ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾದ ಒಲವು ರಂಗಭೂಮಿಯ ನಂಟು

Last Updated 10 ಜುಲೈ 2020, 6:18 IST
ಅಕ್ಷರ ಗಾತ್ರ

ವರ್ಷಗಳ ಕಾಲ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಅವರಿಗೆ ಆಕಸ್ಮಿಕವಾಗಿ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಒದಗಿ ಬಂದಿತ್ತು. ನಟಿಸಿದ ಮೊದಲ ಸಿನಿಮಾ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಆ ಸಿನಿಮಾದಲ್ಲಿ ಅವರು ಮಾಡಿದ ಪಾತ್ರವನ್ನು ಜನ ಇಂದಿಗೂ ನೆನಪಿಸಿಕೊಂಡು ನಗುತ್ತಾರೆ.ಅಲ್ಲದೆ ಆ ಪಾತ್ರವೇ ಪರಭಾಷೆಯ ಚಿತ್ರರಂಗಕ್ಕೂ ಇವರನ್ನು ಪರಿಚಯ ಮಾಡಿಸಿತ್ತು. ಅದುವೇ ಕಿರಿಕ್ ಪಾರ್ಟಿ ಸಿನಿಮಾದ ಮೆಕ್ಯಾನಿಕಲ್ ಪ್ರೊಫೆಸರ್ ಶಂಕರ್‌ ರಾವ್ ಪಾತ್ರ. ಆ ಪಾತ್ರಕ್ಕೆ ಬಣ್ಣ ಹಚ್ಚಿದವರು ರಾಘು ರಾಮನಕೊಪ್ಪ.

ರಾಘು ಮೂಲತಃ ತೀರ್ಥಹಳ್ಳಿಯ ರಾಮನಕೊಪ್ಪದವರು. ಓದಿನ ಸಲುವಾಗಿ ಬೆಂಗಳೂರಿಗೆ ಬಂದ ಇವರು ಇಲ್ಲೇ ನೆಲೆ ನಿಂತಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಓದಿರುವ ಇವರಿಗೆ ಕಾಲೇಜು ದಿನಗಳಲ್ಲಿ ಅಭಿನಯದ ಮೇಲೆ ಆಸಕ್ತಿ ಮೂಡಿತ್ತು. ಈ ಆಸಕ್ತಿ ಅವರನ್ನು ರಂಗಭೂಮಿಯೆಡೆಗೆ ಕರೆ ತಂದಿತ್ತು. ಹಾಗಾಗಿ ಓದು ಮುಗಿಸಿದ ಮೇಲೆ ಸುಮಾರು ಏಳೆಂಟು ನಾಟಕ ತಂಡಗಳ ಜೊತೆ ಕೆಲಸ ಮಾಡಿದ್ದರು.

ರಂಗಭೂಮಿ ನಂಟು
1991ರಲ್ಲಿ ರಂಗಭೂಮಿ ಪ್ರವೇಶಿಸಿದ ಇವರು ಇಂದಿನವರೆಗೂ ನಾಟಕಗಳಲ್ಲಿ ಅಭಿನಯಿಸುತ್ತಲೇ ಇದ್ದಾರೆ. ಇಲ್ಲಿಯವರೆಗೆ ಸುಮಾರು 90ರಿಂದ 100 ಬೇರೆ ಬೇರೆ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಂಕಲ್ ಶ್ಯಾಂ ಅವರ ಅಂತರಂಗ ನಾಟಕ ತಂಡದಲ್ಲಿ 13 ವರ್ಷಗಳ ಕಾಲ ನಾಟಕಗಳನ್ನು ಮಾಡಿದ್ದಾರೆ. ನಂತರ ರಾಜೇಂದ್ರ ಕಾರಂತ್ ಅವರ ಚಿತ್ತಾರ ತಂಡ ಸೇರಿದ ಅವರು ಇಂದಿಗೂ ಆ ತಂಡದಲ್ಲಿ ನಾಟಕಗಳನ್ನು ಮಾಡುತ್ತಿದ್ದಾರೆ.

ಸಿನಿಮಾದಲ್ಲಿ ಅವಕಾಶ
ಅದೊಂದು ದಿನ ನಾಟಕದ ರಿಹರ್ಸಲ್ ನಡೆಯುತ್ತಿರುವಾಗ ಕಿರಿಕ್ ಪಾರ್ಟಿ ಸಿನಿಮಾದ ಆಡಿಷನ್‌ ಬಗ್ಗೆ ತಿಳಿಯಿತು. ಆಡಿಷನ್‌ನಲ್ಲಿ ಭಾಗವಹಿಸಲು ಹೋದಾಗ ಅಲ್ಲಿ ರಂಗಭೂಮಿ ಸ್ನೇಹಿತ ಪ್ರಮೋದ್ ಶೆಟ್ಟಿ ಕಾಣಿಸಿದ್ದರು. ಅವರು ಇವರನ್ನು ನೇರವಾಗಿ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರ ಬಳಿ ಕಳುಹಿಸಿದ್ದರು. ಅವರು ಇವರಿಗೆ ಕಿರಿಕ್ ಪಾರ್ಟಿಯ ಕ್ಲಾಸ್ ರೂಮ್‌ ಸೀನ್‌ನ ಆಡಿಷನ್‌ ನಡೆಸಿದ್ದರು. ನಂತರ ಫೋನ್ ನಂಬರ್ ಕೊಟ್ಟು ಹೋಗಿ ಎಂದು ಕಳುಹಿಸಿದ್ದರು. ಅನೇಕ ದಿನಗಳ ಕಾಲ ಇವರಿಗೆ ಯಾವುದೇ ಕರೆ ಬರಲಿಲ್ಲ. ಆದರೆ ಒಂದು ದಿನ ಇದಕ್ಕಿದ್ದಂತೆ ಪ್ರಮೋದ್ ಶೆಟ್ಟಿ ಕರೆ ಮಾಡಿ ‘ನೀವು ಲೆಕ್ಚರರ್ ಪಾತ್ರಕ್ಕೆ ಆಯ್ಕೆ ಆಗಿದ್ದೀರಿ. ನಾಳೆಯೇ ಹಾಸನದ ಮಲ್ನಾಡ್ ಕಾಲೇಜ್‌ನಲ್ಲಿ ಶೂಟಿಂಗ್. ನೀವು ಈಗಲೇ ಹೊರಟು ಬನ್ನಿ’ ಎಂದರು. ಹೀಗೆ ಅವರ ಸಿನಿಮಾದ ಪಯಣ ಆರಂಭವಾಯಿತು.

50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರಿಗೆ ಹೆಚ್ಚು ಹೆಸರು ತಂದು ಕೊಟ್ಟ ಸಿನಿಮಾಗಳು ಕಿರಿಕ್ ಪಾರ್ಟಿ ಹಾಗೂ ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್‌. ಸದ್ಯಕ್ಕೆ ‘ಶಿವಾಜಿ ಸುರತ್ಕಲ್ ಭಾಗ– 2’, ‘ಹಂಬಲ್ ಪೊಲಿಟಿಷನ್ ನೊಗ್‌ರಾಜ್ ಭಾಗ –2’, ‘ನಟ್ವರ್‌ಲಾಲ್’‌, ‘ಸಕ್ಕತ್’‌, ‘ಬಂಪರ್’ ಸೇರಿದಂತೆ 10 ಸಿನಿಮಾಗಳು ಇವರ ಕೈಯಲ್ಲಿವೆ. ಕಿರಿಕ್‌ ಪಾರ್ಟಿ ಸಿನಿಮಾ ಹಿಂದಿಗೂ ರಿಮೇಕ್ ಆಗುತ್ತಿದ್ದು ಲೆಕ್ಚರರ್ ಪಾತ್ರದಲ್ಲಿ ನಟಿಸಲು ಆಫರ್ ನೀಡಿದ್ದಾರೆ.

ಕಾಮಿಡಿ ಪಾತ್ರಗಳಿಗೇ ಸೀಮಿತವಾಗಿರುವುದಕ್ಕೆ ಕೊಂಚ ಬೇಸರ ವ್ಯಕ್ತಪಡಿಸುವ ಇವರು ಮುಂದಿನ ದಿನಗಳಲ್ಲಿ ಭಿನ್ನ ಪಾತ್ರಗಳಿಗೆ ಜೀವ ತುಂಬುವ ಆಕಾಂಕ್ಷೆ ವ್ಯಕ್ತಪಡಿಸುತ್ತಾರೆ. ಅಲ್ಲದೇ ಹಾಸ್ಯ ಮಿಶ್ರಿತ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುವ ಕನಸನ್ನೂ ಹೊಂದಿದ್ದಾರೆ.

ಸಿನಿಮಾರಂಗದ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡುವ ಇವರು ‘ನಾವು ಇಲ್ಲಿ ಗಟ್ಟಿಯಾಗಿ ನೆಲೆಯೂರಬೇಕು ಎಂದರೆ ಜನರ ಮನಸ್ಸಿಗೆ ಇಷ್ಟವಾಗುವಂತಹ ಪಾತ್ರಗಳನ್ನು ಮಾಡಬೇಕು. ಚಿಕ್ಕ ಪಾತ್ರವಿರಲಿ, ದೊಡ್ಡ ಪಾತ್ರವಿರಲಿ ನಮ್ಮ ಅಭಿನಯದ ಮೂಲಕ ಜನರಿಗೆ ತಲುಪುವುದು ಮುಖ್ಯ. ಪ್ರತಿ ಪಾತ್ರದಲ್ಲೂ ನಟನೆ, ಆಂಗಿಕ ಭಾಷೆ, ಮಾತನಾಡುವ ಶೈಲಿ ಪ್ರತಿಯೊಂದರಲ್ಲೂ ಭಿನ್ನತೆಯನ್ನು ತೋರಬೇಕು. ನಟನೆಯ ಭಿನ್ನತೆಯೇ ನಮ್ಮನ್ನು ಇಲ್ಲಿ ಉಳಿಸುವುದು. ನಟನೆಯೊಂದಿಗೆ ನಡವಳಿಕೆಯೂ ಅಷ್ಟೇ ಮುಖ್ಯ’ ಎನ್ನುತ್ತಾರೆ.

‘ನಾನು ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಲು ರಕ್ಷಿತ್‌ ಶೆಟ್ಟಿ, ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ, ಸಿಂಪಲ್ ಸುನಿ, ಹೇಮಂತ್‌ ರಾವ್ ಇವರುಗಳೇ ಕಾರಣ. ಇವರು ನನಗೆ ತುಂಬಾನೇ ಸಹಕಾರ ನೀಡುತ್ತಿದ್ದಾರೆ. ಅವರಿಂದಲೇ ನಾನು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು’ ಸಿನಿರಂಗದಲ್ಲಿ ಕೈ ಹಿಡಿದು ನಡೆಸಿದವರ ನೆನೆಯಲು ಮರೆಯುವುದಿಲ್ಲ.

ಯೋಗ ಗುರುವೂ ಹೌದು
‌ರಂಗಭೂಮಿ, ಸಿನಿಮಾಗಳಲ್ಲಿ ನಟಿಸುವಗಳಲ್ಲಿ ಸಕ್ರೀಯರಾಗಿರುವ ಜೊತೆಗೆ ಯೋಗಗುರುವಾಗಿಯೂ ಕೆಲಸ ಮಾಡುತ್ತಿದ್ದಾರೆ ರಘು. 2001ರಲ್ಲಿ ಯೋಗ ಕಲಿಯಲು ಯೋಗಶ್ರೀ ಯೋಗ ತರಬೇತಿ ಕೇಂದ್ರಕ್ಕೆ ಸೇರುತ್ತಾರೆ. ಅಲ್ಲಿ 6 ತಿಂಗಳುಗಳ ಕಾಲ ಯೋಗ ತರಬೇತಿ ಪಡೆಯುವ ಇವರು ಅಲ್ಲಿಯೇ ಯೋಗ ಶಿಕ್ಷಕರಾಗಿ ಮುಂದುವರಿಯುತ್ತಾರೆ. ಲಾಕ್‌ಡೌನ್‌ನ ಈ ಅವಧಿಯಲ್ಲೂ ಅನ್‌ಲೈನ್‌ ಮೂಲಕ ಯೋಗ ತರಬೇತಿ ನೀಡುತ್ತಿದ್ದಾರೆ. ‘ಹಿಂದೆ ಯೋಗ ಕಲಿಸುವ ಜೊತೆಗೆ ನಾಟಕಗಳನ್ನು ಬರೆಯುತ್ತಿದ್ದೆ. ನಿರ್ದೇಶನ ಮಾಡುತ್ತಿದೆ. ಯೋಗದ ಜೊತೆಗೆ ನಾಟಕಗಳನ್ನು ಮಾಡಿಸುತ್ತಿದ್ದೆ. ಹೀಗಾಗಿ ಬರವಣಿಗೆಯಲ್ಲೂ ತೊಡಗಿಕೊಳ್ಳಲು ಸಾಧ್ಯವಾಗಿತ್ತು’ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT