನುವ ಆತಂಕ ಕಾಡುತ್ತಿದೆ. ಈ ಹಿಂದೆ ಜಮೀನುಗಳಲ್ಲಿಯೆ ಕೆಲವರು ಜೋಳದ ದಂಟುಗಳನ್ನು ಗೊಬ್ಬರವಾಗಲಿ ಎಂದು ಬಿಡುತ್ತಿದ್ದರು. ಆದರೆ ಈ ಬಾರಿ ಹಿಂಜರಿಯುತ್ತಿದ್ದಾರೆ.

ಈ ಭಾಗದಲ್ಲಿ ಬಹಳಷ್ಟು ಕುಟುಂಬಗಳು ಎತ್ತುಗಳಿಂದ ಉಳುಮೆ ಮಾಡುವ ಪದ್ಧತಿಯನ್ನು ಇನ್ನೂ ಜೀವಂತವಾಗಿರಿಸಿದ್ದಾರೆ. ಅಷ್ಟೇ ಅಲ್ಲದೆ ಎಮ್ಮೆ, ಆಡು, ಕುರಿ, ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದಾರೆ. ಸತತ ಮೂರು ವರ್ಷದ ಬರಗಾಲ ಹಾಗೂ ಮಳೆ ಅಭಾವದಿಂದ ಅಂತರ್ಜಲಮಟ್ಟ ಕುಸಿದು ಬಾವಿಗಳಲ್ಲಿ, ಕೆರೆಗಳಲ್ಲಿ ನೀರಿನ ಅಭಾವ ಕಂಡುಬರುತ್ತದೆ. ಅಲ್ಪಸ್ವಲ್ಪವಾದ ಹಿಂಗಾರು ಮಳೆಯಾದರೂ ಹೇಳಿಕೊಳ್ಳುವಷ್ಟು ನೀರಿನ ಸಂಗ್ರಹ ಆಗಿಲ್ಲ. ಜಮೀನುಗಳಲ್ಲಿ ದನಕರುಗಳಿಗೆ ಮೇಯಿಸಲು ಏನೂ ಸಿಗದಂತೆ ಭೂಮಿ ಬರಡಾಗಿದೆ. ಆದ್ದರಿಂದ ಮೇವು ಸಂಗ್ರಹಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ರೈತರು ಇದ್ದಾರೆ ಎಂದು ಸಾವಯವ ಕೃಷಿಕ ವೀರೇಶ ನೇಗಲಿ ಹೇಳಿದರು.

ಮೇವು ಬ್ಯಾಂಕ್‌ ಆರಂಭಿಸಿ: ಬೇಸಿಗೆ ಸಂದರ್ಭದಲ್ಲಿ ಹಲವು ಗ್ರಾಮಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತವು ಈಗಿನಿಂದಲೇ ಒಂದೆಡೆ ಮೇವು ಸಂಗ್ರಹಿಸುವ ಕಡೆಗೆ ಸ್ವಲ್ಪ ಗಮನ ಹರಿಸಬೇಕು. ಇಲ್ಲದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.

**

ನೀರಿನ ಅಭಾವ ಹೆಚ್ಚಿದ ಕಾರಣ ಸಮಸ್ಯೆ ಬಿಗಡಾಯಿಸಿದೆ. ಮಳೆ, ನೀರು ಬರುವವರೆಗೂ ಕಾಯ್ದು ಕೂರಬೇಕು. ಹೀಗಾಗಿ ಮೇವು ಸಂಗ್ರಹಣೆ ಭರದಿಂದ ಸಾಗಿದೆ – ಸಣ್ಯಪ್ಪ ತಳವಾರ, ರೈತ 

**

ಚಂದ್ರು ಎಂ. ರಾಥೋಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT