ಮಂಗಳವಾರ, ಸೆಪ್ಟೆಂಬರ್ 22, 2020
26 °C

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸೈಫ್, ಕರೀನಾ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ಜೋಡಿ ಸೈಫ್‌ ಅಲಿ ಖಾನ್ ಹಾಗೂ ಕರೀನಾ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸುದ್ದಿಯನ್ನು ಸ್ವತಃ ಈ ಜೋಡಿಯೇ ಖಚಿತಪಡಿಸಿದೆ. ಇವರಿಗೆ ಈಗಾಗಲೇ ತೈಮೂರ್ ಅಲಿ ಖಾನ್‌ ಎಂಬ 3 ವರ್ಷದ ಮಗನಿದ್ದಾನೆ.

‘ನಾವು ನಮ್ಮ ಕುಟುಂಬಕ್ಕೆ ಮತ್ತೊಬ್ಬ ಅತಿಥಿಯ ಆಗಮನವಾಗುವುದನ್ನು ಕಾಯುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಸಹಕಾರ ಹಾಗೂ ಹಾರೈಕೆಗೆ ಧನ್ಯವಾದಗಳು’ ಎನ್ನುವ ಮೂಲಕ ಎರಡನೇ ಮಗುವಿನ ಆಗಮನದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕರೀನಾ ಗರ್ಭಿಣಿ ಎಂಬ ಕುರಿತ ಗಾ‌ಳಿಸುದ್ದಿಗಳು ಹರಿದಾಡುತ್ತಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಕರೀನಾ ತಂದೆ ರಣ್‌ಧೀರ್ ಕಪೂರ್ ‘ನನಗನ್ನಿಸಿದ ಹಾಗೆ ಇದು ಸತ್ಯ ಇರಬಹುದು. ಈ ಸುದ್ದಿ ನಿಜವಾದರೆ ನಾನು ತುಂಬಾನೇ ಸಂತಸ ಪಡುತ್ತೇನೆ. ಇಬ್ಬರು ಮಕ್ಕಳಿದ್ದರೆ ಒಳ್ಳೆಯದು. ಒಬ್ಬರಿಗೊಬ್ಬರು ಜೊತೆಯಾಗುತ್ತಾರೆ’ ಎಂದಿದ್ದರು. ಅದರೊಂದಿಗೆ ಈ ವಿಷಯದ ಬಗ್ಗೆ ಸೈಫ್ ಹಾಗೂ ಕರೀನಾ ತಮಗೆ ಏನು ತಿಳಿಸಿಲ್ಲ. ಇದು ಸತ್ಯವೋ ಸುಳ್ಳೋ ಎಂಬುದು ತಿಳಿದಿಲ್ಲ ಎಂದಿದ್ದರು.

2018ರಲ್ಲಿ 2ನೇ ಮಗುವಿನ ಬಗ್ಗೆ ಕೇಳಿದಾಗ ‘ಇನ್ನೂ ಎರಡು ವರ್ಷ ಈ ಬಗ್ಗೆ ಯೋಚಿಸುವುದಿಲ್ಲ’ ಎಂದಿದ್ದರು ಕರೀನಾ. 2019ರಲ್ಲಿ ಪತ್ರಿಕೆಯೊಂದರ ಸಂದರ್ಶನದಲ್ಲಿ ‘ಎರಡನೇ ಮಗುವಿನ ಕುರಿತು ಸದ್ಯಕ್ಕೆ ಯೋಚನೆ ಇಲ್ಲ. ನಾನು ಹಾಗೂ ಸೈಫ್ ತೈಮೂರ್ ಜೊತೆಗೆ ಖುಷಿಯಾಗಿದ್ದೇವೆ. ಇಲ್ಲಿಯವರೆಗೆ ಎರಡನೇ ಮಗು ಮಾಡಿಕೊಳ್ಳುವ ಬಗ್ಗೆ ನಾವು ಯೋಚಿಸಿಲ್ಲ. ನಾವಿಬ್ಬರೂ ನಮ್ಮ ನಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದೇವೆ. ನಾವು ನಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನವನ್ನು ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದೇವೆ’ ಎಂದಿದ್ದರು.

ಸದ್ಯ ಕರೀನಾ ಅಮೀರ್ ಖಾನ್ ನಟನೆಯ ‘ಲಾಲ್‌ ಸಿಂಗ್ ಚಡ್ಢಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದಿನ ವರ್ಷದ (2021) ಡಿಸೆಂಬರ್‌ಗೆ ಮುಂದಕ್ಕೆ ಹಾಕಲಾಗಿದೆ. 
ಸೈಫ್ ‘ದಿಲ್ಲಿ’ ಹೆಸರಿನ ಅಮೆಜಾನ್ ಪ್ರೈಮ್ ಶೋ ಹಾಗೂ ‘ಭೂತ್ ಪೊಲೀಸ್’, ‘ಬಂಟಿ ಔರ್ ಬಬ್ಲಿ 2’ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು