ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಫೈರ್‌’ ವಿರುದ್ಧ ಕೆಎಫ್‌ಸಿಸಿ ಅಧ್ಯಕ್ಷ ಎನ್‌.ಎಂ.ಸುರೇಶ್‌ ವಾಗ್ದಾಳಿ

Published : 21 ಸೆಪ್ಟೆಂಬರ್ 2024, 12:49 IST
Last Updated : 21 ಸೆಪ್ಟೆಂಬರ್ 2024, 12:49 IST
ಫಾಲೋ ಮಾಡಿ
Comments

ಬೆಂಗಳೂರು: ನಿರ್ದೇಶಕಿ ಕವಿತಾ ಲಂಕೇಶ್‌ ಅಧ್ಯಕ್ಷರಾಗಿರುವ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್‌ ಈಕ್ವಾಲಿಟಿ (ಫೈರ್) ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್‌ಸಿಸಿ) ಅಧ್ಯಕ್ಷ ಎನ್‌.ಎಂ.ಸುರೇಶ್‌ ವಾಗ್ದಾಳಿ ನಡೆಸಿದ್ದಾರೆ. 

ಶನಿವಾರ(ಸೆ.21) ನಟಿ ಭಾವನಾ, ನಿರ್ದೇಶಕ ಟೇ.ಶಿ.ವೆಂಕಟೇಶ್‌ ನೇತೃತ್ವದಲ್ಲಿ ‘ಕನ್ನಡ ಚಲನಚಿತ್ರ ಸಂರಕ್ಷಣಾ ವೇದಿಕೆ’ ಪ್ರತಿನಿಧಿಗಳು ಕೆಎಫ್‌ಸಿಸಿಗೆ ಭೇಟಿ ನೀಡಿ ಲೈಂಗಿಕ ದೌರ್ಜನ್ಯ ತಡೆ (ಪಾಶ್‌) ಸಮಿತಿ ರಚನೆ ವಿರುದ್ಧ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್‌, ‘ಎಲ್ಲ ಹೆಣ್ಣುಮಕ್ಕಳಿಗೆ ಗೌರವ ಕೊಡುವುದು ನಮ್ಮ ಧರ್ಮ. ಹೆಣ್ಣುಮಕ್ಕಳ ಬಗ್ಗೆ ನಮಗೂ ಕಾಳಜಿ ಇದೆ. ಯಾರಿಗಾದರೂ ಶೋಷಣೆ, ದೌರ್ಜನ್ಯ ಆದ ಪಕ್ಷದಲ್ಲಿ ವಾಣಿಜ್ಯ ಮಂಡಳಿಗೆ ನೇರವಾಗಿ ದೂರು ಕೊಡಿ. ಫೈರ್‌ ಸಂಸ್ಥೆ ಅಥವಾ ಇನ್ಯಾವುದೇ ಸಂಸ್ಥೆಗೂ ನಮಗೂ ಸಂಬಂಧವಿಲ್ಲ. ಚೇತನ್‌ ಅವರೇ ನಿಮ್ಮ ರೂಪುರೇಷೆ, ಕಾರ್ಯವ್ಯಾಪ್ತಿಯನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ಹಲವು ದಶಕಗಳ ಇತಿಹಾಸ ಇರುವ ವಾಣಿಜ್ಯ ಮಂಡಳಿಗೆ ನೀವು ಸವಾಲು ಹಾಕಲು ಹೋಗಬೇಡಿ. ಚಿತ್ರರಂಗದಲ್ಲಿ ಯಾರಿಗೂ ಏನೂ ತೊಂದರೆ ಆಗಿಲ್ಲ. ತೊಂದರೆಯಾದರೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಿದೆ’ ಎಂದಿದ್ದಾರೆ. 

‘ಇಂತಹ ವಾತಾವರಣ ಸೃಷ್ಟಿಸಿ, ನಮ್ಮ ನಮ್ಮಲ್ಲೇ ದ್ವಂದ್ವ ಹುಟ್ಟಿಸುವ ಅವಶ್ಯಕತೆ ಇತ್ತೇ? ಇಂತಹ ಹೆಜ್ಜೆಗಳಿಗೆ ನಾವು ಬೆಂಬಲ ನೀಡುವುದಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಕೇಳಿದಾಗ ನಮಗೂ ಫೈರ್‌ ಸಂಸ್ಥೆಗೂ ಸಂಬಂಧವೇ ಇಲ್ಲ ಎಂದಿದ್ದೇನೆ’ ಎಂದರು. 

‘ಲೈಂಗಿಕ ದೌರ್ಜನ್ಯ ತಡೆ (ಪಾಶ್‌) ಸಮಿತಿ ರಚನೆ ಕುರಿತು ಮಹಿಳಾ ಆಯೋಗ ನೀಡಿದ ಪತ್ರಕ್ಕೆ ಕಾನೂನು ತಜ್ಞರ ಜೊತೆ ಚರ್ಚಿಸಿ ಉತ್ತರ ಕೊಡುತ್ತೇವೆ. ನಮ್ಮ ಮಂಡಳಿ ಕಡೆಯಿಂದ ಉತ್ತರಕ್ಕೆ ಸಮಯಾವಕಾಶ ಕೋರಿ ಪತ್ರ ಬರೆಯುತ್ತೇನೆ. ಮಹಿಳಾ ಆಯೋಗ ಈಗೇಕೆ ಏಕಾಏಕಿ ಬಂದು ಪಾಶ್‌ ಸಮಿತಿ ಮಾಡಲು ಸೂಚಿಸಿತು. ಇಲ್ಲಿಯವರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗಮನಕ್ಕೆ ಅವರು ಏಕೆ ತಂದಿಲ್ಲ? ನಾವು ಕೇರಳ ಚಲನಚಿತ್ರ ವಾಣಿಜ್ಯ ಮಂಡಳಿಗೂ ಪತ್ರ ಬರೆದಿದ್ದೇವೆ. ಅವರು ಇಂತಹ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬಹುದು ಎಂದು ಅವರೇ ಒಂದು ಸಮಿತಿ ಮಾಡಿಕೊಂಡಿದ್ದಾರೆ. ಅವರು ಪಾಶ್‌ ಸಮಿತಿಗೆ ಒಪ್ಪಿಕೊಂಡಿಲ್ಲ. ನಾವೂ ನಮ್ಮದೇ ಒಂದು ಸಮಿತಿ ಮಾಡಿಕೊಳ್ಳುತ್ತೇವೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT