ಗುರುವಾರ , ಡಿಸೆಂಬರ್ 12, 2019
17 °C

ಕಿಚ್ಚ ಸುದೀಪ್‌ ಅಭಿನಯದ ಕೋಟಿಗೊಬ್ಬ 3: ಮಾತಿನ ಭಾಗದ ಚಿತ್ರೀಕರಣ ಪೂರ್ಣ

Published:
Updated:

ಕಿಚ್ಚ ಸುದೀಪ್‌ ‘ಬಿಗ್‌ಬಾಸ್‌ ಸೀಸನ್‌ 7’ರ ನಿರೂಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆ ನಡುವೆಯೂ ತಾವು ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ನಟನೆ, ಪ್ರಚಾರದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಡಿಸೆಂಬರ್‌ 20ರಂದು ಪ್ರಭುದೇವ ನಿರ್ದೇಶನದ ‘ದಬಾಂಗ್‌ 3’ ಚಿತ್ರ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳದಲ್ಲಿ ಬಿಡುಗಡೆಯಾಗುತ್ತಿದೆ. ಇದರಲ್ಲಿ ಸಲ್ಮಾನ್‌ಖಾನ್‌ ವಿರುದ್ಧ ಕಿಚ್ಚ ಅಬ್ಬರಿಸಿದ್ದಾರೆ.

ಶಿವ ಕಾರ್ತಿಕ್‌ ನಿರ್ದೇಶನದ ಚೊಚ್ಚಿಲ ಚಿತ್ರ ‘ಕೋಟಿಗೊಬ್ಬ 3’ ಚಿತ್ರದ ಶೂಟಿಂಗ್‌ನಲ್ಲಿಯೂ ಸುದೀಪ್‌ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಇದರ ಕ್ಲೈಮ್ಯಾಕ್ಸ್‌ ಚಿತ್ರೀಕರಣ ನಡೆಯಿತು. ಆ ಮೂಲಕ ಮಾತಿನ ಭಾಗದ ಶೂಟಿಂಗ್‌ ಪೂರ್ಣಗೊಳಿಸಿರುವ ಚಿತ್ರತಂಡ ಹಾಡುಗಳು ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದೆಯಂತೆ.

‘ಕೋಟಿಗೊಬ್ಬ 3’ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಈ ವಾರ ಮೊದಲ ಹಂತದಡಿ  ಪುದುಚೇರಿಯಲ್ಲಿ ಒಂದು ಹಾಡಿನ ಶೂಟಿಂಗ್ ನಡೆಸುವ ಯೋಜನೆ ಚಿತ್ರತಂಡದ್ದು. ಉಳಿದ ಹಾಡುಗಳನ್ನು ಮುಂಬೈ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲು ನಿರ್ಧರಿಸಿದೆ.

ಕೇರಳದ ಬೆಡಗಿ ಮಡೋನ್ನಾ ಸೆಬಾಸ್ಟಿಯನ್‌ ಈ ಸಿನಿಮಾದ ನಾಯಕಿ. ಜೊತೆಗೆ, ಬಾಲಿವುಡ್‌ನ ಸುಧಾಂಶು ಪಾಂಡೆ, ಅಫ್ತಾಪ್‌ ಶಿವದಾಸನಿ ಮತ್ತು ಶ್ರದ್ಧಾ ದಾಸ್‌ ಕೂಡ ನಟಿಸಿದ್ದಾರೆ. ಉಳಿದಂತೆ ರವಿಶಂಕರ್‌, ತಬಲಾ ನಾಣಿ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿರುವುದು ಸೂರಪ್ಪಬಾಬು.

ಸರ್ಬಿಯಾ, ಥೈಲ್ಯಾಂಡ್‌ ಮತ್ತು ಮಲೇಷ್ಯಾದ ಸುಂದರ ತಾಣಗಳಲ್ಲಿ ಚಿತ್ರದ ಶೂಟಿಂಗ್‌ ನಡೆಸಿರುವುದು ಇದರ ಮತ್ತೊಂದು ವಿಶೇಷ. ಶೇಖರ್‌ ಚಂದ್ರು ಅವರ ಕ್ಯಾಮೆರಾದಲ್ಲಿ ಅಲ್ಲಿನ ಸುಂದರ ದೃಶ್ಯಗಳು ಸೆರೆಯಾಗಿವೆಯಂತೆ.

ಈ ಚಿತ್ರದ ಬಳಿಕ ಅನೂಪ್‌ ಭಂಡಾರಿ ನಿರ್ದೇಶನದ ‘ಫ್ಯಾಂಟಮ್‌’ ಸಿನಿಮಾ ಸೆಟ್ಟೇರಲಿದೆ. ಸುದೀಪ್‌ ಅವರೇ ಈ ಚಿತ್ರದ ನಾಯಕ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮತ್ತೊಂದೆಡೆ ಸುದೀಪ್‌ ನಿರ್ದೇಶನಕ್ಕೂ ಇಳಿಯಲಿದ್ದಾರೆ ಎಂಬ ಸುದ್ದಿ ಇದೆ. ಅವರೇ ಈ ಬಗ್ಗೆ ಖಚಿತಪಡಿಸಿದ್ದು, ಸ್ವಮೇಕ್‌ ಚಿತ್ರವೊಂದಕ್ಕೆ ಆ್ಯಕ್ಷನ್‌ ಕಟ್‌ ಹೇಳಲು ತಯಾರಿ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು