ಬುಧವಾರ, ಆಗಸ್ಟ್ 10, 2022
24 °C

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ದುಂದುವೆಚ್ಚ ತಡೆಗೆ ಸಿ.ಎಂಗೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಕ್ಕೇ ₹2 ಕೋಟಿ ಮಾಡಲಾಗುತ್ತಿದೆ. ಪ್ರಸ್ತುತ ಇರುವ ಕೋವಿಡ್‌ ಹಾಗೂ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಈ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಎಂದು ವಿಧಾನ ಪರಿಷತ್‌ ಸದಸ್ಯ ಮೋಹನ್‌ ಕುಮಾರ್‌ ಕೊಂಡಜ್ಜಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.  

‘ಚಿತ್ರೋತ್ಸವಕ್ಕೆ ಪ್ರತಿ ವರ್ಷ ಸರ್ಕಾರ ₹5 ಕೋಟಿ ನೀಡುತ್ತಿದೆ. ಚಿತ್ರ ನಿರ್ಮಾಪಕನಾಗಿ ಹಾಗೂ ಸಾಮಾನ್ಯ ಪ್ರತಿನಿಧಿಯಾಗಿ ನಾನು ಈ ಚಿತ್ರೋತ್ಸವಕ್ಕೆ ಭೇಟಿ ನೀಡುತ್ತಿರುತ್ತೇನೆ. ದುಂದುವೆಚ್ಚ ಮಾಡಿ ನಡೆಸುವ ಈ ಉದ್ಘಾಟನಾ ಹಾಗೂ ಸಮಾರೋಪ ಕಾರ್ಯಕ್ರಮವು ಸಿನಿಮಾ ಸಂಸ್ಕೃತಿಯನ್ನು ಉತ್ತೇಜಿಸಲು ಯಾವುದೇ ಸಹಾಯ ಮಾಡುತ್ತಿಲ್ಲ. ಹೀಗಾಗಿ ಈ ಖರ್ಚಿಗೆ ಕಡಿವಾಣ ಹಾಕಿ, ಈ ಹಣವನ್ನು ಚಲನಚಿತ್ರ ಅಕಾಡೆಮಿಗೆ ನೀಡಿ. ಈ ಹಣವನ್ನು ಬಳಸಿಕೊಂಡು, ಅಕಾಡೆಮಿಯು ಮುಂದಿನ ದಿನಗಳಲ್ಲಿ ಸಣ್ಣ ನಗರ ಹಾಗೂ ರಾಜ್ಯದಾದ್ಯಂತ ಚಿತ್ರೋತ್ಸವಗಳನ್ನು ಆಚರಿಸಲು ಬಳಕೆಯಾಗಲಿ’ ಎಂದು ಅವರು ಉಲ್ಲೇಖಿಸಿದ್ದಾರೆ. 

‘ಕೋವಿಡ್‌ ಆರ್ಥಿಕ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ರೀತಿ ಸರ್ಕಾರದ ಹಣವನ್ನು ದುಂದು ವೆಚ್ಚ ಮಾಡುತ್ತಿರುವುದು ಅರ್ಥಹೀನ. ಕಾರ್ಯಕ್ರಮವನ್ನು ಸರಳವಾಗಿ ಬ್ಯಾಂಕ್ವೆಟ್‌ ಹಾಲ್‌ನಲ್ಲೇ ನಡೆಸಬಹುದಲ್ಲವೇ. ಚಲನಚಿತ್ರೋತ್ಸವದ ಇತರೆ ಎಲ್ಲ ಕಾರ್ಯಕ್ರಮಗಳನ್ನು ನಡೆಸಲಿ. ಆದರೆ ದುಂದುವೆಚ್ಚ ಬೇಡ. ಕಾರ್ಯಕ್ರಮ ಆಯೋಜನೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ನೀಡಲಾಗಿದೆ. ಚಲನಚಿತ್ರ ಅಕಾಡೆಮಿ ಸದಸ್ಯರ ಸಭೆ ನಡೆಸದೇ ಇಂತಹ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿ ದೊರಕಿದೆ’ ಎಂದು ಕೊಂಡಜ್ಜಿ ಅವರು ಹೇಳಿದರು. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೂ ಪತ್ರ ಬರೆದಿದ್ದೇನೆ ಎಂದರು.  

ಪ್ರಸ್ತುತ ನಡೆಯುತ್ತಿರುವ ಬಜೆಟ್‌ ಅಧಿವೇಶನದಲ್ಲೂ ಕೊಂಡಜ್ಜಿ ಅವರು ಈ ಪ್ರಶ್ನೆಯನ್ನು ಎತ್ತಿದ್ದಾರೆ. ಗಮನ ಸೆಳೆಯುವ ಸೂಚನೆಯನ್ನು ಅವರು ಮಂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು