ಬುಧವಾರ, ಮೇ 18, 2022
28 °C
ಬೆಂಗಳೂರಿನಲ್ಲಿ ಶೇ 60; ಉತ್ತರ ಕರ್ನಾಟಕ ಶೇ 10ರಷ್ಟು ಆಸನಗಳು ಭರ್ತಿ

ಚಿತ್ರಮಂದಿರತ್ತ ಪ್ರೇಕ್ಷಕನ ಎಚ್ಚರಿಕೆ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿ ಅನುಮತಿ ನೀಡಿರುವ ಬೆನ್ನಲ್ಲೇ ಶುಕ್ರವಾರ (ಫೆ. 5) ಬಿಡುಗಡೆಯಾದ ಹೊಸ ಚಿತ್ರಗಳಿಗೆ ಬೆಂಗಳೂರು ಸುತ್ತಮುತ್ತ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಶೇ 50ರ ಆಸನ ಭರ್ತಿ ವೇಳೆ ಇದ್ದ ಪರಿಸ್ಥಿತಿಯೇ ಮುಂದುವರಿದಿದೆ.

‘ಮಂಗಳವಾರ ರಜಾದಿನ’, ‘ಶ್ಯಾಡೋ’ ಹಾಗೂ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರಗಳು ಇಂದು ಬಿಡುಗಡೆ ಆಗಿದ್ದವು. ಈ ಪೈಕಿ ಬೆಂಗಳೂರಿನಲ್ಲಿ ‘ಮಂಗಳವಾರ ರಜಾದಿನ’ ಮತ್ತು ‘ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರಗಳಿಗೆ ಶೇ 60ಕ್ಕಿಂತಲೂ ಹೆಚ್ಚು ಆಸನಗಳು ಭರ್ತಿಯಾಗಿವೆ. ಸಾಮಾನ್ಯ ದಿನಗಳಲ್ಲಿ ಸರಾಸರಿ ಆಸನ ಭರ್ತಿ ಪ್ರಮಾಣ ಇಷ್ಟೇ ಇರುತ್ತದೆ. ಈ ಬೆಳವಣಿಗೆ ಆಶಾದಾಯಕವಾಗಿದೆ’ ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್‌ ಮಾಹಿತಿ ನೀಡಿದರು.

‘ಶ್ಯಾಡೋ’ ಚಿತ್ರವು ಕೆಲವೆಡೆ ಕಾರಣಾಂತರದಿಂದ ಬೆಳಗಿನ ಅವಧಿಯಲ್ಲಿ ಪ್ರದರ್ಶನ ಕಾಣಲಿಲ್ಲ. ಬಳಿಕದ ಪ್ರದರ್ಶನಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆ ಇನ್ನಷ್ಟೇ ಗೊತ್ತಾಗಬೇಕಿದೆ’ ಎಂದು ಅವರು ಹೇಳಿದರು.

‘ಈಗ ಗುಂಪಾಗಿ ಬಂದು ಚಿತ್ರ ವೀಕ್ಷಿಸುವವರ ಸಂಖ್ಯೆ ಹೆಚ್ಚಾಗಿದೆ. ಆಸನಗಳ ಮಧ್ಯೆ ಅಂತರ ಇದ್ದಾಗ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಟಿಕೆಟ್‌ ಖರೀದಿಸುವುದು ನಡೆದಿತ್ತು. ಈಗ ಆ ಆತಂಕ ದೂರವಾಗಿದೆ. ಹೊಸ ನಾಯಕನ ಚಿತ್ರಕ್ಕೂ ಒಳ್ಳೆಯ ಪ್ರತಿಕ್ರಿಯೆ ಇದೆ’ ಎಂದು ಅವರು ತಿಳಿಸಿದರು.

‘ಹೊಸ ಬೆಳವಣಿಗೆ ಬಗ್ಗೆ ಈಗಲೇ ಏನೂ ಹೇಳಲಾಗದು. ದೊಡ್ಡ ಬಜೆಟ್‌ ಹಾಗೂ ನಾಯಕರ ಚಿತ್ರಗಳು ಬಿಡುಗಡೆ ಆದ ಬಳಿಕವಷ್ಟೇ ವಾಸ್ತವ ಪ್ರತಿಕ್ರಿಯೆ ಅರಿಯಬಹುದು. ಈಗ ಪ್ರೇಕ್ಷಕರ ಪ್ರಮಾಣ ಸಾಮಾನ್ಯಮಟ್ಟದಲ್ಲಿದೆ’ ಎಂದು ಚಿತ್ರಮಂದಿರಗಳ ಮಾಲೀಕರೂ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌ ಹೇಳಿದರು.

‘ಕೆಲವೆಡೆ ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳು ತೆರೆಯದಿರುವುದು, ಪ್ರೇಕ್ಷಕರಲ್ಲಿ ಚಿತ್ರಮಂದಿರಗಳಿಗೆ ಹೋಗಬೇಕೇ ಬೇಡವೇ ಎಂಬ ಗೊಂದಲಗಳು ಮುಂದುವರಿದಿರುವುದು ಕೆಲವು ಕಡೆಗಳಲ್ಲಿ ಸಾಮಾನ್ಯ ಪ್ರತಿಕ್ರಿಯೆಗೆ ಕಾರಣವಾಗಿರಬಹುದು’ ಎಂದು ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

‘ನಗರ ಪ್ರದೇಶದ ಚಿತ್ರಮಂದಿರಗಳಿಗೆ ಚಿತ್ರ, ನಾಯಕ, ಕಥಾವಸ್ತುವಿನ ಆಧಾರದ ಮೇಲೆ ಪ್ರೇಕ್ಷಕರು ಬರುತ್ತಾರೆ. ಆದರೆ, ತಾಲ್ಲೂಕುಮಟ್ಟದಲ್ಲಿ ಚಿತ್ರನಟರ ಅಭಿಮಾನಿಗಳ ಉತ್ಸಾಹದ ಮೇಲೆ ಚಿತ್ರಮಂದಿರ ಭರ್ತಿಯಾಗುವುದು ಅಥವಾ ಖಾಲಿ ಉಳಿಯುವುದು ನಡೆಯುತ್ತದೆ’ ಎಂದು ಚಂದ್ರಶೇಖರ್‌ ವಿಶ್ಲೇಷಿಸಿದರು.

ಶೇ 10ರಷ್ಟೇ ಕಲೆಕ್ಷನ್‌!

ಶೇ 100ರಷ್ಟು ಆಸನ ಭರ್ತಿಗೆ ಅವಕಾಶ ಸಿಕ್ಕಿದರೂ ಇಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಆಶಾದಾಯಕವಾಗಿಲ್ಲ. ಹುಬ್ಬಳ್ಳಿ, ಗದಗ ಭಾಗಗಳಲ್ಲಿ ಪ್ರೇಕ್ಷಕರ ಪ್ರಮಾಣ ಶೇ 5ರಿಂದ 10ರಷ್ಟು ಮಾತ್ರ ಇದೆ. ಇನ್ನೂ ಕೆಲಕಾಲ ಕಾದು ನೋಡಬೇಕಿದೆ ಎಂದು ಉತ್ತರ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಒಕ್ಕೂಟದ ಅಧ್ಯಕ್ಷ ಆರ್‌.ಆರ್‌. ಓದುಗೌಡರ್‌ ಬೇಸರ ವ್ಯಕ್ತಪಡಿಸಿದರು. ‘ಶ್ಯಾಡೋ’ ಮತ್ತು ‘ಇನ್ಸ್‌ಪೆಕ್ಟರ್‌ ವಿಕ್ರಂ’ ಎರಡೂ ಚಿತ್ರಗಳು ಉತ್ತರ ಕರ್ನಾಟಕ ಭಾಗದಲ್ಲಿ ಪ್ರದರ್ಶನ ಕಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು