
‘ಬನಾರಸ್’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ನಟ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಜ.23ರಂದು ತೆರೆಕಾಣುತ್ತಿದೆ. ಈ ಸಿನಿಮಾದಲ್ಲಿ ಮೂರು ಶೇಡ್ಸ್‌ನಲ್ಲಿ ಕಾಣಿಸಿಕೊಳ್ಳಲಿರುವ ಝೈದ್‌ಗೆ ‘ಉಪಾಧ್ಯಕ್ಷ’ ನಿರ್ದೇಶಕ ಅನಿಲ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಹೊಸ್ತಿಲಲ್ಲಿ ಸಿನಿಪಯಣದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
‘ಬನಾರಸ್’ನ ಅನುಭವ ಸಿನಿಪಯಣವನ್ನು ಹೇಗೆ ರೂಪಿಸಿತು?
ಸಿನಿಮಾದ ಯಾವುದೇ ಹಿನ್ನೆಲೆ ಇಲ್ಲದೆ ಬಂದವನು ನಾನು. ಅಪ್ಪ ರಾಜಕೀಯದಲ್ಲಿ ಇರುವವರು. ಹೀಗಿರುವಾಗ ಸಿನಿಮಾಗೇ ಬರಬೇಕು ಎನ್ನುವ ಆಸೆ ಇಟ್ಟುಕೊಂಡು ಹೆಜ್ಜೆಗಳನ್ನು ಇಟ್ಟವನು ನಾನು. ‘ಬನಾರಸ್’ ಮೊದಲ ಹೆಜ್ಜೆ. ಎಲ್ಲವೂ ಹೊಸ ಅನುಭವ. ‘ಆರ್ಥಿಕವಾಗಿ, ವೈಯಕ್ತಿಕವಾಗಿ ಯಾವುದೇ ಬೆಂಬಲ ನೀಡುವುದಿಲ್ಲ’ ಎಂದು ತಂದೆ ಇಲ್ಲಿಗೆ ಹೆಜ್ಜೆ ಇಡುವ ಮೊದಲೇ ಸ್ಪಷ್ಟವಾಗಿ ಹೇಳಿದ್ದರು. ನಾನು ಸಿನಿಮಾ ಕ್ಷೇತ್ರಕ್ಕೆ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. ಆದರೆ ಸಿನಿಮಾ ಹಸಿವು ನನಗೆ ಜೋರಾಗಿಯೇ ಇತ್ತು. ಪ್ರತಿಭೆಯಿಂದಲೇ ಬರುತ್ತೇನೆ ಎಂದು ಹೆಜ್ಜೆಗಳನ್ನು ಇಟ್ಟೆ. ತಂದೆಗೆ ಆತ್ಮೀಯರಾಗಿದ್ದ ತಿಲಕ್ ರಾಜ್ ಬಲ್ಲಾಳ್ ಅವರು ನನ್ನ ಸಿನಿಮಾ ಆಸಕ್ತಿಯನ್ನು ಗಮನಿಸಿ, ತಂದೆಗೆ ಮನವರಿಕೆ ಮಾಡಿ ಮುಂಬೈಗೆ ನಟನೆಯ ತರಬೇತಿಗಾಗಿ ಕಳುಹಿಸಿದರು. ತರಬೇತಿ ಪಡೆದು ಬಂದ ನನಗೆ ಅವರೇ ಸಿನಿಮಾವೊಂದನ್ನು ನಿರ್ಮಾಣ ಮಾಡಿದರು. ಅದೇ ‘ಬನಾರಸ್’. ಸಿನಿಮಾದಲ್ಲಿನ ಹಾಡುಗಳು ಎಲ್ಲರನ್ನೂ ತಲುಪಿದ್ದವು. ಈ ಚಿತ್ರದಿಂದ ನನ್ನ ಮುಖಪರಿಚಯ ಕರ್ನಾಟಕಕ್ಕೆ ಆಯಿತು. ಚಿತ್ರರಂಗದಲ್ಲೊಂದು ವೇದಿಕೆ ದೊರೆಯಿತು. ‘ಝೈದ್ ಸಿನಿಮಾ ಬಗ್ಗೆ ಗಂಭೀರವಾಗಿದ್ದಾನೆ. ಬೇರೆ ರಾಜಕಾರಣಿಗಳ ಮಕ್ಕಳ ರೀತಿ ಅಲ್ಲ’ ಎನ್ನುವ ಮಾತುಗಳನ್ನೂ ಕೇಳಿದೆ.
‘ಕಲ್ಟ್’ ಸಿನಿಮಾ ಪ್ರವೇಶಿಸಿದ್ದು ಹೇಗೆ?
‘ಬನಾರಸ್’ ಬಳಿಕ ಮುಂದೇನು ಎಂದು ಕಥೆ ಹುಡುಕುತ್ತಿದ್ದೆ. ನನಗೆ ಬೇಕಾಗಿದ್ದ ನಿರ್ದೇಶಕರು ಸಿಗುತ್ತಿರಲಿಲ್ಲ. ಒಳ್ಳೆಯ ಕಥೆಯ ಹುಡುಕಾಟದಲ್ಲಿದ್ದೆ. ಹೆಸರಿಗೋಸ್ಕರ ಅಥವಾ ಕೆಲಸ ಇಲ್ಲ ಎನ್ನುವ ಕಾರಣಕ್ಕೆ ಸಿನಿಮಾ ಮಾಡುವವನು ನಾನಲ್ಲ. ಸಿನಿಮಾ ಮಾಡಿದರೆ ಅದರ ಕಥೆ ಚೆನ್ನಾಗಿರಬೇಕು. ನಮಗೋಸ್ಕರ ಯಾರೂ ಕಾಯುತ್ತಿಲ್ಲ ಎಂದು ನೆನಪಿಟ್ಟುಕೊಳ್ಳಬೇಕು. ಹೀಗೆ ಒಂದೂವರೆ ವರ್ಷ ಕಳೆದೆ. ಯಶ್ ಅವರ ಮುಖಾಂತರ ಅನಿಲ್ ಕುಮಾರ್ ಅವರ ಪರಿಚಯವಾಯಿತು. ಆ ಸಂದರ್ಭದಲ್ಲಿ ‘ಉಪಾಧ್ಯಕ್ಷ’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿತ್ತು. ಇದಾಗಿ ಒಂದು ತಿಂಗಳಲ್ಲಿ ನನಗೆ ‘ಕಲ್ಟ್’ ಕಥೆ ಹೇಳಿದ್ದರು. ಇದು ಬಹಳ ಇಷ್ಟವಾಯಿತು. ಹೀಗೆ ‘ಕಲ್ಟ್’ ಪಯಣ ಆರಂಭವಾಯಿತು.
ಹೊಸಬರು ಮಾರುಕಟ್ಟೆಯನ್ನು ಅರಿತುಕೊಳ್ಳುವುದು ಎಷ್ಟು ಮುಖ್ಯ?
ಬಹಳ ಮುಖ್ಯ. ತನ್ನ ಮಾರುಕಟ್ಟೆ ಎಷ್ಟಿದೆಯೋ ಅನ್ನುವುದು ಎಲ್ಲರಿಗೂ ತಿಳಿದಿರಬೇಕು. ನಿರ್ಮಾಪಕರು ನನ್ನ ಮೇಲೆ ಎಷ್ಟು ಹಣ ಹೂಡಿಕೆ ಮಾಡಬಹುದು ಎನ್ನುವುದರ ಅರಿವೂ ಇರಬೇಕು. ನಾನು ಸಚಿವನ ಮಗ. ದೊಡ್ಡ ಸಿನಿಮಾವೇ ಬೇಕು ಎಂಬ ದಡ್ಡನ ಕೆಲಸ ನಾನು ಮಾಡುವುದಿಲ್ಲ. ನಿರ್ಮಾಪಕರು ನಾಯಕನನ್ನೇ ನಂಬಿಕೊಂಡು ಹಣ ಹೂಡಿಕೆ ಮಾಡುವುದು. ಏನೇ ಹೆಚ್ಚು ಕಮ್ಮಿ ಆದರೂ ಗುರಿಯಾಗುವುದು ನಾನೇ. ಹೀಗಾಗಿ ಜವಾಬ್ದಾರಿ ಹೆಚ್ಚು ತೆಗೆದುಕೊಂಡಿದ್ದೇನೆ. ನಾನೇ ಮುಂದೆ ನಿಂತು ಬಜೆಟ್ ಹಾಕಿಸಿದ್ದೇನೆ. ನನ್ನ ಹಿಂದಿನ ಸಿನಿಮಾ ಎಷ್ಟು ವ್ಯಾಪಾರ ಮಾಡಿತ್ತು ಎನ್ನುವುದನ್ನು ತಿಳಿದುಕೊಂಡು ಒಂದು ಚೌಕಟ್ಟು ಹಾಕಿಕೊಂಡು ಹಣ ಹೂಡಿಕೆ ಮಾಡಿಸಿದ್ದೇನೆ. ರಿಸ್ಕ್ ಇದ್ದೇ ಇರುತ್ತದೆ. ಇಲ್ಲದಿದ್ದರೆ ಇದು ಆಟ ಆಟವೇ ಅಲ್ಲ.
ಕಥೆ ಆಯ್ಕೆಗೆ ನಿಮ್ಮ ಮಾನದಂಡಗಳೇನು?
ಕಥೆಗಳು ಭಿನ್ನವಾಗಿರಬೇಕು. ‘ಬನಾರಸ್’ನ ಕಥೆ ಪ್ರೇಮಕಥೆಯೊಂದಿಗೆ ಟೈಂಲೂಪ್ ಕಾನ್ಸೆಪ್ಟ್ ಹೊಂದಿತ್ತು. ಒಂದೇ ರೀತಿಯ ಜಾನರ್‌ನ ಸಿನಿಮಾಗಳನ್ನು ಮಾಡಲು ಇಷ್ಟವೂ ಇಲ್ಲ, ಮಾಡುವುದೂ ಇಲ್ಲ. ಜನ ನನ್ನ ಸಿನಿಮಾ ಏಕೆ ನೋಡಬೇಕು? ನನ್ನೊಳಗಿನ ವಿಶೇಷತೆ ಏನು? ಎನ್ನುವ ಪ್ರಶ್ನೆಯನ್ನು ಹಾಕಿಕೊಳ್ಳುತ್ತಲೇ ಇರುತ್ತೇನೆ. ಪ್ರತಿ ಬಾರಿಯೂ ಅಮೀರ್ ಖಾನ್ ಅವರ ಸಿನಿಮಾಗಳು ಬಂದಾಗ ಜನರಿಗೆ ಒಂದು ನಿರೀಕ್ಷೆ ಇರುತ್ತದೆ. ಈ ರೀತಿ ನಾನು ಆಗಬೇಕು ಎನ್ನುವ ಕನಸು ಕಾಣುವಾತ ನಾನು. ಪ್ರೇಮಕಥೆಗಳನ್ನು ಮಾಡುವ ಆಸೆ ಬಹಳ ಇದೆ. ಏಕೆಂದರೆ ನನ್ನ ವ್ಯಕ್ತಿತ್ವ, ರೂಪ ಹಾಗಿದೆ. ಕೈಯಲ್ಲಿ ಮಚ್ಚು ಹಿಡಿದು ಬಂದೆನೆಂದರೆ ಅದು ನನಗೆ ಹೊಂದಿಕೆಯಾಗುವುದೇ ಇಲ್ಲ. ಕನ್ನಡದಲ್ಲಿ ಫೀಲ್ ಗುಡ್ ಸಿನಿಮಾಗಳು ಕಡಿಮೆಯಾಗಿವೆ. ಕುಟುಂಬ ಸಹಿತವಾಗಿ ಕುಳಿತು ನೋಡುವ ಸಿನಿಮಾಗಳೇ ಬರುತ್ತಿಲ್ಲ. ಇಂತಹ ಒಂದು ಜಾಗವನ್ನು ತುಂಬುವತ್ತ ನನ್ನ ಹೆಜ್ಜೆ ಇದೆ.
ರಚಿತಾ ರಾಮ್ ಅವರ ಜೊತೆ ತೆರೆಹಂಚಿಕೊಂಡ ಅನುಭವ..
ನನಗೆ ಅವರು ಮೊದಲಿನಿಂದ ಸ್ನೇಹಿತೆ. ಚಿತ್ರೀಕರಣ ಸಂದರ್ಭದಲ್ಲಿ ಸೆಟ್‌ಗೆ ಬಂದ ಬಳಿಕ ಸ್ಟಾರ್ ರೀತಿ ವರ್ತಿಸುತ್ತಾರಾ ಎನ್ನುವ ಭಯ ಇತ್ತು. ಆದರೆ ರಚಿತಾ ಸ್ನೇಹವನ್ನು ಮರೆಯಲಿಲ್ಲ. ಅವರ ಜೊತೆ ನಟನೆ ಖುಷಿ ನೀಡಿದೆ.
ಸಿನಿಮಾದಲ್ಲಿನ ನಿಮ್ಮ ಪಾತ್ರದ ಬಗ್ಗೆ...
ಚಿತ್ರದಲ್ಲಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ‘ಮಾಧವ’ ಎನ್ನುವುದು ನನ್ನ ಪಾತ್ರದ ಹೆಸರು. ಮೂರು ಶೇಡ್ಸ್ ಕೇವಲ ವಸ್ತ್ರವಿನ್ಯಾಸದಲ್ಲಿ ಅಲ್ಲ, ಆತನ ವ್ಯಕ್ತಿತ್ವ, ದೇಹ, ಧ್ವನಿ ಎಲ್ಲದರಲ್ಲೂ ಬದಲಾವಣೆ ಇದೆ. ಇದು ಮಾನಸಿಕವಾಗಿ, ದೈಹಿಕವಾಗಿ ಸವಾಲುಗಳನ್ನು ಒಡ್ಡಿತು. ಕಾಲೇಜು ದಿನಗಳೂ ಕಥೆಯೊಳಗಿದ್ದು, ಇದಕ್ಕಾಗಿ ತೂಕ ಇಳಿಸಿಕೊಂಡು ಹಳ್ಳಿ ಹುಡುಗನಾಗಿದ್ದೆ. ಇದು ‘ಮಾಧವ’ನ ಜೀವನದ ಪಯಣದ ಕಥೆ ಹೊಂದಿದೆ.
‘ಬನಾರಸ್’ಗೆ ನಾನು ಡಬ್ಬಿಂಗ್ ಮಾಡಿದ್ದೆ. ಆದರೆ ನನ್ನ ಭಾಷೆಯಲ್ಲಿ ಮುಸ್ಲಿಂ ಕನ್ನಡದ ಧಾಟಿ ಇತ್ತು. ಕನ್ನಡದಲ್ಲೂ ಹೆಚ್ಚು ಸ್ಪಷ್ಟತೆ ಇರಲಿಲ್ಲ. ಹೀಗಾಗಿ ಕೊನೆಯಲ್ಲಿ ಬೇರೆಯವರಿಂದ ಡಬ್ಬಿಂಗ್ ಮಾಡಿಸಿದೆ. ಇದಾದ ಬಳಿಕ ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕಲಿತಿದ್ದೇನೆ. ಚಿತ್ರರಂಗದಲ್ಲಿ ಉಳಿದುಕೊಳ್ಳಲು ಭಾಷೆ ಮುಖ್ಯ. ‘ಕಲ್ಟ್’ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಿದ್ದೇನೆ.
ಬೇರೆ ಚಿತ್ರರಂಗದಿಂದ ಆಫರ್‌ಗಳು ಬಂದಿವೆಯೇ?
‘ಬನಾರಸ್’ಗೂ ಮೊದಲೇ ಬಂದಿದ್ದವು. ಆವಾಗಲೂ ಒಪ್ಪಿಲ್ಲ. ‘ಬನಾರಸ್’ ಬಳಿಕ ಹಿಂದಿಯಿಂದ ಹಲವು ವೆಬ್‌ಸರಣಿ, ಸಿನಿಮಾಗಳ ಆಫರ್‌ಗಳು ಬಂದಿದ್ದವು. ಹುಟ್ಟಿ ಬೆಳೆದ ಕರ್ನಾಟಕದ ಕನ್ನಡ ಸಿನಿಮಾದಲ್ಲೇ ಇರಬೇಕು ಎಂದು ನಿರ್ಧರಿಸಿದ್ದೇನೆ. ನನ್ನ ಭಾಷೆಯನ್ನು ಬಿಟ್ಟುಕೊಡುವುದಿಲ್ಲ. ಕನ್ನಡ ಹಾಗೂ ಹಿಂದಿಯಲ್ಲಿ ಮಾಡುವುದಿದ್ದರೆ ಒಪ್ಪಿಕೊಳ್ಳುತ್ತೇನೆ. ಮಲಯಾಳ ಚಿತ್ರರಂಗದಿಂದಲೂ ಇತ್ತೀಚೆಗೆ ಹೆಚ್ಚು ಆಫರ್‌ಗಳು ಬಂದಿವೆ.
ಮುಂದಿನ ಸಿನಿಮಾಗಳು...
‘ಕಲ್ಟ್’ ಹೊರತುಪಡಿಸಿ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಮೂರನೇ ಮತ್ತು ನಾಲ್ಕನೇ ಸಿನಿಮಾದ ನಿರ್ದೇಶಕರು ಕಥೆ ಅಂತಿಮಗೊಳಿಸಿ ಪ್ರಿಪ್ರೊಡಕ್ಷನ್ ಆರಂಭಿಸಿದ್ದೇನೆ. ಮೂರನೇ ಸಿನಿಮಾದ ಹಾಡುಗಳೂ ಸಿದ್ದವಾಗಿದೆ. ಏಪ್ರಿಲ್ ಅಂತ್ಯದಿಂದ ಇದರ ಚಿತ್ರೀಕರಣ ಆರಂಭವಾಗಲಿದೆ. ಇದೊಂದು ಪಕ್ಕಾ ಪೈಸಾ ವಸೂಲ್ ಸಿನಿಮಾ. ಇದೇ ವರ್ಷಾಂತ್ಯದಲ್ಲಿ ತೆರೆಗೆ ತರುವ ಯೋಜನೆ ಹಾಕಿಕೊಂಡಿದ್ದೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.