ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಸತ್ತರೆ ಸುಧಾಕರ್‌, ಯಡಿಯೂರಪ್ಪ-ವಿಜಯೇಂದ್ರ ಕಾರಣ: ನಿರ್ದೇಶಕ ಗುರುಪ್ರಸಾದ್‌

ನಿರ್ದೇಶಕ ಗುರುಪ್ರಸಾದ್‌ಗೆ ಕೋವಿಡ್‌ ದೃಢ
Last Updated 19 ಏಪ್ರಿಲ್ 2021, 9:42 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ದೇಶಕ ಗುರುಪ್ರಸಾದ್‌ ಅವರಿಗೆ ಕೋವಿಡ್‌–19 ದೃಢಪಟ್ಟಿದ್ದು, ಈ ಸಂದರ್ಭದಲ್ಲಿ ಫೇಸ್‌ಬುಕ್‌ನಲ್ಲಿ ವಿಡಿಯೊವೊಂದನ್ನು ಅಪ್‌ಲೋಡ್‌ ಮಾಡಿ ‘ಇದು ನನ್ನ ಡೆತ್‌ ನೋಟ್‌’ ಎಂದಿದ್ದಾರೆ. ‘ಕರ್ನಾಟಕದಲ್ಲಿ ಕೋವಿಡ್‌ನಿಂದ ಸತ್ತ ಪ್ರತಿಯೊಂದು ಸಾವಿಗೂ ಡಾ.ಸುಧಾಕರ್‌, ಯಡಿಯೂರಪ್ಪ ಹಾಗೂ ವಿಜಯೇಂದ್ರ ಕಾರಣ. ನನ್ನ ಸಾವಿಗೂ ಇವರೇ ಕಾರಣ’ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಇದು ಕೊನೆಯ ಕ್ಷಣಗಳ ಕೊನೆಯ ಮಾತು. ನನಗೆ ಕೋವಿಡ್‌ ದೃಢಪಟ್ಟಿದೆ. ನನ್ನ ಮನೆಯವರೆಗೂ ಕೊರೊನಾ ತಂದ ಯಡಿಯೂರಪ್ಪ, ವಿಜಯೇಂದ್ರ ಇವರುಗಳಿಗೆ ಧನ್ಯವಾದ. ನಾನು ಸತ್ತರೆ ಒಂದು ಇರುವೆ ಸತ್ತಂತೆ. ನನ್ನ ಸಾವಿಗೆ ಮುನ್ನುಡಿ ಬರೆದಿದ್ದೀರಿ. ಕೋವಿಡ್‌ ಪಾಸಿಟಿವ್‌ ಆದ ನೋವಿನಿಂದ ಮಾತನಾಡುತ್ತಿದ್ದೇನೆ. ನಾ ಸತ್ತರೂ ಕೂಡಾ, ಈ ಶಾಪ, ನೋವು ಕಳ್ಳತನದ ದುಡ್ಡು ಮಾಡಿರುವವರಿಗೆ ತಟ್ಟಲಿ ಎಂದು ಮಾತನಾಡುತ್ತಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.

‘ಒಂದೂವರೆ ವರ್ಷ ಸಮಯ ತೆಗೆದುಕೊಂಡು, ಎರಡು ಮೂರು ತಿಂಗಳು ಲಾಕ್‌ಡೌನ್‌ ಮಾಡಿ ಏನ್ಮಾಡಿದ್ರಿ. ಮೋದಿ ಪ್ರಾಮಾಣಿಕ, ಅಂದ ಹಂಗ ಮಾತ್ರಕ್ಕೆ ಬಿಜೆಪಿಯವರು, ಕಾಂಗ್ರೆಸ್‌ನವರು, ಜೆಡಿಎಸ್‌ನವರೆಲ್ಲರೂ ಪ್ರಮಾಣಿಕರಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ವ್ಯವಸ್ಥೆ ಏಕೆ ಮಾಡಲಿಲ್ಲ. ಎಷ್ಟು ಕೋಟಿ ಬೇಕು? ನಿಮ್ಮ ಕೋಟಿ ಎಂದರೆ ಬಡವರ ಮನೆಯ ಒಂದೊಂದು ಇಡ್ಲಿ ತಂದು ನಿಮ್ಮ ಲಾಕರ್‌ನಲ್ಲಿ ಇಡುತ್ತಿದ್ದೀರಿ. ದರಿದ್ರ ಜೀವನ ನಡೆಸೋಕೆ! ಒಂದು ವೈರಸ್‌ ನಿಮ್ಮನ್ನು ಆಟಾಡಿಸುತ್ತದೆ. ಒಂದು ಲಕ್ಷ ಟೆಂಟ್‌ ಹಾಕಬೇಕು ಬೆಂಗಳೂರಿನಲ್ಲಿ. ಕಾಮನ್‌ಸೆನ್ಸ್‌ ಇಲ್ವಾ! ಜನರುಒಂದೊಂದು ರೂಪಾಯಿ ದುಡಿಯುವುದಕ್ಕೂ ಕಷ್ಟ ಬರುತ್ತಿದ್ದಾರೆ. ಲಾಕ್‌ಡೌನ್‌ ವೇಳೆ ಅವರ ಕೆಲಸ ನಿಲ್ಲಿಸಿ, ನಿಯಂತ್ರಣ ಮಾಡಲಿಕ್ಕೆ ಆಗಲಿಲ್ಲಲ್ವಾ’ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಒಬ್ಬ ಸತ್ತರೂ ನಾನು ಜವಾಬ್ದಾರಿ ಎನ್ನೋನು ಮನುಷ್ಯ. ಇದು ಆಡಳಿತ. ಆ ಮೋದಿಯ ಪಾಠವೇ ಕಲಿತಿಲ್ಲವಲ್ಲಾ ನೀವು.ಸಿನಿಮಾ ಇಂಡಸ್ಟ್ರಿಯವರನ್ನು ಮುಗಿಸಿಬಿಟ್ಟಿರಿ. ರಾಜಕೀಯ ಮಾಡಕ್ಕೊ ನಿಮ್ಮನ್ನು ಗೆಲ್ಲಿಸಿ ಕಳಿಸಿಲ್ಲ. ಆಡಳಿತ ಮಾಡುವುದಕ್ಕೆ ನಿಮ್ಮನ್ನು ಗೆಲ್ಲಿಸಿದ್ದಾರೆ. ರಾಜಕೀಯ ಉದ್ಯಮ ಅಲ್ಲ. ಮತ್ತೊಬ್ಬನಿಗಿಂತ ಜಾಸ್ತಿ ಸೇವೆ ಮಾಡುತ್ತೇನೆ ಎಂದು ಪ್ರತಿಯೊಬ್ಬ ರಾಜಕಾರಣಿ ಹೇಳಬೇಕು. ಡಾ.ಸುಧಾಕರ್‌ ಅವರೇ, ಡಾಕ್ಟರ್‌ ಓದಿದ್ದೀರಲ್ಲ. ಕರ್ನಾಟಕದಲ್ಲಿ ಕೋವಿಡ್‌ನಿಂದ ಸತ್ತ ಪ್ರತಿಯೊಂದು ಸಾವಿಗೂ ನೀವು ಕಾರಣ. ಪ್ರಾಮಾಣಿಕವಾಗಿ ಆಡಳಿತ ನಡೆಸಿ. ಡಿ.ಕೆ.ಶಿವಕುಮಾರ್‌, ಕುಮಾರಸ್ವಾಮಿ, ದೇವೇಗೌಡರು ಯಾರೂ ಸಾಚಾ ಅಲ್ಲ. ಇದು ನನ್ನ ಡೆತ್‌ ನೋಟ್‌. ಈ ನೋವು ನಿಮ್ಮನ್ನು ಸುಮ್ಮನೆ ಬಿಡಲ್ಲ. ಜಾರಕಿಹೊಳಿ ಸಿ.ಡಿ ವಿಷಯ ಬೇಡ ನಮಗೆ. ಪ್ರತಿಯೊಬ್ಬ ಪ್ರಜೆಯನ್ನು ಸಾಕುವುದು ಮುಖ್ಯ. ನನ್ನ ಸಾವಿಗೆ ನೀವೆಲ್ಲರೂ ಕಾರಣ. ತುಂಬಾ ನೋವಿನಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಪ್ರಾಮಾಣಿಕವಾಗಿ ಬದುಕಿದವರ ಶಾಪ ನಿಮ್ಮ ಮೇಲಿದೆ’ ಎಂದು ಗುರುಪ್ರಸಾದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT