ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣು ಇದ್ದಾಗ ಮಾತಾಡಿದ್ದರೆ ಅದರಲ್ಲಿ ಗಂಡಸ್ತನ ಇರುತ್ತಿತ್ತು: ಕಿಚ್ಚ ಕಿಡಿನುಡಿ

Last Updated 12 ಡಿಸೆಂಬರ್ 2020, 15:43 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡದ ಮೇರು ನಟ ಡಾ. ವಿಷ್ಣುವರ್ಧನ್‌ ಕುರಿತು ತೆಲುಗಿನ ನಟ ವಿಜಯ್‌ ರಂಗರಾಜ್‌ ಆಡಿರುವ ಆಕ್ಷೇಪಾರ್ಹ ಮಾತುಗಳಿಗೆ ನಟ ಕಿಚ್ಚ ಸುದೀಪ್‌ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

' ವಿಷ್ಣು ಇದ್ದಾಗ ಅವರ ಬಗ್ಗೆ ಮಾತಾಡಿದ್ದರೆ, ಅದರಲ್ಲಿ ಗಂಡಸ್ತನ ಇರುತ್ತಿತ್ತು. ಅವರಿಲ್ಲದಾಗ ಮಾತಾಡಿರುವುದು ತಪ್ಪು. ಅವರಿಗೆ ಎಚ್ಚರಿಕೆ ನೀಡಿದ್ದೆ ಎಂಬ ಮಾತುಗಳನ್ನು ಹಿಂಪಡೆಯಬೇಕು,' ಎಂದು ಸುದೀಪ್‌ ಆಗ್ರಹಿಸಿದ್ದಾರೆ.

ವಿಜಯ್‌ ರಂಗರಾಜ್‌ ಹೇಳಿಕೆ ಹಿನ್ನೆಲೆಯಲ್ಲಿ ಸುದೀಪ್‌ ಅವರು ವಿಡಿಯೊ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಡಿಯೊವನ್ನು ಅವರ 'ಫ್ಯಾನ್ಸ್‌ ಕ್ಲಬ್‌ಗಳ' ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಏನು ಹೇಳಿದ್ದಾರೆ ವಿಡಿಯೊದಲ್ಲಿ?

'ನಟ ವಿಜಯ್‌ ರಂಗರಾಜು ಅವರು ವಿಷ್ಣುವರ್ಧನ್‌ ಅವರ ಬಗ್ಗೆ ಬಹಳ ಕೇವಲವಾಗಿ ಮಾತನಾಡಿದ ವಿಡಿಯೊ ನೋಡಿದೆ. ಕಲಾವಿದನಾಗಿ, ವಿಷ್ಣುವರ್ಧನ್‌ ಅವರ ಅಭಿಮಾನಿಯಾಗಿ, ಎಲ್ಲ ಅಭಿಮಾನಿಗಳ ಪರವಾಗಿ ನಾನು ಈಗ ಮಾತನಾಡುತ್ತಿದ್ದೇನೆ. ವಿಜಯ್‌ ರಂಗರಾಜು ಅವರೇ ವ್ಯಕ್ತಿ ಬಗ್ಗೆ ಮಾತನಾಡುವುದು ನಿಮಗೆ ಬಿಟ್ಟ ವಿಚಾರ. ಆದರೆ, ಅವರು ಬದುಕಿರುವಾಗ ಮಾತನಾಡುವುದರಲ್ಲಿ ಗಂಡಸ್ತನ ಇರುತ್ತದೆ. ಆಗ ಸತ್ಯದ ಬಗ್ಗೆ ಇಬ್ಬರೂ ಮಾತನಾಡಬಹುದಿತ್ತು. ಆದರೆ, ವಿಷ್ಣುವರ್ಧನ್‌ ಅವರು ಇಲ್ಲದಿರುವ ಈ ಸಂದರ್ಭದಲ್ಲಿ ಅವರ ವಿರುದ್ಧ ಹೇಳಿಕೆ ಕೊಡುವುದು ಬಹಳ ದೊಡ್ಡ ತಪ್ಪು. ಎಲ್ಲ ಸಿನಿಮಾ ರಂಗಗಳೂ ಒಟ್ಟಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ ನಿಮ್ಮಂಥ ಒಬ್ಬ ವ್ಯಕ್ತಿ ಈ ರೀತಿಯ ಹೇಳಿಕೆ ನೀಡುವುದರಿಂದ ಎಲ್ಲವೂ ಚೂರು ಚೂರಾಗಿ ಒಡೆದು ಹೋಗುತ್ತವೆ,' ಎಂದು ಹೇಳಿದ್ದಾರೆ.

'ಕನ್ನಡ ಸಿನಿಮಾ ರಂಗದವರು ಎಲ್ಲ ಸಿನಿಮಾ ರಂಗಗಳಿಗೂ ಗೌರವ, ಪ್ರೀತಿ ನೀಡುತ್ತಿರುವ ಸಂದರ್ಭದಲ್ಲಿ ನೀವು ವಿಷ್ಣುವರ್ಧನ್‌ ಅವರ ಮಾತನಾಡಿರುವುದನ್ನು ತೆಲುಗು ಸಿನಿಮಾರಂಗದವರೇ ಒಪ್ಪುವುದಿಲ್ಲ. 'ವಿಷ್ಣುವರ್ಧನ್‌ ಅವರಿಗೆ ಎಚ್ಚರಿಕೆ ನೀಡಿದ್ದೆ, ನಿನ್ನದೇನಿದ್ದರೂ ಬೆಂಗಳೂರಿನಲ್ಲಿ ಇಟ್ಟುಕೋ ಎಂದು ಹೇಳಿದ್ದೆ,' ಎಂದೆಲ್ಲ ಹೇಳಿದ್ದೀರಿ. ಆ ಹಂತಕ್ಕೆ ಹೋಗಬೇಡಿ. ವಿಷ್ಣುವರ್ಧನ್‌ ಇವತ್ತು ಇಲ್ಲದಿರಬಹುದು. ನಾವೆಲ್ಲರೂ ಇನ್ನೂ ಇದ್ದೇವೆ. ಉದ್ಯಮದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನಿಮ್ಮೊಬ್ಬರಿಂದ ಎಲ್ಲವೂ ಹಾಳಾಗುವುದು ಬೇಡ. ಎಚ್ಚರಿಕೆ ಕೊಡುವ ಮಟ್ಟಕ್ಕೆ ಇಳಿಯಬೇಡಿ. ಇಲ್ಲಿ ಯಾರೂ ಕೈಲಾಗದವರು ಇಲ್ಲ. ಕೋಟಿ ಕೋಟಿ ಮಕ್ಕಳನ್ನು ವಿಷ್ಣುವರ್ಧನ್‌ ಇಲ್ಲಿ ಬಿಟ್ಟು ಹೋಗಿದ್ದಾರೆ. ನಮಗೆ ಎಚ್ಚರಿಕೆ ನೀಡಬೇಡಿ. ನೀವು ಮಾತಾಡಿರುವ ಮಾತನ್ನು ವಾಪಸ್‌ ಪಡೆಯಿರಿ,' ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತೆಲುಗಿನ ನಟ ವಿಜಯ್‌ ರಂಗರಾಜು ಅವರು ಸಂದರ್ಶನವೊಂದರಲ್ಲಿ ವಿಷ್ಣು ಕುರಿತು ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದು, ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಅಲ್ಲದೆ, ವಿಜಯ್‌ ರಂಗರಾಜ್‌ ವಿರುದ್ಧ ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT