ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಟಿಯರ ಸ್ಥಿತಿಗತಿ | ಕನ್ನಡ ಚಿತ್ರರಂಗದಲ್ಲೂ ಸಮಿತಿ ಆಗಲಿ: ಶ್ರುತಿ ಹರಿಹರನ್

Published : 3 ಸೆಪ್ಟೆಂಬರ್ 2024, 13:22 IST
Last Updated : 3 ಸೆಪ್ಟೆಂಬರ್ 2024, 13:22 IST
ಫಾಲೋ ಮಾಡಿ
Comments

ಬೆಂಗಳೂರು: ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಸ್ಥಿತಿಗತಿ ಅಧ್ಯಯನಕ್ಕಾಗಿ ರಚನೆಗೊಂಡಿದ್ದ ‘ಹೇಮಾ ಸಮಿತಿ’ ರೀತಿಯಲ್ಲಿಯೇ ಕನ್ನಡ ಚಿತ್ರರಂಗಕ್ಕೂ ಒಂದು ಸಮಿತಿಯ ಅಗತ್ಯವಿದೆ ಎಂದು ನಟಿ ಶ್ರುತಿ ಹರಿಹರನ್ ಹೇಳಿದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಪ್ರತಿ ಚಿತ್ರೋದ್ಯಮಕ್ಕೂ ಅದರದ್ದೇ ಆದ ಸಮಸ್ಯೆಗಳಿವೆ. ಕೇವಲ ಲೈಂಗಿಕ ಶೋಷಣೆ ಮಾತ್ರವಲ್ಲ, ಬೇರೆ ರೀತಿಯ ಸಾಕಷ್ಟು ಸಮಸ್ಯೆಗಳಿವೆ. ನಟಿಯರನ್ನು, ಸಹ ಕಲಾವಿದರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಶೌಚಾಲಯದಂಥ ಕನಿಷ್ಠ ಸವಲತ್ತು ನೀಡುತ್ತಿಲ್ಲ. ಮುಟ್ಟಿನ ಸಮಯದಲ್ಲಿ ಶೌಚಾಲಯವೇ ಇಲ್ಲದೆ ನಟಿಯರು ಏನು ಮಾಡಬೇಕೆಂದು ಯೋಚಿಸುತ್ತಿಲ್ಲ. ಈ ಬಗ್ಗೆ ಧ್ವನಿ ಎತ್ತಲೇಬೇಕು. ಕೇರಳದಲ್ಲಿ ಸರ್ಕಾರವೇ ಹೇಮಾ ಸಮಿತಿಯನ್ನು ರಚಿಸಿತ್ತು. ಹೀಗಾಗಿ ಆ ಸಮಿತಿಗೆ ವಿಶ್ವಾಸಾರ್ಹತೆಯಿದೆ. ನಮ್ಮಲ್ಲಿಯೂ ಅದೇ ರೀತಿ ಸಮಿತಿ ರಚನೆಯಾಗಿ ನಟಿಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಯಬೇಕು’ ಎಂದರು.

‘ನನಗೆ ಹೇಮಾ ಸಮಿತಿಯ ವರದಿ​ ಬಗ್ಗೆ ಬಹಳ ಗೌರವವಿದೆ. ದಿಟ್ಟ ಕೆಲಸಕ್ಕಾಗಿ ಅಲ್ಲಿನ ಸರ್ಕಾರಕ್ಕೂ, ಸಮಿತಿಗೂ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮಲ್ಲಿಯೂ ಆ ರೀತಿ ಲೈಂಗಿಕ ಕಿರುಕುಳ ಇಲ್ಲ ಎಂದಲ್ಲ. ಆ ಕುರಿತು ಐದು ವರ್ಷಗಳ ಹಿಂದೆಯೇ ನಾನು ಧ್ವನಿ ಎತ್ತಿದೆ. ಆಗ ಒಂದಷ್ಟು ಜನ ನನ್ನ ಜೊತೆಗೆ ನಿಂತರು. ಬಹಳಷ್ಟು ಜನ ವೃತ್ತಿಜೀವನ ಭಯದಿಂದ ಮುಕ್ತವಾಗಿ ಹೇಳಲಿಲ್ಲ. ಲೈಂಗಿಕ ಕಿರುಕುಳ, ಸಂಬಂಧಗಳ ಬಗ್ಗೆ ನಾವು ಮುಚ್ಚುಮರೆಯಲ್ಲಿ ಮಾತನಾಡುತ್ತಿದ್ದೆವು. ಆಪ್ತವಲಯದಲ್ಲಿ ಜೋಕ್‌ ಮಾಡಿಕೊಳ್ಳುತ್ತಿದ್ದೆವು. ಆದರೆ, ಈ ವಿಚಾರವನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರೆ, ನಿಜಕ್ಕೂ ಹೆಮ್ಮೆಯ ವಿಚಾರ’ ಎಂದು ಶ್ಲಾಘಿಸಿದರು.

‘ಲೈಂಗಿಕ ಶೋಷಣೆ ಎಂದಾಗ ಸಹಜವಾಗಿ ಬಿಸಿ ಸುದ್ದಿಯಾಗುತ್ತದೆ. ಆದರೆ ನಾವು ಸಮಸ್ಯೆಯ ಅದೊಂದೇ ಮುಖವನ್ನು ನೋಡಬಾರದು. ಚಿತ್ರರಂಗದಲ್ಲಿ ತಾರತಮ್ಯ ಹೋಗಬೇಕು. ನಾವೆಲ್ಲ ಭಯವಿಲ್ಲದೆ, ಗೌರವದಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಬೇಕು. ‘ಮೀ ಟೂ’ ಅಭಿಯಾನದಿಂದ ಒಂದಷ್ಟು ಪರಿಣಾಮವಂತೂ ಆಯಿತು. ಅದೇ ರೀತಿ ಸಮಿತಿ ರಚನೆಯಾದಾಗ ಇನ್ನೊಂದಷ್ಟು ಸಂಗತಿಗಳು ಬೆಳಕಿಗೆ ಬರಬಹುದು’ ಎಂದವರು ಅಭಿಪ್ರಾಯಪಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT