ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಚಾರ್ಯ’ ಸಿನಿಮಾ: ಚಿರಂಜೀವಿ–ಕೊರಟಾಲ ಶಿವ ಮೇಲೆ ಕಥೆ ಕದ್ದ ಆರೋಪ?

Last Updated 26 ಆಗಸ್ಟ್ 2020, 12:06 IST
ಅಕ್ಷರ ಗಾತ್ರ

‘ಮೆಗಾಸ್ಟಾರ್’ ಚಿರಂಜೀವಿ ನಟನೆಯ ತೆಲುಗಿನ ‘ಆಚಾರ್ಯ’ ಸಿನಿಮಾಕ್ಕೆ ಕೊರಟಾಲ ಶಿವ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ಚಿರು ಅವರ ಹುಟ್ಟುಹಬ್ಬದಂದು ಇದರ ಹೊಸ ಪೋಸ್ಟರ್‌ ಕೂಡ ಬಿಡುಗಡೆಯಾಗಿತ್ತು. ಕಾಲಿವುಡ್‌ ನಟಿ ತ್ರಿಷಾ ಕೃಷ್ಣನ್‌ ಈ ಪ್ರಾಜೆಕ್ಟ್‌ನಿಂದ ಹೊರಬಿದ್ದ ಬಳಿಕ ಕಾಜಲ್‌ ಅಗರ್‌ವಾಲ್‌ ‘ಮೆಗಾಸ್ಟಾರ್‌’ಗೆ ಜೋಡಿಯಾಗಿದ್ದಾರೆ. ಆದರೆ, ಹೊಸ ಸುದ್ದಿ ಅದಲ್ಲ. ಚಿರಂಜೀವಿ ಮತ್ತು ಕೊರಟಾಲ ಶಿವ ಅವರ ಮೇಲೆ ಕಥೆ ಕದ್ದಿರುವ ಆರೋಪ ಕೇಳಿಬಂದಿದ್ದು, ಟಾಲಿವುಡ್‌ ಅಂಗಳದಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಈ ಆರೋಪ ಮಾಡಿರುವುದು ನಿರ್ದೇಶಕ ಬಿ. ಗೋಪಾಲ್‌ ಅವರ ಸಹಾಯಕ ರಾಜೇಶ್ ಮಾಂಡೂರಿ. ‘ಅಚಾರ್ಯ ಸಿನಿಮಾದ ಕಥೆ ನನ್ನದು. ಈ ಇಬ್ಬರು ಇದನ್ನು ಕದ್ದಿದ್ದಾರೆ’ ಎನ್ನುವುದು ಅವರ ಗಂಭೀರ ಆರೋಪ.

ರಾಜೇಶ್‌ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಶಾಸಕ ಗೊಟ್ಟಿಪಾಟಿ ರವಿ ಅವರ ಮಾರ್ಗದರ್ಶನದ ಮೇರೆಗೆ ಮೈತ್ರಿ ಮೂವಿ ಮೇಕರ್ಸ್‌ಗೆ ರಾಜೇಶ್‌ ಈ ಕಥೆಯನ್ನು ನಿರೂಪಣೆ ಮಾಡಿದ್ದರಂತೆ. ‘ನಿರ್ಮಾಪಕ ರವಿಕುಮಾರ್‌ ಅವರಿಗೆ ಈ ಸ್ಟೋರಿಯ ಔಟ್‌ಲೈನ್‌ ಬಗ್ಗೆ ಹೇಳಿದ್ದೆ. ಸಹ ನಿರ್ಮಾಪಕ ಚೆರ್ರಿ ಅವರಿಗೆ ಇಡೀ ಕಥೆಯನ್ನೇ ನಿರೂಪಿಸಿದ್ದೆ’ ಎಂದಿದ್ದಾರೆ ಅವರು.

‘ಚೆರ್ರಿ ಅವರಿಗೆ ನಾನು ಕಥೆ ನಿರೂಪಿಸಿದ್ದ ವೇಳೆ ಇಂತಹ ಕಥೆಯನ್ನು ಕೊರಟಾಲ ಶಿವ ಅವರಂತಹ ನಿರ್ದೇಶಕರಿಗೆ ಕೊಟ್ಟರೆ ಸಕ್ಸಸ್‌ ಆಗಲಿದೆ ಎಂದು ಹೇಳಿದ್ದರು. ‘ಗೀತ ಗೋವಿಂದಂ’, ‘ಆರ್‌ಎಕ್ಸ್‌ 100’, ‘ಅರ್ಜುನ್‌ ರೆಡ್ಡಿ’ಯಂತಹ ಸಣ್ಣ ಬಜೆಟ್‌ನ ಸಿನಿಮಾಗಳ ಮೂಲಕ ನಿರ್ದೇಶಕನ ಕ್ಯಾಪ್‌ ಧರಿಸುವಂತೆ ನನಗೆ ಸಲಹೆ ನೀಡಿದ್ದರು. ನೀನು ಈ ಕಥೆ ನೀಡಿದರೂ ನಾನು ನಿರ್ಮಾಣಕ್ಕೆ ಸಿದ್ಧವಿಲ್ಲ ಎಂದಿದ್ದರು. ಈಗ ನನ್ನ ಕಥೆಯನ್ನೇ ಯಥಾವತ್ತಾಗಿ ಕದಿಯಲಾಗಿದೆ’ ಎಂದು ದೂರಿದ್ದಾರೆ.

‘ನಾನು ಚೆರ್ರಿ ಅವರಿಗೆ ಈ ಕಥೆಯನ್ನು ಸಿನಿಮಾ ಮಾಡಲು ಪರಿಪರಿಯಾಗಿ ಬೇಡಿಕೊಂಡೆ. ಆದರೆ, ಅವರು ಗಮನಹರಿಸಲಿಲ್ಲ. ಕೊರಟಾಲ ಶಿವ ‘ಆಚಾರ್ಯ’ ಸಿನಿಮಾವನ್ನು ಘೋಷಿಸಿದಾಗ ನನಗೆ ದೊಡ್ಡ ಶಾಕ್‌ ಆಯಿತು. ಟಾಲಿವುಡ್‌ನ ಹಲವು ಗಣ್ಯರನ್ನು ಸಂಪರ್ಕಿಸಿ ನನ್ನ ಅಳಲು ತೋಡಿಕೊಂಡೆ. ಆದರೆ, ನನಗೆ ನ್ಯಾಯ ಸಿಗಲಿಲ್ಲ. ಕಷ್ಟಪಟ್ಟು ನಾನು ಸಿದ್ಧಪಡಿಸಿದ ಕಥೆಗೆ ಈಗ ಕೊಟರಾಲ ಶಿವ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದರಲ್ಲಿ ಅರ್ಥವಿದೆಯೇ?’ ಎಂದು ಟೀಕಿಸಿದ್ದಾರೆ.

ಮತ್ತೊಂದೆಡೆ ರಾಜೇಶ್‌ ಅವರ ಆರೋಪದ ಬಗ್ಗೆ ಟಾಲಿವುಡ್‌ ಅಂಗಳದಲ್ಲಿ ಅನುಮಾನಗಳು ಮೂಡಿವೆ. ಗೊಟ್ಟಿಪಾಟಿ ರವಿ ಮತ್ತು ಮೈತ್ರಿ ಮೂವಿ ಮೇಕರ್ಸ್‌ ‘ಆಚಾರ್ಯ’ ಚಿತ್ರಕ್ಕೆ ಬಂಡವಾಳ ಹೂಡಿಲ್ಲ. ಕೊನಿಡೇಲಾ ಪ್ರೊಡಕ್ಷನ್‌ ಕಂಪನಿ ಮತ್ತು ಮ್ಯಾಟ್ನಿ ಎಂಟರ್‌ಟೈನ್‌ಮೆಂಟ್ಸ್‌ನಡಿ ‘ಆಚಾರ್ಯ’ ಸಿನಿಮಾ ನಿರ್ಮಾಣವಾಗುತ್ತಿದೆ. ಆದರೆ, ಪ್ರತಿಷ್ಠಿತ ಮೈತ್ರಿ ಮೂವಿ ಮೇಕರ್ಸ್‌ ವಿರುದ್ಧ ರಾಜೇಶ್‌ ಇಂತಹ ಆರೋಪ ಮಾಡಿರುವ ಹಿಂದಿನ ಉದ್ದೇಶವಾದರೂ ಏನಿರಬಹುದು ಎಂಬುದು ನಿಗೂಢವಾಗಿದೆ. ಈ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ, ಮೈತ್ರಿ ಮೂವಿ ಮೇಕರ್ಸ್‌ ಈ ಆರೋಪ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT