ಭಾನುವಾರ, ನವೆಂಬರ್ 29, 2020
21 °C

ಚಿರು ಸರ್ಜಾಗೆ ಪತ್ನಿಯ ಭಾವುಕ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಘನಾ ರಾಜ್‌ ಮತ್ತು ಚಿರು ಸರ್ಜಾ

ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿ ಎರಡು ವಾರಗಳಾಗುತ್ತಾ ಬಂತು. ಆದರೆ ಅವರ ಅಗಲಿಕೆಯ ನೋವು, ನೆನಪು ಕುಟುಂಬದವರು ಸೇರಿದಂತೆ ಯಾರಿಂದಲೂ ಮರೆಯಲು ಆಗುತ್ತಿಲ್ಲ.

ಇತ್ತ ಚಿರು ಅವರ ಪತ್ನಿ ಮೇಘನಾರಾಜ್ ನಾಲ್ಕು ತಿಂಗಳ ಗರ್ಭಿಣಿ. ಪತಿಯ ಸಾವಿನ ಶಾಕ್‌ನಿಂದ ಹೊರಬರಲು ಪ್ರಯತ್ನಿಸುತ್ತಿರುವ ಮೇಘನಾ, ಚಿರು ಸರ್ಜಾ ಕುರಿತು ಹೃದಯಸ್ಪರ್ಶಿಯಾದ ಬರಹವೊಂದನ್ನು ಬರೆದು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಬರಹದಲ್ಲಿ ಹೀಗಿದೆ:

ಚಿರು, ಎಷ್ಟು ಬಾರಿ ಪ್ರಯತ್ನಿಸಿದರೂ ನನ್ನ ಮನದಾಳದ ಮಾತುಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ನಿನ್ನ ಮೇಲಿನ ಪ್ರೀತಿ, ವಿಶ್ವಾಸದ ಬಗ್ಗೆ ಮಾತನಾಡಲು ಶಬ್ದಕೋಶದಲ್ಲಿ ಪದಗಳೇ ಸಾಲುತ್ತಿಲ್ಲ. ನೀನು ನನ್ನ ಸ್ನೇಹಿತ, ನನ್ನ ಪ್ರೇಮಿ, ನನ್ನ ಹಿತೈಷಿ, ನನ್ನ ಮಗು, ನನ್ನ ಸರ್ವಸ್ವ, ನನ್ನ ಪತಿ– ಇದೆಲ್ಲಕ್ಕಿಂತ ಹೆಚ್ಚು ನೀನು ನನಗೆ. ನೀನು ನನ್ನ ಆತ್ಮದ ಒಂದು ಭಾಗ, ಚಿರು. 

ಪ್ರತಿದಿನ ನಾನು ಬಾಗಿಲು ಕಡೆ ನೋಡುವಾಗ, ನೀನು, ‘ನಾ ಬಂದೆ’ ಎಂದು ಹೇಳುತ್ತಾ, ನೀನು ಬಂದೇಬಿಡುವೆ ಎಂಬ ಒಂದು ಆಸೆ. ನೀನು ಬರದಿದ್ದಾಗ ನನ್ನ ಆತ್ಮವನ್ನೇ ಸುಡುವಂತ ನೋವು ನನ್ನಲ್ಲಿ. ಪ್ರತಿದಿನ, ಪ್ರತಿಕ್ಷಣ ನಿನ್ನ ಸ್ಪರ್ಶಿಸಲಾಗದೇ ನನ್ನ ಕಾಲ ಕೆಳಗಿನ ಭೂಮಿ ಕುಸಿಯುವಂತೆ ಒಂದು ನಡುಕ– ಸಾವಿರ ಬಾರಿ ನಿಧಾನವಾಗಿ ನೋವಿನಿಂದ ಸಾಯುವಂತೆ. ಆದರೆ ಪ್ರತಿ ಬಾರಿ ನಾನು ನೋವುಂಡಾಗ, ನೀನು ಇಲ್ಲೇ ನನ್ನ ಸುತ್ತ, ನಿನ್ನ ಪ್ರೀತಿಯ ರಕ್ಷಾ ಕವಚದಲ್ಲಿ ನನ್ನನ್ನು ಆರೈಕೆ ಮಾಡುತ್ತಿರುವ ಭಾವನೆ ನನಗೆ. ಸದಾಕಾಲ ನನ್ನ ರಕ್ಷಿಸುತ್ತಿರುವ ಕಾವಲುದೈವ. 

ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದಿ ಎಂದರೆ ನನ್ನನ್ನು ಒಂಟಿಯಾಗಲು ಬಿಟ್ಟು ಹೋಗಲು ನಿನಗೆ ಮನಸಾಗಲಿಲ್ಲ. ಹೋಗುತ್ತಾ ನಮ್ಮ ಪ್ರೀತಿಯ ಸಂಕೇತವಾಗಿ ಪುಟ್ಟ ಹರುಷವನ್ನು ನನಗೆ ಬಿಟ್ಟು ಹೋಗಿದ್ದಿ. ಪುಟ್ಟ ಹರುಷವನ್ನು ಭುಮಿಗೆ ತರಲು ಕಾತುರ ನನಗೆ. ನಮ್ಮ ಮಗುವಾಗಿ, ನಿನ್ನನ್ನು ಮತ್ತೆ ಮುದ್ದಿಸುವ ಕಾತುರ. ನಿನ್ನ ಚಿರುನಗೆಯ ನೋಡುವ ತವಕ. ನೀನಿದ್ದಲ್ಲೆಲ್ಲಾ ಬೆಳಕು ಚೆಲ್ಲುತ್ತಿದ್ದ, ಎಲ್ಲರನ್ನೂ ಖುಷಿಪಡಿಸುತ್ತಿದ್ದ ಆ ನಿನ್ನ ನಗುವನ್ನು ಮತ್ತೆ ಕೇಳುವ ಕಾತುರ. ನೀನು ಮತ್ತೆ ಬರುವ ವೇಳೆಗೆ ನಾನು ಕಾಯುವೆ. ನೀನು ನನಗಾಗಿ ದಿಗಂತದ ಆ ಬದಿಯಲಿ ಕಾಯುತ್ತಿರು. 

ನನ್ನ ಕೊನೆಯ ಉಸಿರು ಇರುವವೆರೆಗೂ ನೀನು ಚಿರಂಜೀವಿ. ನೀನು ನನ್ನಲ್ಲೇ ಇರುವೆ. ಐ ಲವ್‌ ಯು. 

https://www.instagram.com/megsraj/ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು