ಬುಧವಾರ, ನವೆಂಬರ್ 13, 2019
28 °C

ಹೊಂದಿಸಿ ಬರೆದ ಬದುಕು

Published:
Updated:
Prajavani

ಪ್ರತಿಯೊಬ್ಬರಿಗೂ ಪ್ರಾಥಮಿಕ ಹಾಗೂ ಹೈಸ್ಕೂಲ್‌ ದಿನಗಳಲ್ಲಿ ‘ಹೊಂದಿಸಿ ಬರೆಯಿರಿ’ ಪ್ರಶ್ನೆಗೆ ಉತ್ತರಿಸಿದ ಅನುಭವ ಇರುತ್ತದೆ. ತಪ್ಪಾಗಿ ಉತ್ತರಿಸಿ ಮೇಷ್ಟ್ರುಗಳ ಮುಂದೆ ಪೇಚಾಟಕ್ಕೆ ಸಿಲುಕಿದ ಪ್ರಸಂಗಗಳಿಗೂ ಕೊರತೆಯಿಲ್ಲ.

ಆದರೆ ನೆನಪು, ವಾಸ್ತವ ಮತ್ತು ಕನಸನ್ನು ಹೊಂದಿಸಿಕೊಂಡು ಬದುಕನ್ನು ಬರೆದುಕೊಳ್ಳುವುದು ಕಷ್ಟಕರ. ಆದರೆ, ಜೀವನದಲ್ಲಿ ಯಾವುದೇ ಪರಿಸ್ಥಿತಿ ಎದುರಾದರೂ ಅದರ ಜೊತೆಗೆ ಹೊಂದಿಕೊಳ್ಳಬೇಕು. ಆ ಮೂಲಕ ನಿಮ್ಮ ಬದುಕನ್ನು ನೀವೇ ಬರೆಯಿಸಿ ಎಂದು ‘ಹೊಂದಿಸಿ ಬರೆಯಿರಿ’ ಕಥೆ ಹೇಳಲು ಮುಂದಾಗಿದ್ದಾರೆ ಆರ್‌. ರಾಮೇನಹಳ್ಳಿ ಜಗನ್ನಾಥ. ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ.

ಸಂಡೇ ಸಿನಿಮಾಸ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಮುಹೂರ್ತ ನೆರವೇರಿತು. ‘ಬದುಕಿನಲ್ಲಿ ಯಾವುದೇ ಕಷ್ಟಬಂದರೂ ಅದು ಬಂದಂತೆಯೇ ಸ್ವೀಕರಿಸಿ ನೀವೇ ಬರೆಯಬೇಕು. ಹೊಂದಾಣಿಕೆ ಮತ್ತು ಹೊಂದಿಕೆಯ ವಿಚಾರ ಇಟ್ಟುಕೊಂಡು ಸಿನಿಮಾದ ಕಥೆ ಹೊಸೆಯಲಾಗಿದೆ’ ಎಂದು ವಿವರಿಸಿದರು ಜಗನ್ನಾಥ.

ಪ್ರೀತಿ ಮತ್ತು ಬದುಕಿನ ಕಥೆ ಇದು. ಚಿತ್ರದಲ್ಲಿ ನಾಲ್ಕು ಮಹಿಳಾ ಪಾತ್ರಗಳಿದ್ದು, ಜೀವನದ ಒಂದೊಂದು ಮಹತ್ವದ ಘಟ್ಟಗಳನ್ನು ಪ್ರತಿನಿಧಿಸುತ್ತವೆಯಂತೆ.  

ಮೊದಲ ಹಂತದಲ್ಲಿ ತೀರ್ಥಹಳ್ಳಿಯ ಸುತ್ತಮುತ್ತ ಶೂಟಿಂಗ್‌ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಬಳಿಕ ಬೆಂಗಳೂರು, ಚೆನ್ನೈ ಮತ್ತು ದಾವಣಗೆರೆಯಲ್ಲಿ ಚಿತ್ರೀಕರಣ ನಡೆಸುವ ಯೋಚನೆ ಚಿತ್ರತಂಡದ್ದು. ಮಾಸ್ತಿ, ಪ್ರಶಾಂತ್‌ ರಾಜಪ್ಪ ಮತ್ತು ಜಗನ್ನಾಥ್‌ ಸಂಭಾಷಣೆಯ ಹೊಣೆ ಹೊತ್ತಿದ್ದಾರೆ. ಛಾಯಾಗ್ರಹಣ ಶಾಂತಿಸಾಗರ್‌ ಅವರದು. ಚಿತ್ರದ ಏಳು ಹಾಡುಗಳಿಗೆ ಮುಂಬೈ ಮೂಲದ ಜೋ ಕೋಸ್ಟ್‌ ಸಂಗೀತ ಸಂಯೋಜಿಸಿದ್ದಾರೆ. ಕಲ್ಯಾಣ್‌ ಮತ್ತು ಹೃದಯ ಶಿವ ಹಾಡುಗಳನ್ನು ಬರೆದಿದ್ದಾರೆ.

ಸಂಯುಕ್ತಾ ಹೊರನಾಡು, ಐಶಾನಿ ಶೆಟ್ಟಿ, ಭಾವನಾ ರಾವ್, ಅರ್ಚನಾ ಜೋಯಿಸ್‌, ನವೀನ್‌ ಶಂಕರ್, ಪ್ರವೀಣ್‌ ತೇಜ್‌, ಶ್ರೀಮಹದೇವ್‌ ತಾರಾಗಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)