ಸೋಮವಾರ, ಡಿಸೆಂಬರ್ 5, 2022
22 °C

ಶೋಷಿತರ ಕಥೆ ಹೇಳಲಿದೆ ‘ಪಾಲಾರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯುವ ನಿರ್ದೇಶಕ ಜೀವಾ ನವೀನ್ ಅವರು ಶೋಷಿತರ ಮೇಲಿನ ಕಥೆ ಆಧರಿಸಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ದಶಕದ ಹಿಂದೆ ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ನಡೆದ ಹೋರಾಟದ ಕಥನವೇ ‘ಪಾಲಾರ್‌’. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಜೀವಾ ನವೀನ್, ‘ಕೋಲಾರ ಜಿಲ್ಲೆ ಮತ್ತು ದೇವನಹಳ್ಳಿ ಭಾಗಗಳಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು ಅದೇ ಭಾಗದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಇದೊಂದು ಮಹಿಳಾ ಪ್ರಧಾನ, ಸಂಘರ್ಷದ ಕಥೆ. ತಮಗೂ ಬದುಕಲು ಹಕ್ಕಿದೆ ಎಂದು ತೋರಿಸಿದ ದಲಿತರ ಹೋರಾಟದ ಕಥನ’ ಎಂದು ಹೇಳಿದರು.

ತೆಲುಗಿನ ‘ಸಿನಿಮಾ ಬಂಡಿ’ ಖ್ಯಾತಿಯ ನಟಿ, ಗಾಯಕಿ ವೈ.ಜಿ.ಉಮಾ ಕೋಲಾರ ಅವರು ಮುಖ್ಯಪಾತ್ರದಲ್ಲಿ ನಟಿಸಿರುವ ‘ಪಾಲಾರ್‌’ ತನ್ನ ವಿಶಿಷ್ಟ ಹೆಸರಿನ ಮೂಲಕ ಗಮನ ಸೆಳೆದಿದೆ. ನೀನಾಸಂನಲ್ಲಿ ತರಬೇತಿ ಪಡೆದ ಉಮಾ ಜೊತೆ ನಾಯಕನಾಗಿ ತಿಲಕ್ ರಾಜ್ ಈ ಚಿತ್ರದ ನಾಯಕ. ಸುಮಾರು ನೂರಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಆಸಿಫ್ ರೆಹಾನ್, ಅವರ ಛಾಯಾಗ್ರಹಣ, ವಲಿ ಕುಲಾಯಿಸ್ ಸಂಕಲನವಿದೆ. ರಾಜಮೌಳಿ ತಂಡದ ಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ 4 ಹಾಡುಗಳನ್ನು ರಚಿಸಿದ್ದಾರೆ. ಸುಬ್ರಹ್ಮಣ್ಯ ಆಚಾರ್ಯ ಅವರ ಸಂಗೀತವಿದೆ. ಶ್ವೇತಾ ದೇವನಹಳ್ಳಿ, ಸುಪ್ರೀತ್ ಫಲ್ಗುಣ, ಸುಬ್ರಹ್ಮಣ್ಯ ಆಚಾರ್ಯ ಜೊತೆಗೆ ಉಮಾ ವೈ.ಜಿ. ಕೋಲಾರ ಹಾಡುಗಳಿಗೆ ದನಿಯಾಗಿದ್ದಾರೆ.

ಪಾಲಾರ್ ಟೈಟಲ್‌ನ ವಿಶೇಷತೆಯನ್ನು ವಿವರಿಸಿದ ನಿರ್ದೇಶಕರು, ‘ನಂದಿ ಬೆಟ್ಟದಲ್ಲಿ ಹುಟ್ಟಿದ ಪಾಲಾರ್‌ ನದಿ ಕೋಲಾರದ ಬೇತಮಂಗಲವರೆಗೂ ಭೂಮಿಯ ಒಳಗಡೆಯೇ ಹರಿಯುತ್ತದೆ. ಆ ನಂತರ ಆಂಧ್ರಪ್ರದೇಶ, ತಮಿಳು ನಾಡಿನಾದ್ಯಂತ ಹರಿದು ಸಮುದ್ರ ಸೇರುತ್ತದೆ. ಈ ನದಿ ಭೂಮಿಯ ಒಳಗಡೆ ಇದ್ದಾಗ ಬಿಸಿಯಾಗಿರುತ್ತದೆ. ಇದೇ ರೀತಿಯ ಕುದಿತ ದಲಿತರ ಆಂತರ್ಯದಲ್ಲಿ ಅಡಗಿದೆ. ಸಂದರ್ಭ ಸಿಕ್ಕಾಗ ಅದು ಹೊರಬಂದು, ಆಕ್ರೋಶ ಸ್ಫೋಟಿಸಿದಾಗ ಏನಾಗುತ್ತದೆ ಎಂಬುದೇ ‘ಪಾಲಾರ್‌’ ಚಿತ್ರದ ಕಥೆ. ಪಾಲಾರ್ ನದಿಗೂ ನಮ್ಮ ಕಥೆಗೂ ಸಂಬಂಧವಿಲ್ಲ. ಒಂದು ರೂಪಕವಾಗಿ ಅದನ್ನು ಬಳಸಿದ್ದೇವೆ’ ಎಂದು ವಿವರಿಸಿದರು.

ಬಾಗೇಪಲ್ಲಿ, ಕೋಲಾರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆದಿದೆ.

ಸೌನವಿ ಕ್ರಿಯೇಷನ್ ಮತ್ತು ಹೆಲೋ ಗ್ಲೋಬಲ್ ಬ್ಯಾನರ್ ಅಡಿಯಲ್ಲಿ ಕೆ.ಆರ್. ಸೌಜನ್ಯ, ಸೌಂದರ್ಯ ಕೆ.ಆರ್ ಮತ್ತು ನವೀನ್ ಕುಮಾರ್ ಬಾಬು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿ, ನವೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು