ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಿನ್ನ’ ಹಾದಿ ಹಿಡಿದ ‘ತ್ರಿಕೋನ’

Last Updated 10 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ನಿರ್ದೇಶಕ ಕಮ್‌ ನಿರ್ಮಾಪಕ ಬ್ಲಾಕ್‌ ಬರ್ಡ್‌ ರಾಜಶೇಖರ್ ತ್ರಿಭಾಷೆಯಲ್ಲಿ ನಿರ್ಮಿಸಿರುವ ‘ತ್ರಿಕೋನ’ ಸಾಹಸ ಪ್ರಧಾನ ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ ಬರಬೇಕಿತ್ತು. ಕೊರೊನಾ ಮಾರಿ ಚಿತ್ರರಂಗದ ಭವಿಷ್ಯವನ್ನೂ ಅತಂತ್ರ ಸ್ಥಿತಿಗೆ ನೂಕಿರುವುದರಿಂದ ಚಿತ್ರ ಬಿಡುಗಡೆಗೆ ಈಗ ನಿರ್ಮಾಪಕರು ಪರ್ಯಾಯ ಮಾರ್ಗಗಳ ಶೋಧದಲ್ಲಿ ತೊಡಗಿದ್ದಾರೆ.

ಕನ್ನಡ, ತೆಲುಗು, ತಮಿಳಿನಲ್ಲಿಏಕಕಾಲಕ್ಕೆ ಬಿಡುಗಡೆ ಮಾಡಲು ಯೋಜಿಸಿದ್ದ ರಾಜಶೇಖರ್‌, ಈಗ ಒಟಿಟಿ ವೇದಿಕೆಗಳತ್ತ ಚಿತ್ತ ಹರಿಸಿದ್ದಾರಂತೆ. ಇತ್ತೀಚೆಗೆ ಬಿಡುಗಡೆಯಾದ ಅಶೋಕ್‌ ನಿರ್ದೇಶನದ‘ದಿಯಾ’ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದ್ದಕ್ಕಿಂತ ಒಟಿಟಿಯಲ್ಲಿ ಹೆಚ್ಚು ಜನರು ವೀಕ್ಷಿಸಿರುವುದನ್ನು ಉಲ್ಲೇಖಿಸುವ ಅವರು, ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರವನ್ನೇ ನೆಚ್ಚಿಕೊಂಡು ಕೂರುವ ಬದಲು ನೆಟ್‌ಫ್ಲಿಕ್ಸ್‌ ಅಥವಾ ಅಮೆಜಾನ್‌ ಪ್ರೈಮ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು 'ಪ್ರಜಾಪ್ಲಸ್‌’ಗೆ ತಿಳಿಸಿದರು.

ಮೂರು ಭಾಷೆಗಳಲ್ಲಿ ಚಿತ್ರ ನಿರ್ಮಿಸಲು ಸುಮಾರು ₹ 4 ಕೋಟಿಯವರೆಗೆ ವಿನಿಯೋಗಿಸಲಾಗಿದೆ. ಮಾರ್ಚ್‌ನಲ್ಲಿಪ್ರಚಾರ ಶುರುಮಾಡುವ ಯೋಜನೆಯೂ ಇತ್ತು. ಕೊರೊನಾ ನಮ್ಮ ಎಲ್ಲ ಯೋಜನೆಗಳನ್ನು ತಲೆಕೆಳಗು ಮಾಡಿಬಿಟ್ಟಿದೆ. ಹಾಗಂತ ಕೈಕಟ್ಟಿ ಕೂರುವಂತಿಲ್ಲ. ಬಿಡುಗಡೆಯನ್ನು ಇನ್ನು ಮುಂದೂಡುತ್ತಾ ಹೋದರೆ ಆರ್ಥಿಕ ನಷ್ಟವು ಏರುತ್ತದೆ.ಪರಿಸ್ಥಿತಿ ಸರಿಹೋಗಿ ಜನರು ಚಿತ್ರಮಂದಿರಕ್ಕೆ ಬರಲು ಶುರುಮಾಡಿದ ನಂತರ ಬೇಕಾದರೆ ಚಿತ್ರವನ್ನು ಚಿತ್ರಮಂದಿರಗಳಲ್ಲೂಬಿಡುಗಡೆ ಮಾಡಬಹುದುಎನ್ನುವ ಮಾತು ಸೇರಿಸಿದರು ಅವರು.

ಒಂದು ವೇಳೆ ‘ತ್ರಿಕೋನ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದರೆ ಇತ್ತೀಚೆಗೆ ಜಿ5 ಒಟಿಟಿಯಲ್ಲಿ ನೆರವಾಗಿ ತೆರೆಕಂಡ ಆದರ್ಶ ಈಶ್ವರಪ್ಪ ನಿರ್ದೇಶನದ‘ಭಿನ್ನ’ ಸಿನಿಮಾದ ಸಾಧನೆಯ ಸಾಲಿಗೆ ಇದೂ ಕೂಡ ಸೇರುತ್ತದೆ.

‘ಎರಡೇ ಪಾತ್ರಗಳನ್ನು ಇಟ್ಟುಕೊಂಡು, ‘143’ ಕಮರ್ಷಿಯಲ್ ಸಿನಿಮಾ ಮಾಡಿದ್ದ ನಿರ್ದೇಶಕ ಚಂದ್ರಕಾಂತ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕಥೆ ನಾನೇ ಬರೆದಿದ್ದು.ತಾಳ್ಮೆ, ಶಕ್ತಿ ಮತ್ತು ಅಹಂ ಪ್ರತಿ ಮನುಷ್ಯನಲ್ಲೂ ಇರಬಹುದಾದ ಗುಣಗಳು. ಇವುಗಳನ್ನೇ ಕೇಂದ್ರವಾಗಿಸಿ ಚಿತ್ರಮಾಡಿದ್ದೇವೆ. ಮೂರು ಭಾಷೆಗಳಲ್ಲೂ ಸ್ಕ್ರಿಪ್ಟ್‌ ಬೇರೆ ಬೇರೆ ರೀತಿ ಇದೆ. ಆದರೆ, ಆರಂಭ ಮತ್ತು ಕ್ಲೈಮ್ಯಾಕ್ಸ್‌ ಒಂದೇ ರೀತಿ ಇದೆ. ಕಥೆಯೇ ಚಿತ್ರದ ನಾಯಕ.ಸಂಭಾಷಣೆ ಬರೆಯಲು ಚಂದ್ರಕಾಂತ್‌ಗೆ ನೀಡಿದ್ದೆ. ಅವರು ಸ್ಕ್ರಿಪ್ಟ್‌ ಇನ್ನಷ್ಟು ಚೆಂದ ಮಾಡಿದ್ದನ್ನು ನೋಡಿ ನಿರ್ದೇಶನದ ಹೊಣೆಯನ್ನೂ ಚಂದ್ರಕಾಂತ್‌ಗೆ ವಹಿಸಿದೆ’ ಎನ್ನುತ್ತಾರೆ ದಿಗಂತ್‌ ನಟನೆಯ ‘ಬರ್ಫಿ’ ಚಿತ್ರ ನಿರ್ದೇಶಿಸಿದ್ದ ಬ್ಲಾಕ್‌ಬರ್ಡ್ ರಾಜಶೇಖರ್‌.

ಬಾಡಿಬಿಲ್ಡರ್‌ 'ಮಿಸ್ಟರ್‌ ಇಂಡಿಯಾ’ ವಿಜೇತ ಬಳ್ಳಾರಿಯ ಮಾರುತೇಶ್‌ಶಕ್ತಿ, ಅಹಂ ಮತ್ತು ತಾಳ್ಮೆ ಪರೀಕ್ಷೆಗೆ ಒಳಪಡಿಸುವ ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ಕಲಾವಿದರ ದೊಡ್ಡ ದಂಡೇ ಇದೆ. ಸುರೇಶ್‌ ಹೆಬ್ಳಿಕರ್‌, ಲಕ್ಷ್ಮಿ, ಸುಧಾರಾಣಿ,ಸಾಧುಕೋಕಿಲ, ಅಚ್ಯುತ್ ಕುಮಾರ್ ಇದ್ದಾರೆ.

ಶ್ರೀನಿವಾಸ್‌ ಛಾಯಾಗ್ರಹಣ, ಜಾನಿ ಮತ್ತು ಚೇತನ್‌ ಡಿಸೊಜಾ ಅವರ ಸಾಹಸ ನಿರ್ದೇಶನ, ಹೈಟ್‌ ಮಂಜು ನೃತ್ಯ ನಿರ್ದೇಶನ, ಜೀವನ್‌ ಪ್ರಕಾಶ್‌ ಸಂಕಲನ, ಸುರೇಂದ್ರನಾಥ್‌ಸಂಗೀತ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT