ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕರ ಕಲಾವಿದ ಅಪ್ಪು: ‘ಜೇಮ್ಸ್‌' ನಿರ್ದೇಶಕ ಚೇತನ್‌ ಕುಮಾರ್‌

Last Updated 17 ಮಾರ್ಚ್ 2022, 3:50 IST
ಅಕ್ಷರ ಗಾತ್ರ

ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ, ಚೇತನ್‌ ಕುಮಾರ್‌ ನಿರ್ದೇಶನದ ಸಿನಿಮಾ ‘ಜೇಮ್ಸ್‌’ ಇಂದು ತೆರೆಗೆ ಅಪ್ಪಳಿಸುತ್ತಿದೆ. ಅಪ್ಪು ಅವರ ಅಕಾಲಿಕ ನಿಧನದ ಬಳಿಕ ನಿರ್ಮಾಣವಾಗಿದ್ದ ಅನಿಶ್ಚಿತ ಪರಿಸ್ಥಿತಿಯನ್ನು ದೊಡ್ಮನೆ ಬೆಂಬಲದೊಂದಿಗೆ ಹಳಿಗೆ ಮರಳಿಸಿದ ಚೇತನ್‌ ಕುಮಾರ್‌ ತಾವೆದುರಿಸಿದ ಸವಾಲು ಹಾಗೂ ಅಪ್ಪುವಿನ ನೆನಪನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ...

***

* ಅಪ್ಪು ಅವರ ಅಕಾಲಿಕ ನಿಧನವಾದಾಗ ‘ಜೇಮ್ಸ್‌’ ಯಾವ ಹಂತದಲ್ಲಿತ್ತು?

ಚಿತ್ರದ ಆ್ಯಕ್ಷನ್‌ ಭಾಗ, ಟಾಕಿ ಭಾಗ ಪೂರ್ಣಗೊಂಡು ಒಂದು ಡ್ಯೂಯೆಟ್‌ ಹಾಡು, ಡಬ್ಬಿಂಗ್‌ ಹಾಗೂ ಸಣ್ಣಪುಟ್ಟ ಪ್ಯಾಚ್‌ವರ್ಕ್‌ಗಳುಬಾಕಿ ಇದ್ದವು. ನಿಧನದ ಸುದ್ದಿ ತಿಳಿದು ಒಂದು ಕ್ಷಣ ಎಲ್ಲರೂ ಆಘಾತಗೊಂಡಿದ್ದೆವು. ಇದರಿಂದ ಹೊರಬರಲು ಚಿತ್ರೀಕರಣದ ಕೆಲಸದಿಂದ ಸುಮಾರು 15 ದಿನ ಬಿಡುವು ತೆಗೆದುಕೊಂಡೆವು. ಅಪ್ಪು ಅವರಿಗೆ ಮಾ.17ರಂದೇ ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವ ಆಸೆ ಇತ್ತು. ಇದನ್ನು ನಡೆಸಿಕೊಡುವುದು ನಮ್ಮ ದೊಡ್ಡ ಜವಾಬ್ದಾರಿಯಾಗಿತ್ತು. ಫೆ.5ರೊಳಗೆ ಕನ್ನಡದಲ್ಲಿ ಡಬ್ಬಿಂಗ್‌ ಪೂರ್ಣಗೊಳಿಸಿದೆವು. ಇದಾದ ನಂತರ ಇತರೆ ಭಾಷೆಗಳಲ್ಲೂ ಏಕಕಾಲದಲ್ಲಿ ಬಿಡುಗಡೆಗೆ ಬೇಡಿಕೆ ಬಂತು. ಹೀಗಾಗಿ ತಕ್ಷಣದಲ್ಲೇ ಇತರೆ ಭಾಷೆಗಳಲ್ಲೂ ಡಬ್ಬಿಂಗ್‌ ಕಾರ್ಯ ಪ್ರಾರಂಭಿಸಿದ್ದೆವು. ಅಪ್ಪು ಅವರಿಗೆ ಆ ಡ್ಯೂಯೆಟ್‌ ಹಾಡು ಬಹಳ ಇಷ್ಟವಾಗಿತ್ತು. ಆದರೆ ಇದನ್ನು ಚಿತ್ರೀಕರಣ ಮಾಡಲಾಗಲಿಲ್ಲ ಎನ್ನುವ ಬೇಸರವಿದೆ.

* ಈ ಆಘಾತದಿಂದ ಹೊರಬಂದು ‘ಜೇಮ್ಸ್‌’ ಪೂರ್ಣಗೊಳಿಸಿದ ಬಗೆಯ ಬಗ್ಗೆ...

ಪುನೀತ್‌ ಅವರನ್ನು ಕಳೆದುಕೊಂಡಿದ್ದೇವೆಎನ್ನುವುದನ್ನು ಇನ್ನೂ ಅರಗಿಸಿಕೊಳ್ಳಲು ನನ್ನ ಕೈಯಲ್ಲಿ ಆಗುತ್ತಿಲ್ಲ. ಒಂದು ರೀತಿ ಖಿನ್ನತೆಯೂ ನಮ್ಮನ್ನು ಕಾಡಿತ್ತು. ಆದರೆ, ನಂಬಿ ನಮ್ಮ ಕೈಗೆ ಕೊಟ್ಟಿರುವ ಸಿನಿಮಾವನ್ನು ನಾವು ಪ್ರೇಕ್ಷಕರ ಎದುರಿಗೆ ಇಡುವುದು ಮುಖ್ಯವಾಗಿತ್ತು. ಈ ಕಾರ್ಯಕ್ಕೆ ಅವರ ನೆನಪುಗಳು, ಮಾತುಗಳು ಪ್ರೇರಣೆ ಹಾಗೂ ಶಕ್ತಿ. ಒಂದು ರೀತಿಯಲ್ಲಿ ನಾವೇ ಪುಣ್ಯವಂತರು. ಅವರ ಜೊತೆ ಒಂದು ಫೋಟೊ ತೆಗೆಸಿಕೊಳ್ಳಲು ಕಾಯುತ್ತಿರುತ್ತಾರೆ. ಅಂಥದರಲ್ಲಿ ನನಗೆ ಅವರ ಜೊತೆ ಸಿನಿಮಾ ಮಾಡುವ ಭಾಗ್ಯ ಸಿಕ್ಕಿದೆ. ಸುಮಾರು ಒಂದು ವರ್ಷ ಅವರ ಜೊತೆ ಕಾಲ ಕಳೆಯುವ ಅವಕಾಶ ಸಿಕ್ಕಿರುವುದು ಆಶೀರ್ವಾದವೇ ಸರಿ.

*‘ಜೇಮ್ಸ್‌’ ಮುಖಾಂತರ ಪುನೀತ್‌ ಅವರನ್ನು ಹೇಗೆ ತೋರಿಸಿದ್ದೀರಿ?

ನಾನು ಮಾಡಿರುವ ಹಾಗೂ ಅಪ್ಪು ಅವರು ಮಾಡಿರುವ ಸಿನಿಮಾಗಳನ್ನು ಹೊರತುಪಡಿಸಿ ಬೇರೆಯದನ್ನೇನು ಮಾಡಬಹುದು ಎಂದು ನಾನು ಕಥೆ ಬರೆಯುವ ವೇಳೆಯೇ ಯೋಚಿಸಿದ್ದೆ. ಯೋಧನ ಪಾತ್ರ, ಹೇರ್‌ಸ್ಟೈಲ್‌ ಎಲ್ಲವೂ ಹೊಸತು. ಅಪ್ಪು ಅವರ ಮುಖ್ಯ ಅಭಿಮಾನಿಗಳೇ ಫ್ಯಾಮಿಲಿ ಆಡಿಯನ್ಸ್‌. ಇದನ್ನು ಹೊರತುಪಡಿಸಿ ಸಿನಿಮಾ ಮಾಡಲು ಸಾಧ್ಯವೇ ಇಲ್ಲ. ಚಿತ್ರದಲ್ಲಿ ಅಪ್ಪು ಅವರ ಭಾವನಾತ್ಮಕ ದೃಶ್ಯಗಳನ್ನು ಖಂಡಿತವಾಗಿಯೂ ಪ್ರೇಕ್ಷಕರು ಇಷ್ಟಪಡುತ್ತಾರೆ ಎನ್ನುವ ಭರವಸೆ ಇದೆ.

ಅಪ್ಪು ಅವರನ್ನು ಯೋಧನ ಪಾತ್ರದಲ್ಲಿ ನೋಡಬೇಕು ಎನ್ನುವ ಕನಸು ನನಗಿತ್ತು. ಯೋಧನ ಸಮವಸ್ತ್ರ ಧರಿಸಿ ಬಂದಾಗ ಅಪ್ಪು ಅವರಿಗೆ ಆದಂತಹ ಖುಷಿ ವರ್ಣಿಸಲು ಸಾಧ್ಯವಿಲ್ಲ. ಕಾಶ್ಮೀರದಲ್ಲಿನ ಚಿತ್ರೀಕರಣವೂ ಅದ್ಭುತವಾದ ನೆನಪು. ಈ ಪಾತ್ರ ಕಥೆಯ ಭಾಗವೂ ಆಗಿದೆ. ಸೈನಿಕರಿಗೂ ಅಪ್ಪು ಅವರ ಕಡೆಯಿಂದ ಸಂದ ಗೌರವ ಇದಾಗಿದೆ.

* ಭಾವನಾತ್ಮಕ ಘಟನೆಗಳಿಗೆ ಪ್ರಿರಿಲೀಸ್‌ ಕಾರ್ಯಕ್ರಮ ಸಾಕ್ಷಿಯಾಯಿತು ಅಲ್ಲವೇ?

ನಾವಿನ್ನೂ ಆಘಾತದಲ್ಲೇ ಇದ್ದೇವೆ. ಮನಸ್ಸುಗಳಿನ್ನೂ ಈ ನೋವಿನಿಂದ ಹೊರಬಂದಿಲ್ಲ. ನಾವು ಕಳೆದುಕೊಂಡಿರುವ ನೋವು ಬಹಳ ದೊಡ್ಡದು. ಸಿನಿಮಾ ಎಂದ ಮೇಲೆ ಬಿಡುಗಡೆಪೂರ್ವ ಕಾರ್ಯಕ್ರಮ ಮಾಡಲೇಬೇಕಲ್ಲವೇ. ಅದೂ, ಜೇಮ್ಸ್‌ನಂಥ ಸಿನಿಮಾ.ದೊಡ್ಮನೆ ಕುಟುಂಬವೇ ಅಲ್ಲಿ ಹಾಜರಿತ್ತು. ಆದರೆ, ಈ ಕಾರ್ಯಕ್ರಮದ ಬಳಿಕ ನಾವು ಎಲ್ಲರನ್ನೂ ಕರೆಸಿ ನೋವು ಹಂಚಿದೆವೋ ಎನ್ನುವ ಭಾವನೆ ಹುಟ್ಟಿದೆ.

ನಾವು ಎಷ್ಟೇ ದೊಡ್ಡ ಕಾರ್ಯಕ್ರಮ ಆಯೋಜಿಸಿದರೂ ಸಂಭ್ರಮಿಸಲು ಸಾಧ್ಯವಿಲ್ಲ. ಅಭಿಮಾನಿಗಳನ್ನು ಸಂಭ್ರಮಿಸಲು ಕಾರ್ಯಕ್ರಮ ಆಯೋಜಿಸಬಹುದಷ್ಟೇ. ಅವರಲ್ಲೇ ನಾವು ಅಪ್ಪು ಅವರನ್ನು ನೋಡುತ್ತೇವೆ. ಅಪ್ಪು ಸರ್‌ ಅವರು ಆಸೆಪಟ್ಟ ದಿನದಂದೇ ಸಿನಿಮಾ ಬಿಡುಗಡೆಗೊಳಿಸುತ್ತಿದ್ದೇವೆ ಎನ್ನುವುದಷ್ಟೇ ನಮಗೆ ತೃಪ್ತಿಯ ವಿಷಯ.

*ಅಪ್ಪು ಅವರಿಲ್ಲದೇ ನೀವು ಎದುರಿಸಿದ ಸವಾಲುಗಳೇನು?

ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಾಯಕ ನಟನೇ ಇಲ್ಲದಿರುವುದು ದೊಡ್ಡ ಸವಾಲು. ಅಪ್ಪು ಅವರು ಇಲ್ಲದೇ ಇರುವ ಜಾಗವನ್ನು ಯಾರೂ ಭರ್ತಿ ಮಾಡಲು ಸಾಧ್ಯವಿಲ್ಲ. ಪುನೀತ್‌ ಅವರ ಕೊನೆಯ ಕಮರ್ಷಿಯಲ್‌ ಸಿನಿಮಾ ಇದಾಗಿದ್ದ ಕಾರಣ, ದೊಡ್ಮನೆಯ ಶಿವರಾಜ್‌ಕುಮಾರ್‌ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಅವರು ನಮಗೆ ಬೆನ್ನೆಲುಬಾಗಿ ನಿಂತರು. ನಟಿಸಿ, ಅಪ್ಪು ಅವರ ಪಾತ್ರಕ್ಕೆ ಧ್ವನಿ ನೀಡಿದ ಶಿವಣ್ಣ ಅವರ ಬೆಂಬಲವನ್ನು ಪದಗಳಲ್ಲಿ ಹೇಳಲು ನನಗೆ ಸಾಧ್ಯವಿಲ್ಲ. ಅಪ್ಪು, ಶಿವಣ್ಣ ಹಾಗೂ ರಾಘಣ್ಣನನ್ನು ಒಂದೇ ತೆರೆಯ ಮೇಲೆ ನೋಡಬೇಕು ಎನ್ನುವ ಅಭಿಮಾನಿಗಳ ಆಸೆ ಇಲ್ಲಿ ಈಡೇರಲಿದೆ.

*ಏಕಕಾಲದಲ್ಲಿ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸವಾಲುಗಳ ಬಗ್ಗೆ..

ಫೆ.5ರಿಂದ ತಿಂಗಳೊಳಗೆ ಐದು ಭಾಷೆಗಳಲ್ಲಿ ಐದು ಹಾಡು ಹಾಗೂ ಇಡೀ ಸಿನಿಮಾವನ್ನೇ ಡಬ್‌ ಮಾಡುವುದು ಸವಾಲಿನದ್ದಾಗಿತ್ತು. ಇಡೀ ತಂಡವು ದಿನಕ್ಕೆ 19–20 ಗಂಟೆಕೆಲಸ ಮಾಡಿದೆ. ಕನ್ನಡದಲ್ಲಿ ಏಕಕಾಲದಲ್ಲಿ ಐದೂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾ ಎಂದರೆ ಕೆ.ಜಿ.ಎಫ್‌ ಒಂದೇ. ಇದು ಒಂದು ಗುರುತರವಾದ ಕೆಲಸ. ಒಂದು ರೀತಿ ಐದು ಸಿನಿಮಾ ಮಾಡಿದಂತೆಯೇ ಈ ಕೆಲಸವಿರುತ್ತದೆ.

* ಹೀಗಿದ್ದ ನಮ್ಮ ‘ರಾಜಕುಮಾರ’

‘ಅಪ್ಪು’ ಯುವ ಜನತೆಗೆ ಪ್ರೇರಣೆಯಾಗಿ, ಕಷ್ಟದಲ್ಲಿರುವವರಿಗೆ ನೆರವಾಗಿದ್ದರು. ಕನಿಷ್ಠ ಎರಡು ವರ್ಷ ಅವರ ಜೊತೆ ಪ್ರತಿನಿತ್ಯ ಎಂಬಂತೆ ಸಮಯ ಕಳೆದಿದ್ದೇನೆ. ‘ಬಲಗೈ ಸಹಾಯ ಎಡಗೈಗೆ ಗೊತ್ತಾಗಬಾರದು’ ಎಂದು ಮಾತಿನಲ್ಲಿ ಹೇಳುತ್ತೇವೆ. ಈ ಮಾತಿಗೆ ಅಪ್ಪು ಅವರು ರೂಪ. ‘ರಣವಿಕ್ರಮ’ ಚಿತ್ರೀಕರಣದ ಸಮಯದಲ್ಲಿ ಸುಮಾರು ₹1 ಕೋಟಿಯಷ್ಟು ದಾನವನ್ನು ನನ್ನ ಕಣ್ಣೆದುರಿಗೇ ಮಾಡಿದ್ದಾರೆ. ವರನಟ ಡಾ.ರಾಜ್‌ಕುಮಾರ್‌ ಅವರ ಮಗ ಎನ್ನುವುದಕ್ಕಿಂತ ಹೆಚ್ಚಾಗಿ ತಮ್ಮದೇ ವ್ಯಕ್ತಿತ್ವವನ್ನು ರೂಪಿಸಿಕೊಂಡವರು ಪುನೀತ್‌.
–ಪವನ್‌ ಒಡೆಯರ್‌,ನಿರ್ದೇಶಕ

ದುರ್ದೈವ ಎಂದರೆ ನನಗೆ ಅವರಿಗೆ ನಿರ್ದೇಶನ ಮಾಡುವ ಭಾಗ್ಯ ಸಿಗಲಿಲ್ಲ. ‘ಪೃಥ್ವಿ’ ಸಿನಿಮಾದಲ್ಲಿ ನಾನು ಸಹ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೆ. ಪಿಆರ್‌ಕೆ ವೇದಿಕೆಯಡಿ ನಿರ್ಮಾಪಕರಾಗಿ ಪೂರ್ಣವಾದ ಸ್ವಾತಂತ್ರ್ಯವನ್ನು ಅವರು ನಿರ್ದೇಶಕರಿಗೆ ನೀಡುತ್ತಿದ್ದರು. ನಿರ್ದೇಶಕರೇ ಆಯ್ಕೆ ಮಾಡಿದ ತಂಡಕ್ಕೆ, ತಂತ್ರಜ್ಞಾನಕ್ಕೆ ಸಂಪೂರ್ಣ ಬೆಂಬಲವಿತ್ತು. ನಿರ್ಮಾಪಕರು ಈ ರೀತಿ ಇರಬೇಕು. ಅವರ ಮಾನವೀಯತೆ, ಸಿನಿಮಾ ಮೇಲಿದ್ದ ಪ್ರೀತಿ, ಹೊಸ ವಿಷಯವನ್ನು ಕಲಿಯುವ ಕುತೂಹಲವನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಈ ಎತ್ತರಕ್ಕೆ ಬೆಳೆದಾಗ ಇಂಥ ಗುಣ ಉಳಿಯುವುದು ಅಪರೂಪ.
–ಹೇಮಂತ್‌ ಎಂ.ರಾವ್,ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT