ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾನ ಮುಗಿಸಿದ ಜೀವನ್ಮುಖಿ ‘ಸಂಚಾರಿ’

ಅಕ್ಷರ ಗಾತ್ರ

ನಾನು ಹಾಗೂ ಸಂಚಾರಿ ವಿಜಯ್‌ (ಬಿ. ವಿಜಯ್‌ ಕುಮಾರ್‌) ಸೇರಿ ಮಾಡಿದ್ದು ಒಂದೇ ಸಿನಿಮಾ. ಆದರೂ ತುಂಬಾ ಆತ್ಮೀಯರಾಗಿದ್ದೆವು. ಒಬ್ಬ ನಿರ್ದೇಶಕ ಮತ್ತು ಕಲಾವಿದ ಅನ್ನುವುದನ್ನೂ ಮೀರಿದ ಸಂಬಂಧ ನಮ್ಮದು.ಸದಾ ಚಲನಶೀಲ, ಜೀವನ್ಮುಖಿ ವ್ಯಕ್ತಿತ್ವ ಅವರದಾಗಿತ್ತು. ನಮ್ಮ ಕುಟುಂಬದ ಆತ್ಮೀಯ ಸ್ನೇಹಿತರಾಗಿದ್ದರು. ನಾವು ಆಗಾಗ ಊಟಕ್ಕೆ ಸೇರುತ್ತಿದ್ದೆವು. ಊಟವನ್ನು ಅವರು ಖುಷಿಯಿಂದ ಅನುಭವಿಸುತ್ತಿದ್ದರು.

ಸುಮ್ಮನೆ ಕುಳಿತು ಕಾಲ ಕಳೆಯುವ ಜಾಯಮಾನ ಅವರದಾಗಿರಲಿಲ್ಲ. ಒಂದಿಷ್ಟು ಕಲಾವಿದರಿಗೆ ತರಬೇತಿಯನ್ನೂ ಕೊಡುತ್ತಿದ್ದರು. ನಾಟಕವನ್ನು ನಿರ್ದೇಶಿಸಬೇಕು ಎಂಬ ಕನಸೂ ಅವರಿಗಿತ್ತು. ‘ಸಾವಿರದವಳು’, ‘ಶೂದ್ರ ತಪಸ್ವಿ’, ‘ಸಾಂಬಶಿವ ಪ್ರಹಸನ’ ಮೊದಲಾದ ನಾಟಕಗಳಲ್ಲಿ ಅವರ ಅಭಿನಯ ಸದಾ ನೆನಪಿನಲ್ಲಿ ಉಳಿಯುವಂಥದು. ಸಮಾಜಮುಖಿ, ಮಾನವೀಯತೆಯ ವ್ಯಕ್ತಿತ್ವ ಅವರದ್ದಾಗಿತ್ತು. ಸಮಾಜದ ಕೆಲಸಗಳಿಗೆ ಯಾವಾಗಲೂ ಕಟಿಬದ್ಧರಾಗಿ ನಿಲ್ಲುತ್ತಿದ್ದರು. ಇನ್ನು ಕಲಾಪ್ರಪಂಚದಲ್ಲಿ ಪಾತ್ರಕ್ಕೆ ನಿಜವಾದ ಪರಕಾಯ ಪ್ರವೇಶ ಮಾಡುವ ಅನೇಕ ಕಲಾವಿದರ ಪೈಕಿ ವಿಜಯ್‌ ಅವರೂ ಒಬ್ಬರಾಗಿದ್ದರು.

ಅವಳಾದ ಕಥೆ: ‘ನಾನು ಅವನಲ್ಲ ಅವಳು ಚಿತ್ರ’ ಮಾಡಬೇಕಾದರೆ ಆ ಪಾತ್ರಕ್ಕೆ ತೃತೀಯ ಲಿಂಗಿ ವ್ಯಕ್ತಿಯೇ ಬೇಕು ಎಂದು ನಮ್ಮ ಕಥೆಗಾರರು ಹಟ ಹಿಡಿದಿದ್ದರು. ಹಾಗೆಯೇ ತೃತೀಯ ಲಿಂಗಿ ಒಬ್ಬರಿಗೆ ತರಬೇತಿ ಕೊಟ್ಟು ಪ್ರಯತ್ನ ಮಾಡಿದೆವು. ಆದರೆ ಅದು ನಾವು ಅಂದುಕೊಂಡಂತೆ ಬರಲಿಲ್ಲ. ಆಗ ‘ಒಗ್ಗರಣೆ’ ಚಿತ್ರದಲ್ಲಿ ವಿಜಯ್‌ ಅವರ ಪುಟ್ಟ ಪಾತ್ರವೊಂದನ್ನು ನೋಡಿದ್ದೆ. ಆಗ ಆ ಕಲಾವಿದನ ಹಿನ್ನೆಲೆಯನ್ನು ಹುಡುಕುತ್ತಾ ಹೋದಾಗ ಇವರು ‘ಸಂಚಾರಿ’ ತಂಡದ ಸದಸ್ಯ ಎಂದು ತಿಳಿಯಿತು. ನಾಟಕವೊಂದರಲ್ಲಿ ಅವರು ಸ್ತ್ರೀ ಪಾತ್ರವನ್ನೂ ಮಾಡಿದ್ದರು. ರಂಗಭೂಮಿ ಹಿನ್ನೆಲೆಯುಳ್ಳವರು ಎಂದು ತಿಳಿದುಕೊಂಡು ಅವರನ್ನು ನಮ್ಮ ಚಿತ್ರದ ಪಾತ್ರಕ್ಕೆ ತೆಗೆದುಕೊಂಡೆವು.

‘ಕಮರ್ಷಿಯಲ್‌’ ಮನಃಸ್ಥಿತಿ ಅಥವಾ ಮಹತ್ವಾಕಾಂಕ್ಷೆ ಅವರಿಗಿರಲಿಲ್ಲ. ಒಬ್ಬ ನಾಯಕನಿಂದ ನೂರು ಕೋಟಿ ರೂಪಾಯಿ ಬರುತ್ತದೆ ಎಂಬ ಕಲ್ಪನೆಗಳು, ನಿರೀಕ್ಷೆಗಳು ಇರುವುದುಂಟು. ಆದರೆ ವಿಜಯ್‌ ಅವರಿಗೆ ಅದನ್ನೆಲ್ಲಾ ಮೀರಿ ಒಬ್ಬ ಕಲಾವಿದನಾಗಿ ಗುರುತಿಸಿಕೊಳ್ಳಬೇಕು ಎಂಬುದಷ್ಟೇ ಅವರ ಗುರಿ ಆಗಿತ್ತು. ಹೀಗೆ ಬೆಳೆದವರನ್ನು ನಾವು ನಾಯಕ ನಟ ಎಂದಷ್ಟೇ ಗುರುತಿಸಬಾರದು. ಒಬ್ಬ ಕಲಾವಿದನಾಗಿ ಗುರುತಿಸಬೇಕು. ವಿಜಯ್‌ ಒಬ್ಬ ಅಪ್ಪಟ ಕಲಾವಿದನಾಗಿದ್ದರು. ಎಂಜಿನಿಯರಿಂಗ್‌ ಪದವೀಧರರಾದರೂ ಯಾವ ಹಮ್ಮು–ಬಿಮ್ಮು ಇಲ್ಲದೆ ಎಲ್ಲರೊಂದಿಗೂ ಅವರು ಬೆರೆಯುತ್ತಿದ್ದರು.

ವಿಜಯ್‌ ಅವರ ತಂದೆ–ತಾಯಿ ಇಬ್ಬರೂ ಕಲಾವಿದರು. ಅವರ ತಾಯಿಯಂತೂ ಜಾನಪದ ಕಲಾವಿದೆ ಆಗಿದ್ದವರು. ಅವರ ಕಲಾಪ್ರೇಮ ಮಗನಲ್ಲೂ ಅರಳಿ ನಿಂತಿತ್ತು. ಸಮಾಜದಲ್ಲಿ ಏನಾದರೂ ಮಾಡಬೇಕು ಎಂಬ ನಿರಂತರ ಚಲನಶೀಲತೆ ಅವರಲ್ಲಿ ಇತ್ತು. ಮೊನ್ನೆ ಸಾವಿನ ಮುನ್ನಾ ದಿನವೂ ಅವರು ಈ ಭಾನುವಾರ ಏನು ಮಾಡಬಹುದು? ಜನರಿಗೆ ನೆರವು ನೀಡುವ ಕೆಲಸಗಳನ್ನು ಹೇಗೆ ಮಾಡಬೇಕು ಎಂಬುದನ್ನು ಚರ್ಚಿಸಲಿಕ್ಕೆಂದೇ ತೆರಳಿದ್ದರು. ಇತ್ತೀಚೆಗೆ ಬಿಗ್‌ ಬಾಸ್‌ಗೆ ಕರೆ ಬಂದಿದೆ. ಹೋಗಲೇ ಎಂದು ವಿಜಯ್‌ ನನ್ನ ಸಲಹೆ ಕೇಳಿದ್ದರು. ಒಬ್ಬ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟನಾಗಿ ನೀವು ಬಿಗ್‌ಬಾಸ್‌ ಷೋಗೆ ಹೋಗುವುದು ಬೇಡ ಎಂದಿದ್ದೆ. ಅದರಂತೆ ಅವರು ಹೋಗಲಿಲ್ಲ. ಈಗ ವಿಜಯ್‌ ಇಲ್ಲ ಎನ್ನುವ ಶೂನ್ಯ ಕಾಡುತ್ತಿದೆ. ಮಾತುಗಳು ಹೊರಡುತ್ತಿಲ್ಲ. ಸಾಮಾಜಿಕ ಕಳಕಳಿ, ನೈತಿಕ ಬೆಂಬಲವಾಗಿ ನಮ್ಮ ಜೊತೆಗೆ ಸದಾ ಇದ್ದ ಆತ್ಮೀಯನೊಬ್ಬನನ್ನು ಕಳೆದುಕೊಂಡಿದ್ದೇವೆ.

-(ಲೇಖಕ: ಚಿತ್ರ ನಿರ್ದೇಶಕ)

ಸ್ವಯಂಪ್ರತಿಭೆಯ ಹುಡುಕಾಟ

ನಾನು ಅವನಲ್ಲ ಅವಳು, ಹರಿವು, ನಾತಿಚರಾಮಿ, ಆ್ಯಕ್ಟ್‌ 1978, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸೇರಿದಂತೆ ಹಲವು ಚಿತ್ರಗಳಲ್ಲಿ ವಿಜಯ್‌ ಅವರು ನಟಿಸಿದ್ದರು.

‘ಸುಮ್ಮನೆ ಬರಬೇಡಿ. ಯಾವುದಾದರೂ ಒಂದು ಡಿಗ್ರಿಯನ್ನು ಕೈಯಲ್ಲಿ ಹಿಡಿದುಕೊಂಡೇ ಇಂಥ ಕ್ಷೇತ್ರಗಳಿಗೆ ಬರಬೇಕು. ಹಣ ಅಥವಾ ಹಿನ್ನೆಲೆ ಇರದಿದ್ದರೆ ಅಗಾಧವಾದ ಪ್ರತಿಭೆ ಇರಬೇಕು ಎಂದು ಯಾರೋ ಕೆಣಕಿದ ನೆನಪು. ಅದನ್ನು ಈಗಲೂ ನನ್ನೊಳಗೆ ಹುಡುಕುತ್ತಲೇ ಇದ್ದೇನೆ’ ಎಂದು ವಿಜಯ್‌ ಹೇಳುತ್ತಿದ್ದರು.

‘ಹರಿವು’ ಚಿತ್ರದಲ್ಲಿ ಒಬ್ಬ ಆರ್ದ್ರ ಹೃದಯಿ ಬಡ ತಂದೆಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಕೊಪ್ಪಳ ಭಾಗದ ಭಾಷಾ ಶೈಲಿ ಬಳಸುವ ಕುರಿತು ಅವರು ನಿರ್ದೇಶಕ ಮಂಸೋರೆ ಜೊತೆ ಸೇರಿ ಶೂಟಿಂಗ್‌ ಸ್ಥಳದಿಂದಲೇ ಆ ಭಾಗದ ಹಲವರಿಗೆ ಕರೆಮಾಡಿ ಕೇಳಿಕೊಂಡು ಪಾತ್ರ ನಿರ್ವಹಣೆ ಮಾಡಿದ್ದರು ಎಂದು ಆ ಭಾಗದ ವಿಜಯ್‌ ಅಭಿಮಾನಿಗಳು ನೆನಪಿಸಿಕೊಳ್ಳುವುದುಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT