ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕರ ಸಂಖ್ಯೆ ನಿರ್ಬಂಧ ರದ್ದುಪಡಿಸಿ: ಚಿತ್ರರಂಗದ ಆಗ್ರಹ

Last Updated 3 ಏಪ್ರಿಲ್ 2021, 15:00 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ನಿಯಂತ್ರಣಕ್ಕಾಗಿ ರಾಜ್ಯದ ಎಂಟು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಗರಿಷ್ಠ ಶೇ 50 ಪ್ರೇಕ್ಷಕರಿಗಷ್ಟೇ ಅವಕಾಶ ನೀಡುವ ರಾಜ್ಯ ಸರ್ಕಾರದ ನಿರ್ಧಾರ ರದ್ದುಗೊಳಿಸಲು ಚಿತ್ರರಂಗ ಒಕ್ಕೊರಲಿನಿಂದ ಆಗ್ರಹಿಸಿದೆ.

ಈ ಕುರಿತು ಟ್ವಿಟರ್‌ನಲ್ಲಿ ಶುಕ್ರವಾರ ಹಲವು ನಟ, ನಟಿಯರು ಟ್ವೀಟ್‌ ಮಾಡಿದ್ದು, ಸರ್ಕಾರದ ಈ ದಿಢೀರ್‌ ನಿರ್ಧಾರವನ್ನು ಖಂಡಿಸಿದ್ದಾರೆ. ಟ್ವಿಟರ್‌ನಲ್ಲಿ #WeWant100PercentOccupency ಎಂಬ ಅಭಿಯಾನ ಆರಂಭವಾಗಿದೆ. ರಾಜಕೀಯ ಚಟುವಟಿಕೆಗಳಿಗೆ ಇಲ್ಲದ ಕೊರೊನಾ ನಿರ್ಬಂಧ ಸಿನಿಮಾಗಳ ಮೇಲೇಕೆ ಎಂದು ಕೂಗು ಕೇಳಿ ಬಂದಿದೆ.

ಸರ್ಕಾರದ ಈ ದಿಢೀರ್‌ ನಿರ್ಧಾರದಿಂದಾಗಿ ಶುಕ್ರವಾರ ಹಲವೆಡೆ ಪ್ರೇಕ್ಷಕರಿಗೆ ಗೊಂದಲ ಉಂಟಾಗಿತ್ತು. ಮೈಸೂರು ಸೇರಿದಂತೆ ಇನ್ನೂ ಕೆಲವೆಡೆ ಬೆಳಗ್ಗಿನ ಚಿತ್ರ ಪ್ರದರ್ಶನಗಳು ಹೌಸ್‌ಫುಲ್‌ನಲ್ಲೇ ನಡೆದಿದೆ. ಸರ್ಕಾರದ ಈ ನಿರ್ಧಾರ ಗುರುವಾರವಷ್ಟೇ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಟ ಪುನೀತ್‌ ರಾಜ್‌ಕುಮಾರ್ ಅಭಿನಯದ ‘ಯುವರತ್ನ’ ಚಿತ್ರಕ್ಕೆ ಭಾರಿ ಹೊಡೆತ ನೀಡಿದೆ. ಶನಿವಾರ ಬೆಳಗ್ಗೆ ಪುನೀತ್‌ ಅಭಿಮಾನಿಗಳು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಸರ್ಕಾರ ಉದ್ದೇಶಪೂರ್ವಕವಾಗಿ ಚಲನಚಿತ್ರವನ್ನೇ ಗುರಿಯಾಗಿಸಿಕೊಂಡು, ವ್ಯವಸ್ಥಿತವಾಗಿ ಸಂಚುರೂಪಿಸಿ ತುಳಿಯುತ್ತಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು. ಶನಿವಾರ ರಾತ್ರಿ ನಟ ಪುನೀತ್‌ ರಾಜ್‌ಕುಮಾರ್‌ ಹಾಗೂ ನಿರ್ದೇಶಕ ಸಂತೋಷ್‌ ಆನಂದರಾಮ್‌ ಕೂಡಾ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ, ನಿರ್ಬಂಧ ತೆರೆವಿಗೆ ಮನವಿ ಮಾಡಿದ್ದಾರೆ. ಸರ್ಕಾರದ ನಿರ್ಧಾರದ ವಿರುದ್ಧ ನಟ, ನಟಿಯರ ಪ್ರತಿಕ್ರಿಯೆ ಹೀಗಿದೆ.

ಪ್ರತಿಕ್ರಿಯೆಗಳು

ಯಾವುದೇ ತೊಂದರೆಯಾದರೆ ಮೊದಲು ತೊಂದರೆ ಅನುಭವಿಸುವುದು ಕನ್ನಡ ಚಿತ್ರರಂಗ! ಶತದಿನ ಕಾಣುವ ‘ಯುವರತ್ನ’ ಚಿತ್ರ ಇಂದು ಶೇ 50 ಕೋವಿಡ್ ಮಾನದಂಡಕ್ಕೆ ಬಲಿಯಾಯಿತು! ಆರೋಗ್ಯ ಇಲಾಖೆ ಈ ವಿಷಯ 3 ದಿನ ಮುಂಚೆ ಪ್ರಕಟಿಸಿದ್ದರೆ ನಿರ್ಮಾಪಕರು ಚಿತ್ರ ಬಿಡುಗಡೆ ಮುಂದೂಡುತ್ತಿದ್ದರು! ಯಾರು ನಮ್ಮ ಚಿತ್ರರಂಗಕ್ಕೆ ಆಗುವವರು? ಅನ್ಯಭಾಷೆ ಚಿತ್ರಗಳು ಮಹಾರಾಜರಂತೆ ನಮ್ಮ ಊಟ ಕಿತ್ತುಕೊಳ್ಳುತ್ತಿವೆ! ಕನ್ನಡ ಚಿತ್ರರಂಗಕ್ಕೆ ಇರುವ ಕೆಲವೇ ನಟನಟಿ ನಿರ್ದೇಶಕ ನಿರ್ಮಾಪಕರಿಗೆ ಕನ್ನಡಿಗರೇ ಶಕ್ತಿ ನೀಡಬೇಕು! ಶೇ 50 ನಿರ್ಬಂಧದಲ್ಲಿ ಶೇ 100 ಜನ ಅಂತರ, ಎಚ್ಚರವಹಿಸಿ ಯುವರತ್ನನ ಕೈ ಬಲಪಡಿಸಿ ಎಂದು ಮಾತ್ರ ಕೇಳುವ ಬೇಡಿಕೆ! ಈ ವಿಷಯದಲ್ಲಿ ಶೇ 50ರ ಬಗ್ಗೆ ಮರುಚಿಂತಿಸಿದರೆ ಒಳಿತು ಎನ್ನುವುದು ಕೈಮುಗಿದು ಕೇಳುವ ಬೇಡಿಕೆ

–ಜಗ್ಗೇಶ್‌, ನಟ

ಈಗಷ್ಟೇ ಬಿಡುಗಡೆಯಾಗಿರುವ ಚಿತ್ರಗಳಿಗೆ ಸರ್ಕಾರದ ಈ ನಿರ್ಧಾರವು ಆಘಾತ ತಂದಿದೆ. ಈ ನಿರ್ಧಾರದ ಹಿಂದೆ ಸೂಕ್ತವಾದ ಕಾರಣವಿರುವುದರಿಂದಾಗಿ, ಇದನ್ನು ಗೌರವಿಸುವುದೂ ನಮ್ಮ ಕರ್ತವ್ಯ. ಈ ಪರಿಸ್ಥಿತಿಯಲ್ಲೂ ಗೆದ್ದುಬರುವ ಶಕ್ತಿಯು ಯುವರತ್ನ ಚಿತ್ರತಂಡಕ್ಕೆ ಸಿಗಲಿ ಎಂದು ನಾನು ಆಶಿಸುತ್ತೇನೆ.

–ಸುದೀಪ್‌, ನಟ

ಮನಸ್ಸಿಗೆ ಬಹಳ ಬೇಜಾರಾಗಿದೆ. ಹಲವು ಕುಟುಂಬಗಳು ಈ ವೃತ್ತಿಯನ್ನೇ ನಂಬಿಕೊಂಡು ಬದುಕುತ್ತಿವೆ. ಚಿತ್ರ ಬಿಡುಗಡೆ ಮಾಡಿದವರ ಗತಿ ಏನು? ದಯವಿಟ್ಟು ನಿರ್ಬಂಧ ರದ್ದುಗೊಳಿಸಿ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದರೆ ಹಲವಾರು ಜನರು ನಾಳೆ ಬೀದಿಗೆ ಬೀಳಲಿದ್ದಾರೆ. ಲಸಿಕೆ ಬಂದ ಮೇಲೂ ಸರ್ಕಾರ ಯಾಕೆ ಇಂತಹ ನಿರ್ಧಾರ ಕೈಗೊಳ್ಳುತ್ತಿದೆ ಎನ್ನುವ ಪ್ರಶ್ನೆ ಮೂಡಿದೆ. ನಮಗೆ ಭಯ ಆಗುತ್ತಿದೆ.

–ಶ್ರೀಮುರುಳಿ, ನಟ

ನಮ್ಮಲ್ಲಿ ಜಾಗೃತಿ ಮೂಡಿದೆ. ಜವಾಬ್ದಾರಿಯೂ ಇದೆ. ಹಸಿವಿಗಿಂತ ದೊಡ್ಡ ಕಾಯಿಲೆ ಇಲ್ಲ. ನಿರ್ಬಂಧಗಳು ನಮ್ಮ ಬದುಕಿಗೆ ಸಹಾಯವಾಗಬೇಕೇ ಹೊರತು ಮುಳುವಾಗಬಾರದು. ಚಿತ್ರರಂಗದ ಮೇಲಿನ ಹಠಾತ್‌ ಧೋರಣೆ ಖಂಡನೀಯ. ಎಲ್ಲರಿಗೂ ದುಡಿಯುವ ಅವಕಾಶವಿದೆ, ಚಿತ್ರರಂಗಕ್ಕೆ ಯಾಕಿಲ್ಲ? ಸೂಚನೆ ಕೊಡದೆ ಜಾರಿ ಮಾಡಿರುವ ಈ ನಿರ್ಬಂಧಗಳಿಂದ ಚಿತ್ರರಂಗ ಬಲಿ. #WeWant100PercentOccupency

–ಯಶ್‌, ನಟ

ಇದು ಕನ್ನಡ ಚಿತ್ರರಂಗಕ್ಕೆ ಮಾಡಿದ ಅನ್ಯಾಯ. ಗುರುವಾರವಷ್ಟೇ ಒಳ್ಳೆಯ ಕೌಟುಂಬಿಕ ಸಿನಿಮಾ ಯುವರತ್ನ ಬಿಡುಗಡೆಯಾಗಿದೆ. ಕೋವಿಡ್‌ ಸಂದರ್ಭದಲ್ಲಿ ಜನರ ನೆರವಿಗಾಗಿ ಪುನೀತ್‌ ಅವರೇ ಸರ್ಕಾರಕ್ಕೆ ₹50 ಲಕ್ಷವನ್ನು ಸರ್ಕಾರಕ್ಕೆ ನೀಡಿದ್ದರು. ಸರ್ಕಾರಕ್ಕೆ ಚಿತ್ರರಂಗದ ಕಷ್ಟ ಅರ್ಥವಾಗುತ್ತಿಲ್ಲವೇ. ರಾಜಕೀಯ ಸಭೆ, ಸಮಾರಂಭಕ್ಕೆ ಸಾವಿರಾರು ಜನ ಸೇರುತ್ತಾರೆ. ಚಿತ್ರಮಂದಿರದಲ್ಲಿ ಕೇವಲ 400–500 ಜನರು ಮಾತ್ರ ಇರುತ್ತಾರೆ. ಪಕ್ಷಪಾತ ಮಾಡಬೇಡಿ.

–ವಿಜಯ್‌, ನಟ.

ಸರ್ಕಾರವು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಈ ನಿರ್ಬಂಧ ತಂದಿರುವುದು ಸರಿಯಲ್ಲ. ನಿಮಗೆ ಸಿಕ್ಕುವ ಮನರಂಜನೆ ಮತ್ತೆ ಕೆಲವರ ಜೀವನೋಪಾಯವಾಗಿರುತ್ತದೆ. ಇದನ್ನು ಮರೆಯಬೇಡಿ. ಕನ್ನಡ ಚಿತ್ರರಂಗ ಉಳಿಸುವ ನಿಟ್ಟಿನಲ್ಲಿ ಚಿತ್ರಮಂದರಿಗಳಲ್ಲಿ ಶೇ 100 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿ ಎನ್ನುವುದು ಸರ್ಕಾರದಲ್ಲಿ ನನ್ನ ವಿನಂತಿ

–ರಕ್ಷಿತ್‌ ಶೆಟ್ಟಿ, ನಟ

ಸಿನಿಮಾ ಲಕ್ಷಾಂತರ ಜನರಿಗೆ ಮನರಂಜನೆಯ ಮೂಲ. ಆದರೆ, ಅದರ ಮೇಲೆ ಅವಲಂಬಿತರಾಗಿರುವ ಸಾವಿರಾರು ಜನರಿಗೆ ಅದು ಜೀವನೋಪಾಯ. ಒಳ್ಳೆಯ ಸಿನಿಮಾಗಳಿಗೆ ಕಡಿವಾಣ ಹಾಕಬೇಡಿ. ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಲಿ ಎಂದು ಮನವಿ ಮಾಡುತ್ತೇನೆ

–ಧನಂಜಯ್‌, ನಟ

ಎಲ್ಲ ವರ್ಗದ ಪ್ರೇಕ್ಷಕರಿಂದ ಪ್ರಶಂಸೆ ಪಡೆದು, ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಸಾರುವ ಸಿನಿಮಾ ‘ಯುವರತ್ನ’ಗೆ ಶೇಕಡ 100ರಷ್ಟು ಆಸನ ಭರ್ತಿಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬೇಕು. ಯಾವುದೇ ಮುನ್ಸೂಚನೆ ನೀಡದೆ ಸರ್ಕಾರ ಈ ಆದೇಶ ನೀಡಿ ಒಂದು ಒಳ್ಳೆ ಕನ್ನಡ ಸಿನಿಮಾಕ್ಕೆ ಅನ್ಯಾಯ ಮಾಡಿರುವುದು ಸರಿಯಲ್ಲ.

–ದಿನಕರ್‌ ತೂಗುದೀಪ, ನಿರ್ದೇಶಕ

ನಾವು ನಿಯಮವನ್ನು ಪಾಲಿಸುತ್ತೇವೆ ಹಾಗೂ ಸರ್ಕಾರದ ನಿರ್ಧಾರವನ್ನು ಗೌರವಿಸುತ್ತೇವೆ. ಆದರೆ, ಮೊದಲೇ ಈ ನಿರ್ಧಾರವನ್ನು ತಿಳಿಸಬೇಕಿತ್ತು. ಸರ್ಕಾರದ ನಿರ್ಧಾರದಿಂದಾಗಿ ಇದೀಗ ಬಿಡುಗಡೆಯಾಗಿರುವ ಚಿತ್ರಗಳಿಗೆ ಭಾರಿ ನಷ್ಟವಾಗಲಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಗೆ ಯಾವುದೇ ನಿರ್ಬಂಧ ಬೇಡ.

–ಆಶಿಕಾ ರಂಗನಾಥ್‌, ನಟಿ

ಆರೋಗ್ಯ ಮುಖ್ಯ, ಆದರೆ ಚಿತ್ರರಂಗದ ಜೊತೆ ಯಾವುದೇ ಮಾತುಕತೆ ನಡೆಸದೆ, ಏಕಾಏಕಿ ಇಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡಿರುವುದು ಸರಿಯಲ್ಲ.ಚಿತ್ರರಂಗ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ಸರ್ಕಾರ ಮೊದಲೇ ಈ ನಿರ್ಧಾರವನ್ನು ಪ್ರಕಟಿಸಿದ್ದರೆ, ಯುವರತ್ನ, ರಾಬರ್ಟ್‌, ಹೀರೋ ಚಿತ್ರದ ನಿರ್ಮಾಪಕರು ಸೂಕ್ತ ನಿರ್ಧಾರ ಕೈಗೊಳ್ಳಲು ಸಹಾಯವಾಗುತ್ತಿತ್ತು.

–ಹೇಮಂತ್‌ ರಾವ್‌, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT