ಸೋಮವಾರ, ಸೆಪ್ಟೆಂಬರ್ 20, 2021
30 °C

ಹೆಡ್‌ಬುಷ್‌ನಲ್ಲಿ ಕಲಾವಿದರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಗ್ನಿ ಶ್ರೀಧರ್‌ ಅವರ ಆತ್ಮಕಥೆ ‘ದಾದಾಗಿರಿಯ ಆ ದಿನಗಳು’ ಕೃತಿಯನ್ನು ಆಧರಿಸಿ ನಿರ್ಮಾಣಗೊಳ್ಳುತ್ತಿರುವ ‘ಹೆಡ್‌ಬುಷ್‌’–ದಿ ರೈಸ್‌ ಆ್ಯಂಡ್‌ ರೈಸ್‌ ಆಫ್‌ ಬೆಂಗಳೂರು ಅಂಡರ್‌ವರ್ಲ್ಡ್‌’ ಬಿಗ್‌ಬಜೆಟ್‌ ಚಿತ್ರದಲ್ಲಿ ಖ್ಯಾತ ಕಲಾವಿದರ ದಂಡೇ ಒಂದಾಗುತ್ತಿದೆ. 

ವಾರಕ್ಕೊಬ್ಬರಂತೆ ಹೊಸ ಕಲಾವಿದರನ್ನು ಚಿತ್ರೀಕರಣದ ಸೆಟ್ಟಿಗೆ ಸ್ವಾಗತಿಸುತ್ತಿದೆ ಚಿತ್ರತಂಡ. ಚಿತ್ರದಲ್ಲಿ ಬೆಂಗಳೂರಿನ ಮೊದಲ ಅಂಡರ್‌ವರ್ಲ್ಡ್‌ ಡಾನ್‌ ಎಂ.ಪಿ ಜಯರಾಜ್‌ ಪಾತ್ರಕ್ಕೆ ನಟ ‘ಡಾಲಿ’ ಧನಂಜಯ್‌ ಬಣ್ಣಹಚ್ಚಿದ್ದು, ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ.

ಇತ್ತೀಚೆಗಷ್ಟೇ ‘ದುನಿಯಾ’ ಚಿತ್ರದ ‘ಲೂಸ್‌ ಮಾದ’ ಖ್ಯಾತಿಯ ನಟ ಯೋಗೇಶ್‌ ಚಿತ್ರತಂಡ ಸೇರಿದ್ದರು. ಇದೀಗ ‘ಟಗರು’ ಚಿತ್ರದ ಖಳನಾಯಕರ ಜೋಡಿಯೂ ಈ ಚಿತ್ರದಲ್ಲಿ ಮತ್ತೆ ಒಂದಾಗುತ್ತಿದೆ. ‘ಟಗರು’ ಚಿತ್ರದಲ್ಲಿ ಧನಂಜಯ್‌ ನಟಿಸಿದ್ದ ‘ಡಾಲಿ’ ಹಾಗೂ ವಸಿಷ್ಠ ಸಿಂಹ ಅವರ ‘ಚಿಟ್ಟೆ’ ಪಾತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ವಸಿಷ್ಠ ಸಿಂಹ ಅವರೂ ಅಧಿಕೃತವಾಗಿ ಸಿನಿಮಾ ತಂಡ ಸೇರ್ಪಡೆಯಾಗಿದ್ದಾರೆ.

ಚಂದನವನದಿಂದ ಕೆಲ ವರ್ಷಗಳಿಂದ ದೂರವೇ ಉಳಿದಿದ್ದ ನಟಿ ಶೃತಿ ಹರಿಹರನ್‌ ಅವರೂ ‘ಹೆಡ್‌ಬುಷ್‌’ನಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣಹಚ್ಚುತ್ತಿದ್ದು, ಮತ್ತೆ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ನಟ ರಘು ಮುಖರ್ಜಿಯೂ ಇದೀಗ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ‘ಪ್ರತಿಭಾನಿತ್ವ ನಟ ರಘು ಮುಖರ್ಜಿ ಅವರಿಗೆ ಸ್ವಾಗತ. ನೀವು ನಮ್ಮ ತಂಡಕ್ಕೆ ಸೇರ್ಪಡೆಯಾಗಿರುವುದು ಖುಷಿ ತಂದಿದೆ’ ಎಂದು ಧನಂಜಯ್‌ ಸೋಮವಾರ ಟ್ವೀಟ್‌ ಮೂಲಕ ಈ ಮಾಹಿತಿ ನೀಡಿದ್ದಾರೆ. ಧನಂಜಯ್‌ ಅವರ ಪಾತ್ರವನ್ನು ಬಿಟ್ಟರೆ ಇತರೆ ಕಲಾವಿದರು ಯಾವ ಪಾತ್ರಕ್ಕೆ ಬಣ್ಣಹಚ್ಚಲಿದ್ದಾರೆ ಎನ್ನುವ ಗುಟ್ಟನ್ನು ಚಿತ್ರತಂಡ ಇಲ್ಲಿಯವರೆಗೂ ಬಿಟ್ಟುಕೊಟ್ಟಿಲ್ಲ. 

ತೆಲುಗಿನ ಖ್ಯಾತನಟಿ, ‘ಆರ್‌ಎಕ್ಸ್‌ 100’, ‘ಆರ್‌ಡಿಎಕ್ಸ್‌ ಲವ್‌’ ಮುಂತಾದ ಹಿಟ್‌ ಚಿತ್ರಗಳಲ್ಲಿ ನಟಿಸಿದ್ದ ಪಾಯಲ್‌ ರಾಜ್‌ಪುತ್‌ ಚಿತ್ರದ ನಾಯಕಿಯಾಗಿದ್ದಾರೆ. ಡಾಲಿ ಪಿಕ್ಚರ್ಸ್‌ ಮತ್ತು ಸೋಮಣ್ಣ ಟಾಕೀಸ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ, ಅಗ್ನಿ ಶ್ರೀಧರ್‌ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರವನ್ನು ಶೂನ್ಯ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಶರಣ್‌ ರಾಜ್‌ ಸಂಗೀತವಿದ್ದು, ಬಾದಲ್‌ ನಂಜುಂಡಸ್ವಾಮಿ ಪ್ರೊಡಕ್ಷನ್‌ ಡಿಸೈನರ್‌ ಆಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು