ಸೋಮವಾರ, ಜನವರಿ 20, 2020
29 °C
ಏಳು ಕಥೆಗಳ ಕಥಾಸಂಗಮ

ಹುಚ್ಚು ಸಾಹಸವೋ, ಪ್ರ್ಯಾಕ್ಟಿಕಲ್‌ ಯತ್ನವೋ?!

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಸಾಹಸವೊಂದಕ್ಕೆ ಕೈಹಾಕಿದ್ದಾರೆ. ಏಳು ನಿರ್ದೇಶಕರು, ಏಳು ಕಥೆಗಳು, ಒಂದು ಸಿನಿಮಾ ಎನ್ನುತ್ತ ‘ಕಥಾಸಂಗಮ’ ಸಿದ್ಧಪಡಿಸಿದ್ದಾರೆ. ಇದನ್ನು ಜನ ಹೇಗೆ ಸ್ವೀಕರಿಸಬಹುದು ಎಂಬುದರ ಕಲ್ಪನೆ ಅವರಿಗೂ ಪೂರ್ಣ ಪ್ರಮಾಣದಲ್ಲಿ ಇದ್ದಂತಿಲ್ಲ. ಅವರೊಂದಿಗಿನ ಮಾತುಕತೆಯ ಅಕ್ಷರರೂಪ ಇಲ್ಲಿದೆ.

ರಿಷಬ್ ಶೆಟ್ಟಿ ಅವರು ‘ರಿಕ್ಕಿ’ ಚಿತ್ರದ ಕೆಲಸದಲ್ಲಿ ತೊಡಗಿಕೊಂಡಿದ್ದ ಕಾಲ ಅದು. ಆಗ ಒಂದು ದಿನ ಅವರು ಯೂಟ್ಯೂಬ್‌ನಲ್ಲಿ ಏನೋ ಹುಡುಕುತ್ತ ಇದ್ದಾಗ ಅವರಿಗೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಕಥಾಸಂಗಮ’ ಸಿನಿಮಾ ಸಿಕ್ಕಿತು. ಅದನ್ನು ವೀಕ್ಷಿಸಿದ ರಿಷಬ್, ದಶಕಗಳ ಹಿಂದೆಯೇ ಪುಟ್ಟಣ್ಣ ಅವರು ಇಂಥದ್ದೊಂದು ಸಿನಿಮಾ ಮಾಡಿದ್ದಾರಲ್ಲ ಎಂದು ಬೆರಗಾದರು.

ಅಷ್ಟೇ ಅಲ್ಲ, ತಾವೂ ಇಂಥದ್ದೊಂದು ಸಿನಿಮಾ ಏಕೆ ಮಾಡಬಾರದು ಎನ್ನುವ ಆಲೋಚನೆ ರಿಷಬ್ ಮನಸ್ಸಿನಲ್ಲಿ ಮೊಳೆಯಿತು. ಈ ಆಲೋಚನೆಯ ಬಗ್ಗೆ ರಿಷಬ್ ತಮ್ಮ ಸಿನಿಮಾ ತಂಡದ ಸದಸ್ಯರಲ್ಲಿ ಹೇಳಿಕೊಂಡರು. ಅವರಿಗೆ ಇದು ಆಸಕ್ತಿಕರ ಅನಿಸಿತು. ತಾವೂ ಇಂಥದ್ದೊಂದು ಸಿನಿಮಾ ಮಾಡಿ, ಅದಕ್ಕೆ ‘ಕಥಾಸಂಗಮ’ ಎಂದೇ ಹೆಸರಿಟ್ಟು, ಪುಟ್ಟಣ್ಣ ಅವರಿಗೆ ಗೌರವ ಸಮರ್ಪಿಸುವ ಕೆಲಸ ಮಾಡಬಹುದು ಎಂದು ಅವರೆಲ್ಲ ಆಲೋಚಿಸಿದರು...

ಇದು ‘ಕಥಾಸಂಗಮ’ ಚಿತ್ರದ ಹಿಂದಿನ ಚಿಕ್ಕ ಕಥೆ. ನಿರ್ದೇಶಕ ರಿಷಬ್ ಅವರ ಆಲೋಚನೆಯ ಕೂಸು ಇದು. ಈ ಸಿನಿಮಾ ಶುಕ್ರವಾರ (ಡಿ. 6) ತೆರೆಗೆ ಬರುತ್ತಿದೆ. ಏಳು ನಿರ್ದೇಶಕರು, ಏಳು ಕಥೆಗಳು, ಏಳು ಸಂಗೀತ ನಿರ್ದೇಶಕರು ಇರುವ ಚಿತ್ರ ಇದು. ‘ಕಥಾಸಂಗಮ’ ಬಿಡುಗಡೆ ಕೆಲಸಗಳ ನಡುವೆಯೇ ರಿಷಬ್, ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದರು.

‘ಏಳು ಕಥೆ, ಏಳು ನಿರ್ದೇಶಕರು, ಒಂದು ಸಿನಿಮಾ... ಇದು ಹುಚ್ಚು ಸಾಹಸವೋ ಅಥವಾ ಪ್ರ್ಯಾಕ್ಟಿಕಲ್‌ ಪ್ರಯತ್ನವೋ’ ಎಂದು ರಿಷಬ್ ಅವರಲ್ಲಿ ಪ್ರಶ್ನಿಸಿದಾಗ, ‘ಇದಕ್ಕೆ ನನ್ನ ಬಳಿ ಉತ್ತರವಿಲ್ಲ. ಇದು ಹುಚ್ಚು ಸಾಹಸದ ರೀತಿಯಲ್ಲಿ ತಲೆಗೆ ಬಂತು. ಆದರೆ ಮುಂದಿನ ಕೆಲಸಗಳೆಲ್ಲ ಪ್ರ್ಯಾಕ್ಟಿಕಲ್ ನೆಲೆಯಲ್ಲಿ ನಡೆದವು. ಜನ ಈ ಸಾಹಸವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕಲ್ಪನೆ ನನಗೂ ಇಲ್ಲ’ ಎಂದು ನಕ್ಕರು.

‘ಪುಟ್ಟಣ್ಣ ಅವರು ಹಿಂದೆಯೇ ಇಂಥದ್ದೊಂದು ಕೆಲಸ ಮಾಡಿದ್ದರು. ಹೀಗಿರುವಾಗ, ಈ ಕೆಲಸವನ್ನು ಮಾಡಲು ಈಗ ಏಕೆ ಆಗದು ಎಂಬ ಆಲೋಚನೆ ಬಂತು. ಹಿಂದೆ ಆಯ್ಕೆ ಮಾಡಿಕೊಳ್ಳುತ್ತಿದ್ದ ಕಥೆಗಳಿಗೂ ಇಂದು ಆಯ್ಕೆ ಮಾಡಿಕೊಳ್ಳುತ್ತಿರುವ ಕಥೆಗಳಿಗೂ ವ್ಯತ್ಯಾಸ ಇದೆ. ಹಿಂದಿನ ಕಥೆಗಳು ಬಹಳ ಗಟ್ಟಿಯಾಗಿರುತ್ತಿದ್ದವು. ಇಂದು ಒಂದು ಮಾತುಕತೆ, ಒಂದು ಸಂದರ್ಭ ಕೂಡ ಸಿನಿಮಾದಲ್ಲಿ ಕಥೆಯ ರೂಪ ತಾಳಬಹುದು. ಹಾಗಾಗಿ, ನಾವು ಈ ಸಿನಿಮಾ ಕೆಲಸ ಶುರು ಮಾಡಿದಾಗ ಕಥೆಗಳ ಆಯ್ಕೆಯೇ ಉಗ್ರ ಹೋರಾಟದಂತೆ ಆಗಿತ್ತು’ ಎಂಬ ವಿವರಣೆ ನೀಡಿದರು.

ಕಥೆಗಳ ಸಂಗಮವೇ?

ಈ ಚಿತ್ರದಲ್ಲಿ ಏಳು ಕಥೆಗಳೂ ಸಂಗಮ ಆಗುತ್ತವೆಯೇ ಎಂಬ ಪ್ರಶ್ನೆ ಹಲವರಲ್ಲಿ ಇದೆ. ಇದನ್ನು ರಿಷಬ್ ಅವರಲ್ಲಿ ಕೇಳಿದಾಗ, ‘ಹಾಗೆ ಮಾಡಿದರೆ ಆ್ಯಂಥಾಲಜಿ ಆಗುವುದಿಲ್ಲ. ಇಲ್ಲಿ ಏಳೂ ಸಿನಿಮಾಗಳು ಬೇರೆ ಬೇರೆ ಜಾನರ್‌ನಲ್ಲಿವೆ. ಉಳಿದವರು ಕಂಡಂತೆ ಸಿನಿಮಾ ನೋಡಿದವರಿಗೆ ಹಾಗೂ ಅದರಂತಹ ಬೇರೆ ಸಿನಿಮಾ ನೋಡುವವರಿಗೆ ಇದು ಬಹಳ ಬೇಗ ಹತ್ತಿರವಾಗುತ್ತದೆ. ಏಳೂ ಸಿನಿಮಾಗಳಲ್ಲಿ ಕನ್ನಡದ ಬೇರೆ ಬೇರೆ ಉಪಭಾಷೆಗಳ ಬಳಕೆಯಾಗಿದೆ. ಬೇರೆ ಬೇರೆ ಜೀವನದ ಹುಡುಕಾಟ ನಡೆದಿದೆ’ ಎಂದು ಹೇಳಿದರು.

ಈ ಚಿತ್ರಕ್ಕಾಗಿ ಕಥೆಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ರಿಷಬ್ ಕೈಯಲ್ಲಿ ಒಂದು ಹಂತದಲ್ಲಿ 20 ಕಥೆಗಳು ಇದ್ದವು. ಅವುಗಳಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ಕಥೆಗಳನ್ನು ಗುರುತಿಸಿ, ನಿರ್ದೇಶಕರ ಕೈಯಿಂದ ಆ ಕಥೆಗಳನ್ನು ಆಯ್ಕೆ ಮಾಡಿಸಲಾಯಿತು. ಹಾಗೆ ಆಯ್ಕೆ ಮಾಡಿಕೊಂಡ ಕಥೆಗಳನ್ನು ನಿರ್ದೇಶಕರು ಹಾಗೂ ರಿಷಬ್, ಒಬ್ಬರಿಗೊಬ್ಬರು ಹೇಳಿದರು. ಎಲ್ಲರೂ ಸಮ್ಮತಿ ನೀಡಿದ ಏಳು ಕಥೆಗಳನ್ನು ಅಂತಿಮವಾಗಿ ಆಯ್ಕೆ ಮಾಡಿ, ಸಿನಿಮಾ ಚಿತ್ರೀಕರಣ ಕೆಲಸ ಶುರು ಮಾಡಲಾಯಿತು.

‘ಚಿತ್ರಮಂದಿರಗಳಿಗೆ ಬರುತ್ತಿರುವವಲ್ಲಿ ಹೆಚ್ಚಿನವರು ಮಾಸ್ ಕಮರ್ಷಿಯಲ್ ಸಿನಿಮಾ ವೀಕ್ಷಕರು. ಅವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಉಳಿದವರು ಕಂಡಂತೆ ಚಿತ್ರದ ನಂತರ ಒಂದಿಷ್ಟು ಕ್ಲಾಸ್ ವೀಕ್ಷಕರು ಕೂಡ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲು ಆರಂಭಿಸಿದರು. ಅಂಥವರಿಗೆ ಈ ಸಿನಿಮಾ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇನೆ. ಕಾದು ನೋಡಬೇಕು. ಜನರ ಇಷ್ಟವನ್ನು ನಾವೇ ನಿರ್ಣಯಿಸಲು ಆಗದು’ ಎನ್ನುವುದು ರಿಷಬ್ ಹೇಳಿಕೆ.

‘ಕಥಾಸಂಗಮ’ವನ್ನು ಜನ ಇಷ್ಟಪಡುತ್ತಾರೆ ಎಂದು ಹೇಳಲು ಅವರಲ್ಲಿ ಒಂದಿಷ್ಟು ಕಾರಣಗಳು ಇವೆ. ‘ಕೆಲವು ವೆಬ್ ಸಿರೀಸ್‌ಗಳು, ಪುಟ್ಟಣ್ಣ ಅವರ ಸಿನಿಮಾಗಳು, ಬೇರೆ ಭಾಷೆಗಳಲ್ಲಿ ಬರುವ ಇಂತಹ ಸಿನಿಮಾಗಳನ್ನು ನೋಡುವವರು ನಮ್ಮಲ್ಲಿ ಇದ್ದಾರೆ. ಅವರು ದೊಡ್ಡ ಸಂಖ್ಯೆಯಲ್ಲಿ ಇಲ್ಲದಿರಬಹುದು. ಈಗ ಕಥಾಸಂಗಮದಂತಹ ಸಿನಿಮಾ ಮಾಡಿ ತೋರಿಸಿ, ಅವರಿಗೆ ಇಷ್ಟವಾದರೆ ಅವರು ಮುಂದೆ ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಬರಲು ಆರಂಭಿಸುತ್ತಾರೆ. ಆಗ, ಇಂತಹ ಸಿನಿಮಾಗಳು ಪ್ರಾಮುಖ್ಯತೆ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ’ ಎಂದು ಅವರು ವಿವರಣೆ ನೀಡುತ್ತಾರೆ.

ಇದನ್ನೂ ಓದಿ: ಕಣಗಾಲ್‌ ಹಾದಿಯಲ್ಲಿ ರಿಷಬ್‌: ತಿಂಗಳಾಂತ್ಯಕ್ಕೆ ಕಥಾ ಸಂಗಮ

ನಿರ್ದೇಶಕರ ಅಭಿಪ್ರಾಯಗಳು

ರಿಷಬ್ ಎಲ್ಲಾ ನಿರ್ದೇಶಕರ ನಿರ್ದೇಶಕರು

ಏಳೂ ಕಥೆಗಳು ಸ್ವತಂತ್ರವಾಗಿ ಸಾಗುತ್ತವೆ. ನಮ್ಮಲ್ಲಿ ಏಳೂ ನಿರ್ದೇಶಕರ ನಡುವೆ ಆರೋಗ್ಯಕರ ಸ್ಪರ್ಧೆ ಇತ್ತು. ಎಲ್ಲರೂ ಸೇರಿ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಮನೋಭಾವ ಇತ್ತು. ರಿಷಬ್ ಅವರು ಎಲ್ಲ ನಿರ್ದೇಶಕರ ನಿರ್ದೇಶಕರಾಗಿದ್ದರು ಎಂದು ನಿರ್ದೇಶಕ ರಾಹುಲ್ ಪಿ.ಕೆ. ಹೇಳುತ್ತಾರೆ.

ಪ್ರತಿ ಕಥೆಯೂ ಒಂದೊಂದು ಪ್ರಕಾರದಲ್ಲಿ ಇದೆ

ಏಳೂ ಕಥೆಗಳ ನಡುವೆ ಒಂದು ನಂಟು ಇದೆ. ಪ್ರತಿ ಕಥೆಯೂ ಒಂದೊಂದು ಪ್ರಕಾರದಲ್ಲಿ ಇದೆ. ನನ್ನ ಸಿನಿಮಾದಲ್ಲಿ ಸಂಭಾಷಣೆ ಇಲ್ಲ. ಇದರಲ್ಲಿ ರಿಷಬ್, ಹರಿಪ್ರಿಯಾ ಇದ್ದಾರೆ. ಒಂದು ನಾಯಿಯೂ ಇದೆ. ಈ ಮೂರು ಪಾತ್ರಗಳು ಒಂದು ಜಾಗದಲ್ಲಿ ಸಂಧಿಸುತ್ತವೆ. ಸಂಭಾಷಣೆ ಇಲ್ಲದ ನನ್ನ ಸಿನಿಮಾದ ಆದಿ–ಅಂತ್ಯವನ್ನು ಜನರಿಗೆ ಹೇಳುವುದು ಸವಾಲಿನ ಕೆಲಸವಾಗಿತ್ತು ಎಂದು ನಿರ್ದೇಶಕ ಕಿರಣ್ /ರಾಜ್ ಕೆ ಹೇಳುತ್ತಾರೆ.

ತಾಂತ್ರಿಕವಾಗಿ ದೊಡ್ಡ ಸವಾಲು

ತಾಂತ್ರಿಕವಾಗಿ ದೊಡ್ಡ ಸವಾಲು ಇರಲಿಲ್ಲ. ರಿಷಬ್ ಕೊಟ್ಟ ಅವಕಾಶ ಬಳಸಿಕೊಳ್ಳುವುದು, ಅವರ ನಿರೀಕ್ಷೆಯನ್ನು ಹುಸಿಗೊಳಿಸದಿರುವುದು ದೊಡ್ಡ ಸವಾಲಾಗಿತ್ತು ಎಂದು ನಿರ್ದೇಶಕ ಚಂದ್ರಜಿತ್ ಹೇಳುತ್ತಾರೆ.

ದಶಕಗಳ ನಂತರ ಈ ಸಿನಿಮಾ ಬರುತ್ತಿದೆ

ಏಳೂ ಸಿನಿಮಾಗಳು ಬೇರೆ ಬೇರೆ ಪ್ರಕಾರದವು. ದಶಕಗಳ ನಂತರ ಈ ರೀತಿಯ ಸಿನಿಮಾ ಬರುತ್ತಿದೆ. ಇದನ್ನು ಜನ ಹೇಗೆ ಸ್ವೀಕರಿಸಬಹುದು ಎಂಬ ಪ್ರಶ್ನೆ ಇತ್ತು. ಆದರೆ ಸಿನಿಮಾ ಚೆನ್ನಾಗಿ ಬಂದಿದೆ. ಜನ ಸ್ವೀರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ನಿರ್ದೇಶಕ
ಕರಣ್ ಹೇಳುತ್ತಾರೆ.

ಸೂಕ್ತ ಕಲಾವಿದರ ಹುಡುಕಾಟ ಸವಾಲಾಗಿತ್ತು

ಕಥೆ ಸಿದ್ಧವಾದ ನಂತರ ಅದಕ್ಕೆ ಸೂಕ್ತವಾದ ಕಲಾವಿದರನ್ನು ಹುಡುಕುವುದು ಸವಾಲಾಗಿತ್ತು. ನನ್ನ ಸಿನಿಮಾ ಉತ್ತರ ಕರ್ನಾಟಕದ ಭಾಷೆ ಹೊಂದಿದೆ. ಇಂತಹ ಕಥೆಗೆ ಚಿರಪರಿಚಿತ ಮುಖಗಳನ್ನು ತೆಗೆದುಕೊಳ್ಳಲು ಆಗದು ಎಂದು ನಿರ್ದೇಶಖ ಜಯಶಂಕರ್ ಎ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)