ಭಾನುವಾರ, ಮಾರ್ಚ್ 26, 2023
31 °C

ಮತ್ತೆ ನಿರ್ದೇಶನದತ್ತ ಜಗ್ಗೇಶ್‌: ಈ ಸಲ ಮಗ ಗುರುರಾಜ್‌ಗೆ ಆ್ಯಕ್ಷನ್‌ ಕಟ್‌

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ನವರಸ ನಾಯಕ ಜಗ್ಗೇಶ್‌ ಬಹಳ ದೀರ್ಘ ಸಮಯದ ನಂತರ ಮತ್ತೆ ಆ್ಯಕ್ಷನ್‌ ಕಟ್‌ ಹೇಳಲು ರೆಡಿಯಾಗಿದ್ದಾರೆ. ಈ ಬಾರಿ ಅವರು ನಿರ್ದೇಶಕನ ಟೊಪ್ಪಿ ಧರಿಸುತ್ತಿರುವುದು ತಮ್ಮ ಪುತ್ರ ಗುರುರಾಜ್‌ ಮತ್ತು ಸಹೋದರ ಕೋಮಲ್‌ ಕುಮಾರ್‌ ನಟನೆಯ ಚಿತ್ರಕ್ಕೆ. ಈ ಚಿತ್ರವು 2020ರ ಫೆಬ್ರುವರಿಯಲ್ಲಿ ಜಗ್ಗೇಶ್‌ ಜನ್ಮದಿನದಂದು ಸೆಟ್ಟೇರಲಿದೆ.

2012ರಲ್ಲಿ ‘ಗುರು’ ಚಿತ್ರದ ಮೂಲಕ ಜಗ್ಗೇಶ್‌ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರ ಮಗ ಗುರುರಾಜ್‌ ನಾಯಕನಾಗಿ ನಟಿಸಿದ್ದರು. ಇದಾದ ನಂತರ 2017ರಲ್ಲಿ ಜಗ್ಗೇಶ್‌ ತಾವೇ ನಾಯಕ ನಟನಾಗಿ ನಟಿಸಿದ್ದ ‘ಮೇಲುಕೋಟೆ ಮಂಜ’ ಚಿತ್ರ ನಿರ್ದೇಶಿಸಿದ್ದರು. ಇದರಲ್ಲಿ ಐಂದ್ರಿತಾ ರೇ ನಾಯಕಿಯಾಗಿ ನಟಿಸಿದ್ದರು. ‘ಪ್ರೀಮಿಯರ್‌ ಪದ್ಮಿನಿ’, ‘ಕಾಳಿದಾಸ ಕನ್ನಡ ಮೇಸ್ಟ್ರು’ ಸಿನಿಮಾಗಳು ಯಶಸ್ಸು ತಂದುಕೊಟ್ಟ ಬೆನ್ನಲ್ಲೇ ಜಗ್ಗೇಶ್‌ ನಟನೆಯ ಜತೆಗೆ ನಿರ್ದೇಶನದತ್ತಲೂ ಮುಖ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ನಟನೆಯ ‘ತೋತಾಪುರಿ’ ಚಿತ್ರವು ಸದ್ಯದಲ್ಲೇ ತೆರೆಕಾಣುವ ನಿರೀಕ್ಷೆ ಇದೆ.

‘ನ್ಯಾಚುರಲ್‌ ಇನ್‌ಸ್ಟಿಂಕ್ಟ್‌ ಇರುವ ಒಂದು ರಾ ಚಿತ್ರ ಮಾಡುವವನಿದ್ದೇನೆ. ಫೆಬ್ರುವರಿಯಲ್ಲಿ ನನ್ನ ಜನ್ಮದಿನದಂದು ಚಿತ್ರ ಶುರು ಮಾಡಲಿದ್ದೇನೆ. ಭಯಾನಕ ಮತ್ತು ಹಾಸ್ಯ ರಸಗಳನ್ನು ಕೇಂದ್ರವಾಗಿಟ್ಟುಕೊಂಡು ಒಂದು ಸಾಲಿನ ಕಥೆ ಮನಸಿನಲ್ಲಿ ಮೂಡಿದೆ. ಇಬ್ಬರ ನಡುವೆ ನಡೆಯುವ ಜುಗಲ್‌ಬಂದಿಯ ಕಥೆ ಇದು. ಅಪರಿಚಿತರಿಬ್ಬರು ಏನಕ್ಕೊ ಒಟ್ಟಿಗೆ ಸೇರುತ್ತಾರೆ. ಅವರಿಬ್ಬರ ನಡುವೆ ನಡೆಯುವ ಬದುಕಿನ ಒಳನೋಟಗಳ ಕುರಿತಾದದ್ದು ಚಿತ್ರದ ಕಥಾಹಂದರ. ಒಬ್ಬನ ಚಿಂತೆ ಒಂದು ರೀತಿ ಇದ್ದರೆ, ಇನ್ನೊಬ್ಬನ ಚಿಂತೆ ಇನ್ನೊಂದು ರೀತಿಯಲ್ಲಿರುತ್ತದೆ. ಒಬ್ಬರಿಗೊಬ್ಬರು ಆಗದಂತೆ ಇದ್ದರೂ ಒಂದು ರಾತ್ರಿ ಇಬ್ಬರು ಒಟ್ಟಿಗೆ ಇರಬೇಕಾಗುತ್ತದೆ. ಈ ಇಬ್ಬರ ನಡುವೆ ನಡೆಯುವ ‘ಹೈಡ್‌ ಅಂಡ್‌ ಸೀಕ್‌’ ಅನ್ನು ‘ಒಂದು ರಾತ್ರಿಯ ಕಥೆ’ಯಾಗಿ ಪ್ರೇಕ್ಷಕರ ಮುಂದಿಡುವ ಯೋಜನೆ ಇದೆ’ ಎಂದು ಮಾತು ವಿಸ್ತರಿಸಿದರು ನಟ ಜಗ್ಗೇಶ್‌.

‘ಗಂಭೀರ ಮತ್ತು ಭರಪೂರ ಹಾಸ್ಯಮಯ ಸನ್ನಿವೇಶಗಳು ಈ ಚಿತ್ರದಲ್ಲಿರಲಿವೆ. ಚಿತ್ರದ ಎರಡು ಪ್ರಮುಖ ಪಾತ್ರಗಳಲ್ಲಿ ಭಯಾನಕ ಪಾತ್ರವು ನೋಡಲು ತುಂಬಾ ಥ್ರಿಲ್ಲಿಂಗ್‌ ಆಗಿರುತ್ತದೆ. ಇನ್ನು ಹಾಸ್ಯದ ಪಾತ್ರ ನೋಡಿದಾಗ ನಕ್ಕುನಕ್ಕು ಸಾಕಾಗುತ್ತದೆ. ಪಾತ್ರದ ಭಯವೇ ಪ್ರೇಕ್ಷಕನ್ನು ನಕ್ಕು ಸುಸ್ತಾಗಿಸುತ್ತದೆ. ಮತ್ತೊಂದು ಪ್ರಮುಖ ಪಾತ್ರ ವಕೀಲೆಯದ್ದು. ಈ ವಕೀಲೆಯಿಂದಲೇ ಚಿತ್ರದ ಕಥೆಗೆ ತಿರುವು ಸಿಗುತ್ತದೆ’ ಎಂದು ತಮ್ಮ ನಿರ್ದೇಶನದ ಹೊಸ ಚಿತ್ರದ ಬಗ್ಗೆ ಕುತೂಹಲವನ್ನು ಕಾಯ್ದುಕೊಂಡರು.

‘ಚಿತ್ರದ ಟ್ರೇಲರ್‌ ಅನ್ನು ಅದ್ಭುತವಾಗಿ ರೂಪಿಸುವ ನಿರ್ಧಾರ ಮಾಡಿದ್ದೇನೆ. ಟ್ರೇಲರ್‌ ನೋಡುವಾಗಲೇ ಪ್ರೇಕ್ಷಕರು ಥ್ರಿಲ್ಲಿಂಗ್‌ ಆಗಬೇಕೆಂದುಕೊಂಡಿದ್ದೇನೆ’ ಎನ್ನುವ ಮಾತು ಸೇರಿಸಿದರು. 

‘ರಾಯರ ಆಶೀರ್ವಾದದಿಂದ ನಾನು ನಾಳೆಯ ಬಗ್ಗೆ ಚಿಂತೆಯನ್ನೇ ಮಾಡುತ್ತಿಲ್ಲ. ವಾರಕ್ಕೆ ಒಂದು, ಎರಡರಂತೆ ಸ್ಕ್ರಿಪ್ಟ್‌ಗಳು ಬರುತ್ತಿವೆ. ಆದರೆ, ಜನರಿಗೆ ಸಂದೇಶ ನೀಡುವಂತಹ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ಒಂದು ಕಾಲಘಟ್ಟದಲ್ಲಿ ಹೆಚ್ಚು ಸಿನಿಮಾ ಮಾಡಬೇಕೆಂದು ವರ್ಷಕ್ಕೆ ಎಂಟೆಂಟು ಸಿನಿಮಾಗಳನ್ನು ಮಾಡಿದ್ದೇನೆ. ಈಗ ಆ ರೀತಿಯಾದ ಆಸೆಗಳಿಲ್ಲ. ಸಾರ್ವಜನಿಕರಿಗೆ ಕನೆಕ್ಟ್‌ ಆಗುವಂತಹ ಸಬ್ಜೆಕ್ಟ್‌ ಇದ್ದರೆ ಅವರು ಹಳಬರೇ ಆಗಿರಲಿ ಅಥವಾ ಹೊಸಬರೇ ಆಗಿರಲಿ ಅವರ ಚಿತ್ರಗಳನ್ನು ಮಾಡುತ್ತೇನೆ. ಸದ್ಯ ಗುರುಪ್ರಸಾದ್‌ ಅವರೊಟ್ಟಿಗೆ ಮತ್ತೊಂದು ಚಿತ್ರ ಮಾಡಲಿದ್ದೇನೆ’ ಎಂದರು ಜಗ್ಗೇಶ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು