ಗುರುವಾರ , ಜನವರಿ 23, 2020
28 °C
ರಾಜ್ಯ ಚಲನಚಿತ್ರ ಪ್ರಶಸ್ತಿ: ರಾಘವೇಂದ್ರ ರಾಜ್‌ಕುಮಾರ್ ಪಿ.ಶೇಷಾದ್ರಿ, ಮೇಘನಾರಾಜ್‌ ಸವಿನುಡಿಗಳು

ಚಲನಚಿತ್ರ ಪ್ರಶಸ್ತಿ:ರಾಘವೇಂದ್ರ ರಾಜ್‌ಕುಮಾರ್, ಶೇಷಾದ್ರಿ, ಮೇಘನಾರಾಜ್‌ ಸವಿನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2018ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಪ್ರಶಸ್ತಿಗೆ ಭಾಜನರಾದವರು ತಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಸಂತೋಷ, ಸಂಭ್ರಮ, ಸಮಾಧಾನ

ಇಂಥ ದೊಡ್ಡ ಪ್ರಶಸ್ತಿಗೆ ಗುರುತಿಸಿದಾಗ ಸಂತೋಷ, ಸಂಭ್ರಮ, ಸಮಾಧಾನವಾಗುವುದು ಸಹಜ. ‘ಮೂಕಜ್ಜಿಯ ಕನಸುಗಳು’ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಸಿಕ್ಕಿದೆ. ಎಲ್ಲರ ಹಾರೈಕೆಯಿಂದ ಚಿತ್ರ 50ನೇ ದಿನಕ್ಕೆ ಕಾಲಿಡುತ್ತಿರುವಾಗ ಈ ಚಿತ್ರಕ್ಕೂ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಸಿಕ್ಕಿರುವುದು ಕಾಕತಾಳೀಯ. ಈ ಪ್ರಶಸ್ತಿಯ ಶ್ರೇಯ ನಿಜಕ್ಕೂ ಶಿವರಾಮ ಕಾರಂತರಿಗೆ ಸಲ್ಲಬೇಕು. ಇನ್ನೂ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಸಂದಿರುವುದು ನನ್ನೊಬ್ಬನ ಶ್ರಮಕ್ಕಲ್ಲ. ಸಾಹಿತ್ಯ ಕೃತಿ ರಚಿಸುವುದು ಒಬ್ಬರಿಂದ ಸಾಧ್ಯ. ಆದರೆ, ಸಿನಿಮಾ ಮಾಡುವುದು ಒಬ್ಬರಿಂದ ಸಾಧ್ಯವಿಲ್ಲ. ಇದೊಂದು ಸಮೂಹ ಕಲೆ. ಹಾಗಾಗಿ ನನ್ನ ಜತೆ 25 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಲಾವಿದರು, ತಂತ್ರಜ್ಞರು, ನಿರ್ಮಾಪಕರಿಗೂ ಈ ಪ್ರಶಸ್ತಿಯ ಶ್ರೇಯ ಸಲ್ಲುತ್ತದೆ. ಈ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚು ಮಾಡಿದೆ.

ಪಿ.ಶೇಷಾದ್ರಿ, ನಿರ್ದೇಶಕ‌

***

ಕನಸೊಂದು ನಿಜವಾಗಿದೆ

ಅತ್ಯುತ್ತಮ ನಟಿ ಪ್ರಶಸ್ತಿ ಬಂದಿರುವುದರಿಂದ ನಿಜಕ್ಕೂ ತುಂಬಾ ಖುಷಿಯಾಗಿದೆ. ನಾನು ಕನಸು– ಮನಸಿನಲ್ಲೂ ಪ್ರಶಸ್ತಿಯನ್ನು ನಿರೀಕ್ಷೆ ಮಾಡಿರಲಿಲ್ಲ. ‘ಇರುವುದೆಲ್ಲವ ಬಿಟ್ಟು’ ಸಿನಿಮಾ ಸಂಪೂರ್ಣ ಕಮರ್ಷಿಯಲ್‌ ಚಿತ್ರ. ಇದರಲ್ಲಿನ ನನ್ನ ನಟನೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ನನ್ನ ಕನಸೊಂದನ್ನು ನಿಜ ಮಾಡಿದಂತಾಗಿದೆ.

ಮೇಘನಾ ರಾಜ್‌, ನಟಿ

***

ಆತ್ಮವಿಶ್ವಾಸ ತಗ್ಗುವ ವೇಳೆಗೆ ಪ್ರಶಸ್ತಿ ಸಿಕ್ಕಿದೆ

ನನ್ನ ವೃತ್ತಿ ಬದುಕಿನಲ್ಲಿ ‘ಹಗ್ಗದ ಕೊನೆ’, ‘ಆ ಕರಾಳ ರಾತ್ರಿ’ ಹಾಗೂ ‘ರಂಗನಾಯಕಿ’ ಈ ಮೂರು ಚಿತ್ರಗಳು ಪ್ರಮುಖವಾದವು. ಹಗ್ಗದಕೊನೆ ಮತ್ತು ಆ ಕರಾಳ ರಾತ್ರಿ ಈ ಎರಡು ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಕೈತಪ್ಪಿತು. ಇಷ್ಟು ಚೆನ್ನಾಗಿ ಸಿನಿಮಾ ಮಾಡಿದರೂ ನಮಗೆ ಮನ್ನಣೆ ಸಿಗಲಿಲ್ಲವೆಂದು ನಿರಾಸೆಯಾಗಿತ್ತು. ಈಗ ರಾಜ್ಯ ಪ್ರಶಸ್ತಿಯೂ ಬಾರದಿದ್ದರೆ ತುಂಬಾ ನಿರಾಸೆಯಾಗುತ್ತಿತ್ತು. ನನ್ನ ಆತ್ಮವಿಶ್ವಾಸದ ಮಟ್ಟ ಕಡಿಮೆಯಾಗುವ ವೇಳೆಗೆ ಸರಿಯಾಗಿ ‘ಆ ಕರಾಳ ರಾತ್ರಿ’ಗೆ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ. ತುಂಬಾ ಖುಷಿಯಾಗಿದೆ. ಇನ್ನಷ್ಟು ಕನ್ನಡದ ಕಾದಂಬರಿಗಳನ್ನು ಸಿನಿಮಾ ಮಾಡಿ, ಅಂತರರಾಷ್ಟ್ರೀಯ ಮಟ್ಟಕ್ಕೆ ಕನ್ನಡ ಚಿತ್ರಗಳನ್ನು ಕೊಂಡೊಯ್ಯಲು ಪ್ರಯತ್ನಿಸುತ್ತೇನೆ.

 –ದಯಾಳ್‌ ಪದ್ಮನಾಭ್‌, ನಿರ್ದೇಶಕ

***

ಮೊದಲ ಪ್ರಶಸ್ತಿಯ ಸಂತಸ

ನನ್ನ ಸಿನಿಮಾ ಬದುಕಿನಲ್ಲಿ ಇದು ಮೊದಲ ಪ್ರಶಸ್ತಿ. ನನ್ನ ವೃತ್ತಿ ಬದುಕಿನಲ್ಲಿ ಈವರೆಗೆ ನಟನೆಗಾಗಿ ನನಗೆ ಈವರೆಗೆ ಯಾವುದೇ ಪ್ರಶಸ್ತಿ ಬಂದಿರಲಿಲ್ಲ. ಈ ಪ್ರಶಸ್ತಿಗೆ ತುಂಬಾ ಮಹತ್ವ ಇದೆ. ಅದೂ ಅಲ್ಲದೆ ಹದಿನಾಲ್ಕು ವರ್ಷಗಳ ನಂತರ ಮತ್ತೆ ನಟನೆಗೆ ಮರಳಿದ ನನಗೆ ರಾಜ್ಯದ ಜನರು ಅಪಾರ ಪ್ರೀತಿ– ವಿಶ್ವಾಸ ತೋರಿಸಿದ್ದಾರೆ. ಇದರಲ್ಲಿ ನನ್ನ ತಂದೆ–ತಾಯಿ ಆಶೀರ್ವಾದವೂ ಇದೆ. ‘ಅಮ್ಮನ ಮನೆ’ ಚಿತ್ರದ ನಟನೆಗೆ ಅತ್ತುತ್ತಮ ನಟ ಪ್ರಶಸ್ತಿ ಸಿಕ್ಕಿದ್ದರೆ ಅದರ ಶ್ರೇಯ ನಿರ್ದೇಶಕ ನಿಖಿಲ್‌ ಮಂಜು ಅವರಿಗೆ ಸಲ್ಲಬೇಕು. ನಾನು ಅನಾರೋಗ್ಯಕ್ಕೀಡಾಗಿ, ಸಾವು ಗೆದ್ದು ಬಂದ ಮೇಲೆ ನನ್ನಿಂದ ನಟಿಸಲು ಆಗುವುದೇ ಇಲ್ಲ ಎಂದುಕೊಂಡಿದ್ದೆ. ಆದರೆ, ಮಂಜು ‘ನೀವೇ ಆ ಪಾತ್ರವನ್ನು ಮಾಡಬೇಕು’ ಎಂದು ಪಟ್ಟುಹಿಡಿದು ನನ್ನಿಂದ ಅಭಿನಯ ಮಾಡಿಸಿದ್ದರು. ನಾನು ನಟಿಸಿರುವ ‘ಪೊಗರು’ ಚಿತ್ರ ಬಿಡುಗಡೆಗೆ ಬಾಕಿ ಇದೆ. ‘ವಾರ್ಡ್‌ ನಂಬರ್‌ 11’, ‘ಅಪ್ಪನ ಅಂಗಿ’ ಹಾಗೂ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಅರ್ಪಿಸಲು ‘ಸಿರಿ’ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಕಷ್ಟಪಟ್ಟರೆ, ಶ್ರಮ ಹಾಕಿದರೆ ಪ್ರತಿಫಲವಿದೆ ಎನ್ನುವುದು ಗೊತ್ತಾಗಿದೆ. ನಾನು ಇನ್ನಷ್ಟು ಪರಿಶ್ರಮ ಹಾಕಿ, ನನ್ನ ಕೆಲಸ ಮಾಡಲು ನನಗೆ ಈ ಪ್ರಶಸ್ತಿ ಸ್ಫೂರ್ತಿ ನೀಡಿದೆ. ಪ್ರಶಸ್ತಿ ಬಂದಿರುವುದರಿಂದ ತುಂಬಾ ಖುಷಿಯಾಗಿದೆ.

ರಾಘವೇಂದ್ರ ರಾಜಕುಮಾರ್‌, ನಟ

***

 

ಪ್ರಶಸ್ತಿ ಬಂದಾಗ ಖುಷಿಪಡಬೇಕು

ಪ್ರಶಸ್ತಿ ಬಂದಾಗ ಎಲ್ಲರಿಗೂ ಖುಷಿಯಾಗುವಂತೆ ನನಗೂ ಖುಷಿಯಾಗಿದೆ. ಅದರಲ್ಲೂ ಡಾ.ರಾಜ್‌ಕುಮಾರ್‌ ಹೆಸರಿನಲ್ಲಿ ಪ್ರಶಸ್ತಿ ಬಂದಿರುವುದು ಇನ್ನಷ್ಟು ಖುಷಿ ತಂದಿದೆ. ಚಿತ್ರರಂಗಕ್ಕೆ ಬಂದು ನಲವತ್ತು ವರ್ಷಗಳು ತುಂಬಿದ ಮೇಲೆ ಗುರುತಿಸಿರುವುದೇ ದೊಡ್ಡ ಸಂತೋಷ. ‘ಡಾ.ರಾಜ್‌ಕುಮಾರ್‌ ಪ್ರಶಸ್ತಿ’ ಯಾವಾಗಲೋ ಸಿಗಬೇಕಿತ್ತು ಎಂದು ಬಹಳಷ್ಟು ಜನರು ಹೇಳುತ್ತಾರೆ. ಪ್ರಶಸ್ತಿ ಸಿಗಲಿಲ್ಲವೆಂದು ಕಲಾವಿದ ಕೊರಗಬಾರದು. ಅದಕ್ಕೆ ಏನೇನು ಅಡ್ಡಿಗಳು ಇರುತ್ತವೋ ಯಾರು ಬಲ್ಲರು. ಆದರೆ, ಪ್ರಶಸ್ತಿ ಬಂದಾಗ ಖುಷಿಪಡಬೇಕು ಅಷ್ಟೆ.

ಜೆ.ಕೆ. ಶ್ರೀನಿವಾಸಮೂರ್ತಿ, ನಟ– ನಿರ್ದೇಶಕ, ನಿರ್ಮಾಪಕ

***

ಶ್ರಮಕ್ಕೆ ಮಾನ್ಯತೆ ಸಿಕ್ಕಿದೆ

ಛಾಯಾಗ್ರಾಹಕರಾದ ವಿ.ಕೆ. ಮೂರ್ತಿ, ರಾಜೇಂದ್ರ ಮೆಲೋನ್‌ ಮತ್ತು ಡಿ.ವಿ. ರಾಜಾರಾಮ್‌ ಅವರ ಬಳಿ ಸಹಾಯಕ ಛಾಯಾಗ್ರಾಹಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಅವರನ್ನು ಈ ಸಂದರ್ಭದಲ್ಲಿ ನೆನೆಯುವೆ. ಕನ್ನಡ, ಒರಿಯಾ, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಹಲವು ಚಿತ್ರಗಳಿಗೆ ಡಿಒಪಿಯಾಗಿ ಕೆಲಸ ಮಾಡಿದ್ದೇನೆ. ಕನ್ನಡ ಚಿತ್ರರಂಗಕ್ಕೆ ಬಂದು 50 ವರ್ಷ ತುಂಬಿವೆ. ಇಷ್ಟು ವರ್ಷದ ಶ್ರಮಕ್ಕೆ ಒಂದು ಮಾನ್ಯತೆ ಸಿಕ್ಕಿದೆ. ಪುಟ್ಟಣ್ಣ ಕಣಗಾಲ್‌, ಸಿದ್ದಲಿಂಗಯ್ಯ ಸೇರಿ ಹಲವು ನಿರ್ದೇಶಕರ ಜತೆಗೆ ಕೆಲಸ ಮಾಡಿದ್ದೇನೆ. ಜೀವಮಾನದ ಸಾಧನೆ ಪರಿಗಣಿಸಿ ‘ಡಾ.ವಿಷ್ಣುವರ್ಧನ್‌ ಪ್ರಶಸ್ತಿ’ ನೀಡಿರುವುದು ಖುಷಿ ಕೊಟ್ಟಿದೆ. ಈ ಪ್ರಶಸ್ತಿಯನ್ನು ನನ್ನ ವೃತ್ತಿಗೆ ಅರ್ಪಿಸುತ್ತೇನೆ.

ಬಿ.ಎಸ್‌.ಬಸವರಾಜು, ಛಾಯಾಗ್ರಾಹಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು