ಬುಧವಾರ, ಜನವರಿ 22, 2020
16 °C

ಟ್ರೆಂಡಿಂಗ್‌ನಲ್ಲಿ ಜೇಮ್ಸ್‌ ಬಾಂಡ್‌ ‘ನೋ ಟೈಮ್ ಟು ಡೈ’ ಟ್ರೇಲರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆ್ಯಕ್ಷನ್‌ ಚಿತ್ರಪ್ರಿಯ ಪ್ರೇಕ್ಷಕರಿಗೆ ಮತ್ತೊಮ್ಮೆ ಮನರಂಜನೆಯ ರಸದೌತಣ ನೀಡಲು ಜೇಮ್ಸ್ ಬಾಂಡ್ ಸರಣಿಯ 25ನೇ ಚಿತ್ರ ‘ನೋ ಟೈಮ್ ಟು ಡೈ’ ತೆರೆಯ ಮೇಲೆ ಬರಲು ಸಜ್ಜಾಗಿದೆ. ಜೇಮ್ಸ್‌ ಬಾಂಡ್‌ ಸರಣಿಯ ಚಿತ್ರಗಳಲ್ಲಿ ಮಿಂಚು ಹರಿಸಿರುವ ಡೇನಿಯಲ್ ಕ್ರೆಗ್‌ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದು, ಚಿತ್ರತಂಡವು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದೆ. ಎರಡೂವರೆ ನಿಮಿಷಗಳ ಟ್ರೇಲರ್‌ ಅನ್ನು ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಯೂಟೂಬ್‌ನಲ್ಲಿ ವೀಕ್ಷಿಸಿದ್ದಾರೆ.

ಕ್ಯಾರಿ ಜೋಜಿ ಫುಕುನಗಾ ನಿರ್ದೇಶನದ ಈ ಚಿತ್ರದ ಟ್ರೇಲರ್‌ ಹಾಲಿವುಡ್‌ ಸಿನಿಮಾಗಳಲ್ಲಿ ಸದ್ಯ ಸಖತ್‌ ಸದ್ದು ಮಾಡುತ್ತಿದೆ. ಆ್ಯಕ್ಷನ್‌ ಸಿನಿಮಾಗಳ ಪ್ರೇಕ್ಷಕರಂತೂ ಕ್ರೆಗ್‌ ಗೆಟಪ್‌ಗೆ ಫಿದಾ ಆಗಿದ್ದಾರೆ. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಕ್ರೇಗ್ ಈ ಚಿತ್ರದಲ್ಲಿ ಮತ್ತಷ್ಟು ಸ್ಟೈಲಿಶ್ ಆಗಿರುವುದು ಕಾಣಿಸುತ್ತದೆ. 

ಈ ಚಿತ್ರದಲ್ಲಿ ಜೇಮ್ಸ್‌ ಬಾಂಡ್‌ನದು ‘ಎಂಐ5 ಏಜೆಂಟ್‌ –007’ ಹೆಸರಿನ ಗೂಢಚಾರಿ. ಆಸ್ಕರ್ ಪ್ರಶಸ್ತಿ ವಿಜೇತ ನಟ ರಾಮಿ ಮಲಿಕ್ ಖಳನಾಯಕನಾಗಿ ನಟಿಸಿದ್ದಾರೆ. ಅಪಹರಣಕ್ಕೊಳಗಾದ ಒಬ್ಬ ವಿಜ್ಞಾನಿಯನ್ನು ರಕ್ಷಿಸಲು ಸಿಐಎ, ಜಮೈಕಾದಲ್ಲಿ ಶಾಂತ ಜೀವನ ನಡೆಸುತ್ತಿದ್ದ ಜೇಮ್ಸ್‌ ಬಾಂಡ್‌ಗೆ ಪ್ರಕರಣ ವಹಿಸುತ್ತದೆ. ನಾಯಕ ಮತ್ತು ಖಳನಾಯಕರ ಮಧ್ಯೆ ನಡೆಯುವ ಫೈಟಿಂಗ್‌, ಚೇಸಿಂಗ್‌ ದೃಶ್ಯಗಳು ಮೈನವಿರೇಳಿಸುತ್ತವೆ. ‘ಶಕ್ತಿವಂತರಂತೆ ವರ್ತಿಸುವ ಮನುಷ್ಯರ ಪಾಲಿಗೆ ಇತಿಹಾಸ ಎಂದೂ ಔದಾರ್ಯ ತೋರುವುದಿಲ್ಲ’ ಎಂದು ಎಚ್ಚರಿಕೆ ನೀಡುವ ಕ್ರೆಗ್‌ ಪಂಚಿಂಗ್‌ ಡೈಲಾಗ್‌ ಗಮನ ಸೆಳೆಯುತ್ತದೆ. ಟ್ರೇಲರ್‌ನಲ್ಲೂ ಭರಪೂರ ಆ್ಯಕ್ಷನ್ ದೃಶ್ಯಗಳು ತುಂಬಿದ್ದು, ರೋಮಾಂಚನಕಾರಿಯಾಗಿವೆ. ಈ ಚಿತ್ರವು ಬಾಂಡ್ ಅಭಿಮಾನಿಗಳಿಗೆ ಮತ್ತಷ್ಟು ಮನರಂಜನೆ ನೀಡುವ ನಿರೀಕ್ಷೆ ಮೂಡಿಸಿದೆ. ಈ ಚಿತ್ರವು 2020ರ ಏಪ್ರಿಲ್‌ 10ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು