ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಶಸ್ತಿ ಅಂತಿಮ ಸುತ್ತಿಗೆ ಕನ್ನಡದ 14 ಸಿನಿಮಾ

14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
Last Updated 17 ಮಾರ್ಚ್ 2023, 3:43 IST
ಅಕ್ಷರ ಗಾತ್ರ

ಬೆಂಗಳೂರು: 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾ ವಿಭಾಗದ ಅಂತಿಮ ಸುತ್ತಿಗೆ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ‘ಗಂಧದಗುಡಿ’, ಮಂಸೋರೆ ನಿರ್ದೇಶನದ ‘19.20.21’, ಪೃಥ್ವಿ ನಿರ್ದೇಶನದ ‘ಹದಿನೇಳೆಂಟು’ ಸೇರಿದಂತೆ 14 ಸಿನಿಮಾಗಳು ಆಯ್ಕೆಯಾಗಿವೆ.

ಚಲನಚಿತ್ರೋತ್ಸವದ ವೆಬ್‌ಸೈಟ್‌ನಲ್ಲಿ ಏಷಿಯನ್‌, ಭಾರತೀಯ ಹಾಗೂ ಕನ್ನಡ ಹೀಗೆ ಮೂರು ಸ್ಪರ್ಧಾ ವಿಭಾಗಗಳಲ್ಲಿ ಸ್ಪರ್ಧೆಗೆ ಆಯ್ಕೆಯಾದ ಸಿನಿಮಾಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕನ್ನಡ ಸ್ಪರ್ಧೆಗೆ 108ಕ್ಕೂ ಅಧಿಕ ಸಿನಿಮಾಗಳು ನೋಂದಣಿಯಾಗಿದ್ದವು. ಈ ಪೈಕಿ ಅಮೋಘವರ್ಷ ಜೆ.ಎಸ್‌. ನಿರ್ದೇಶನದ ‘ಗಂಧದಗುಡಿ’, ಮಂಸೋರೆ ನಿರ್ದೇಶನದ ‘19.20.21’, ಜಡೇಶ ಕೆ.ಹಂಪಿ ನಿರ್ದೇಶನದ ‘ಗುರು ಶಿಷ್ಯರು’, ಬೂಸಾನ್‌ ಅಂತರರಾಷ್ಟ್ರೀಯ ಸಿನಿಮೋತ್ಸವ ಹಾಗೂ ಗೋವಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಪೃಥ್ವಿ ಕೊಣನೂರು ನಿರ್ದೇಶನದ ‘ಹದಿನೇಳೆಂಟು’, ವಿಶಾಲ್‌ ರಾಜ್‌ ನಿರ್ದೇಶನದ ‘ಕನಕ ಮಾರ್ಗ’, ಶಿವಧ್ವಜ್‌ ಶೆಟ್ಟಿ ನಿರ್ದೇಶನದ ತುಳು ಸಿನಿಮಾ ‘ಕೋರಮ್ಮ’, ರಘು ರಾಮಚರಣ್‌ ನಿರ್ದೇಶನದ ‘ಕುಬುಸ’, ಪ್ರದೀಪ್‌ ಕೆ.ಶಾಸ್ತ್ರಿ ಅವರ ‘ಮೇಡ್‌ ಇನ್‌ ಬೆಂಗಳೂರು’, ತ್ರಿಪಾಠಿ ಸುಂದರ್‌ ಅಭಿಕಾರ್‌ ಅವರ ‘ನಲ್ಕೆ’, ಕೃಷ್ಣೇಗೌಡ ಅವರ ‘ನಾನು ಕುಸುಮ’, ಸುನಿಲ್‌ ಮೈಸೂರು ನಿರ್ದೇಶನದ ‘ಆರ್ಕೆಸ್ಟ್ರಾ ಮೈಸೂರು’, ಉತ್ಸವ್‌ ಅವರ ‘ಫೋಟೊ’, ರವೀಂದ್ರ ವೆಂಶಿ ನಿರ್ದೇಶನದ ‘ಮಠ’, ರಿಷಿಕಾ ಶರ್ಮಾ ನಿರ್ದೇಶನದ ‘ವಿಜಯಾನಂದ’ ಸಿನಿಮಾಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿವೆ. ಈ ಪೈಕಿ ಮೂರು ಸಿನಿಮಾಗಳು ಪ್ರಶಸ್ತಿ ಪಡೆಯಲಿವೆ. ಮಾರ್ಚ್‌ 30ರಂದು ನಡೆಯಲಿರುವ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಇದು ಘೋಷಣೆಯಾಗಲಿದೆ.

ಏಷಿಯನ್‌ ಸ್ಪರ್ಧಾ ವಿಭಾಗದಲ್ಲಿ ‘ವಿರಾಟಪುರ ವಿರಾಗಿ’
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದ ‘ವಿರಾಟಪುರ ವಿರಾಗಿ’ ಚಿತ್ರೋತ್ಸವದ ಏಷಿಯನ್ ವಿಭಾಗದ ಸ್ಪರ್ಧೆಗೆ ಆಯ್ಕೆಯಾಗಿದೆ. ಈ ಸಿನಿಮಾ ಕಥನ ಹಾನಗಲ್‌ನ ವಿರಕ್ತಮಠದ ಕುಮಾರಸ್ವಾಮಿಗಳ ಜೀವನ ವೃತ್ತಾಂತದ ನಿರೂಪಣೆಯಾಗಿದೆ. ಈ ಸ್ಪರ್ಧಾ ವಿಭಾಗದಲ್ಲಿ ಭಾರತ, ಇರಾನ್, ಜಪಾನ್, ಶ್ರೀಲಂಕಾ, ಬಾಂಗ್ಲಾದೇಶ, ಫ್ರಾನ್ಸ್‌ ಸೇರಿದಂತೆ ಹಲವು ದೇಶಗಳ 14 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಕನ್ನಡದ ಎರಡು ಸಿನಿಮಾಗಳು ಆಯ್ಕೆಯಾಗಿರುವುದು ವಿಶೇಷ. ‘ವಿರಾಟಪುರ ವಿರಾಗಿ’ ಜೊತೆಗೆ ಕೆ.ಶಿವರುದ್ರಯ್ಯ ನಿರ್ದೇಶನದ ಕನ್ನಡ ಸಿನಿಮಾ ‘ಸಿಗ್ನಲ್‌ ಮ್ಯಾನ್‌ 1971’ ಸಿನಿಮಾ ಈ ವಿಭಾಗದಲ್ಲಿ ಆಯ್ಕೆಯಾಗಿದೆ.

ಭಾರತೀಯ ಸ್ಪರ್ಧಾ ವಿಭಾಗದಲ್ಲಿ ಕನ್ನಡದ ಐದು ಸಿನಿಮಾಗಳಿವೆ. ಸಂದೀಪ್‌ ಶೆಟ್ಟಿ ನಿರ್ದೇಶನದ ‘ಆರಾರಿರಾರೋ’, ಇಸ್ಲಾಹುದ್ದೀನ್‌ ಎನ್‌.ಎಸ್. ನಿರ್ದೇಶನದ ‘ಅನ್ನ’, ಚಂಪಾ ಪಿ. ಶೆಟ್ಟಿ ಅವರ ‘ಕೋಳಿ ಎಸ್ರು’, ಕೆ.ಸುಚೇಂದ್ರ ಪ್ರಸಾದ್‌ ಅವರ ‘ಮಾವು ಬೇವು’, ಹರೀಶ್‌ ಕುಮಾರ್‌ ಎಲ್‌. ಅವರ ನಿರ್ದೇಶನದ ‘ತನುಜಾ’ ಈ ಪಟ್ಟಿಯಲ್ಲಿವೆ.

ಮಾರ್ಚ್‌ 23ರಂದು ಚಲನಚಿತ್ರೋತ್ಸವ ಆರಂಭವಾಗಲಿದ್ದು, ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಸಂಜೆ 6ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಪಟ್ಟಿ ಪರಿಷ್ಕರಿಸಿದ ಅಕಾಡೆಮಿ!
14ನೇ ಆವೃತ್ತಿಯ ಚಲನಚಿತ್ರೋತ್ಸವದ ಕನ್ನಡ ಸ್ಪರ್ಧಾ ವಿಭಾಗಕ್ಕೆ 14 ಸಿನಿಮಾಗಳನ್ನು ಆಯ್ಕೆ ಮಾಡಿ ಚಲನಚಿತ್ರ ಅಕಾಡೆಮಿ ಪಟ್ಟಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ 13ನೇ ಆವೃತ್ತಿ ಸಮಯದಲ್ಲೇ ಸ್ಪರ್ಧೆಗೆ ಬಂದಿದ್ದ ‘ಸ್ವಚ್ಛ ಕರ್ನಾಟಕ’ ಎಂಬ ಸಿನಿಮಾವೂ ಇತ್ತು. ಸೆನ್ಸಾರ್‌ ಆದ ವರ್ಷ ಹಾಗೂ ಚಿತ್ರದಲ್ಲಿದ್ದ ವಿವಾದಾತ್ಮಕ ಸಂಭಾಷಣೆಗಳ ಕುರಿತಂತೆ ಆಕ್ಷೇಪಗಳು ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಕಾಡೆಮಿ, ಪರಿಷ್ಕೃತ ಪಟ್ಟಿ ಪ್ರಕಟಿಸಿದೆ. ಈ ಸಿನಿಮಾವನ್ನು ತೆಗೆದು ರವೀಂದ್ರ ವೆಂಶಿ ನಿರ್ದೇಶನದ ‘ಮಠ’ ಸಿನಿಮಾವನ್ನು ಸೇರ್ಪಡೆಗೊಳಿಸಿದೆ. ‘ಕಣ್ತಪ್ಪಿನಿಂದ ಇದು ಸೇರ್ಪಡೆಯಾಗಿತ್ತು’ ಎಂದು ಚಿತ್ರೋತ್ಸವದ ಸಮಿತಿಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿದರು.

ಇತ್ತೀಚೆಗಷ್ಟೇ ಬಿಡುಗಡೆಯಾಗಿ ವೀಕ್ಷಕರಿಂದ ಮೆಚ್ಚುಗೆ ಪಡೆದಿದ್ದ ಕನ್ನಡ ಸಿನಿಮಾ ‘ಪಾಲಾರ್‌’ ಸ್ಪರ್ಧಾ ವಿಭಾಗದಲ್ಲಿ ಇಲ್ಲದೇ ಇರುವುದೂ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ‘ಈ ಸಿನಿಮಾ ಒಂದು ಒಳ್ಳೆಯ ಪ್ರಯೋಗವಾಗಿತ್ತು. ಜಾತಿ ದೌರ್ಜನ್ಯದ ಬಗ್ಗೆ ದೃಢವಾದ ಹೇಳಿಕೆ ನೀಡುವ ಈ ಸಿನಿಮಾವನ್ನು ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆ ಮಾಡದೆ ದ್ರೋಹವೆಸೆಯಲಾಗಿದೆ’ ಎಂದು ವೀಕ್ಷಕರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

‘ನಾನು ಎರಡು ಸ್ಪರ್ಧಾ ವಿಭಾಗಕ್ಕೆ ಸೇರಿ ₹10 ಸಾವಿರ ಹಣ ಕಟ್ಟಿದ್ದೆ. ಬೇರೆ ಭಾಷೆಗಳಲ್ಲಿ ಇಂಥ ಸಿನಿಮಾ ಬಂದರೆ ಗುರುತಿಸುತ್ತಾರೆ. ಆದರೆ ನಮ್ಮ ಕರ್ನಾಟಕದಲ್ಲೇ ಇಂಥ ಸಿನಿಮಾ ಆಯ್ಕೆಯಾಗಿಲ್ಲ ಎಂಬ ಬೇಸರವಿದೆ. ದುಡ್ಡಿಗಾಗಿ ಅಲ್ಲ, ಕಥೆ; ಸಿನಿಮಾದ ಆಶಯಕ್ಕಾಗಿಯಾದರೂ ಈ ಸಿನಿಮಾ ಆಯ್ಕೆಯಾಗಬೇಕಿತ್ತು. ಬೇಕೆಂದೇ ಈ ಸಿನಿಮಾವನ್ನು ಕಡೆಗಣಿಸಲಾಗಿದೆ ಎಂದೆನಿಸುತ್ತಿದೆ’ ಎಂದು ‘ಪಾಲಾರ್‌’ ಸಿನಿಮಾ ನಿರ್ದೇಶಕ ಜೀವಾ ನವೀನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT