ಭಾನುವಾರ, ಜನವರಿ 19, 2020
24 °C

ಖದರ್‌ ಲುಕ್‌ನಲ್ಲಿ ಕಿಚ್ಚ ಸುದೀಪನ ಕೋಟಿಗೊಬ್ಬ3 ಮೋಷನ್‌ ಪೋಸ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುದೀಪ್‌ ನಟನೆಯ ಬಹು ನಿರೀಕ್ಷಿತ ಚಿತ್ರ ‘ಕೋಟಿಗೊಬ್ಬ3’ರ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಸಂಕ್ರಾಂತಿ ಉಡುಗೊರೆಯನ್ನು ಒಂದು ದಿನ ಮುಂಚಿತವಾಗಿಯೇ ಕಿಚ್ಚ ತನ್ನ ಅಭಿಮಾನಿಗಳು ಮತ್ತು ಸಿನಿರಸಿಕರಿಗೆ ನೀಡಿದ್ದಾರೆ.

ತಲೆಗೆ ಕೌಬಾಯ್‌ ಟೋಪಿ, ಕಣ್ಣಿಗೆ ಗಾಗಲ್‌, ಒಂದು ಕೈಯಲ್ಲಿ ಇಸ್ಪೀಟ್‌ ಎಲೆ ತಿರುಗಿಸುತ್ತಾ, ಇನ್ನೊಂದು ಕೈಯಲ್ಲಿ ಸಿಗಾರ್‌ ಸೇದುತ್ತಾ ಎಂಟ್ರಿ ಕೊಡುವ ಕಿಚ್ಚನ ಸ್ಟೈಲ್‌ ಅವರ ಅಭಿಮಾನಿಗಳಿಗೆ ಸಖತ್‌ ಕಿಕ್ಕೇರಿಸುವಂತಿದೆ. ಅರ್ಜುನ್‌ ಜನ್ಯ ಸಂಗೀತ ಈ ಚಿತ್ರಕ್ಕಿದ್ದು, ಮೋಷನ್‌ ಪೋಸ್ಟರ್‌ ಚಿತ್ರರಸಿಕರ ಗಮನ ಸೆಳೆಯುವಂತಿದೆ. 

‘ಕೋಟಿಗೊಬ್ಬ 2’ ಚಿತ್ರ ಮೂರು ವರ್ಷದ ಹಿಂದೆ ತೆರೆ ಕಂಡಿತ್ತು. ಅದರ ಮುಂದುವರಿದ ಭಾಗ ‘ಕೋಟಿಗೊಬ್ಬ 3’ ಚಿತ್ರಕ್ಕೆ ಶಿವ ಕಾರ್ತಿಕ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಎಂ.ಬಿ. ಬಾಬು ಬಂಡವಾಳ ಹೂಡಿದ್ದಾರೆ.

ಸೈರಾ ನರಸಿಂಹ ರೆಡ್ಡಿ, ಪೈಲ್ವಾನ, ದಬಾಂಗ್‌ 3 ಹಿಟ್‌ ಸಿನಿಮಾಗಳಿಂದ 2019ರ ಸಾಲಿನಲ್ಲಿ ಅಭಿಮಾನಿಗಳನ್ನು ಖುಷಿಪಡಿಸಿರುವ ಸುದೀಪ್‌, ‘ಕೋಟಿಗೊಬ್ಬ3’ರಲ್ಲೂ ಸಿನಿರಸಿಕರಿಗೆ ಭರ್ಜರಿ ಮನರಂಜನೆ ನೀಡುವ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ.

ಚಿತ್ರತಂಡ ಮಾತಿನ ಭಾಗದ ಶೂಟಿಂಗ್‌ ಪೂರ್ಣಗೊಳಿಸಿದೆ. ಸರ್ಬಿಯಾ, ಥೈಲ್ಯಾಂಡ್‌, ಮಲೇಷ್ಯಾದ ಸುಂದರ ತಾಣಗಳಲ್ಲಿ ಇದರ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಚಿತ್ರದ ಇಂಟ್ರೊಡಕ್ಷನ್‌ ಹಾಡಿನ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈ ಹಾಡಿನಲ್ಲಿ ಆಶಿಕಾ ರಂಗನಾಥ್‌ ಕಿಚ್ಚನ ಜತೆ ನರ್ತಿಸುವ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ.  

ಕೇರಳದ ಬೆಡಗಿ ಮಡೋನ್ನಾ ಸೆಬಾಸ್ಟಿಯನ್‌ ಈ ಚಿತ್ರದ ನಾಯಕಿ. ಬಾಲಿವುಡ್‌ನ ಸುಧಾಂಶು ಪಾಂಡೆ, ಅಫ್ತಾಪ್‌ ಶಿವದಾಸನಿ ಮತ್ತು ಶ್ರದ್ಧಾ ದಾಸ್‌ ನಟಿಸಿರುವುದು ಈ ಚಿತ್ರದ ವಿಶೇಷ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು