ಪ್ರೀತಿ, ಪ್ರೇಮದ ಕಥೆ ಹೇಳುತ್ತಿದ್ದ ನಿರ್ದೇಶಕ ನಾಗಶೇಖರ್ ಗಂಭೀರವಾದ ಕಥಾವಸ್ತುವುಳ್ಳ ವಿಷಯವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದಕ್ಕೊಂದು ಬಲವಾದ ಕಾರಣವೂ ಇದೆ. ಅದನ್ನು ವಿವರಿಸುವ ವೇದಿಕೆಯಾಗಿತ್ತು ‘ಭೀಮಾ ಕೋರೆಗಾಂವ್’ ಶೀರ್ಷಿಕೆ ಅನಾವರಣ ಸಮಾರಂಭ.
‘1818 ರ ಜ.1 ರಂದು ಸಮಾಜದಲ್ಲಿನ ಅಸಮಾನತೆಯ ವಿರುದ್ದ ನಡೆದ ‘ಭೀಮಾ ಕೋರೆಗಾಂವ್’ ಹೋರಾಟವನ್ನೇ ಕಥೆಯಾಗಿ ಹೊಂದಿರುವ ಚಿತ್ರವಿದು. ಶೋಷಿತರ ಧ್ವನಿಯಾಗಿ ಈ ಚಿತ್ರ ಮೂಡಿಬರಲಿದೆ. ನಾನು ಕೂಡ ಬದುಕಿನ ಒಂದು ಹಂತದಲ್ಲಿ ಶೋಷಿತನಾಗಿದ್ದೆ. ನನ್ನೊಳಗಿನ ನೋವಿನ ಕಥೆಯೂ ಹೌದು. ಮುಂದಿನ ವರ್ಷದ ವೇಳೆಗೆ ಚಿತ್ರೀಕರಣಕ್ಕೆ ಹೋಗುತ್ತೇವೆ. ₹120 ಕೋಟಿ ಬಜೆಟ್‌ನ ಚಿತ್ರವಾಗಿದ್ದು ಸ್ಟಾರ್ ನಟರೊಬ್ಬರು ನಾಯಕನಾಗಿರುತ್ತಾರೆ. ದೀಪಿಕಾ ಪಡುಕೋಣೆಯನ್ನು ನಾಯಕಿಯಾಗಿ ಕರೆತರುವ ಆಲೋಚನೆ ಇದೆ’ ಎಂದರು ಚಿತ್ರದ ನಿರ್ದೇಶಕ ನಾಗಶೇಖರ್.
ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಛಲವಾದಿ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಘಟನೆಯನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ನಿರ್ಧರಿಸಿ ನಿರ್ಮಾಣಕ್ಕೆ ಮುಂದಾಗಿದ್ದೇನೆ’ ಎಂದರು ನಿರ್ಮಾಪಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.