ಗುರುವಾರ , ಡಿಸೆಂಬರ್ 3, 2020
23 °C

ಚಿರು ಪುತ್ರನಿಗೆ ಸಿದ್ಧವಾಯ್ತು ಕಲಘಟಗಿ ತೊಟ್ಟಿಲು

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಸ್ಯಾಂಡಲ್‌ವುಡ್‌ ಕಲಾವಿದರು, ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಆಕರ್ಷಕ ಕಟ್ಟಿಗೆಯ ತೊಟ್ಟಿಲುಗಳನ್ನು ಮಾಡಿಕೊಟ್ಟು ಸುದ್ದಿ ಮಾಡಿದ್ದ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಈಗ ಚಿರು ಸರ್ಜಾ ಪುತ್ರನಿಗಾಗಿ ತೊಟ್ಟಿಲು ತಯಾರಾಗಿದೆ.

ನಟ ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ಹಾಗೂ ನಟಿ ಮೇಘನಾರಾಜ್‌ ಅಕ್ಟೋಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವಿಗಾಗಿ ಕಲಘಟಗಿಯ ಕಲಾವಿದರು ಚೆಂದನೆಯ ತೊಟ್ಟಿಲು ತಯಾರು ಮಾಡಿದ್ದಾರೆ. ಇವರು ತಯಾರಿಸುವ ತೊಟ್ಟಿಲುಗಳು ರಾಜಕುಮಾರ್‌, ಯಶ್‌ ಕುಟುಂಬ, ನಲ್ಲೂರು ಅರಮನೆ, ಗೋವಾ, ಕೇರಳ, ತಮಿಳುನಾಡು ಮತ್ತು ಅಮೆರಿಕ.. ಹೀಗೆ ದೇಶ– ವಿದೇಶಗಳಲ್ಲಿ ಸಾಕಷ್ಟು ಸುದ್ದಿ ಮಾಡಿವೆ.

ಎರಡು– ಮೂರು ತಲೆಮಾರಿನಿಂದ ತೊಟ್ಟಿಲು ಮಾಡುವ ಕಾಯಕ ಮಾಡಿಕೊಂಡು ಬಂದಿರುವ ಕುಟುಂಬದ ಮಾರುತಿ ಬಡಿಗೇರ, ತಿಪ್ಪಣ್ಣ ಬಡಿಗೇರ, ಹರೀಶ, ಶ್ರೀಶೈಲ ಬಡಿಗೇರ ಅವರು ಸರ್ಜಾ ಪುತ್ರನಿಗಾಗಿ ಒಂದೂವರೆ ತಿಂಗಳಲ್ಲಿ ತೊಟ್ಟಿಲು ತಯಾರಿಸಿದ್ದಾರೆ. ಹಾವೇರಿ ಜಿಲ್ಲೆ ಗುತ್ತಲದ ಸ್ತ್ರೀ ಶಕ್ತಿ ಸೇವಾ ಸಂಸ್ಥೆ ಅಧ್ಯಕ್ಷೆ ವನಿತಾ ಸ್ವಯಂಪ್ರೇರಿತರಾಗಿ ಸ್ವಂತ ಹಣದಿಂದ ತೊಟ್ಟಿಲು ಮಾಡಿಸಿದ್ದು, ಸರ್ಜಾ ಕುಟುಂಬಕ್ಕೆ ಉಡುಗೊರೆಯಾಗಿ ನೀಡಲಿದ್ದಾರೆ.

ತೊಟ್ಟಿಲಿನ ಸುತ್ತಲೂ ಕೃಷ್ಣನ ಬಾಲ್ಯದ ಘಟನೆಗಳು, ತುಂಟಾಟಗಳು, ಬೆಣ್ಣೆಯೊಂದಿಗೆ ಕೃಷ್ಣ ಹೀಗೆ ಅನೇಕ ಕಥೆಗಳನ್ನು ಹೇಳಲು ಪ್ರೇರೇಪಿಸುವ ಚಿತ್ರಗಳನ್ನು ಸುಂದರವಾಗಿ ಬಿಡಿಸಲಾಗಿದೆ. ತೊಟ್ಟಿಲಿನ ಸ್ಟ್ಯಾಂಡ್‌ಗೆ ಚಿಕ್ಕ ಗಂಟೆಗಳನ್ನು ಕಟ್ಟಿದ್ದು, ಕಣ್ಮನ ಸೆಳೆಯುವ ಬಣ್ಣಗಳಿಂದ ಅಲಂಕರಿಸಲಾಗಿದೆ.

‘ತೇಗಿನ ಮರದಿಂದ ಮಾಡಿರುವ ತೊಟ್ಟಿಲಿಗೆ ಜೇಡಿಮಣ್ಣು, ಅಂಟು, ಅರಗು ಬಳಸಲಾಗಿದೆ. ಸಾಂಪ್ರದಾಯಿಕತೆಗೆ ಒತ್ತು ಕೊಡಲಾಗಿದೆ. ಅತ್ಯುತ್ತಮ ಗುಣಮಟ್ಟದ ಕಟ್ಟಿಗೆಗಳನ್ನು ಬಳಸಲಾಗಿದ್ದು, ಕನಿಷ್ಠ 100 ವರ್ಷ ಬಾಳಿಕೆ ಬರುತ್ತದೆ. ಶ್ರೇಷ್ಠ ಗುಣಮಟ್ಟ ಮತ್ತು ಕಡಿಮೆ ತೂಕದ ತೊಟ್ಟಿಲು ನಿರ್ಮಿಸಿದ್ದೇವೆ’ ಎಂದು ಮಾರುತಿ ಬಡಿಗೇರ ಹೇಳುತ್ತಾರೆ.

‘ಹಿಂದೆ ಜನಾರ್ದನ ರೆಡ್ಡಿ ಮೊಮ್ಮಗಳಿಗಾಗಿ ಕಲಘಟಗಿಯಿಂದ ತೊಟ್ಟಿಲು ಖರೀದಿಸಿದ್ದೆವು. ಅದನ್ನು ಅವರು ತುಂಬಾ ಮೆಚ್ಚಿಕೊಂಡಿದ್ದರಿಂದ ಚಿರಂಜೀವಿ, ಮೇಘನಾರಾಜ್‌ ಪುತ್ರನಿಗೆ ತೊಟ್ಟಿಲು ಕೊಡಬೇಕೆಂದು ನಿರ್ಧರಿಸಿದ್ದೆ. ಮೇಘನಾರಾಜ್ ಗರ್ಭಿಣಿಯಾಗಿದ್ದಾಗ ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಹಾವೇರಿಯಿಂದ ಕೊಬ್ಬರಿ ಖಾರ ತೆಗೆದುಕೊಂಡು ಹೋಗಿ ಕುಬಸದ ಪದ್ಧತಿ ಮಾಡಿದ್ದೆ. ಅವರನ್ನು ಮಾನಸಿಕವಾಗಿ ಗಟ್ಟಿ ಮಾಡಬೇಕು ಎನ್ನುವ ಉದ್ದೇಶದಿಂದ ತೊಟ್ಟಿಲು ನೀಡುವುದಾಗಿ ಮೊದಲೇ ಹೇಳಿದ್ದೆ. ನ. 11ರಂದು ಸರ್ಜಾ ಕುಟುಂಬಕ್ಕೆ ತೊಟ್ಟಿಲು ಹಸ್ತಾಂತರಿಸಲಾಗುತ್ತದೆ’ ಎಂದು ವನಿತಾ ಗುತ್ತಲ ವಿವರಿಸುತ್ತಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು