ಗುರುವಾರ , ಸೆಪ್ಟೆಂಬರ್ 23, 2021
28 °C

ಅಭಿಮಾನಿಗಳಿಗೆ ರಸದೌತಣ ಉಣಬಡಿಸಲಿರುವ ಹಾಲಿವುಡ್ ನಟ ಸ್ಟಾಲನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರ‍್ಯಾಂಬೊ ಮರಳಿ ಬರುತ್ತಿದ್ದಾನೆ. ಜಾನ್‌ ಮಾರೆಲ್‌ ‘ಫಸ್ಟ್‌ ಬ್ಲಡ್‌’ ಎನ್ನುವ ಕಾದಂಬರಿಯನ್ನು ಬರೆದದ್ದು 1972ರಲ್ಲಿ. ‘ರ‍್ಯಾಂಬೊ: ಫಸ್ಟ್‌ ಬ್ಲಡ್‌’ ಎನ್ನುವ ಹೆಸರಲ್ಲಿ ಅದು ಹಾಲಿವುಡ್‌ನ ತೆರೆಗಪ್ಪಳಿಸಿದ್ದು 1982ರಲ್ಲಿ. ಅದಾಗಲೇ ‘ರಾಕ್ಕಿ’ ಸಿನಿಮಾದ ಮೂಲಕ ಹಾಲಿವುಡ್‌ ಆ್ಯಕ್ಷನ್‌ ಪ್ರಿಯರ ಮನಗೆದ್ದಿದ್ದ ಸಿಲ್ವೆಸ್ಟರ್‌ ಸ್ಟಾಲನ್‌, ರ‍್ಯಾಂಬೊ ಚಿತ್ರದ ಮೂಲಕ ವಿಶ್ವದಾದ್ಯಂತ ಮನೆಮಾತಾದ. ಅಲ್ಲಿಂದೀಚೆಗೆ ನಿಗದಿತ ಅಂತರದಲ್ಲಿ ರ‍್ಯಾಂಬೊ ಸರಣಿ ಚಿತ್ರಗಳು ಬಂದವು. 1985ರಲ್ಲಿ ‘ರ‍್ಯಾಂಬೊ: ಫಸ್ಟ್‌ ಬ್ಲಡ್‌ 2’, 1988ರಲ್ಲಿ ‘ರ‍್ಯಾಂಬೊ 3’, 2008ರಲ್ಲಿ ‘ರ‍್ಯಾಂಬೊ’. ಇದೀಗ ಈ ಸರಣಿಯ ಐದನೆ ಚಿತ್ರ ‘ರ‍್ಯಾಂಬೊ: ಲಾಸ್ಟ್‌ ಬ್ಲಡ್‌’ ಸೆಪ್ಟೆಂಬರ್‌ ಮೂರನೇ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಎಲ್ಲ ಚಿತ್ರಗಳಲ್ಲೂ ಸಿಲ್ವೆಸ್ಟರ್‌ ಸ್ಟಾಲನ್‌  ಬೆಂಕಿಯುಗುಳುವ ಗಜಗಾತ್ರದ ಬಂದೂಕು, ಫಿರಂಗಿಗಳನ್ನು ಹಿಡಿದು ಅನ್ಯಾಯದ ವಿರುದ್ಧ ಹೋರಾಡುವ ಜಗದೇಕ ವೀರ.

ಸ್ಟಾಲನ್‌ ಚಿತ್ರಗಳೆಂದರೆ ಜಗತ್ತಿನಾದ್ಯಂತ ಥಿಯೇಟರಿಗೆ ಮುಗಿಬೀಳುವ ಕೋಟ್ಯಂತರ ಅಭಿಮಾನಿಗಳಿದ್ದಾರೆ.

ಭಾರತವೂ ಇದಕ್ಕೆ ಹೊರತಲ್ಲ. ಖ್ಯಾತಿಯ ತುತ್ತತುದಿಯಲ್ಲಿದ್ದಾಗ ಬಾಲಿವುಡ್‌ನ ‘ಕೃಷ್ಣಸುಂದರಿ’ ರೇಖಾ ಕೂಡಾ ‘ಸ್ಟಾಲನ್‌ನನ್ನು ಮದುವೆಯಾಗಬೇಕೆಂಬ ಆಸೆ ನನಗೆ’ ಎಂದು ಬಹಿರಂಗವಾಗಿ ಹೇಳಿದ್ದುಂಟು. ಚಿತ್ರದಲ್ಲಿ ಅವನದ್ದು ವಿಯೆಟ್ನಾಂ ಯುದ್ಧದಲ್ಲಿ ಪಾಲ್ಗೊಂಡು ನಿವೃತ್ತನಾದ ಸೈನಿಕನ ಪಾತ್ರ.

ಸಿಲ್ವೆಸ್ಟರ್‌ ಸ್ಟಾಲನ್‌ ಹಾಲಿವುಡ್‌ನ ಅತ್ಯಂತ ಶ್ರಮಪಟ್ಟು ದುಡಿಯುವ ನಟ, ನಿರ್ಮಾಪಕ ಮತ್ತು ಲೇಖಕ. ಅವನಿಗೀಗ 73ರ ಹರೆಯ! ಕೋಲೂರುತ್ತಾ ಮನೆಯಲ್ಲಿ ನಡೆಯಬೇಕಿದ್ದ ವಯಸ್ಸಿನಲ್ಲಿ, ಭಾರೀ ಗಾತ್ರದ ಬಂದೂಕುಗಳನ್ನು ಹೆಗಲಿಗೇರಿಸಿಕೊಂಡು ಸ್ಟಂಟ್‌ ಮಾಡುವ ಸ್ಟಾಲನ್‌ನ ಹುಮ್ಮಸ್ಸು ಇನ್ನೂ ಕಡಿಮೆಯಾಗಿಲ್ಲ! 70ರ ದಶಕದ ಆರಂಭದಲ್ಲಿ ಹಾಲಿವುಡ್‌ಗೆ ಬಂದು 2–3 ವರ್ಷ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಸ್ಟಾಲನ್‌, 76ರಲ್ಲಿ ಬಾಕ್ಸರ್‌ ರಾಕ್ಕಿ ಬಲ್ಬೊವಾನ ಪಾತ್ರದಲ್ಲಿ ನಟಿಸಿದ ‘ರಾಕ್ಕಿ’ ಸಿನಿಮಾ ಬಾಕ್ಸಾಫೀಸ್‌ ದಾಖಲೆಗಳನ್ನು ಪುಡಿಗಟ್ಟಿತು. ಆ ಬಳಿಕದ್ದು ಇತಿಹಾಸ. ‘ರಾಕ್ಕಿ’ ಸರಣಿ ಚಿತ್ರಗಳು ಬಂದು ಎಲ್ಲವೂ ಬಾಕ್ಸಾಫೀಸ್‌ನಲ್ಲಿ ಹಣ ಕೊಳ್ಳೆಹೊಡೆದವು. 

 ‘ಫಸ್ಟ್‌ ಬ್ಲಡ್‌ ಪಾರ್ಟ್‌ 2’ ಬಾಕ್ಸಾಫೀಸ್‌ನಲ್ಲಿ 30 ಕೋಟಿ ಡಾಲರ್‌ ಗಳಿಕೆ ಕಂಡದ್ದು ಆ ಕಾಲದಲ್ಲಿ ದೊಡ್ಡ ಸುದ್ದಿಯಾಗಿತ್ತು. ನಾಲ್ಕು ಸರಣಿ ಚಿತ್ರಗಳು ಒಟ್ಟು 72.7 ಕೋಟಿ ಡಾಲರ್‌ ಗಳಿಕೆ ಕಂಡಿವೆ. ಈಗ ರ‍್ಯಾಂಬೊ ಐದನೇ ಬಾರಿಗೆ ಮರಳಿ ಬರುತ್ತಿದ್ದಾನೆ. ಆ್ಯಡ್ರಿಯನ್‌ ಗ್ರಂಬರ್ಗ್‌ ನಿರ್ದೇಶನದ ‘ರ‍್ಯಾಂಬೊ : ಲಾಸ್ಟ್‌ ಬ್ಲಡ್‌’ ಸಿನಿಮಾವನ್ನು ನೋಡಲು ಸಿಲ್ವೆಸ್ಟರ್‌ ಸ್ಟಾಲನ್‌ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು