ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ನೇಚರ್‌ಗೂ ವರ: ರಾಕುಲ್‌

Last Updated 31 ಮಾರ್ಚ್ 2020, 8:52 IST
ಅಕ್ಷರ ಗಾತ್ರ

ಬಾಲಿವುಡ್‌ ಮತ್ತುದಕ್ಷಿಣ ಭಾರತದಲ್ಲೂಬೇಡಿಕೆಯಲ್ಲಿರುವ ಬಹುಭಾಷಾನಟಿ ರಾಕುಲ್‌ ಪ್ರೀತ್‌ ಸಿಂಗ್‌.ಇಡೀ ದೇಶಕ್ಕೆ 21 ದಿನ ಲಾಕ್‌ಡೌನ್‌ ವಿಧಿಸಿರುವ ಕ್ರಮವನ್ನು ಮೆಚ್ಚಿರುವ ಇವರು, ತಮ್ಮ ‘ಹೋಂ ಕ್ವಾರೆಂಟೈನ್‌’ ದಿನಗಳು ಹೇಗಿವೆ ಎನ್ನುವುದನ್ನು ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ. ದೀರ್ಘ ಬಿಡುವಿನ ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆನ್ನುವ ಬಗ್ಗೆ ಅಭಿಮಾನಿಗಳಿಗೂ ಟಿಪ್ಸ್‌ ಕೊಟ್ಟಿದ್ದಾರೆ.

ಲಾಕ್‌ಡೌನ್‌ ಸಮಯವನ್ನು ಅವರು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರಂತೆ.

‘ಇದು ನನ್ನ ಬದುಕಿನಲ್ಲಿ ಅತ್ಯಂತ ದೀರ್ಘ ಬಿಡುವು. ಏನೂ ಮಾಡಲಾಗದ ಸಮಯ. ಆದರೆ, ಇದರಿಂದ ಒಂದು ರೀತಿಯಲ್ಲಿ ನನಗೆ ಒಳ್ಳೆಯದೇ ಆಗಿದೆ. ಜನರು ಕೂಡ ಇದರಿಂದ ಒಳ್ಳೆಯದೇ ಆಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು’ ಎಂದಿದ್ದಾರೆ.

‘ಈ ಲಾಕ್‌ಡೌನ್‌ ನನ್ನ ದೈನಂದಿನ ಹವ್ಯಾಸಗಳನ್ನು ಅಂಥ ವ್ಯತ್ಯಾಸಗೊಳಿಸಿಲ್ಲ. ನಾನು ಸಮಯ ಸಿಕ್ಕಾಗಲೆಲ್ಲ ಓದುತ್ತಿದ್ದೆ. ಈಗ ಅದನ್ನು ಹೆಚ್ಚು ಖುಷಿಯಿಂದ ಮಾಡುತ್ತಿದ್ದೇನೆ’ ಎನ್ನುವ ಮಾತು ಸೇರಿಸಿದ್ದಾರೆ.

ಬೆಳಿಗ್ಗೆ ಎದ್ದ ತಕ್ಷಣ ಸ್ವಲ್ಪ ವರ್ಕೌಟ್‌, ಸ್ಟ್ರೆಚ್‌, ಯೋಗ ಹಾಗೂ ಧ್ಯಾನ ಮಾಡುತ್ತೇನೆ. ಇದನ್ನು ನಿತ್ಯವೂ ರೂಢಿಸಿಕೊಂಡಿದ್ದೇನೆ. ಆನಂತರ ನಾನು ಅಭಿನಯಿಸುವ ಚಿತ್ರಗಳ ಸ್ಕ್ರಿಪ್ಟ್‌ ಮತ್ತು ಪುಸ್ತಕಗಳನ್ನು ಓದುತ್ತೇನೆ. ನನ್ನ ತಮ್ಮನೊಂದಿಗೆ ಆಟವಾಡುತ್ತೇನೆ. ಹೀಗೆ ನಿತ್ಯ ಚಟುವಟಿಕೆಯಿಂದ ದಿನ ಕಳೆಯುತ್ತಿದ್ದೇನೆ ಎನ್ನುತ್ತಾರೆ ಅವರು.

‘ಅಡುಗೆ ಮಾಡುವುದರಲ್ಲಿದ್ದ ಕೌಶಲವನ್ನು ಈಗ ಹೆಚ್ಚು ಬಳಸಿಕೊಳ್ಳುತ್ತಿದ್ದೇನೆ.ಪೀನಟ್‌ ಬಟರ್‌ ಜತೆಗೆ ಪ್ರೆಂಚ್‌ ಟೋಸ್ಟ್‌ ಮಾಡಿದ್ದೆ. ಮೊನ್ನೆಯಷ್ಟೇ ಡಾರ್ಕ್‌ ಚಾಕಲೇಟ್‌ ಮತ್ತು ವೈಪ್ಡ್‌ ಕ್ರೀಮ್‌ ಮಾಡಿದ್ದೆವು. ಮರುದಿನ ಗ್ಲುಟೆನ್‌ ಫ್ರೀ ಪ್ಯಾನ್‌ಕೇಕ್‌ಗಳನ್ನು ಮಾಡಿದ್ದೆ. ನನಗೆ ಇದನ್ನೆಲ್ಲ ಮಾಡಲು ಯಾವಾಗಲೂ ಇಷ್ಟ. ಆದರೆ, ಸಮಯವೇ ಸಿಗುತ್ತಿರಲಿಲ್ಲ. ಈಗ ಸಿಕ್ಕಿರುವ ಸಮಯವನ್ನು ಹೊಸ ತಿನಿಸುಗಳನ್ನು ಮಾಡಲು ಬಳಸಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.

‘ಇಂದು ಪ್ರಪಂಚ ಎದುರಿಸುತ್ತಿರುವ ಸ್ಥಿತಿ ನೋಡಿದಾಗ ದೇಶದಲ್ಲಿ ಹೇರಿರುವ ಲಾಕ್‌ಡೌನ್‌ ನಾವು ಸಕಾರಾತ್ಮಕವಾಗಿ ನೋಡಬೇಕು. ನಮ್ಮ ತಂದೆತಾಯಿ, ಅಜ್ಜ–ಅಜ್ಜಿಯರು ಇದಕ್ಕಿಂತಲೂ ಕಠಿಣ ಸನ್ನಿವೇಶಗಳನ್ನು ನೋಡಿದ್ದಾರೆ. ನಮ್ಮ ಹೆತ್ತವರು ದಂಗೆಗಳನ್ನು ನೋಡಿದ್ದರೆ, ಅಜ್ಜ– ಅಜ್ಜಿಯರು ವಿಶ್ವಯುದ್ಧ ಮತ್ತು ದೇಶ ವಿಭಜನೆಯಂತ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಅವರೆಲ್ಲ ಜೀವ ಉಳಿಸಿಕೊಳ್ಳಲು ಪರದಾಡಿದ್ದಾರೆ’ ಎಂದು ಹೇಳಿದ್ದಾರೆ.

‘ಐಷಾರಾಮಿ ಸೌಲಭ್ಯಗಳ ಮಧ್ಯೆ ಮನೆಯಲ್ಲಿಯೇ ಕುಳಿತು, ಹೊರಗೆ ಬಂದು ಯಾರನ್ನೂ ಸಂಪರ್ಕಿಸದೆ ಜೀವಗಳನ್ನು ಉಳಿಸಿಕೊಳ್ಳುವಂತೆ ನಮ್ಮನ್ನು ಕೇಳಿಕೊಳ್ಳಲಾಗುತ್ತಿದೆ ಅಷ್ಟೆ. ಇಂಟರ್‌ನೆಟ್‌ ಇತ್ಯಾದಿ ಎಲ್ಲ ಸೌಲಭ್ಯಗಳು ಇರುವಾಗ ನಾವು ಯಾರನ್ನೂ ಭೇಟಿಯಾಗುತ್ತಿಲ್ಲವಲ್ಲ ಎನಿಸುವುದಿಲ್ಲ. ನಾವು ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಕನಿಷ್ಠಪಕ್ಷ ಮನೆಯಲ್ಲೇ ಇರಬೇಕು’ ಎನ್ನುತ್ತಾರೆ ರಾಕುಲ್‌.

‘ಲಾಕ್‌ಡೌನ್‌ ಮನುಷ್ಯನಷ್ಟೇ ಅಲ್ಲ, ಪ್ರಕೃತಿಗೂ ಬೇಕಾಗಿತ್ತು ಎನಿಸುತ್ತಿದೆ. ಈಗ ಪಕ್ಷಿಗಳ ಕಲರವ ಕೇಳಿಸುತ್ತಿದೆ. ಮರೀನಾ ಡ್ರೈವ್‌ ಬಳಿ ಡಾಲ್ಪೀನ್‌ಗಳು ಕಾಣಿಸಿಕೊಳ್ಳುತ್ತಿರುವ ಮತ್ತು ತಿರುಪತಿಯ ತಿರುಮಲ ರಸ್ತೆಯಲ್ಲಿ ಜಿಂಕೆಗಳ ಓಡಾಡುತ್ತಿರುವ ವಿಡಿಯೊಗಳನ್ನು ನೋಡುತ್ತಿದ್ದೇವೆ. ಈಎಲ್ಲ ಪ್ರಾಣಿ, ಪಕ್ಷಿ, ಜಲಚರಗಳು ನಮಗೆ ‘ಗೈಸ್, ನಾವು ಸಹಬಾಳ್ವೆ ನಡೆಸಬೇಕು. ಈ ಭೂಮಿ ಮೇಲೆ ಮಾನವ ಜನಾಂಗವಷ್ಟೇ ಶ್ರೇಷ್ಠವಲ್ಲ. ಪ್ರತಿ ಜೀವಿ, ಸಸ್ಯವೂ ಶ್ರೇಷ್ಠವೇ’ ಎಂದು ಕೂಗಿ ಹೇಳುತ್ತಿರುವ ಸಂಕೇತವೆಂದು ನಾನು ಭಾವಿಸಿರುವೆ. ನಾವೆಲ್ಲರೂ ಒಟ್ಟಾಗಿ ಬದುಕಬೇಕೆನ್ನುವ ಒಂದು ಪಾಠ ನಮಗೆಪ್ರಕೃತಿ ಹೇಳುತ್ತಿದೆ’ ಎಂದಿದ್ದಾರೆ ಅವರು.

ಹಿಂದಿಯ ‘ಅಟ್ಯಾಕ್‌’, ‘ಥ್ಯಾಂಕ್‌ ಗಾಡ್‌’ ಮತ್ತು ಇನ್ನೊಂದು ಹೆಸರಿಡದ ಚಿತ್ರ, ತಮಿಳಿನ ‘ಅಯಲಾನ್‌’ ಮತ್ತು ‘ಇಂಡಿಯನ್‌2’ ಸಿನಿಮಾಗಳಲ್ಲಿ ರಾಕುಲ್‌ ನಟಿಸುತ್ತಿದ್ದಾರೆ. ರಾಕುಲ್‌ ಕನ್ನಡ ಚಿತ್ರದಲ್ಲೂ ನಟಿಸಿದ್ದು, ಜಗ್ಗೇಶ್‌ ಪುತ್ರ ಗುರುರಾಜ್‌ ನಾಯಕನಾಗಿದ್ದ ‘ಗಿಲ್ಲಿ’ ಚಿತ್ರ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT