ಶುಕ್ರವಾರ, ಜೂನ್ 5, 2020
27 °C

ಥ್ರಿಲ್ಲರ್ ಮತ್ತು ಭಾವುಕ ಕ್ಷಣಗಳ ಪಾಕ ‘ಕವಚ’

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ಸಿನಿಮಾ: ಕವಚ
ತಾರಾಗಣ: ಶಿವರಾಜ್‌ ಕುಮಾರ್, ವಸಿಷ್ಠ ಸಿಂಹ, ಇಶಾ ಕೊಪ್ಪಿಕರ್
ನಿರ್ದೇಶನ: ಜಿ.ವಿ.ಆರ್. ವಾಸು
ನಿರ್ಮಾಪಕ: ಎಂ.ವಿ.ವಿ. ಸತ್ಯನಾರಾಯಣ

**

ಅಲ್ಲಲ್ಲಿ ಒಂಚೂರು ಎಂಬಂತೆ ಬರುವ ಹಾಸ್ಯ, ಸಾಗರ – ಊಟಿ – ಮಡಿಕೇರಿಯ ಹಸಿರುಹೊದ್ದ ದೃಶ್ಯಗಳು, ರಾಕ್ಷಸ ಸದೃಶ ಖಳನಾಯಕನ ಕ್ರೌರ್ಯ, ನಂದಿನಿ ಎಂಬ ಬಾಲಕಿಯ ಮುಗ್ಧ ಮಾತುಗಳು, ಸಿನಿಮಾ ವೀಕ್ಷಕರನ್ನು ಮತ್ತೆ ಮತ್ತೆ ಕುರ್ಚಿಯಂಚಿಗೆ ತಂದಿರಿಸುವ ಥ್ರಿಲ್... ಶಿವರಾಜ್‌ ಕುಮಾರ್ ಅಭಿನಯದ ‘ಕವಚ’ ಸಿನಿಮಾ ಅಂದರೆ ಏನು ಎಂಬ ಪ್ರಶ್ನೆಗೆ ಥಟ್ಟನೆ ಇವಿಷ್ಟನ್ನೂ ಹೇಳಿಬಿಡಬಹುದು.

ಹಾಗಾದರೆ, ಇವಿಷ್ಟರಲ್ಲಿ ಶಿವರಾಜ್‌ ಕುಮಾರ್‌ ಪಾತ್ರ ಏನು ಎಂಬ ಪ್ರಶ್ನೆ ಬರಬಹುದು. ಆ ಪ್ರಶ್ನೆಗೆ ಉತ್ತರ ‘ಕವಚ’! ಅಂದರೆ, ಇಡೀ ಚಿತ್ರವನ್ನು ಶಿವರಾಜ್‌ ಕುಮಾರ್‌ ಅವರೇ ಆವರಿಸಿಕೊಂಡಿದ್ದಾರೆಯೇ? ಇಲ್ಲಿ, ಬಾಲಕಿ ನಂದಿನಿಯ ಪಾಲಿಗೆ ಶಿವರಾಜ್‌ ಕುಮಾರ್‌ ರಕ್ಷಾ‘ಕವಚ’ದಂತೆ ನಿಲ್ಲುತ್ತಾರೆ.

ಇದು ಮಲಯಾಳದ ‘ಒಪ್ಪಂ’ ಸಿನಿಮಾದ ರಿಮೇಕ್‌. ಅಂದರೆ ಕಥೆ ಏನು ಎಂಬುದನ್ನು ಹೇಳುವ ಅಗತ್ಯವಿಲ್ಲ. ಹೇಳಿದರೂ ಸಿನಿಮಾ ನೋಡುವ ಸೊಗಸಿಗೆ ಅಡ್ಡಿಯಾಗುವುದಿಲ್ಲ. ಶಿವರಾಜ್‌ ಕುಮಾರ್‌ ಇದರಲ್ಲಿ ನಿಭಾಯಿಸಿರುವುದು ಜಯರಾಮ ಎನ್ನುವ ಪಾತ್ರ. ಆತ ಕುರುಡ. ಜಯರಾಮ ಮತ್ತೆ ಮತ್ತೆ ಹೇಳಿಕೊಂಡಂತೆ, ‘ನಾನು ಕುರುಡ; ಆದರೆ ದುರ್ಬಲನಲ್ಲ’.

ಜಯರಾಮನ ಪಾಲಿಗೆ ಪರಮಾಪ್ತನಂತೆ ಇರುವ ನ್ಯಾಯಮೂರ್ತಿ (ನಿವೃತ್ತ) ಕೃಷ್ಣಮೂರ್ತಿ ವರ್ಷಗಳ ಹಿಂದೆ ವಾಸುದೇವ ಎನ್ನುವವನ ಪ್ರಕರಣದ ವಿಚಾರಣೆ ನಡೆಸಿ, ಆತನಿಗೆ ಶಿಕ್ಷೆ ವಿಧಿಸಿರುತ್ತಾರೆ. ಆಗ ವಾಸುದೇವನ ಕುಟುಂಬದ ಸದಸ್ಯರು ಆತ್ಮಹತ್ಯೆಗೆ ಶರಣಾಗುತ್ತಾರೆ. ಇದನ್ನು ಕಂಡ ವಾಸುದೇವ ತನಗೆ ಶಿಕ್ಷೆ ವಿಧಿಸಿದ ನ್ಯಾಯಮೂರ್ತಿ ವಿರುದ್ಧ ಸೇಡು ತೀರಿಸಿಕೊಳ್ಳುವ ಶಪಥ ಮಾಡುತ್ತಾನೆ.

ಕೃಷ್ಣಮೂರ್ತಿಯನ್ನು ಕೊಲ್ಲುತ್ತಾನೆ. ಕೊಲ್ಲುವ ಮೊದಲು, ‘ನಿಮ್ಮ ಮಗಳನ್ನೂ ಹುಡುಕಿ ಕೊಲ್ಲುತ್ತೇನೆ’ ಎಂದು ಹೇಳಿರುತ್ತಾನೆ. ನಂದಿನಿಯ ಪೋಷಕನ ಸ್ಥಾನದಲ್ಲಿರುವ ಜಯರಾಮ, ಆಕೆಯ ಪಾಲಿಗೆ ‘ಕವಚ’ವಾಗಿ ನಿಲ್ಲುವುದೇ ಸಿನಿಮಾ ತಿರುಳು.

ಖಳನಾಯಕ ಗಟ್ಟಿ ನಟನೆ ತೋರಿಸಿದಾಗಲೇ ನಾಯಕನ ಪಾತ್ರಕ್ಕೆ ಕೂಡ ತೂಕ ಬರುವುದು ಎಂಬ ಮಾತಿದೆ. ಆ ಮಾತನ್ನು ನೆನಪಿನಲ್ಲಿ ಇಟ್ಟುಕೊಂಡು ನಟಿಸಿದಂತಿದೆ ವಾಸುದೇವನ ಪಾತ್ರ ನಿಭಾಯಿಸಿರುವ ವಸಿಷ್ಠ ಸಿಂಹ. ವಸಿಷ್ಠ ಅವರ ಮುಖಭಾವ, ಅವರ ಗಡಸು ದನಿ, ಕ್ರೌರ್ಯ ಮನುಷ್ಯ ರೂಪ ಪಡೆದಂತೆ ಅಭಿನಯಿಸಿರುವುದು ಸಿನಿಮಾದ ಒಟ್ಟು ಅಂದವನ್ನು ಹೆಚ್ಚಿಸಿದೆ ಎಂದರೆ ಅತಿಶಯವಾಗಲಾರದು. ಹಂತಕನ ಪತ್ತೆಗೆ ಶ್ರಮಿಸುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಇಶಾ ಕೊಪ್ಪಿಕರ್ ಕಾಣಿಸಿಕೊಂಡಿದ್ದಾರೆ.

ಶಿವರಾಜ್‌ ಕುಮಾರ್ ಅವರು ಅಂಧ ಹಾಗೂ ನಂದಿನಿಯ ಪೋಷಕನಾಗಿ ಮಾತ್ರವಲ್ಲದೆ, ಜವಾಬ್ದಾರಿ ಹೊರುವ ಅಣ್ಣನಾಗಿ, ಕೃಷ್ಣಮೂರ್ತಿ ಅವರ ನಿಷ್ಠನಾಗಿ, ಹಂತಕನನ್ನು ಪತ್ತೆ ಮಾಡಲು ಪೊಲೀಸರಿಗೆ ನೆರವಾಗುವ ವ್ಯಕ್ತಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಆದರೆ, ಕೊನೆಯಲ್ಲಿ ಅವರು ವೀಕ್ಷಕರ ಮನಸ್ಸನ್ನು ಆವರಿಸಿಕೊಳ್ಳುವುದು ನಂದಿನಿ ಪಾಲಿನ ತಂದೆಯಾಗಿ.

ಥ್ರಿಲ್ಲರ್ ಹಾಗೂ ಭಾವುಕ ದೃಶ್ಯಗಳ ಪಾಕವಾಗಿರುವ ಈ ಸಿನಿಮಾ, ಕಡೆಯಲ್ಲಿ ವೀಕ್ಷಕರ ಮನಸ್ಸನ್ನು ತುಸು ಹಸಿಗೊಳಿಸುವ ಶಕ್ತಿ ಹೊಂದಿದೆ. ಹಾಗೆಯೇ, ಸಿನಿಮಾ ಅವಧಿ (2 ತಾಸು 40 ನಿಮಿಷ) ಕೆಲವರು ಬಾಯಿಕಳೆಯುವಂತೆ ಮಾಡಿದರೆ, ಆಶ್ಚರ್ಯವೇನೂ ಇಲ್ಲ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು