ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ನೋಡಿದ ಸಿನಿಮಾ: ‘ಲೈಫ್‌ ಜೊತೆ ಒಂದ್‌ ಸೆಲ್ಫಿ’ ಸರಿಯಾಗಿ ತೆಗೆದಿಲ್ಲ

Last Updated 24 ಆಗಸ್ಟ್ 2018, 12:31 IST
ಅಕ್ಷರ ಗಾತ್ರ

ಸೆಲ್ಫಿ ಎಂಬುದು ಒಂದು ಗೀಳು ಎನ್ನುವವರಿದ್ದಾರೆ. ಆದರೆ, ‘ಸೆಲ್ಫಿ’ ಹುಚ್ಚನ್ನು ಒಳ್ಳೆಯ ಭಾವದಿಂದ ಕಂಡು, ‘ನಮ್ಮ ಜೀವನದ ಸ್ಮರಣೀಯ ಕ್ಷಣಗಳನ್ನು ನಾವೇ ಸೆರೆಹಿಡಿಯುವುದು’ ಎಂದು ಭಾವಿಸೋಣ. ಆಗ, ದಿನಕರ್‌ ನಿರ್ದೇಶನದ ‘ಲೈಫ್ ಜೊತೆ ಒಂದ್‌ ಸೆಲ್ಫಿ’ ಚಿತ್ರದ ಸ್ಮರಣೀಯ ಕ್ಷಣಗಳು ಯಾವುವು ಎಂಬ ಪ್ರಶ್ನೆ ಎದುರಾಗುತ್ತದೆ.

ಪ್ರಜ್ವಲ್ ದೇವರಾಜ್ (ವಿರಾಟ್), ರೇಷ್ಮಾ (ಹರಿಪ್ರಿಯಾ), ಪ್ರೇಮ್ (ನಕುಲ್) ಮತ್ತು ಸುಧಾರಾಣಿ (ತುಳಸಿ) ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ಬದುಕು ಈ ನಾಲ್ಕೂ ಜನರಲ್ಲಿ ಒಂದೊಂದು ರೀತಿಯ ಸಂಕಟಗಳನ್ನು ಸೃಷ್ಟಿಸಿರುತ್ತದೆ. ಆ ಸಂಕಟಗಳಿಂದ ಅಷ್ಟೂ ಜನ ಹೊರಬರುತ್ತಾರೆ. ಬದುಕಿನಲ್ಲಿ ಖುಷಿ ಕಂಡುಕೊಳ್ಳುತ್ತಾರೆ. ಖುಷಿಯ ಕ್ಷಣಗಳನ್ನು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಶಾಶ್ವತವಾಗಿ ಕಾಪಿಟ್ಟುಕೊಳ್ಳುವ ಯತ್ನವನ್ನೂ ಮಾಡುತ್ತಾರೆ.

ಚಿತ್ರದ ಹಲವು ದೃಶ್ಯಗಳು ಚಿತ್ರೀಕರಣ ಆಗಿರುವುದು ಗೋವಾದಲ್ಲಿ. ಅಲ್ಲಿನ ಸುಂದರ ಕಡಲ ಕಿನಾರೆಗಳು, ಮಳೆಗಾಲದ ಹಸಿರು ಈ ಸಿನಿಮಾ ವೀಕ್ಷಣೆ ಜೊತೆ ಸಿಗುವ ಬೋನಸ್ ಅಂಶಗಳು. ಚಿತ್ರದ ಮೊದಲಾರ್ಧ ಸಾಗುವುದು ವಿರಾಟ್, ರೇಷ್ಮಾ ಮತ್ತು ನಕುಲ್‌ ಒಂದೆಡೆ ಭೇಟಿಯಾಗುವುದು, ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳುವ ದೃಶ್ಯಗಳ ಮೂಲಕ. ಆದರೆ, ಮೊದಲಾರ್ಧದಲ್ಲಿ ವೀಕ್ಷಕನ ಮನಸ್ಸಿನಲ್ಲಿ ‘ಸೆಲ್ಫಿ’ಯಾಗಿ ಉಳಿಯುವ ಕ್ಷಣಗಳು ತೀರಾ ಕಡಿಮೆ.

ಚಿತ್ರದ ದ್ವಿತೀಯಾರ್ಧದಲ್ಲಿ ತಾಯಿ ಮತ್ತು ಮಗನ ಸಂಬಂಧ, ಪ್ರೀತಿಯ ಕುರಿತ ದೃಶ್ಯಗಳನ್ನು ಸೃಷ್ಟಿಸಿ ವೀಕ್ಷಕರ ಮನಸ್ಸನ್ನು ಆರ್ದ್ರಗೊಳಿಸುವ ಕಸರತ್ತನ್ನು ನಿರ್ದೇಶಕರು ಮಾಡಿದ್ದಾರೆ. ವಿರಾಟ್‌ನ ತಾಯಿಯಾಗಿ ನಟಿಸಿರುವ ಸುಧಾರಾಣಿ ಕೆಲವು ‘ಸೆಲ್ಫಿ’ ಕ್ಷಣಗಳನ್ನು ವೀಕ್ಷಕರಿಗೆ ಕೊಡುತ್ತಾರೆ. ಆದರೆ, ಇಡೀ ಚಿತ್ರವನ್ನು ಗೆಲ್ಲಿಸಿಕೊಡುವುದು ಸುಧಾರಾಣಿ ಒಬ್ಬರಿಂದಲೇ ಆಗುವುದಿಲ್ಲವಲ್ಲ!

ಸಿನಿಮಾದಲ್ಲಿನ ಕೆಲವು ದೃಶ್ಯಗಳು ವೀಕ್ಷಕರಿಗೆ ಬೋರು ಹೊಡೆಸುತ್ತವೆ, ಹಾಸ್ಯದ ಹೆಸರಿನ ಕೆಲವು ಸಂಭಾಷಣೆಗಳು ಹಿತಕರ ಅನಿಸುವುದಿಲ್ಲ. ಚಿತ್ರದ ದೃಶ್ಯಗಳನ್ನು ಬಿಡಿಬಿಡಿಯಾಗಿ ಕಂಡಾಗ ಸುಂದರ ಅನಿಸಿದರೂ, ಅವುಗಳೆಲ್ಲವನ್ನು ಕಥೆಯ ಚೌಕಟ್ಟಿನೊಳಗೆ ಇಟ್ಟು ನೋಡಿದಾಗ ‘ಇದು ಸಡಿಲವಾದ ಹೆಣಿಗೆ’ ಅನಿಸಿಬಿಡುತ್ತದೆ.
**
ಚಿತ್ರ: ಲೈಫ್‌ ಜೊತೆ ಒಂದ್‌ ಸೆಲ್ಫಿ
ನಿರ್ದೇಶನ: ದಿನಕರ್ ಎಸ್‌.
ನಿರ್ಮಾಣ: ಸಮೃದ್ಧಿ ಮಂಜುನಾಥ್
ತಾರಾಗಣ: ಪ್ರಜ್ವಲ್ ದೇವರಾಜ್, ಹರಿಪ್ರಿಯಾ, ಪ್ರೇಮ್, ಸುಧಾರಾಣಿ
ಸಂಗೀತ: ವಿ. ಹರಿಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT