ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ – ಹಣಕ್ಕಾಗಿ ಸಾಯಬೇಡಿ, ನೊಂದವರ ಪೀಡಿಸಬೇಡಿ: ಜಗ್ಗೇಶ್‌ ಆಕ್ರೋಶ

Last Updated 25 ಏಪ್ರಿಲ್ 2021, 9:27 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಂದ ಆಸ್ಪತ್ರೆಯಲ್ಲಿ, ಆಂಬುಲೆನ್ಸ್‌, ಚಿತಾಗಾರದವರು ಹಣ ವಸೂಲಿ ಮಾಡುತ್ತಿರುವ ಹಲವು ಘಟನೆಗಳು ವರದಿಯಾಗುತ್ತಿರುವ ಬೆನ್ನಲ್ಲೇ ಈ ಕುರಿತು ನಟ ಜಗ್ಗೇಶ್‌ ಅವರು ಆಕ್ರೋಶ ಹೊರಹಾಕಿದ್ದಾರೆ.

‘ಕೋವಿಡ್ ಸಂತ್ರಸ್ತರು ನೊಂದು ಟಿ.ವಿಯಲ್ಲಿ ಮಾತಾಡಿದ್ದು ನೋಡಿ ಸಂಕಟವಾಯ್ತು. ಆಸ್ಪತ್ರೆ, ಆಂಬುಲೆನ್ಸ್, ಔಷಧಿ ಅಂಗಡಿ, ಸ್ಮಶಾನ ಕಾರ್ಯಕರ್ತರು ಹಣಕ್ಕಾಗಿ ಸಾಯಬೇಡಿ, ನೊಂದವರ ಪೀಡಿಸಬೇಡಿ, ತಿನ್ನಲು ಅನ್ನಸಿಗದೆ ಸಾಯುತ್ತೀರಿ! ನೊಂದವರಿಗೆ ಭುಜ ಕೊಟ್ಟು ಸಹಾಯಮಾಡಿ. ಸತ್ತರೆ ಹಣಬರೋಲ್ಲಾ ಪಾಪಪುಣ್ಯ ಮಾತ್ರ ನಮ್ಮಹಿಂದೆ ಬರೋದು. ದೇವನೊಬ್ಬನಿರುವ ಎಲ್ಲ ನೋಡುತಿರುವ’ ಎಂದು ಟ್ವೀಟ್‌ ಮೂಲಕ ಜಗ್ಗೇಶ್‌ ಹೇಳಿದ್ದಾರೆ.

‘ಇಂತಹ ಸಂದರ್ಭದಲ್ಲೂ ಕೂಡ ನೊಂದವರಿಂದ ದುಡ್ಡನ್ನು ಪೀಕುತ್ತಿದ್ದಾರೆಂದರೆ ಇನ್ನೆಂತ ಕ್ರೂರಿಗಳು.! ಚೇ’ ಎಂದು ಉಲ್ಲೇಖಿಸಿ ಮೇಘರಾಜ್‌ ಎನ್ನುವವರು ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್‌, ‘ಇಂಥ ಸಮಯದಲ್ಲೇ ಈ ಕ್ರೂರಿಗಳು ಸಕ್ರಿಯರಾಗುವುದು. ಇಂಥ ಕೀಳು ಜನರಿಂದ ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಸತ್ತು ಹೋಗಿದೆ, ನಾನು ಇಷ್ಟು ನೊಂದದ್ದು ಇತ್ತೀಚಿನ ಈ ಕ್ರೂರ ವರ್ತನೆಯಿಂದ. ನನಗೆ ಅರಿಯದಂತೆ ಕೆಟ್ಟಬೈಗುಳ, ಕೋಪ ಅನಾವಶ್ಯಕವಾಗಿ ಬರುತ್ತಿದೆ.
ತಪ್ಪು ಎಂದು ನನ್ನ ನಾನೆ ಸರಿಪಡಿಸಿಕೊಳ್ಳುತ್ತಿರುವೆ. ಇಂಥ ದಿನಗಳನ್ನು ಎಣಿಸಲಿಲ್ಲಾ ನಾನು, ಆಘಾತವಾಗಿದೆ’ ಎಂದಿದ್ದಾರೆ.

‘ಕೋವಿಡ್‌–19 ಅನ್ನು ಹಳ್ಳಿಗಳಿಗೆ ಹಂಚುತ್ತಿದ್ದಾರೆ. ದಯಮಾಡಿ ಹಳ್ಳಿಗಳಿಗೆ ಹೋಗುವ ಜನರಿಗೆ ಪರೀಕ್ಷೆ ಮಾಡಿಸಿ’ ಎಂದು ಶರತ್‌ ಕುಮಾರ್‌ ಎನ್ನುವವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್‌, ‘ಮಾಯಸಂದ್ರ ನನ್ನ ಗ್ರಾಮ. ಅಲ್ಲಿಗೂ ಆಗಲೇ ಕೋವಿಡ್‌ ಹಂಚಿದ್ದಾರೆ ಮಹನೀಯರು! ಮಾತು ಬರದ 56 ವರ್ಷದ ಅಮಾಯಕ ತಮ್ಮನಿದ್ದಾನೆ ಊರಲ್ಲಿ. ನನಗೆ ಅವನ ಬಗ್ಗೆಯೇ ಚಿಂತೆ ಆಗಿದೆ. ತೋಟದ ಮನೆಗೆ ಬೀಗ ಹಾಕಿಸಿರುವೆ. ಎಚ್ಚರವಾಗಿರಿ ನಿಮ್ಮ ಮನೆಯವರನ್ನು ಎಚ್ಚರವಾಗಿ ನೋಡಿಕೊಳ್ಳಿ’ ಎಂದಿದ್ದಾರೆ.

‘ನಾನು ಕಾಯವಾಚಮನ ದೇವರು ಮೆಚ್ಚುವಂತೆ ಐದು ಜನ ಕೋವಿಡ್ ಬಂದವರಿಗೆ ತನುಮನಧನ ಅರ್ಪಿಸಿ ಸೇವೆಮಾಡುತ್ತಿರುವೆ. ಅದರಲ್ಲಿ ಒಬ್ಬ ಬಂಧು ತೀರಿಹೋದ. ದಯಮಾಡಿ ನೀವು ನಿಮ್ಮವರಿಗೆ ಸಹಾಯ ಮಾಡಿ. ಆಗದಿದ್ದರೆ ಮೌನವಾಗಿ ಇದ್ದುಬಿಡಿ. ಟ್ವಿಟರ್‌ನಲ್ಲಿ ಸಂಬಂಧವಿಲ್ಲದ ಪ್ರಶ್ನೆ, ತೀಟೆ, ಅಣಕಕ್ಕೆ ಈ ಕೆಟ್ಟ ಪರಿಸ್ಥಿತಿ ಬಳಕೆ ಮಾಡಬೇಡಿ. ಈ ಗುಣ ಯಾರಿಗು ಶೋಭೆಯಲ್ಲಾ’ ಎಂದೂ ಜಗ್ಗೇಶ್‌ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT