ಜೈ ಭೀಮ್: ನಟ ಸೂರ್ಯನಿಗೆ ಒದೆಯಿರಿ ಎಂದಿದ್ದ ರಾಜಕೀಯ ಮುಖಂಡನ ಮೇಲೆ ಬಿತ್ತು ಕೇಸ್

ಚೆನ್ನೈ: ಇತ್ತೀಚೆಗೆ ಅಮೆಜಾನ್ ಫ್ರೈಮ್ನಲ್ಲಿ ಬಿಡುಗಡೆಯಾಗಿ ದೇಶದಾದ್ಯಂತ ಸಾಕಷ್ಟು ಮೆಚ್ಚುಗೆ ಗಳಿಸಿರುವ ಹಾಗೆಯೇ ಕೆಲವು ವಿವಾದಗಳನ್ನು ಹುಟ್ಟುಹಾಕಿರುವ ಸೂರ್ಯ ನಟನೆಯ ‘ಜೈ ಭೀಮ್’ ಸಿನಿಮಾ ಕುರಿತಂತೆ ರಾಜಕೀಯ ಪಕ್ಷದ ಮುಖಂಡರೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
ಸಿನಿಮಾದಲ್ಲಿ ತಮಿಳುನಾಡಿನ ವನ್ನಿಯಾರ್ ಸಮುದಾಯವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ತಮಿಳುನಾಡು ವನ್ನಿಯಾರ್ ಸಂಘ, ‘ಜೈ ಭೀಮಾ’ ಸಿನಿಮಾ ತಂಡದ ಮೇಲೆ ಹಾಗೂ ನಟ ಸೂರ್ಯ ಮೇಲೆ ಕಿಡಿಕಾರಿದೆ. ಅಲ್ಲದೇ ವನ್ನಿಯಾರ್ ಸಂಘಕ್ಕೆ ₹5 ಕೋಟಿ ಪರಿಹಾರ ಒದಗಿಸಬೇಕು, ಚಿತ್ರತಂಡದ ಎಲ್ಲರೂ ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.
ಇದೇ ವಿಷಯವಾಗಿ ನಟ ಸೂರ್ಯ ಅವರಿಗೆ ಬೆದರಿಕೆ ಹಾಕಿದ್ದ ಮಯಿಲಾದುತ್ತರೈ ಜಿಲ್ಲೆಯ ಪಟ್ಟಾಳ್ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಸೀತಾಮಲ್ಲಿ ಪಳನಿಸ್ವಾಮಿ ಅವರ ಮೇಲೆ ಐಪಿಸಿ ಸೆಕ್ಷನ್ 153ಎ, 188, 269, 505 ಹಾಗೂ 506 ರ ಅಡಿ ಪ್ರಕರಣ ದಾಖಲಾಗಿದೆ. ವಕೀಲರೊಬ್ಬರು ನೀಡಿದ್ದ ದೂರಿನನ್ವಯ ಈ ಪ್ರಕರಣ ದಾಖಲಾಗಿದೆ. ಅವರನ್ನು ಪೊಲೀಸರು ಇನ್ನೂ ಬಂದಿಸಿಲ್ಲ ಎಂಬುದು ತಿಳಿದು ಬಂದಿದೆ.
ಜೈ ಭೀಮ್ ಸಿನಿಮಾದಲ್ಲಿ ವನ್ನಿಯಾರ್ ಸಮುದಾಯವನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಕಳೆದ ಮಂಗಳವಾರ ಮಯಿಲಾದುತ್ತರೈನಲ್ಲಿ ಚಿತ್ರದ ಪ್ರದರ್ಶನಗಳನ್ನು ತಡೆದು, ಪಿಎಂಕೆ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸೀತಾಮಲ್ಲಿ ಪಳನಿಸ್ವಾಮಿ, ‘ನಟ ಸೂರ್ಯ ಅವರಿಗೆ ಯಾರಾದರೂ ಒದ್ದು ಬುದ್ದಿ ಕಲಿಸಿದರೆ ಅವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು’ ಎಂದು ಹೇಳಿಕೆ ನೀಡಿದ್ದರು.
ಇನ್ನೊಂದೆಡೆ, ಜೈ ಭೀಮ್ ಬಗ್ಗೆ ಕೆಲವರು ತಕರಾರು ತೆಗೆದಿದ್ದರೂ ಸಾಕಷ್ಟು ಜನ ನಮಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ನಟ ಸೂರ್ಯಾ ಹೇಳಿದ್ದಾರೆ.
ಸೂರ್ಯಾ ಹಾಗೂ ಅವರ ಪತ್ನಿ ಜ್ಯೋತಿಕಾ ಒಡೆತನದ ‘2ಡಿ ಎಂಟರ್ಟೈನ್ಮೆಂಟ್’ ಸಂಸ್ಥೆ ನಿರ್ಮಾಣ ಮಾಡಿರುವ ‘ಜೈ ಭೀಮ್’ ನ್ನು ಜ್ಞಾನವೇಲು ನಿರ್ದೇಶಿಸಿದ್ದಾರೆ. ಪೊಲೀಸ್ ದೌರ್ಜನ್ಯ, ನ್ಯಾಯಾಂಗ ಹಾಗೂ ಬಡವರ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಸೂರ್ಯಾ ಅವರು ಲಾಯರ್ ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹಿಂದಿ ಭಾಷಾ ವಿವಾದದ ಕಿಡಿ ಹೊತ್ತಿಸಿದ ಜೈ ಭೀಮ್ ಸಿನಿಮಾ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.