ನಟ ಶಾರುಖ್ ಖಾನ್ ಮತ್ತು ನಟಿ ಕಾಜಲ್ ದೇವಗನ್ ಬಾಲಿವುಡ್ ಚಿತ್ರರಂಗದ ಬಹುಬೇಡಿಕೆಯ ಜೋಡಿಯಾಗಿದ್ದಾರೆ. ಇವರಿಬ್ಬರು ಜೊತೆಯಲ್ಲಿ ನಟಿಸಿದ್ದ ಏಳು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿವೆ. 'ಡಿಡಿಎಲ್‌ಜೆ' ಚಿತ್ರ ಎರಡು ದಶಕಗಳಿಂದಲೂ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ರೀಲ್ ಲೈಫ್‌ನಲ್ಲಿ ಮೋಡಿ ಮಾಡಿರುವ ಈ ಜೋಡಿ ರಿಯಲ್ ಲೈಫ್‌ನಲ್ಲಿ ಉತ್ತಮ ಸ್ನೇಹಿತರಾಗಿದ್ದಾರೆ. ಶಾರುಖ್ ಮತ್ತು ಕಾಜಲ್ ಗೆಳತನಕ್ಕೆ ಇಡೀ ಬಾಲಿವುಡ್ ಅಂಗಳ ತಲೆಬಾಗಿದೆ. ಆದರೆ ಇದೀಗ ಶಾರುಖ್ ಖಾನ್ ಅಭಿಮಾನಿಗಳು, ಕಾಜಲ್ ಅವರ ಹೇಳಿಕೆಯಿಂದ ಆಕ್ರೋಶಗೊಂಡಿದ್ದಾರೆ. ನಿಜವಾಗಿಯೂ ನೀವಿಬ್ಬರು ಸ್ನೇಹಿತರಾ? ಎಂದು ಪ್ರಶ್ನಿಸಿದ್ದಾರೆ.
'ಲಸ್ಟ್ ಸ್ಟೋರೀಸ್–2' ಮತ್ತು 'ದ ಟ್ರೈಲ್' ಚಿತ್ರಗಳ ಪ್ರಚಾರದಲ್ಲಿ ಬ್ಯುಸಿಯಾಗಿರುವ ಕಾಜಲ್ ಇತ್ತೀಚೆಗೆ ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಸಂದರ್ಶಕರು ಶಾರುಖ್ ಮತ್ತು ಕಾಜಲ್ ನಡುವಿನ ಸ್ನೇಹದ ಬಗ್ಗೆ ಕೆಲವು ಪ್ರಶ್ನೆ ಕೇಳಿದ್ದಾರೆ.
ಶಾರುಖ್ ಖಾನ್ ಅವರಿಗೆ ಏನು ಕೇಳ ಬಯಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಕಾಜಲ್, 'ನಿಜವಾಗಲೂ ಪಠಾಣ್ ಎಷ್ಟು ಗಳಿಸಿದೆ?' ಎಂದು ಕೇಳುತ್ತೇನೆ ಎಂದು ನಗೆ ಬೀರಿದ್ದಾರೆ.
ಕಾಜಲ್ ಅವರ ಈ ಹೇಳಿಕೆ ಶಾರುಖ್ ಅಭಿಮಾನಿಗಳಿಗೆ ಸಿಟ್ಟಿಗೆ ಕಾರಣವಾಗಿದೆ. ಪಠಾಣ್ ಗಳಿಕೆ ಬಗ್ಗೆ ಕಾಜಲ್‌ಗೆ ಏನು ಅನುಮಾನ? ನಿಜವಾಗಲೂ ಇವರಿಬ್ಬರೂ ಸ್ನೇಹಿತರಾ? ಎಂದು ಪ್ರಶ್ನಿಸಿದ್ದಾರೆ. 'ಈ ಪ್ರಶ್ನೆಯನ್ನು ಶಾರುಖ್ ಖಾನ್‌ಗೆ ಕೇಳಬೇಡಿ ಬದಲಾಗಿ ನಿಮ್ಮ ಭಾವ ಆದಿತ್ಯ ಛೋಪ್ರಾಗೆ ಕೇಳಿ' ಎಂದು ಕೆಲ ಅಭಿಮಾನಿಗಳು ಕಾಜಲ್ ವಿರುದ್ಧ ಹರಿಹಾಯ್ದಿದ್ದಾರೆ.
ಪಠಾಣ್ ₹665 ಕೋಟಿ ಗಳಿಸಿದೆ ಎಂದು ಮೂಲವೊಂದು ತಿಳಿಸಿದೆ.
ಇತ್ತೀಚೆಗೆ 'ಅವಿದ್ಯಾವಂತ ರಾಜಕಾರಣಿಗಳು' ಎಂಬ ಹೇಳಿಕೆ ನೀಡಿ ಕಾಜಲ್ ಸುದ್ದಿಯಾಗಿದ್ದರು.