ಶನಿವಾರ, ಫೆಬ್ರವರಿ 4, 2023
28 °C

ಸಂದರ್ಶನ | ನನ್ನ ಕನ್ನಡ, ನನ್ನ ಮಣ್ಣು ಮರೆಯುವುದಿಲ್ಲ: ಧನಂಜಯ್‌

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

‘ಟಗರು’ ಸಿನಿಮಾ ಬಿಡುಗಡೆಯಾಗಿ ಮೂರು ವರ್ಷ ಕಳೆದರೂ ‘ಡಾಲಿ’ ಪಾತ್ರದ ಹವಾ ಇನ್ನೂ ಕಡಿಮೆ ಆಗಿಲ್ಲ. ಹೀಗೆ ‘ಡಾಲಿ ಧನಂಜಯ್‌’ ಆದ ಧನಂಜಯ್‌, ‘ಪುಷ್ಪ’ ಸಿನಿಮಾ ಮುಖಾಂತರ ಪ್ಯಾನ್‌ ಇಂಡಿಯಾ ವೇದಿಕೆಗೆ ಕಾಲಿರಿಸಿದ್ದಾರೆ. ಆ.9ರಿಂದ ಚಿತ್ರೀಕರಣ ಆರಂಭಗೊಳ್ಳಲಿರುವ ‘ಹೆಡ್‌ಬುಷ್‌’ನಲ್ಲಿ ಡಾನ್‌ ಜಯರಾಜ್‌ ಪಾತ್ರಕ್ಕೆ ಜೀವತುಂಬಲು ಸಿದ್ಧತೆ ನಡೆಸಿರುವ ಧನಂಜಯ್‌ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ.

***

* ‘ಟಗರು’ ಬಂದು ಹಲವು ವರ್ಷಗಳೇ ಕಳೆದರೂ ‘ಡಾಲಿ’ ಹವಾ ನಿಂತಿಲ್ಲವಲ್ಲ?
‘ಟಗರು’ ಚಿತ್ರ ಬಿಡುಗಡೆಯಾಗಿ ಮೂರು ವರ್ಷವಾಯಿತು. ನನ್ನ ಸಿನಿ ಪಯಣದಲ್ಲಿ ದೊಡ್ಡ ಬ್ರೇಕ್‌ ನೀಡಿದ ಪಾತ್ರವದು. ಕೆಲವೊಂದು ಪಾತ್ರಗಳನ್ನು ಮತ್ತೆ ನಿರ್ಮಿಸಲು ಸಾಧ್ಯವಿಲ್ಲ. ‘ಡಾಲಿ’ ಪಾತ್ರವೂ ಅಷ್ಟೇ ಬಹಳ ಅನುಭವಿಸಿ, ಅಷ್ಟೇ ಗಾಢವಾಗಿ ಮಾಡಿದ್ದ ಪಾತ್ರವದು. ಸಿನಿಮಾ ರಂಗಕ್ಕೆ ಇಳಿಯುವ ಮೊದಲಿನ ನನ್ನಲ್ಲಿದ್ದ ಕೋಪ, ನಿರಾಶೆ, ಅನುಭವವೆಲ್ಲವೂ ‘ಡಾಲಿ’ ಎಂಬ ಪಾತ್ರದ ಮುಖಾಂತರ ಹೊರಬಂದಿತ್ತು. ಜೊತೆಗೆ ಸೂರಿ ಅವರು ಪಾತ್ರವನ್ನು ಆ ರೀತಿ ವಿನ್ಯಾಸ ಮಾಡಿದ್ದರು. ಸೂರಿ ಅವರು ಸೃಷ್ಟಿಸುವ ಎಷ್ಟೋ ಪಾತ್ರಗಳು ನಮ್ಮನ್ನು ಇನ್ನೂ ಕಾಡುತ್ತವೆ. ಕಲಾವಿದನಾಗಿ ಪ್ರತಿಯೊಂದು ಪಾತ್ರ ಮಾಡುವಾಗ ಹಸಿವಿರಬೇಕು. ಹಾಗೆಯೇ ಬಹಳ ಆನಂದದಿಂದ ಆ ಪಾತ್ರವನ್ನು ನಾನು ಮಾಡಿದ್ದೆ.

* ಶಿವಣ್ಣ–ಡಾಲಿ ಜೋಡಿ ‘ಬೈರಾಗಿ’ ಮುಖಾಂತರ ಮತ್ತೆ ಒಂದಾಗಿದೆ. ಇದರಲ್ಲಿ ನಿಮ್ಮ ಪಾತ್ರದ ಬಗ್ಗೆ?
ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದಲ್ಲಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಶಿವಣ್ಣನಿಗೆ ಧನ್ಯವಾದ ಹೇಳಬೇಕು. ‘ಟಗರು’ ಆದ ಮೇಲೆ ಹಲವು ಕಥೆಗಳನ್ನು ಶಿವಣ್ಣ ಕೇಳಿದ್ದಾರೆ. ನನ್ನ ಹಾಗೂ ಶಿವಣ್ಣ ಜೋಡಿಯಲ್ಲಿ ಸಿನಿಮಾಗೆ ಹಲವರು ಪ್ರಯತ್ನಿಸಿದರು. ಆದರೆ ‘ನನ್ನ ಹಾಗೂ ಧನಂಜಯ್‌ ಜೋಡಿ ಮತ್ತೆ ತೆರೆಮೇಲೆ ಬಂದರೆ ಬೇರೆ ರೀತಿ ಇರಬೇಕು. ಎರಡೂ ಪಾತ್ರಗಳೂ ಅಷ್ಟು ಚೆನ್ನಾಗಿರಬೇಕು’ ಎಂಬ ಭಾವನೆ ಅವರಲ್ಲಿತ್ತು. ‘ಬೈರಾಗಿ’ ಕಥೆ ಅವರೆದುರು ಬಂದಾಗ, ‘ಈ ಪಾತ್ರಕ್ಕೆ ನಾನು, ಡಾಲಿ ಚೆನ್ನಾಗಿರುತ್ತದೆ’ ಎಂದು ಶಿವಣ್ಣ ಹೇಳಿದ್ದರು. ಶಿವಣ್ಣ ಅವರಿಂದ ಕಲಿಯುವುದು ಬಹಳಷ್ಟಿದೆ. ವಿಜಯ್‌ ಮಿಲ್ಟನ್‌ ನಿರ್ದೇಶನದ ‘ಬೈರಾಗಿ’ಯಲ್ಲಿ ಎಲ್ಲ ಪಾತ್ರಗಳೂ ಅದ್ಭುತವಾಗಿದೆ. ಶಿವಣ್ಣನ ಸಿನಿಮಾದಲ್ಲಿ ಎಲ್ಲ ಪಾತ್ರಗಳಿಗೂ ಅದರದೇ ಆದ ಪ್ರಾಮುಖ್ಯತೆ ಇದೆ. ಶಿವಣ್ಣನೂ ಪ್ರತಿ ಪಾತ್ರಕ್ಕೆ ಈ ‘ಸ್ಪೇಸ್‌’, ಬೆಂಬಲವನ್ನು ನೀಡುತ್ತಾರೆ. ಟಗರು ಕಾಂಬಿನೇಷನ್‌ ಅನ್ನು ಜನ ನಿರೀಕ್ಷಿಸುತ್ತಾರೆ, ಆದರೆ ಬೈರಾಗಿ ಕಾಂಬಿನೇಷನ್‌ ಪ್ರೇಕ್ಷಕರಿಗೆ ಅನಿರೀಕ್ಷಿತ ಅನುಭವ ನೀಡಲಿದೆ. ಇಲ್ಲಿ ಟಗರು ಶಿವನೂ ಇರುವುದಿಲ್ಲ, ಡಾಲಿಯೂ ಇರುವುದಿಲ್ಲ ಆದರೆ ಕಾಡುವ ಪಾತ್ರಗಳಿರಲಿವೆ. 

* ‘ಸಲಗ’ದಲ್ಲಿ ಸೂಪರ್‌ಕಾಪ್‌ ಆಗಿದ್ದೀರಿ. ಖಳನಾಯಕನಿಂದ ಪೊಲೀಸ್‌ ಆದ ಅನುಭವ?
‘ಡಾಲಿ’ಯಂತಹ ಪಾತ್ರವನ್ನೇ ಮಾಡುತ್ತಿರಲು ಸಾಧ್ಯವಿಲ್ಲ. ಕಲಾವಿದನಾಗಿ ಬೇರೆಬೇರೆ ಪಾತ್ರಗಳನ್ನು ಮಾಡುತ್ತಿರಬೇಕು. ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿದ್ದಾಗ ಆ ಬದುಕನ್ನು ನೋಡಬಹುದು, ಅನುಭವಿಸಬಹುದು. ಪೊಲೀಸ್‌ ಅಧಿಕಾರಿಯಾಗಿ ಅವರ ದೃಷ್ಟಿಕೋನದಲ್ಲಿ ವ್ಯವಸ್ಥೆಯನ್ನು ನೋಡಬಹುದು. ಈ ಅವಕಾಶ ‘ಸಲಗ’ದಲ್ಲಿ ದೊರಕಿದೆ. ದುನಿಯಾ ವಿಜಯ್‌ ಅವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಪ್ರತಿಯೊಂದು ಪಾತ್ರವನ್ನು ಅದ್ಭುತವಾಗಿ ಸೃಷ್ಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ನೋಡಿದ ಬದುಕಿನ ಪರಿಸರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅಪರಾಧ ಜಗತ್ತಿನ ಸಿನಿಮಾ ಆದರೂ, ಇವತ್ತಿನ ವ್ಯವಸ್ಥೆಯ ಬಗ್ಗೆ ಅದರಲ್ಲಿ ಉಲ್ಲೇಖವಿದೆ. ವಿಜಯ್‌ ಅವರು ಕರೆದು, ‘ನೀನೊಬ್ಬ ಹೀರೋ. ಬರೀ ವಿಲನ್‌ ಅಲ್ಲ. ಅದು ಮತ್ತೆ ಸಲಗದಲ್ಲಿ ಸಾಬೀತಾಗುತ್ತದೆ’ ಎಂದು ಹೇಳಿ ನಟನೆ ಮಾಡಿಸಿದ್ದರು.

* ಪ್ಯಾನ್‌ ಇಂಡಿಯಾ ಸಿನಿಮಾ ‘ಪುಷ್ಪ’ದ ಅನುಭವ?
‘ಪುಷ್ಪ’ ಮೊದಲ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಮಟ್ಟದ ಬಜೆಟ್‌ ಸಿನಿಮಾಗಳಲ್ಲಿ ಅನುಭವಕ್ಕಾಗಿ ಕೆಲಸ ಮಾಡಬೇಕು. ಸುಕುಮಾರ್‌ ಅವರಂತಹ ನಿರ್ದೇಶಕರು, ಅಲ್ಲು ಅರ್ಜುನ್‌ ಅವರಂತಹ ಪ್ಯಾನ್‌ ಇಂಡಿಯಾ ನಾಯಕ. ಪರಿಪೂರ್ಣ ದೃಶ್ಯದ ಚಿತ್ರೀಕರಣಕ್ಕೆ ಅವರು ಎಷ್ಟು ಕೆಲಸ ಮಾಡುತ್ತಾರೆ, ಅದಕ್ಕೆ ತೆಗೆದುಕೊಳ್ಳುವ ಸಮಯ ಹೀಗೆ ‘ಪುಷ್ಪ’ದಲ್ಲಿ ಕಲಿಯುವಂತಹದು ನನಗೆ ಬಹಳಷ್ಟಿದೆ. ಹೀಗಾಗಿ ಈ ರೀತಿಯ ಪ್ರಾಜೆಕ್ಟ್‌ಗಳಿಗೆ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ನಾನೇ ನುಗ್ಗಿ ಇದರಲ್ಲಿ ಭಾಗವಹಿಸುತ್ತೇನೆ. ಪ್ರತಿದಿನವೂ ಕಲಿಯುತ್ತಿರಬೇಕು. ನಮ್ಮನ್ನು ಪರಿಶೋಧಿಸಲು ಸಿಕ್ಕ ವೇದಿಕೆ ಅದು. ಒಬ್ಬ ಕಲಾವಿದನನ್ನು ಅವರು ಸ್ವೀಕರಿಸುವ ಬಗೆ ಖುಷಿ ನೀಡಿತು. ಎಲ್ಲ ಭಾಷೆಯಲ್ಲಿ, ಹಲವು ನಿರ್ದೇಶಕರು ಜೊತೆ ಕೆಲಸ ಮಾಡುವುದು ಒಬ್ಬ ನಟನಾಗಿ ನನ್ನ ಬೆಳವಣಿಗೆಗೆ ಅವಶ್ಯ. ಹಾಗೆಂದು ನನ್ನ ಕನ್ನಡ, ನನ್ನ ಮಣ್ಣು ಮರೆಯುವುದಿಲ್ಲ.

*‘ಹೆಡ್‌ಬುಷ್‌’ಗೆ ಸಿದ್ಧತೆ ಹೇಗೆ ನಡೆಯುತ್ತಿದೆ? 
ಮೊದಲ ಲಾಕ್‌ಡೌನ್‌ ಆದ ಕೂಡಲೇ ಭಾನುವಾರ ಸೇರಿದಂತೆ ಎಲ್ಲ ದಿನವೂ ನಾನು ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ. ಆಗಸ್ಟ್‌ 9ರಿಂದ ಡಾನ್‌ ಜಯರಾಜ್‌ ಜೀವನಕಥೆ ಆಧಾರಿತ ‘ಹೆಡ್‌ಬುಷ್’ ಚಿತ್ರೀಕರಣ ಆರಂಭವಾಗಲಿದೆ. ದೊಡ್ಡ ಬಜೆಟ್‌ ಸಿನಿಮಾ ಅದು. ಅಗ್ನಿ ಶ್ರೀಧರ್‌ ಅವರು ‘ದಾದಾಗಿರಿಯ ಆ ದಿನಗಳು’ ಓದಿದರೆ, ಅವರ ಜೊತೆ ಕುಳಿತು ಮಾತನಾಡಿದರೆ ಅವರ ಅನುಭವ ಹೇಳುತ್ತಾರೆ. ಶ್ರೀಧರ್‌ ಅವರ ಜೊತೆ ಕುಳಿತರೆ ಚರ್ಚೆ ಮುಗಿಯುವುದೇ ಇಲ್ಲ. ಅದೊಂದು ಬೇರೆ ಜಗತ್ತು ನಾವು ಯಾವತ್ತೂ ಅದನ್ನು ನೋಡಲು ಸಾಧ್ಯವಿಲ್ಲ. ಕಥೆಗಳನ್ನು ಕೇಳುತ್ತಾ ಆ ಜಗತ್ತಿನ ಒಳಗೆ ಪ್ರವೇಶಿಸಬೇಕು. ಮಾನಸಿಕವಾಗಿ ಈ ಪಾತ್ರಕ್ಕೆ ಸಿದ್ಧತೆ ನಡೆಸುತ್ತಿದ್ದೇನೆ. ಜೊತೆಗೆ ‘ಜಯರಾಜ್‌’ ಪಾತ್ರಕ್ಕಾಗಿ ದಪ್ಪ ಆಗಬೇಕು. 

* ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ ಅಲ್ಲವೇ?
‘ಸಲಗ’ ಆ.20ಕ್ಕೆ ಬಿಡುಗಡೆಯಾಗಲಿದೆ. ಸೆ.24ಕ್ಕೆ ನನ್ನದೇ ನಿರ್ಮಾಣದ ‘ಬಡವ ರಾಸ್ಕಲ್‌’ ಬಿಡುಗಡೆಯಾಗಲಿದೆ. ‘ರತ್ನನ್‌ ಪ್ರಪಂಚ’, ‘ತೋತಾಪುರಿ’, ಕನ್ನಡ ಹಾಗೂ ಮಲಯಾಳಂನಲ್ಲಿ ತೆರೆ ಕಾಣಲಿರುವ ‘21 ಅವರ್ಸ್‌’, ತಮಿಳಿನಲ್ಲಿ ಒಂದು ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ರಚಿತಾ ರಾಮ್‌ ಅವರ ಜೊತೆಗೆ ನಟಿಸಿರುವ ‘ಮಾನ್ಸೂನ್‌ ರಾಗ’ ನಮ್ಮ ಭಾಗದ ಚಿತ್ರೀಕರಣ ಮುಗಿದಿದೆ. ಏನಪ್ಪಾ ಇಷ್ಟೊಂದು ಸಿನಿಮಾಗಳು ಎಂದು ಎನಿಸಬಹುದು. ಇವುಗಳಲ್ಲಿ ಬಹುತೇಕ ಚಿತ್ರಗಳು ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್‌ ಕಾರಣದಿಂದ ವಿಳಂಬವಾಯಿತು. ಸತತವಾಗಿ ಬೇರೆಬೇರೆ ಪಾತ್ರಗಳಲ್ಲಿ ನಟಿಸಲು ಸಿಕ್ಕಿದ ಅವಕಾಶ ಎಂದೇ ಈ ಅವಧಿಯನ್ನು ನಾನು ನೋಡುತ್ತೇನೆ. ಯಾವ ಪಾತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು