ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೋಕರ್’ ನಟ ಜೋಕ್ವಿನ್ ಸಂಭಾವನೆ ₹ 367 ಕೋಟಿ!

ಮುಂದಿನ ನಾಲ್ಕು ವರ್ಷಗಳಲ್ಲಿ ‘ಜೋಕರ್‌’ನ ಎರಡು ಸರಣಿ ನಿರ್ಮಾಣಕ್ಕೆ ನಿರ್ದೇಶಕ ಟಾಡ್ ಫಿಲಿಪ್ಸ್ ನಿರ್ಧಾರ
Last Updated 18 ಸೆಪ್ಟೆಂಬರ್ 2020, 10:53 IST
ಅಕ್ಷರ ಗಾತ್ರ

ಡಿಸಿ ಕಾಮಿಕ್ಸ್‌ನ ಬ್ಯಾಟ್‌ಮ್ಯಾನ್ ಕಥೆಯಲ್ಲಿ ಬರುವ ವಿಲನ್ ಪಾತ್ರದ ಹೆಸರೇ ‘ಜೋಕರ್’. ಈ ಕಥೆ ಆಧರಿಸಿ ಈಗಾಗಲೇ ಹಾಲಿವುಡ್‌ನಲ್ಲಿ ಸರಣಿ ಸಿನಿಮಾಗಳು ನಿರ್ಮಾಣವಾಗಿರುವುದು ಎಲ್ಲರಿಗೂ ಗೊತ್ತಿದೆ. ಕ್ರಿಸ್ಟೋಫರ್ ನೋಲನ್ ನಿರ್ದೇಶಿಸಿದ ‘ದಿ ಡಾರ್ಕ್ ನೈಟ್’ ಬ್ಯಾಟ್‌ಮ್ಯಾನ್‌ ಸರಣಿಯ ದ್ವಿತೀಯ ಚಿತ್ರ. ಇದು ತೆರೆಕಂಡಿದ್ದು 2008ರಲ್ಲಿ. ಬ್ಯಾಟ್‌ಮ್ಯಾನ್ ಸರಣಿಯ ಚಿತ್ರದಲ್ಲಿ ‘ಜೋಕರ್’ ಪಾತ್ರಕ್ಕೆ ಹೊಸದೊಂದು ಆಯಾಮ ನೀಡಿದ ಹೆಗ್ಗಳಿಕೆ ನಟ ಹೀತ್ ಲೇಜರ್‌ಗೆ ಸಲ್ಲುತ್ತದೆ.

ಚಿತ್ರವಿಚಿತ್ರ ವೇಷ ತೊಟ್ಟು, ಗಹಗಹಿಸಿ ನಗುತ್ತಲೇ ಕ್ರೌರ್ಯ ಪ್ರದರ್ಶಿಸುವ ಜೋಕರ್‌ ಪಾತ್ರಕ್ಕೆ ಲೇಜರ್‌ ಜೀವ ತುಂಬಿದ್ದ. ಆದರೆ, ಆಸ್ಟ್ರೇಲಿಯಾ ಮೂಲದ ಈ ನಟ ಚಿತ್ರ ಬಿಡುಗಡೆಯಾಗುವುದಕ್ಕೂ ಮೊದಲೇ ಬದುಕಿಗೆ ವಿದಾಯ ಹೇಳಿದ್ದು ವಿಪರ್ಯಾಸ.

ಕಳೆದ ವರ್ಷ ತೆರೆಕಂಡ ಟಾಡ್ ಫಿಲಿಪ್ಸ್ ಆ್ಯಕ್ಷನ್‌ ಕಟ್‌ ಹೇಳಿದ ‘ಜೋಕರ್’ ಚಿತ್ರ ವಿಶ್ವದಾದ್ಯಂತ ಸಿನಿಪ್ರಿಯರನ್ನು ಹೀತ್‌ ಲೇಜರ್‌ನ ಗತಕಾಲಕ್ಕೆ ಕೊಂಡೊಯ್ದಿತ್ತು. ಹಾಲಿವುಡ್‌ನ ಈ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಹೊಸ ದಾಖಲೆ ಬರೆದಿತ್ತು. ಅಮೆರಿಕದ ನಟ ಜೋಕ್ವಿನ್‌ ಫೀನಿಕ್ಸ್‌ನ ‘ಜೋಕರ್‌’ ಆಟಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿತ್ತು. ಈಗ ‘ಜೋಕರ್‌’ ಎಂದಾಕ್ಷಣ ಜೋಕ್ವಿನ್‌ನ ವಿಷಾದವೇ ವಿನೋದವಾಗಿ ಗಹಗಹಿಸುವ ಆ ನಗು ಕಣ್ಮುಂದೆ ಬರುತ್ತದೆ.

‘ಜೋಕರ್‌’ ಸಿನಿಮಾಕ್ಕಾಗಿಯೇ ನಿರ್ದೇಶಕ ಟಾಡ್‌ ಫಿಲಿಪ್ಸ್‌ 1981ರ ನ್ಯೂಯಾರ್ಕ್‌ ನಗರವನ್ನು ಮರುಸೃಷ್ಟಿ ಮಾಡಿ ಚಿತ್ರಕಥೆಗೆ ಮುಖಾಮುಖಿಯಾಗಿಸಿದ್ದ. ಒಟ್ಟು 11 ವಿಭಾಗಗಳಲ್ಲಿ ಈ ಸಿನಿಮಾ ಆಸ್ಕರ್‌ಗೆ ನಾಮಿನೇಟ್‌ ಆಗಿತ್ತು. ‘ಅತ್ಯುತ್ತಮ ನಟ’ ಜೊತೆಗೆ ಅತ್ಯುತ್ತಮ ಒರಿಜಿನಲ್‌ ಸಂಗೀತಕ್ಕೆ ಹಿಲ್ಡರ್‌ ಗೋನ್‌ಡೊಟಿರ್‌ಗೂ ಆಸ್ಕರ್‌ ಲಭಿಸಿತ್ತು.

ಈಗ ‘ಜೋಕರ್‌’ ಚಿತ್ರದ ಎರಡು ಸರಣಿ ಸಿನಿಮಾಗಳು ನಿರ್ಮಾಣವಾಗಲಿವೆ ಎಂಬ ಸುದ್ದಿ ಹಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ. ಈ ಸರಣಿಯಲ್ಲಿ ನಟಿಸಲಿರುವ ಜೋಕ್ವಿನ್‌ ಫೀನಿಕ್ಸ್‌ಗೆ ₹ 367 ಕೋಟಿ ಸಂಭಾವನೆ ಸಿಗಲಿದೆಯಂತೆ. ಇದಕ್ಕಾಗಿ ಆತ ನಿರ್ದೇಶಕ ಟಾಡ್‌ ಫಿಲಿಫ್ಸ್‌ ಮತ್ತು ನಿರ್ಮಾಪಕ ಬ್ರಾಡ್ಲೆ ಕೂಪರ್‌ ಜೊತೆಗೆ ಮಾತುಕತೆ ನಡೆಸುತ್ತಿದ್ದಾನೆ.

ಮುಂದಿನ ನಾಲ್ಕು ವರ್ಷಗಳಲ್ಲಿ ‘ಜೋಕರ್‌’ನ ಎರಡು ಸರಣಿ ಸಿನಿಮಾಗಳು ನಿರ್ಮಾಣವಾಗಲಿದ್ದು, ಈಗಾಗಲೇ ಸ್ಕ್ರಿಪ್ಟ್‌ ಕೆಲಸವೂ ಶುರುವಾಗಿದೆ. ಜೋಕ್ವಿನ್‌ ಫೀನಿಕ್ಸ್‌ ಕೂಡ ಈ ಒಪ್ಪಂದಕ್ಕೆ ಸಹಿ ಹಾಕಲು ಉತ್ಸುಕನಾಗಿದ್ದಾನಂತೆ. ಆತನ ವೃತ್ತಿಬದುಕಿನಲ್ಲಿಯೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿದೆ. ನವೆಂಬರ್‌ನಲ್ಲಿ ಈ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT