ಸೋಮವಾರ, ಮಾರ್ಚ್ 30, 2020
19 °C

ಕೀರ್ತಿಯ ಸಿನಿ ಪಯಣ ‘ಪ್ರಾರಂಭ’

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿಯ ಈ ಚೆಲುವೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಪುತ್ರ ಮನುರಂಜನ್‌ ನಟನೆಯ ‘ಪ್ರಾರಂಭ’ ಚಿತ್ರದ ನಾಯಕಿ. ಬಾಲ್ಯದ ಗುರಿ ಮತ್ತು ಕನಸಿನಂತೆ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು ಮೊದಲ ಚಿತ್ರದಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಅದೃಷ್ಟ ಒಲಿಸಿಕೊಂಡವರು. ಮೂಲತಃ ಮಾಡೆಲ್ ಆಗಿದ್ದ ಕೀರ್ತಿಗೆ ‘ಪ್ರಾರಂಭ’ ಚೊಚ್ಚಲ ಚಿತ್ರವು ಹೌದು. ಇದೇ ಮಾರ್ಚ್‌ 27ಕ್ಕೆ ಚಿತ್ರ ತೆರೆ ಕಾಣಬೇಕಿತ್ತು, ಆದರೆ ಕೊರೊನಾ ಮಹಾಮಾರಿಯ ಕಾರಣಕ್ಕಾಗಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಬಿ.ಕಾಂ ಓದುತ್ತಿರುವ ಕೀರ್ತಿ ಈಗಷ್ಟೇ ಶುರುವಾಗಿರುವ ತಮ್ಮ ಸಿನಿ ಪಯಣದ ಬಗ್ಗೆ ಹಲವು ಸಂಗತಿಗಳನ್ನು ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ನೇರವಾಗಿ ‘ಪ್ರಾರಂಭ’ದ ಬಗ್ಗೆ ಮಾತು ಪ್ರಾರಂಭಿಸಿದ ಇವರು, ಈ ಚಿತ್ರದಲ್ಲಿ ನನ್ನ ಹೆಸರು ಪ್ರಾರ್ಥನಾ. ಆಗಷ್ಟೇ ಕಾಲೇಜು ಮುಗಿಸಿ ಕಚೇರಿಯ ಕೆಲಸಕ್ಕೆ ಹೋಗುವ ಕ್ಯೂಟ್‌  ಆ್ಯಂಡ್‌ ಬಬ್ಲಿ ಗರ್ಲ್‌ ನಾನು. ಲವ್‌ನಲ್ಲಿ ಬ್ರೇಕ್‌ ಅಪ್‌ ಆದ ನಂತರ ತುಂಬಾ ಮೆಚ್ಯುರ್ಡ್‌ ಆಗಿ ನಡೆದುಕೊಳ್ಳುವ ಹುಡುಗಿ. ನನಗೆ ಸಿಕ್ಕಿರುವ ಪಾತ್ರ ನಿಜಕ್ಕೂ ತುಂಬಾ ಚೆನ್ನಾಗಿದೆ ಎಂದು ಮಾತು ವಿಸ್ತರಿಸಿದರು.

ಅವಕಾಶ ಗಿಟ್ಟಿಸಿಕೊಂಡ ‘ಪ್ರಾರಂಭ’ದ ದಿನಗಳನ್ನು ನೆನಪು ಮಾಡಿಕೊಳ್ಳುವ ಇವರು, ನಾನು ಆಡಿಷನ್‌ ಕೊಡಲು ಹೋದಾಗ ಅಷ್ಟೊತ್ತಿಗೆ 500ರಿಂದ 600 ಮಂದಿ ಆಡಿಷನ್‌ಕೊಟ್ಟು ಹೋಗಿದ್ದರು. ನಾನು ಆಡಿಷನ್‌ ಕೊಟ್ಟು ಬಂದ ಒಂದು ವಾರಕ್ಕೆ ಸರಿಯಾಗಿ ನಿರ್ದೇಶಕ ಮನು ಕಲ್ಯಾಡಿ ಅವರಿಂದ ‘ನೀನು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದೀಯ’ ಎನ್ನುವ ಕರೆ ಬಂತು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಾರಂಭ ಚಿತ್ರ ಶುರುವಾಯಿತು. ಬಳ್ಳಾರಿ, ಚಿಕ್ಕಮಗಳೂರು, ಗೋವಾದಲ್ಲಿ ಚಿತ್ರೀಕರಣ ನಡೆಯಿತು. ಚಿತ್ರತಂಡ ಒಂದು ಕುಟುಂಬದಂತೆ ಇತ್ತು. ಶೂಟಿಂಗ್‌ ಶುರುವಿಗಿಂತಲೂ ಮೊದಲು ನಡೆದ ವರ್ಕ್‌ಶಾಪ್‌, ರಿಹರ್ಸಲ್ ತುಂಬಾ ನೆರವಿಗೆ ಬಂತು. ಹಾಗಾಗಿ ನನ್ನ ಪಾತ್ರ ನಿರ್ವಹಿಸುವಾಗ ನನಗೆ ಯಾವುದೇ ಅಂಜಿಕೆ, ಅಳುಕು ಎದುರಾಗಲಿಲ್ಲ. ಎಲ್ಲರೂ ನನಗೆ ತುಂಬಾ ಸಹಕಾರ ಕೊಟ್ಟರು. ನನ್ನ ಕಾಲೇಜಿನಿಂದಲೂ ತುಂಬಾ ಬೆಂಬಲ ಸಿಕ್ಕಿತು ಎಂದರು.

ಕೀರ್ತಿ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಸಾಕಷ್ಟು ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಚಾಮರಾಜ ಮಾಸ್ಟರ್‌ ಬಳಿ ಅಭಿನಯ ಕಲಿತುಕೊಂಡಿದ್ದಾರೆ. ಶಾಲೆಯಲ್ಲಿರುವಾಗಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದುದು, ಜತೆಗೆ ರೂಪದರ್ಶಿಯಾಗಿದ್ದಿದ್ದು ಕೂಡ ಕ್ಯಾಮೆರಾ ಎದುರಿಸುವುದನ್ನು ಸುಲಭಗೊಳಿಸಿತು ಎನ್ನುವುದು ಇವರ ಅನಿಸಿಕೆ.

ಈ ಚಿತ್ರದ ಮೇಲೆ ಕೀರ್ತಿಗೆ ಸಾಕಷ್ಟು ನಿರೀಕ್ಷೆಗಳು ಇವೆ. ತಮ್ಮ ಕನಸಿನ ಬದುಕಿಗೆ ಈ ಚಿತ್ರ ಒಂದೊಳ್ಳೆಯ ‘ಪ್ರಾರಂಭ’ ನೀಡಲಿದೆ ಎನ್ನುವ ಆತ್ಮವಿಶ್ವಾಸ ಅವರ ಮಾತಿನಲ್ಲಿ ಇಣುಕಿತು. ‘ಚಿತ್ರದಲ್ಲಿ ಒಳ್ಳೊಳ್ಳೆಯ ಹಾಡುಗಳಿವೆ. ದೃಶ್ಯ ಶ್ರೀಮಂತಿಕೆಯೂ ಇದೆ. ಇದೊಂದು ಶುದ್ಧ ಲವ್‌ ಸ್ಟೋರಿ. ಬ್ರೇಕ್‌ ಅಪ್‌ ಆದ ಮೇಲೆ ಬಹುತೇಕರು ಲೈಫ್‌ ಮುಗಿದೇ ಹೋಯಿತು ಎಂದುಕೊಳ್ಳುತ್ತಾರೆ. ಆದರೆ, ಬ್ರೇಕ್‌ ಅಪ್‌ ಆದಮೇಲೆ ಲೈಫ್‌ ಹೇಗೆ ಎದುರಿಸಬೇಕು, ಬ್ರೇಕ್‌ ಅಪ್‌ ಆದ ಮೇಲೆ ಜೀವನ ಹೇಗಿರುತ್ತದೆ ಎನ್ನುವುದು ಈ ಚಿತ್ರದಲ್ಲಿದೆ. ಲವ್‌ ಎನ್ನುವುದು ಯುವಕ– ಯುವತಿಯರಲ್ಲಿ ಮಾತ್ರ ಆಗುವುದಿಲ್ಲ; ಲವ್‌ಗೆ ವಯಸ್ಸಿನ ಮಿತಿ ಇಲ್ಲ; ಬ್ರೇಕ್‌ ಅಪ್‌ಗೂ ಅಷ್ಟೇ ವಯೋಮಾನದ ಮಿತಿ ಇರುವುದಿಲ್ಲ. ಹಾಗಾಗಿ ಈ ಚಿತ್ರದ ಕಥೆ ಬರೀ ಯುವಜನರಿಗಷ್ಟೇ ಅಲ್ಲ ಎಲ್ಲರಿಗೂ ಬೇಗ ಕನೆಕ್ಟ್‌ ಆಗಲಿದೆ. ಚಿತ್ರದಲ್ಲಿ ಒಳ್ಳೆಯ ಕಂಟೆಂಟ್‌ ಮತ್ತು ಮೆಸೆಜ್‌ ಇದೆ’ ಎನ್ನುವ ಮಾತು ಸೇರಿಸಿದರು ಹುಬ್ಬಳ್ಳಿ ಚೆಲುವೆ.

‘ಪ್ರಾರಂಭ’ ಬಿಡುಗಡೆಗೂ ಮುನ್ನವೇ ಕೀರ್ತಿಗೆ ಅವಕಾಶಗಳು ಹುಡುಕಿಕೊಂಡು ಬರಲು ಪ್ರಾರಂಭಿಸಿವೆಯಂತೆ. ‘ಈಗಾಗಲೇ ತುಂಬಾ ಸ್ಕ್ರಿಪ್ಟ್‌ಗಳನ್ನು ಕೇಳಿದ್ದೇನೆ. ದೊಡ್ಡ ಬ್ಯಾನರ್‌ಗಳ ಎರಡು ಸ್ಕ್ರಿಪ್ಟ್‌ ಓಕೆಯಾಗಿದೆ. ಆದರೆ, ಅವುಗಳನ್ನು ಈಗಲೇ ರಿವೀಲ್‌ ಮಾಡುವಂತಿಲ್ಲ’ ಎಂದರು.

ಪಾತ್ರಗಳ ಬಗ್ಗೆಯೂ ಮನಬಿಚ್ಚಿ ಮಾತನಾಡುವ ಇವರು, ಈಗ ಕ್ಯೂಟ್‌ ಮತ್ತು ಬಬ್ಲಿ ಪಾತ್ರದಲ್ಲಿ ನಟಿಸಿದ್ದೇನೆ. ಒಬ್ಬ ಕಲಾವಿದೆಯಾಗಲು ಹೊರಟ ಮೇಲೆ ಎಲ್ಲ ರೀತಿಯ ಪಾತ್ರಗಳಲ್ಲೂ ನಟಿಸಬೇಕು ಎನ್ನುವ ಆಸೆ ಇರುತ್ತದೆ ಎನ್ನಲು ಮರೆಯಲಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)