ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಬರೀಷ್ 72ನೇ ಜನ್ಮದಿನಾಚರಣೆ: ‘ಅಂಬಿ’ಯನ್ನು ಸ್ಮರಿಸಿದ ಸುಮಲತಾ, ಶಿವಣ್ಣ –ದರ್ಶನ್

Published 29 ಮೇ 2024, 13:49 IST
Last Updated 29 ಮೇ 2024, 13:49 IST
ಅಕ್ಷರ ಗಾತ್ರ

ಬೆಂಗಳೂರು: ಇಂದು ಜಲೀಲ, ಕನ್ವರ್‌, ಕರ್ಣ ಹೀಗೆ ಹಲವು ಪಾತ್ರಗಳಿಗೆ ಜೀವ ತುಂಬಿದ ‘ಮಂಡ್ಯದ ಗಂಡು’ ದಿವಂಗತ ನಟ ಅಂಬರೀಷ್‌ ಅವರ 72ನೇ ಜನ್ಮದಿನ. ಈ ಪ್ರಯುಕ್ತ ಅಂಬರೀಷ್‌ ಅವರ ಪತ್ನಿ, ಸಂಸದೆ ಸುಮಲತಾ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಟ ಶಿವರಾಜ್‌ಕುಮಾರ್, ದರ್ಶನ್‌ ಸೇರಿದಂತೆ ಹತ್ತಾರು ಕಲಾವಿದರು ಹಾಗೂ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ನೆನಪಿಸಿಕೊಂಡಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ಅಂಬರೀಷ್‌ ಅವರ ಸಮಾಧಿಗೆ ಸುಮಲತಾ ಹಾಗೂ ಅಂಬರೀಷ್‌ ಅವರ ಪುತ್ರ, ನಟ ಅಭಿಷೇಕ್‌ ಇಂದು ಪೂಜೆ ಸಲ್ಲಿಸಿದ್ದಾರೆ.

‘ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣವನ್ನು ನೆನೆಸಿಕೊಂಡಾಗ ಮುಗುಳು ನಗೆ ಮೂಡುತ್ತದೆ. ನಿಮ್ಮ ಅಗಲಿಕೆಯ ಬಗ್ಗೆ ನೆನೆದಾಗಲೆಲ್ಲ ನೋವುಂಟಾಗುತ್ತದೆ. ಆದರೆ, ನೀವು ಎಂದೆಂದಿಗೂ ನಮ್ಮೊಂದಿಗೆ ಇದ್ದೀರಿ, ಅನುಕ್ಷಣವೂ ಅನುದಿನವೂ ನೀವೇ ನಮ್ಮ ಜೀವನ... ಅಂಬಿ ಅಮರ... ಸ್ವರ್ಗದಲ್ಲೂ ಸುಖವಾಗಿರಿ.. ಜನ್ಮದಿನದಂದು ಪ್ರೀತಿಯ ಶುಭ ಹಾರೈಕೆಗಳು’ ಎಂದು ಸುಮಲತಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಕನ್ನಡ ಚಿತ್ರರಂಗದ ಮೇರು ನಟ, ಕಲಿಯುಗದ ಕರ್ಣ, ಅಭಿಮಾನಿಗಳ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಷ್‌ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಸಿನಿಮಾರಂಗಕ್ಕೆ ಅಂಬಿ ಅವರು ನೀಡಿದ ಅನನ್ಯ ಕೊಡುಗೆಗಳು ಅವಿಸ್ಮರಣೀಯ’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಅಂಬಿ ಮಾಮ ನಿಮ್ಮ ನೆನಪು ಸದಾ ಅಮರ. ಜನ್ಮದಿನದ ಸವಿನೆನಪು...’ ಎಂದು ನಟ ಶಿವರಾಜ್‌ಕುಮಾರ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಇಂದಿಗೂ ಅವರ ಖಡಕ್ ಜೀವನ ಶೈಲಿ, ನೇರ ನುಡಿ ಹಾಗೂ ಕಾಪಾಡಿಕೊಂಡು ಬಂದ ಪ್ರೀತಿ-ಆದರ್ಶಗಳು ಎಲ್ಲರಿಗೂ ಸ್ಫೂರ್ತಿಯಾಗಿದೆ. ದೈಹಿಕವಾಗಿ ನಮ್ಮನು ಅಗಲಿದರೂ ಮಾನಸಿಕವಾಗಿ ನಮ್ಮನ್ನು ಕಾಯುತ್ತ ಆಶೀರ್ವದಿಸುತ್ತಾ ನಮ್ಮೊಂದಿಗೆ ಇದ್ದಾರೆ. One and only #HappyBirthdayRebelStar ❤️ We all miss him’ ಎಂದು ನಟ ದರ್ಶನ್‌ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಕನ್ನಡ ಚಿತ್ರರಂಗದ ಅಭಿಜಾತ ಕಲಾವಿದ, ಅಭಿಮಾನಿಗಳ ಪ್ರೀತಿಯ ರೆಬೆಲ್ ಸ್ಟಾರ್‌, ಮಂಡ್ಯದ ಗಂಡು, ಆತ್ಮೀಯ ಗೆಳೆಯ ಡಾ. ಅಂಬರೀಷ್‌ ಅವರ ಜನ್ಮದಿನದಂದು ಗೌರವ ಪೂರ್ವಕವಾಗಿ ಸ್ಮರಿಸುತ್ತೇನೆ. ನಾಡು, ನುಡಿ ಹಾಗೂ ಸಿನಿಮಾರಂಗಕ್ಕೆ ಅಂಬರೀಷ್ ಅವರು ನೀಡಿದ ಕೊಡುಗೆಗಳು ಅನನ್ಯ’ ಎಂದು ಸಚಿವ ಎಂ.ಬಿ.ಪಾಟೀಲ ಪೋಸ್ಟ್ ಹಂಚಿಕೊಂಡಿದ್ದಾರೆ.

‘ಚಂದನವನದ ಜನಪ್ರಿಯ ನಾಯಕ, ಕನ್ನಡಿಗರ ಜನಮಾನಸದಲ್ಲಿ ಸದಾ ನೆಲೆಸಿರುವ ಮಂಡ್ಯದ ಗಂಡು ದಿವಂಗತ ಅಂಬರೀಷ್‌ ಅವರ ಜನ್ಮದಿನದಂದು ಅನಂತ ನಮನಗಳು. ಚಿತ್ರರಂಗ ಮತ್ತು ರಾಜಕೀಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಅಂಬರೀಷ್‌ ಅವರು ನಾಡು ನುಡಿಗೆ ಸಲ್ಲಿಸಿರುವ ಸೇವೆ ಅವಿಸ್ಮರಣೀಯ’ ಎಂದು ಸಚಿವ ದಿನೇಶ್ ಗುಂಡೂರಾವ್ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT