ವಿರುಪಾ ಅಂದರೆ ಮಕ್ಕಳ ಸಿನಿಮಾ ಎಂದರ್ಥ!

ಸೋಮವಾರ, ಮಾರ್ಚ್ 25, 2019
21 °C

ವಿರುಪಾ ಅಂದರೆ ಮಕ್ಕಳ ಸಿನಿಮಾ ಎಂದರ್ಥ!

Published:
Updated:
Prajavani

‘ವಿರುಪಾ’. ಏನಿದರ ಅರ್ಥ ಎಂಬ ಪ್ರಶ್ನೆ ಮೂಡುತ್ತಿದೆಯೇ? ಇದು ಮಂಗಳೂರಿನ ಪುನಿಕ್ ಶೆಟ್ಟಿ ನಿರ್ದೇಶನದ ಮಕ್ಕಳ ಚಿತ್ರದ ಶೀರ್ಷಿಕೆ.

ಈ ರೀತಿಯ ಶೀರ್ಷಿಕೆ ಹೊಳೆದಿದ್ದು ಹೇಗೆ ಎಂಬ ಪ್ರಶ್ನೆಗೆ ನಿರ್ದೇಶಕರು ಕೊಟ್ಟ ಉತ್ತರ ಹೀಗಿದೆ: ‘ವಿನ್ಸೆಂಟ್, ರುಸ್ತುಂ ಮತ್ತು ಪಾಕ್ಷ ಎನ್ನುವ ಮೂವರು ಮಕ್ಕಳು ಈ ಚಿತ್ರದ ಕಥೆಯ ಕೇಂದ್ರ. ಹಾಗಾಗಿ ಅವರ ಹೆಸರಿನ ಮೊದಲ ಅಕ್ಷರವನ್ನು ಎತ್ತಿಕೊಂಡು ಚಿತ್ರದ ಶೀರ್ಷಿಕೆ ರೂಪಿಸಲಾಗಿದೆ.’ ಅಲ್ಲದೆ, ಈ ಚಿತ್ರದ ಮುಹೂರ್ತ ಸಮಾರಂಭ ನಡೆದಿದ್ದು ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ.

ಮಕ್ಕಳ ಹಳ್ಳಿ ಮತ್ತು ಪೇಟೆಯ ಜೀವನವನ್ನು ಕಥಾವಸ್ತುವನ್ನಾಗಿ ಇಟ್ಟುಕೊಂಡು ಮಾಡಿರುವ ಸಿನಿಮಾ ಇದು. ಮೂವರಲ್ಲಿ ಒಬ್ಬ ಪುಟಾಣಿ ದೊಡ್ಡವರ ಒತ್ತಡಕ್ಕೆ ಮಣಿದು ಪಟ್ಟಣಕ್ಕೆ ಹೋಗುತ್ತಾನೆ. ಆದರೆ, ಪಟ್ಟಣದ ಜೀವನ ಒಗ್ಗದೆ ಹಳ್ಳಿಗೆ ಮರಳಿ ಬರುತ್ತಾನೆ. ‘ಮಕ್ಕಳ ಆಲೋಚನೆಗಳನ್ನು, ಚಟುವಟಿಕೆಗಳನ್ನು ಕಟ್ಟಿಹಾಕುವ ಪ್ರಯತ್ನ ಮಾಡಬಾರದು ಎಂಬ ಸಂದೇಶ ಈ ಚಿತ್ರದಲ್ಲಿ ಇದೆ’ ಎನ್ನುತ್ತಾರೆ ಪುನಿಕ್.

ಪುನಿಕ್ ಅವರು ಎಂಟೋ, ಒಂಬತ್ತೋ ವರ್ಷಗಳ ಹಿಂದೆ ಹಂಪಿಗೆ ಹೋಗಿದ್ದಾಗ ಇಂಥದ್ದೊಂದು ಸಿನಿಮಾ ಮಾಡುವ ಆಲೋಚನೆ ಮನಸ್ಸಿನಲ್ಲಿ ಮೂಡಿತ್ತಂತೆ.

ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ವಿಷ್ಣುನಾಥ್, 10ನೇ ತರಗತಿಯಲ್ಲಿ ಓದುತ್ತಿರುವ ಶಯಾಲ್ ಮತ್ತು ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವ ಪ್ರಾಪ್ತಿ ಈ ಚಿತ್ರದ ಪ್ರಧಾನ ಪಾತ್ರಗಳಿಗೆ ಜೀವ ತುಂಬಿದ್ದಾರೆ.

‘ಹಂಪಿ ಉತ್ಸವದ ಸಂದರ್ಭದಲ್ಲಿ ನಮ್ಮ ಮನೆಯವರು ಗೋಬಿ ಮಂಚೂರಿ ಅಂಗಡಿ ಹಾಕಿದ್ದೆವು. ಆ ಸಂದರ್ಭದಲ್ಲಿ ನನಗೆ ವಿರುಪಾ ಚಿತ್ರಕ್ಕೆ ಆಡಿಷನ್ ನಡೆಯಲಿರುವ ವಿಚಾರ ಗೊತ್ತಾಯಿತು. ಆಡಿಷನ್‌ನಲ್ಲಿ ಭಾಗವಹಿಸಿ, ಚಿತ್ರಕ್ಕೆ ಆಯ್ಕೆಯಾದೆ’ ಎನ್ನುತ್ತಾರೆ ವಿಷ್ಣುನಾಥ್.

ಚಿತ್ರದ ಕಥೆ ನಡೆಯುವುದು ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ. ‘ಹಂಪಿಯಲ್ಲಿ ಚಿತ್ರೀಕರಣ ಮಾಡುವುದು ಸುಲಭದ ಕೆಲಸವಲ್ಲ. ಅಲ್ಲಿ ಚಿತ್ರೀಕರಣಕ್ಕೆ ಅಗತ್ಯವಿರುವ ಅನುಮತಿಗಳನ್ನೆಲ್ಲ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಇಲ್ಲ. ಹಂ‍ಪಿಯಲ್ಲಿ ಚಿತ್ರೀಕರಣ ನಡೆಸಲು ಪ್ರತಿದಿನ ಅಂದಾಜು ₹ 1.5 ಲಕ್ಷ ಶುಲ್ಕ ಪಾವತಿಸಬೇಕು’ ಎಂದರು ಚಿತ್ರದ ಕಾರ್ಯಕಾರಿ ನಿರ್ಮಾಪಕ ಡಿಕ್ಸನ್ ಜಾಕಿ ಡಿಸೋಜ. ಡ್ಯಾಫ್ನಿ ನೀತು ಡಿಸೋಜ ಈ ಚಿತ್ರದ ನಿರ್ಮಾಪಕಿ. ‘ವಿರುಪಾ’ ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !