ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕದಲ್ಲಿ ಮೈಸೂರು ಯುವಕನ ಸಾಧನೆ

Last Updated 21 ಜನವರಿ 2020, 9:00 IST
ಅಕ್ಷರ ಗಾತ್ರ

ಫ್ಯಾಷನ್‌ ಡಿಸೈನಿಂಗ್‌ ವೃತ್ತಿಗೆ ಪರಿಶ್ರಮ ಹಾಗೂ ಪ್ರತಿಭೆ ಇರಬೇಕು, ಜೊತೆಗೆ ಕಲೆಯೂ ಒಲಿಯಬೇಕು. ಮೈಸೂರಿನ ಈ ಯುವಕನಿಗೆ ಈ ಮೂರು ಅಂಶಗಳಿದ್ದು, ಸದ್ಯ ಅಮೆರಿಕದಲ್ಲಿ ಪ್ರಮುಖ ಫ್ಯಾಷನ್‌ ಡಿಸೈನರ್‌ ಆಗಿ ಮಿಂಚುತ್ತಿದ್ದಾರೆ. ಚಿತ್ರನಟರಿಗೆ, ಕಲಾವಿದರಿಗೆ ವಸ್ತ್ರವಿನ್ಯಾಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಈ ಯುವ ಪ್ರತಿಭೆಯ ಹೆಸರು ಕೌಶಲ್ ವಿಶುಕುಮಾರ್‌. ಇವರ ತಂದೆಎಸ್‌.ಎಂ.ವಿಶುಕುಮಾರ್ ಎಲ್‌.ಜಿ ಕಂಪೆನಿಯ ಮೈಸೂರು ಶಾಖೆಯಲ್ಲಿ ವ್ಯವಸ್ಥಾಪಕರಾಗಿದ್ದಾರೆ. ತಾಯಿಅನಿತಾ ಶಿಕ್ಷಕಿಯಾಗಿದ್ದಾರೆ. ಸಹೋದರ ಕೌಶಿಕ್‌ ವಿಶು ಮೈಸೂರಿನಲ್ಲಿ ಹೋಟೆಲ್‌ ಉದ್ಯಮಿ. ಇವರು ಪಡೆದಿರುವುದು ಮಾಹಿತಿ ವಿಜ್ಞಾನ ಎಂಜಿನಿಯರಿಂಗ್‌ ಪದವಿಯಾದರೂ ಆಯ್ಕೆ ಮಾಡಿಕೊಂಡಿದ್ದು ಕಲಾ ಕ್ಷೇತ್ರವನ್ನು.

ಕಲೆಯ ತುಡಿತ ಇವರಿಗೆ ಬಾಲ್ಯದಿಂದಲೂ ಇತ್ತು. ಅದು ಇವರನ್ನು ಫ್ಯಾಷನ್‌ ಡಿಸೈನಿಂಗ್‌ನತ್ತ ಕೊಂಡೊಯ್ಯುವಂತೆ ಮಾಡಿತು. 2015ರಲ್ಲಿ ಮೈಸೂರಿನ ನ್ಯಾಷನಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ (ಎನ್ಐಇ) ಎಂಜಿನಿಯರಿಂಗ್‌ ಪದವಿ ಪಡೆದ ಮೇಲೆ ಮೈಸೂರಿನ ಕ್ವೀನ್ಸ್‌ ಸ್ಕೂಲ್‌ ಆಫ್‌ ಡಿಸೈನಿಂಗ್‌ನಲ್ಲಿ ಶಿಕ್ಷಣ ಪಡೆದು ಫ್ಯಾಷನ್‌ ಡಿಸೈನರ್‌ ಆದರು.

ಇವರ ಸಂಬಂಧಿಕರಲ್ಲಿ ಕೆಲವರು ತಮಿಳು ಸಿನಿಮಾ ನಟರಿಗೆ ವಸ್ತ್ರ ವಿನ್ಯಾಸ ಮಾಡಿದ್ದರು. ಆದರೆ, ಇವರು ಪಕ್ಕಾ ಕನ್ನಡಿಗ. ಇವರ ಒಲವು ಕನ್ನಡ ಸಿನಿಮಾಗಳ ಮೇಲೆ ಬೀರಿತು. ಚಿತ್ರನಟಿಯರಾದ ಶ್ರದ್ಧಾ ಶ್ರೀನಾಥ್‌, ಶ್ರುತಿ ಹರಿಹರನ್, ಸುಮನ್‌ ನಗರಕರ್ ಮುಂತಾದವರಿಗೆ ವಸ್ತ್ರವಿನ್ಯಾಸ ಮಾಡಿ ಇವರು ಸೈ ಎನಿಸಿಕೊಂಡಿದ್ದಾರೆ.

ಅಮರಿಕದಲ್ಲಿ ಸಾಧನೆ: ಕೌಶಲ್ ಈಗ ಇರುವುದು ಅಮೆರಿಕದ ಮಯಾಮಿ ಫ್ಲೋರಿಡಾದಲ್ಲಿ. ‘ಬಾಕಿಯೊ ಕೌಚರ್‌’ ಎಂಬ ಕಂಪೆನಿಯಲ್ಲಿ ಇವರು ಸಹಾಯಕ ಫ್ಯಾಷನ್‌ ಡಿಸೈನರ್‌ ಹಾಗೂ ವ್ಯವಸ್ಥಾಪಕರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮೆರಿಕಕ್ಕೆ ಹೋದ ಮೇಲೆ ಮಯಾಮಿ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ನಿರ್ವಹಣಾ ಅಧ್ಯಯನ ಪದವಿಯನ್ನೂ ಪಡೆದಿದ್ದಾರೆ.

ಇವರಿಗೆ ಫ್ಯಾಷನ್‌ ಡಿಸೈನಿಂಗ್‌ನಲ್ಲಿ ಆಸೆ ತುಂಬಿ, ಬೆಳೆಸಿದ್ದು ಗುರುಗಳಾದ ಪ್ರಸಿದ್ಧ ಡಿಸೈನರ್‌ಗಳಾದ ಆಶಾ ಜಯರಾಮ್, ರಾಖೀ ರಾಶಿಂಗರ್. ಮನೀಶ್ ಮಲ್ಹೋತ್ರ, ಭಾರತದ ಅಮೆರಿಕನ್‌ ಡಿಸೈನರ್‌ಗಳಾದ ನಯೀಮ್‌ ಖಾನ್, ಬಿಬು ಮಹಾಪಾತ್ರ, ಅಮೆರಿಕನ್ ಡಿಸೈನರ್‌ಗಳಾದ ಮೈಕಲ್‌ ಕೋರ್ಸ್, ಕೆವಿನ್‌ ಕ್ಲೈನ್‌ ಇವರಿಗೆ ಮಾದರಿ ಆಗಿದ್ದಾರೆ.

ಮಾಡೆಲಿಂಗ್‌ ಜಗತ್ತಿನಲ್ಲಿ ಈಗಾಗಲೇ ಉತ್ತಮ ಹೆಸರು ಮಾಡಿದ್ದಾರೆ. ಅಮೆರಿಕದ ಪ್ರಮುಖ ವಿದ್ಯುನ್ಮಾನ ಮಾಧ್ಯಮಗಳು ಇವರನ್ನು ಕರೆಸಿ ಸಂದರ್ಶನಗಳನ್ನು ನಡೆಸಿವೆ. ಸಂವಹನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಯೂಟ್ಯೂಬ್‌ನಲ್ಲಿ ಈಗಾಗಲೇ ಈ ವಿಡಿಯೊಗಳಿಗೆ ಸಾಕಷ್ಟು ‘ಲೈಕ್‌’ಗಳು ಸಿಕ್ಕಿವೆ. ಚಾನೆಲ್‌ಗಳಿಗೆ ಹಿಂಬಾಲಕರು ಇದ್ದಾರೆ.

‘ಓ’ ವಿಸಾ ಪಡೆದ ಸಾಧನೆ: ಅಮೆರಿಕದಲ್ಲಿ ‘ಓ’ ಶ್ರೇಣಿಯ ವಿಸಾ ಪಡೆಯುವುದು ಸಾಮಾನ್ಯದ ಮಾತಲ್ಲ. ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ಇರುವವರಿಗೆ ಮಾತ್ರ ಇಂತಹ ಅವಕಾಶ ಸಿಗುತ್ತದೆ. ಉದಾಹರಣೆಗೆ ಪ್ರಿಯಾಂಕ ಛೋಪ್ರಾ ಅವರಿಗೆ ಇಂತಹ ಅವಕಾಶ ಸಿಕ್ಕಿತ್ತು. ಕೌಶಲ್‌ ಅವರಿಗೂ ಇಂತಹ ಗೌರವವನ್ನು ಅಮೆರಿಕ ಸರ್ಕಾರ ನೀಡಿರುವುದು ವಿಶೇಷ.

ಅಮೆರಿಕದ ‘ಆ್ಯನಾ’ ಹಾಗೂ ‘ಮಿಸಿಸಿಪಿ ಲಿಂಕ್’ ನಿಯತಕಾಲಿಕೆಗಳ ಮುಖಪುಟದಲ್ಲಿ ಯಾವುದೇ ವ್ಯಕ್ತಿಯ ಚಿತ್ರ ಪ್ರಕಟವಾಗುವುದು ಸಾಮಾನ್ಯದ ವಿಚಾರವಲ್ಲ. ಅಂತಹ ಗೌರವ ಇವರಿಗೆ ಸಿಕ್ಕಿರುವುದು ಮೈಸೂರಿನ ಪ್ರತಿಭೆ ಅಮೆರಿಕದಲ್ಲಿ ಹೊಳೆಯುವಂತೆ ಆಗಿದೆ.

ಅಮೆರಿಕದಲ್ಲಿ ಪರಿಪೂರ್ಣ ಚಿತ್ರೀಕರಣ ನಡೆಸಿದ ‘ಬಬ್ರು’, ‘ಊರ್ವಿ’ ಹಾಗೂ ‘5ಜಿ’ ಕನ್ನಡ ಸಿನಿಮಾಗಳಿಗೂ ಇವರು ವಸ್ತ್ರ ವಿನ್ಯಾಸ ಮಾಡಿದ್ದಾರೆ. ಜತೆಗೆ ಇವರಿಗೆ ಡಾನ್ಸ್, ಜಿಮ್ನಾಸ್ಟಿಕ್ಸ್‌ ಹಾಗೂ ಟೆನಿಸ್‌ ಇಷ್ಟದ ಹವ್ಯಾಸಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT