ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲ್ಮ್‌ ಸಿಟಿ ಕಟ್ಟಿಕೊಡಿ, ಚಿತ್ರರಂಗ ಆಳ್ತೀವಿ ನೋಡಿ: ನಟ ಯಶ್‌

Last Updated 27 ಫೆಬ್ರುವರಿ 2020, 12:50 IST
ಅಕ್ಷರ ಗಾತ್ರ

ಫಿಲ್ಮ್‌ ಸಿಟಿ ಕಟ್ಟಿಕೊಟ್ಟು ನೋಡಿ;ಭಾರತೀಯ ಚಿತ್ರರಂಗವನ್ನು ನಮ್ಮುಡುಗ್ರು ಹೆಂಗೆ ಆಳ್ತಾರೆ ನೋಡಿ!

ಇದು ಕೇಳಲು ಸಿನಿಮಾ ಡೈಲಾಗ್‌ ರೀತಿಯೇ ಇರಬಹುದು. ಕೆಜಿಎಫ್‌ ಚಾಪ್ಟರ್‌ 2 ಸಿನಿಮಾದ ಡೈಲಾಗ್‌ ಅಂತೂ ಅಲ್ಲವೇ ಅಲ್ಲ; ಮತ್ತಿನ್ನೇನು ಎಂದುಕೊಂಡರೆ, 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ‘ರಾಖಿ ಭಾಯ್‌’ ಯಶ್‌ ಚಿತ್ರರಂಗದವರೆಲ್ಲರ ಪರವಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮುಂದಿಟ್ಟ ವಿನಮ್ರ ಹಕ್ಕೊತ್ತಾಯ.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನೆರೆದಿದ್ದ ದೇಶವಿದೇಶಗಳ ಚಿತ್ರರಂಗದ ಗಣ್ಯರು ಮತ್ತು ನಾಡಿನ ಚಿತ್ರರಸಿಕರುಯಶ್‌ ಬೇಡಿಕೆಗೆ ಭೋರ್ಗರೆವ ಕರತಾಡನದ ಬೆಂಬಲ ಸೂಚಿಸಿದರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಹ ಕುಳಿತಲ್ಲೇ ಯಶ್‌ ಬೇಡಿಕೆಗೆ ‘ಸರಿ ಆಗಬಹುದು’ ಎಂದು ಸಮ್ಮತಿಸುವಂತೆ ತಲೆದೂಗಿದರು.

ರಾಜ್ಯ ಸರ್ಕಾರ ರಾಜ್ಯದಲ್ಲಿಚಿತ್ರನಗರಿ ನಿರ್ಮಿಸಿಕೊಟ್ಟರೆ ಚಿತ್ರರಂಗದ70ರ ದಶಕದ ಸುವರ್ಣಯುಗವು ಮತ್ತೆ ಮರುಕಳಿಸುತ್ತದೆ ಎಂದು ಯಶ್‌ ವಿಶ್ವಾಸ ವ್ಯಕ್ತಪಡಿಸಿದರು.

‘ನನಗೂ ಒಂದು ಆಸೆ ಇದೆ. ಕರ್ನಾಟಕದಲ್ಲಿ ಚಿತ್ರನಗರಿ ಆಗಬೇಕು. ಕರ್ನಾಟಕದ ಹುಡುಗರಿಗೆ ತುಂಬಾ ಹುರುಪು ಇದೆ. ಒಂದು ದೊಡ್ಡ ಚಿತ್ರನಗರಿಯನ್ನು ಕಟ್ಟಿಸಿಕೊಡಲು ಮುಖ್ಯಮಂತ್ರಿಯವರು ಕ್ರಮ ತೆಗೆದುಕೊಳ್ಳಬೇಕು. ಅಲ್ಲಿ ಅಷ್ಟು ಎಕರೆ ಜಾಗ ಇದೆ, ಇಲ್ಲಿ ಇಷ್ಟು ಎಕರೆ ಜಾಗ ಇದೆ ಎಂದು ಹೇಳುತ್ತಲೇ ಬರಲಾಗುತ್ತಿದೆ. ನಾವು ಸಿನಿಮಾ ಮಾಡಲು ಬೇರೆ ಬೇರೆ ರಾಜ್ಯಗಳಿಗೆ ಹೋಗುವಂತಾಗಿದೆ. ನೀವು ಒಮ್ಮೆ ಚಿತ್ರನಗರಿ ಕಟ್ಟಿಸಿಕೊಡಿ, ಥ್ಯಾಂಕ್ಸ್‌ ರೂಪದಲ್ಲಿ ನಾವು ನಿಮಗೆ ಯಾವ ರೀತಿ ಋಣ ಸಂದಾಯವನ್ನು ವಾಪಸ್‌ ಕೊಡುತ್ತೇವೆಂದರೆ ನೀವು ತುಂಬಾ ಖುಷಿಯಾಗ್ತೀರಿ.ಚಿತ್ರನಗರಿ ಕಟ್ಟುವ ಮೂಲಕ ಚಿತ್ರರಂಗಕ್ಕೆ ನೀವು ಶಕ್ತಿ ಕೊಡಿ. ಇಡೀ ಉದ್ಯಮ ಬೆಳೆಯುತ್ತದೆ’ ಎಂದರು.

‘ಸಿನಿಮಾ ನಿರ್ಮಾಣ ಕೆಲಸಗಳುಚೆನ್ನೈ ಕೇಂದ್ರಿತವಾಗಿದ್ದಾಗ ಕಲಿಯುವವರಿಗೂ ಸಾಕಷ್ಟು ಅವಕಾಶಗಳು ಇದ್ದವು. ಈಗ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಆಸಕ್ತರೆಲ್ಲರೂ ಏಕಲವ್ಯರಾಗಿದ್ದೇವೆ. ನಾವೇ ಯಾವುದೋ ಸಿನಿಮಾ ನೋಡಿ ಕಲಿತುಕೊಂಡು, ಅದರಿಂದ ಬೇರೆಯವರ ಜತೆಗೆ ಸ್ಪರ್ಧಿಸುತ್ತಿದ್ದೇವೆ. ಪ್ರತಿ ಪೋಷಕರು ತಮ್ಮ ಮಕ್ಕಳನ್ನು ಒಳ್ಳೆಯ ಸಂಬಳದ ಆಸೆಗೆ ಸಾಫ್ಟ್‌ವೇರ್‌ ಕಡೆಗೆ ತಳ್ಳುತ್ತಿದ್ದಾರೆ. ನಮ್ಮ ರಾಜ್ಯದ ಹುಡುಗರು ತುಂಬಾ ಬುದ್ಧಿವಂತರಿದ್ದಾರೆ.ಮುಖ್ಯಮಂತ್ರಿಯವರು ಚಿತ್ರರಂಗಕ್ಕೆ ಶಕ್ತಿ ಕೊಟ್ಟು ಚಿತ್ರನಗರಿ ಸೌಲಭ್ಯ ಕಲ್ಪಿಸಿದರೆ, ನಮ್ಮಲ್ಲೇ ಒಳ್ಳೆಯ ನಿರ್ದೇಶಕರು, ಒಳ್ಳೆಯ ಕ್ಯಾಮೆರಾಮನ್‌ಗಳು, ಒಳ್ಳೆಯ ನಟ–ನಟಿಯರು, ಒಳ್ಳೆಯ ತಂತ್ರಜ್ಞರು ಹೊರಹೊಮ್ಮುತ್ತಾರೆ. ಭಾರತೀಯ ಚಿತ್ರರಂಗವನ್ನು ಖಂಡಿತಾ ಆಳುತ್ತಾರೆ.ನಿಮ್ಮ ಕಾಲದಲ್ಲಿ ಚಿತ್ರನಗರಿ ಆಗಲೇಬೇಕು’ ಎಂದು ‘ರಾಖಿಭಾಯ್‌’ ಹಕ್ಕೊತ್ತಾಯ ಮಂಡಿಸಿದರು.

ಸಿನಿಮಾ ಜೀವನಕ್ಕೆ ಸ್ಫೂರ್ತಿ
ಎಲ್ರಿಗೂ ನಮಸ್ಕಾರ ಕಣ್ರಪ್ಪ ಎನ್ನುತ್ತಾ ಮಾತು ಆರಂಭಿಸಿದ ‘ರಾಖಿ ಭಾಯ್‌’, ‘ಸಿನಿಮಾ ನನ್ನನ್ನು ಚಿಕ್ಕ ವಯಸ್ಸಿನಲ್ಲೇ ಆವರಿಸಿಕೊಂಡಿತು. ಸಿನಿಮಾ ಜೀವನಕ್ಕೆ ಸ್ಫೂರ್ತಿ ಕೊಟ್ಟಿತು. ಸಿನಿಮಾ ಹೊಟ್ಟೆಗೆ ಅನ್ನ ಕೊಟ್ಟಿತು. ಸಿನಿಮಾ ಸಮಾಜದಲ್ಲಿ ಸ್ಥಾನ ಕೊಟ್ಟಿತು. ಸಿನಿಮಾ ಬದುಕಲು ಒಂದು ಕಾರಣ ಕೊಟ್ಟಿತು. ಅಂತಹ ಸಿನಿಮಾವನ್ನು ನಾವೆಲ್ಲ ಇಂದು ಹಬ್ಬವಾಗಿ ಆಚರಿಸಲು ನಾವೆಲ್ಲರೂ ಸೇರಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT